Karnataka Reservoirs: ಕೆಆರ್‌ಎಸ್‌ನಿಂದ 1.50 ಲಕ್ಷ, ಕಬಿನಿಯಿಂದಲೂ 80 ಸಾವಿರ ಕ್ಯೂಸೆಕ್‌ ನೀರು; ಕಾವೇರಿ ತೀರದಲ್ಲಿ ಪ್ರವಾಹ ಭೀತಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಕೆಆರ್‌ಎಸ್‌ನಿಂದ 1.50 ಲಕ್ಷ, ಕಬಿನಿಯಿಂದಲೂ 80 ಸಾವಿರ ಕ್ಯೂಸೆಕ್‌ ನೀರು; ಕಾವೇರಿ ತೀರದಲ್ಲಿ ಪ್ರವಾಹ ಭೀತಿ

Karnataka Reservoirs: ಕೆಆರ್‌ಎಸ್‌ನಿಂದ 1.50 ಲಕ್ಷ, ಕಬಿನಿಯಿಂದಲೂ 80 ಸಾವಿರ ಕ್ಯೂಸೆಕ್‌ ನೀರು; ಕಾವೇರಿ ತೀರದಲ್ಲಿ ಪ್ರವಾಹ ಭೀತಿ

Cauvery Basin Dams ಕರ್ನಾಟಕದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿ ಹೊರ ಹರಿವು ಹೆಚ್ಚಿರುವುದರಿಂದ ಕಾವೇರಿ. ಕಬಿನಿ, ಹೇಮಾವತಿ ಜಲಾಶಯದಲ್ಲಿ ಪ್ರವಾಹದ ಸನ್ನಿವೇಶ ಎದುರಾಗಿದೆ.

ಭಾರೀ ಮಳೆಯಿಂದ ಕೆಆರ್‌ಎಸ್‌ ಜಲಾಶಯದ ಹೊರ ಹರಿವು ಹೆಚ್ಚಿ ಶ್ರೀರಂಗಪಟ್ಟಣ ವೆಲ್ಲಿಸ್ಲಿ ಸೇತುವೆ ಬಳಿ ಕಾವೇರಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.
ಭಾರೀ ಮಳೆಯಿಂದ ಕೆಆರ್‌ಎಸ್‌ ಜಲಾಶಯದ ಹೊರ ಹರಿವು ಹೆಚ್ಚಿ ಶ್ರೀರಂಗಪಟ್ಟಣ ವೆಲ್ಲಿಸ್ಲಿ ಸೇತುವೆ ಬಳಿ ಕಾವೇರಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.

ಮೈಸೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಜತೆಗೆ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ಹೊರ ಹರಿವನ್ನು ಹೆಚ್ಚಿಸಲಾಗಿದೆ. ಕೃಷ್ಣರಾಜಸಾಗರ, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಕ್ಕೆ ಕಳೆದ 24 ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ಒಳಹರಿವು ಬರುತ್ತಿದ್ದು, ಹೊರ ಹರಿವನ್ನೂ 2ಲಕ್ಷಕ್ಕೆ ಏರಿಸಲಾಗಿದೆ. ಅದರಲ್ಲೂ ಕೃಷ್ಣರಾಜಸಾಗರ ಜಲಾಶಯದಿಂದ ದಾಖಲೆ ಪ್ರಮಾಣದ 1.50 ಲಕ್ಷ ಕ್ಯೂಸೆಕ್‌ ನೀರನ್ನು ಬುಧವಾರ ಮಧ್ಯಾಹ್ನದಿಂದಲೇ ಹರಿಬಿಡಲಾಗುತ್ತಿದೆ. ಇದರಿಂದ ಕಾವೇರಿ ನದಿ ತೀರದ ಹಲವು ಕಡೆಗಳಲ್ಲಿ ಪ್ರವಾಹ ಚಿತ್ರಣವಿದೆ. ಕಬಿನಿ ಜಲಾಶಯ ಭಾಗದಲ್ಲೂ ಭಾರೀ ನೀರು ಹರಿಯುತ್ತಿರುವುದರಿಂದ ಈಗಾಗಲೇ ನಂಜನಗೂಡು ತಾಲ್ಲೂಕಿನ ಹಲವು ಕಡೆಗಳಲ್ಲಿ ಪ್ರವಾಹ ಸನ್ನಿವೇಶ ಎದುರಾಗಿ ಜನರನ್ನು ಕಾಳಜಿ ಕೇಂದ್ರಗಳಿಗೂ ಸ್ಥಳಾಂತರಿಸಲಾಗಿದೆ. ಪ್ರವಾಸಿ ತಾಣಗಳಿಗೂ ಜನರ ಭೇಟಿ ನಿಷೇಧ ಹಾಕಲಾಗಿದೆ.

ಕೊಡಗು, ಕೇರಳದಲ್ಲಿ ಭಾರೀ ಮಳೆಯಿಂದಾಗಿ ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿರುವುದರಿಂದ ಹೊರ ಹರಿವನ್ನು ದಾಖಲೆ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟು ಪ್ರಮಾಣದಲ್ಲಿ ನೀರು ಹರಿ ಬಿಡುತ್ತಿರುವುದು ಮೊದಲು.

ಕೆಆರ್‌ಎಸ್‌ ಜಲಾಶಯ

ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಜಲಾಶಯಕ್ಕೆ ಒಳಹರಿವು ಪ್ರಮಾಣ ಹೆಚ್ಚಾಗುತಿದೆ. ಜುಲೈ 31 ರಂದು ಮಧ್ಯಾಹ್ನ 12 ಗಂಟೆಯಿಂದಲೇ ಕೆ.ಆರ್.ಎಸ್ ಜಲಾಶಯದಿಂದ 1,50,000 ಕ್ಯೂಸೆಕ್ಸ್ ಹೊರಹರಿವು (Out flow) ನೀರನ್ನು ಬಿಡಲಾಗುತ್ತಿದೆ.

ಕಾವೇರಿ ನದಿ ಪಾತ್ರದಲ್ಲಿನ ಸಾರ್ವಜನಿಕರು ಸ್ವಯಂ ಮುಂಜಾಗ್ರತೆ ವಹಿಸುವುದು. ಕಾವೇರಿ ನದಿ ಪಾತ್ರಕ್ಕೆ ಅಥವಾ ತಗ್ಗು ಪ್ರದೇಶಗಳಿಗೆ ಭೇಟಿ ನೀಡುವುದನ್ನು ಕಡ್ಡಾಯವಾಗಿ ನಿಷೇದಿಸುವುದು. ನದಿಪಾತ್ರದಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿರುವ ರೈತರು ಕೃಷಿ ಚಟುವಟಿಕೆಗಳಿಗೆ ಹೋಗದಂತೆ ಹಾಗೂ ಜಾನುವಾರುಗಳನ್ನು ಬಿಡದಿರಲು ಸೂಚಿಸಿದೆ.

ನದಿಪಾತ್ರದಲ್ಲಿ ಮತ್ತು ಸೇತುವೆ ಇನ್ನಿತರ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡುವುದು, ನೀರಿನಲ್ಲಿ ಈಜುವುದು ಹಾಗೂ ಸೆಲ್ಫಿ ತೆಗೆಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ತಾಲ್ಲೂಕು ಆಡಳಿತದ ವತಿಯಿಂದ ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಕೈಗೊಂಡಿರುವ ವ್ಯಾಪಕ ಪ್ರಚಾರಗಳನ್ನು ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಅಳವಡಿಸಿರುವ ಸೂಚನಾ ಫಲಕಗಳನ್ನು ಗಮನಿಸಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ರವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕಬಿನಿ ಜಲಾಶಯ

ಕಬಿನಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯದಿಂದ ಹೆಚ್ಚು ಪ್ರಮಾಣದ ನೀರು ಹೊರಬಿಡಲಾಗುತ್ತಿದ್ದು ಮೈಸೂರು ಮಂಡ್ಯ ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮೀ ಕಾಂತ ರೆಡ್ಡಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯಿತ್ರಿ ಅವರು ನಂಜನಗೂಡು ತಾಲೂಕಿನ ವರುಣಾ ಕ್ಷೇತ್ರದ ಬೊಕ್ಕ ಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರವಾಹ ಇಳಿಮುಖವರೆಗೆ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓ ಅವರು ಸಂತ್ರಸ್ತರಿಗೆ ಮನವಿ ಮಾಡಿದರು ಈ ಸಂದರ್ಭದಲ್ಲಿ ನಂಜನಗೂಡು ತಹಶೀಲ್ದಾರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಡಿಸಿಗಳ ಮನವಿ

ಕೆ.ಆರ್.ಎಸ್‌ ಹಾಗೂ ಕಬಿನಿ ಜಲಾಶಯಗಳಿಂದ ಹೆಚ್ಚುವರಿ ಹೊರ ಹರಿವಿನಿಂದ ಜಿಲ್ಲೆಯಲ್ಲಿ ಪ್ರಸ್ತುತ ಪ್ರವಾಹ ಪರಿಸ್ಥಿತಿ ಉದ್ಬವಾಗಿದ್ದು ಆದಕಾರಣ ತುರ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮೀ ಕಾಂತ ರೆಡ್ಡಿ ಅವರು ತಿಳಿಸಿದ್ದಾರೆ.

ಪ್ರವಾಹ ಪೀಡಿತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ವಾಸವಿದ್ದು ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು.

ಸೇತುವೆ ಮುಳುಗಡೆಯಾಗುವ ಕಡೆ ವಾಹನಗಳ ಹಾಗೂ ಸಾರ್ವಜನಿಕರ ಪ್ರವೇಶ ನಿರ್ಭಂಧಿಸಲು ಸೂಕ್ತ ಬ್ಯಾರಿಕೇಡ್‌ ಅಳವಡಿಸಿ ನಿಗಾ ವಹಿಸಲು ಪೊಲೀಸ್‌ ಹಾಗೂ ಸ್ಥಳೀಯ ಸಂಸ್ಥೆಗಳ ಸಿಬ್ಬಂಧಿಯನ್ನು ಕರ್ತವ್ಯಕ್ಕೆ ನಿಯೋಜಿಸುವಂತೆ ತಿಳಿಸಿದ್ದಾರೆ.

ಪ್ರವಾಹದ ಸಮಯದಲ್ಲಿ ನದಿಪಾತ್ರಗಳಲ್ಲಿ ಮುಳುಗಡೆಯಾಗಬಹುದಾದ/ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಿ ಅವರ ಮನವೊಲಿಸಿ ಸ್ಥಳಾಂತರಿಸುವುದು. ಒಂದು ವೇಳೆ ಒಪ್ಪದಿದ್ದಲ್ಲಿ ಒತ್ತಾಯ ಪೂರ್ವಕ ವಾಗಿ ಸುರಕ್ಷಿತ ಸ್ಥಳಗಳಿಗೆ / ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲು ಕ್ರಮ ವಹಿಸುವುದು. ಈ ಬಗ್ಗೆ ಡಂಗೂರ ಸಾರುವ ಮೂಲಕ ಹೆಚ್ಚು ಪ್ರಚಾರ ಮಾಡತಕ್ಕದ್ದು ಹಾಗೂ ಯಾವುದೇ ಪರಿಸ್ಥಿತಿಯಲ್ಲೂ ಜೀವ ಹಾನಿಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Whats_app_banner