ಮೂಲ ಹುದ್ದೆಗೆ ಗ್ರಾಮ ಆಡಳಿತಾಧಿಕಾರಿಗಳು ಮರಳಲು ಕಂದಾಯ ಇಲಾಖೆ ಕಟ್ಟುನಿಟ್ಟಿನ ಆದೇಶ, ಪಾಲನೆಯಾಗುವುದೇ ಸರಕಾರದ ಸುತ್ತೋಲೆ?
ಕನ್ನಡ ಸುದ್ದಿ  /  ಕರ್ನಾಟಕ  /  ಮೂಲ ಹುದ್ದೆಗೆ ಗ್ರಾಮ ಆಡಳಿತಾಧಿಕಾರಿಗಳು ಮರಳಲು ಕಂದಾಯ ಇಲಾಖೆ ಕಟ್ಟುನಿಟ್ಟಿನ ಆದೇಶ, ಪಾಲನೆಯಾಗುವುದೇ ಸರಕಾರದ ಸುತ್ತೋಲೆ?

ಮೂಲ ಹುದ್ದೆಗೆ ಗ್ರಾಮ ಆಡಳಿತಾಧಿಕಾರಿಗಳು ಮರಳಲು ಕಂದಾಯ ಇಲಾಖೆ ಕಟ್ಟುನಿಟ್ಟಿನ ಆದೇಶ, ಪಾಲನೆಯಾಗುವುದೇ ಸರಕಾರದ ಸುತ್ತೋಲೆ?

ಕರ್ನಾಟಕ ಸರ್ಕಾರ ಹೊಸದಾಗಿ ಸೃಷ್ಟಿಸಿದ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ ನೇಮಕಗೊಂಡವರು ಒತ್ತಡದಿಂದ ಅಲ್ಲಿ ಉಳಿಯದೇ ಬೇರೆ ಇಲಾಖೆಗೆ ನಿಯೋಜನೆ ಮೇಲೆ ಹೋಗಿದ್ದಾರೆ. ಸರ್ಕಾರ ವಾಪಾಸಾಗಲು ಸುತ್ತೋಲೆ ಹೊರಡಿಸಿದೆ.ಹರೀಶ ಮಾಂಬಾಡಿ, ಮಂಗಳೂರು

ಗ್ರಾಮ ಆಡಳಿತಾಧಿಕಾರಿಗಳು ಮೂಲ ಹುದ್ದೆಗೆ ಮರಳುವಂತೆ ಸುತ್ತೋಲೆ ಹೊರಡಿಸಲಾಗಿದೆ.
ಗ್ರಾಮ ಆಡಳಿತಾಧಿಕಾರಿಗಳು ಮೂಲ ಹುದ್ದೆಗೆ ಮರಳುವಂತೆ ಸುತ್ತೋಲೆ ಹೊರಡಿಸಲಾಗಿದೆ.

ನಿಯೋಜನೆ ಮತ್ತು ಅನ್ಯ ಕರ್ತವ್ಯದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳು ಮೂಲ ಹುದ್ದೆಯಲ್ಲಿಯೇ ಕರ್ತವ್ಯ ನಿರ್ವಹಿಸುವಂತೆ ಸರಕಾರ ಆದೇಶಿಸಿದೆ. ಇಂಥ ಆದೇಶ ಹೊಸದಲ್ಲ. ಆದರೆ ಇದುವರೆಗೂ ಪಾಲನೆ ಸಮರ್ಪಕವಾಗಿ ಆಗಿಲ್ಲ ಎಂಬ ಹಿನ್ನೆಲೆಯಲ್ಲಿ ಮತ್ತೊಂದು ಆದೇಶ ಹೊರಟಿದೆ. 2023 ಮತ್ತು 2024ರಲ್ಲೂ ಇಂಥ ಆದೇಶ ಬಂದಿತ್ತು. ಈಗ ಮತ್ತೊಂದು ಬಂದಿದೆ. ಪಾಲನೆಯಾಗುತ್ತದೆಯೇ ಎಂಬುದು ಯಕ್ಷಪ್ರಶ್ನೆ.ಡಿಸಿ ಕಚೇರಿ, ಎಸಿ ಕಚೇರಿ, ತಹಸೀಲ್ದಾರ್ ಕಚೇರಿಗಳಲ್ಲೂ ಸಿಬ್ಬಂದಿ ಕೊರತೆ ಇದೆ. ಇಲ್ಲಿ ನಿಯೋಜನೆಗೊಂಡವರನ್ನು ಏಕಾಏಕಿ ಫೀಲ್ಡಿಗೆ ಹಾಕಿದರೆ, ಕೆಲಸ ಮಾಡುವುದು ಯಾರು? ಎಲ್ಲಾ ಏರುಪೇರು ಎಂಬುದು ತಾಲೂಕು ಆಡಳಿತ ನಡೆಸುವ ಅಧಿಕಾರಿಗಳ ತಲೆನೋವು. ಗ್ರಾಮಕರಣಿಕ (ವಿಎ) ಬದಲಾಗಿ ಗ್ರಾಮ ಆಡಳಿತ ಅಧಿಕಾರಿ (ವಿಎಒ) ಎಂಬ ಹೆಸರು ಬದಲಾಗಿದ್ದರೂ ಕೆಲಸ ನಾಲ್ಕು ಪಟ್ಟಾಗಿದೆ. ಅದನ್ನು ಮಾಡಲು ಸಿದ್ಧರಿದ್ದರೂ ಪೂರಕವಾದ ಯಾವುದೇ ವ್ಯವಸ್ಥೆಯನ್ನು ಸರಕಾರ ಒದಗಿಸಿಲ್ಲ.

ನಾಲ್ಕೈದು ಮಂದಿಯ ಕೆಲಸ ಒಬ್ಬರಿಗೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕೈದು ಮಂದಿ ಮಾಡುವ ಕೆಲಸವನ್ನು ಒಬ್ಬರು ನಿರ್ವಹಿಸುತ್ತಿದ್ದಾರೆ. ಸರಿಯಾದ ಕಚೇರಿಗಳೂ ಇಲ್ಲ. ಈ ಬಾರಿ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು ಅದು ಪೂರ್ಣಗೊಂಡರೆ ಸಮಸ್ಯೆಗೆ ಸ್ವಲ್ಪ ಪರಿಹಾರ ದೊರಕಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 289 ಗ್ರಾಮವೃತ್ತಗಳಿಗೆ 205 ವಿಒಎಗಳಿದ್ದಾರೆ, ಇವರಲ್ಲಿ 66 ಮಂದಿ ಕಂದಾಯ ಇಲಾಖೆ ಕಚೇರಿಗಳಲ್ಲಿ ನಿಯೋಜನೆ ಮೇಲೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಜಿಲ್ಲೆಯ 422 ಗ್ರಾಮಗಳನ್ನು 138 ವಿಒಎಗಳು ನೋಡಿಕೊಳ್ಳಬೇಕು. ಮಂಗಳೂರು ತಾಲೂಕಿನಲ್ಲಿ 9, ಉಳ್ಳಾಲದಲ್ಲಿ ೬, ಮೂಲ್ಕಿಯಲ್ಲಿ ೧, ಮೂಡುಬಿದಿರೆಯಲ್ಲಿ ೧೩, ಬಂಟ್ವಾಳದಲ್ಲಿ ೧೯, ಬೆಳ್ತಂಗಡಿಯಲ್ಲಿ ೧೪, ಪುತ್ತೂರಲ್ಲಿ ೧೪, ಕಡಬದಲ್ಲಿ ೧೦, ಸುಳ್ಯದಲ್ಲಿ ೫ ಗ್ರಾಮಗಳಲ್ಲಿ ಹುದ್ದೆ ಖಾಲಿ ಇವೆ.

17 ಆಪ್ ಗಳು, ಇಂಟರ್ನೆಟ್ ಇಲ್ಲ

ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಸುಮಾರು 17ಕ್ಕೂ ಅಧಿಕ ಮೊಬೈಲ್, ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸುವ ಕೆಲಸ ವಿಒಎಗಳಿಗಿದೆ. ತಮಾಷೆಯೆಂದರೆ ಇದೆಲ್ಲವನ್ನೂ ಅವರ ಸ್ವಂತ ಮೊಬೈಲ್ ನಿಂದಲೇ ಸ್ವಂತ ಇಂಟರ್ನೆಟ್ ಖರ್ಚು ಮಾಡಿಕೊಂಡು ಬಳಕೆ ಮಾಡಬೇಕು. ಮೊಬೈಲ್ ಸಾಧನ, ಲ್ಯಾಪ್ ಟಾಪ್ ಹಾಗೂ ಅದಕ್ಕೆ ಅವಶ್ಯಕವಾಗಿರುವ ಇಂಟರ್ನೆಟ್, ಸ್ಕ್ಯಾನರ್ ಅನ್ನು ಸರಕಾರ ಒದಗಿಸಿಲ್ಲ. ಕರ್ತವ್ಯ ಸಲ್ಲಿಸಲು ಒತ್ತಡ ಹೇರುತ್ತಿರುವುದರಿಂದ ಕ್ಷೇತ್ರ ಮಟ್ಟದಲ್ಲಿ ಅಧಿಕ ಒತ್ತಡದೊಂದಿಗೆ ಗ್ರಾಮಾಡಳಿತ ಅಧಿಕಾರಿಗಳ ಕೆಲಸವಾಗುತ್ತಿದೆ.

ಮಾಹಿತಿ ತಂತ್ರಜ್ಞಾನ ಯುಗದಲ್ಲಿ ವಿಒಎಗಳಿಗೆ ಸರಿಯಾದ ಭೌತಿಕ ಕಚೇರಿಯೂ ಇಲ್ಲ. ಹೆಚ್ಚಿನ ಗ್ರಾಪಂಗಳಲ್ಲಿ ಹಳೆಯ ಕಟ್ಟಡಗಳಿದ್ದರೆ, ಅಲ್ಲಿ ವಿಒಎ ಕಚೇರಿ ಇರುತ್ತದೆ. ಮಳೆ ಬಂದರೆ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಅಲ್ಲದೆ, ಕೆಲಸದ ಒತ್ತಡದಿಂದಾಗಿ ವಾರದ ರಜೆಯನ್ನೂ ಸರಿಯಾಗಿ ಪಡೆದುಕೊಳ್ಳಲಾಗದೆ ಸಮಸ್ಯೆ ಅನುಭವಿಸುವವರು ಹಲವರು.

ಸುತ್ತೋಲೆಯಲ್ಲಿ ಏನಿದೆ?

ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳನ್ನು ಅವರು ನೇಮಕಗೊಂಡ ಮೂಲ ಹುದ್ದೆಯಲ್ಲಿಯೇ ಕರ್ತವ್ಯಕ್ಕೆ ನಿಯೋಜಿಸುವಂತೆ ಸರಕಾರದಿಂದ ಈಗಾಗಲೇ ಹಲವು ಬಾರಿ ನಿರ್ದೇಶನ, ಸೂಚನೆ ನೀಡಿದರೂ ಗ್ರಾಮ ಆಡಳಿತ ಅಧಿಕಾರಿಗಳು ಮೂಲ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸದೇ ನಿಯೋಜನೆ, ಅನ್ಯ ಕರ್ತವ್ಯದ ಆಧಾರದ ಮೇಲೆ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸರಕಾರದ ಗಮನಕ್ಕೆ ಬಂದಿರುತ್ತದೆ. ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಕಂದಾಯ ಇಲಾಖೆಯ ಕಾರ್ಯಸ್ವರೂಪವನ್ನು ಸರಳೀಕರಣಗೊಳಿಸಿ, ಡಿಜಿಟಲೀಕರಣ ಮಾಡುವ ಸಂಬಂಧ, ಹಲವು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಬಗರ್ ಹುಕುಂ, ದರಖಾಸ್ತು ಪೋಡಿಯ 1ರಿಂದ 5 ಪ್ರಕರಣಗಳು, ಆಧಾರ್ ಸೀಡಿಂಗ್, ಲ್ಯಾಂಡ್ ಬೀಟ್ ಆಪ್, ಕಂದಾಯ ಇಲಾಖೆಗಳ ಕಡತಗಳ ಗ ಣಕೀಕರಣ ಹಾಗೂ ಇನ್ನಿತರ ಕಾರ್ಯಕ್ರಮಗಳ ಅನುಷ್ಠಾನಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದ್ದು, ಹುದ್ದೆಗಳ ಕೊರತೆಯಿಂದಾಗಿ ಹಾಲಿ ಗ್ರಾಮದ ಆಡಳಿತಾಧಿಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮೇಲೆ ಹೆಚ್ಚಿನ ಕಾರ್ಯದೊತ್ತಡ ಉಂಟಾಗುತ್ತಿದೆ. ಆದುದರಿಂದ ಪ್ರಾದೇಶಿಕ ಆಯುಕ್ತರ, ಜಿಲ್ಲಾಧಿಕಾರಿಗಳ, ಉಪವಿಭಾಗಾಧಿಕಾರಿ, ತಹಸೀಲ್ದಾರ್ ಕಚೇರಿಗಳಲ್ಲಿ ನಿಯೋಜನೆ, ಅನ್ಯ ಕರ್ತವ್ಯದ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳು ಕೂಡಲೇ ಅವರ ಮೂಲ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಸೂಚಿಸಿ ಬಿಡುಗಡೆ ಮಾಡುವಂತೆ ಸೂಚಿಸಲಾಗಿದೆ. ಈ ಕುರಿತು ಕೈಗೊಂಡ ಕ್ರಮಗಳ ಕುರಿತು ಜನವರಿ 27ರಂದು ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಎಲ್ಲ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗುವುದು. ಈ ಸೂಚನೆ ಉಲ್ಲಂಘಿಸಿದಲ್ಲಿ, ಅಂಥ ಅಧಿಕಾರಿಗಳ ವಿರುದ್ಧ ನಿಯಮ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಸರಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ತಿಳಿಸಿದ್ದಾರೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

Whats_app_banner