ಕರ್ನಾಟಕದಲ್ಲಿ ಭೂದಾಖಲೆಗಳ ಕಂಪ್ಯೂಟರೀಕರಣ ಬಿರುಸು, ದಾಖಲೆ ತಿದ್ದದಂತೆ ಡಿಜಿಟಲ್ ಭದ್ರತೆಗೆ ಕಂದಾಯ ಇಲಾಖೆ ಕ್ರಮ
ಕರ್ನಾಟಕದಲ್ಲಿ ಆಸ್ತಿ ದಾಖಲೆಗಳ ಡಿಜಟಲೀಕರಣ ನಡೆದಿರುವ ನಡುವೆ ದಾಖಲೆ ತಿದ್ದುವ ಇಲ್ಲವೇ ಡಿಜಿಟಲ್ ದುರುಪಯೋಗ ತಪ್ಪಿಸಲು ತಂತ್ರಜ್ಞಾನ ಆಧರಿತ ಸುರಕ್ಷಿತಾ ಕ್ರಮ ಕೈಗೊಳ್ಳಲಾಗುತ್ತಿದೆ.

ಬೆಂಗಳೂರು: ಈಗ ಎಲ್ಲೆಡೆ ಸೈಬರ್ ಅಪರಾಧ, ಡಿಜಿಟಲ್ ದುರುಪಯೋಗದ್ದೇ ಸದ್ದು. ಅದರಲ್ಲೂ ಜನರನ್ನು ವಂಚಿಸಿ ಹಣ ದೋಚುವ, ದಾಖಲೆಗಳನ್ನು ತಿದ್ದಿ ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ಕಾರಣದಿಂದಲೇ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ಈಗಾಗಲೇ 8 ಕೋಟಿ ಮೂಲ ದಾಖಲೆಗಳ ಕಂಪ್ಯೂಟರೀಕರಣ ಮಾಡಿದೆ. ಭೂ ಸುರಕ್ಷಾ ಯೋಜನೆ ಮೂಲಕ ಭೂ ದಾಖಲೆಗಳ ಕಂಪ್ಯೂಟರೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಖದೀಮರು ತಿದ್ದಲು ಅವಕಾಶ ಆಗದಂತೆ ದಾಖಲೆಗಳಿಗೆ ಡಿಜಿಟಲ್ ಭದ್ರತೆಯನ್ನು ಒದಗಿಸಿದೆ. ಎಲ್ಲಾ 31 ಜಿಲ್ಲೆಗಳಲ್ಲಿ ದಾಖಲೆಗಳ ಕಂಪ್ಯೂಟರೀಕರಣ ಕಾರ್ಯ ನಡೆಯುತ್ತಿದೆ. ತಂತ್ರಾಂಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕಂದಾಯ ವ್ಯವಸ್ಥೆಯಲ್ಲಿ ಸುಧಾರಣಾ ಕಾರ್ಯ ಕೈಗೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಂತ್ರಜ್ಞಾನ ಆಧರಿತ ಸುಧಾರಣಾ ಕ್ರಮಗಳ ವಿವರ ನೀಡಿದರು. ಇದಕ್ಕೆ ಸಿಎಂ ಕೂಡ ಸೂಚನೆಗಳನ್ನು ನೀಡಿದರು.
ತಂತ್ರಾಂಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕಂದಾಯ ವ್ಯವಸ್ಥೆಯಲ್ಲಿ ಸುಧಾರಣಾ ಕಾರ್ಯ ಕೈಗೊಳ್ಳಲಾಗಿದೆ. ನಕ್ಷಾ ಯೋಜನೆ ಮೂಲಕ ನಗರ ಪ್ರದೇಶದಲ್ಲಿ ಡ್ರೋಣ್ ಸರ್ವೆ ಮೂಲಕ ಪ್ರಾಪರ್ಟಿ ಕಾರ್ಡು ನೀಡುತ್ತಿದ್ದೇವೆ. 21 ಜಿಲ್ಲೆಗಳಲ್ಲಿ ಡ್ರೋಣ್ ಮೂಲಕ ಸರ್ವೇ ಕಾರ್ಯವನ್ನು ಕೈಗೊಳ್ಳಲಾಗಿದೆ. ಉಳಿದ ಜಿಲ್ಲೆಗಳಲ್ಲೂ ಡ್ರೋಣ್ ಸರ್ವೆ ಆರಂಭಿಸಲು ಸಿಎಂ ಸೂಚನೆ ನೀಡಿದ್ದಾರೆ.
ಸಿಎಂ ನೀಡಿದ ಸೂಚನೆ
- ಭೂ ಸುರಕ್ಷಾ ಯೋಜನೆ ಮೂಲಕ ಭೂ ದಾಖಲೆಗಳ ಕಂಪ್ಯೂಟರೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದುವರೆಗೆ ಸುಮಾರು 8 ಕೋಟಿ ಮೂಲ ದಾಖಲೆಗಳ ಕಂಪ್ಯೂಟರೀಕರಣ ಪೂರ್ಣಗೊಳಿಸಲಾಗಿದೆ. ಎಲ್ಲಾ 31 ಜಿಲ್ಲೆಗಳಲ್ಲಿ ದಾಖಲೆಗಳ ಕಂಪ್ಯೂಟರೀಕರಣ ಕಾರ್ಯ ನಡೆಯುತ್ತಿದೆ. ಇದರಿಂದ ದುರುಪಯೋಗ ತಪ್ಪಿಸಲು ಡಿಜಿಟಲ್ ಸುರಕ್ಷತೆಗೆ ಒತ್ತು ನೀಡಲಾಗಿದೆ. ದಾಖಲೆಗಳ ತಿದ್ದುಪಡಿಗೆ ಅವಕಾಶ ಆಗದಂತೆ ಪಾಸ್‌ವರ್ಡ್ ಸಹಿತ ಹಲವು ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಇನ್ನಷ್ಟು ಒತ್ತು ನೀಡಬೇಕು.
- ಹಲವು ವರ್ಷಗಳಿಂದ ಸರ್ಕಾರಿ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಂದ ಸದರಿ ಜಮೀನು ಸ್ವಾಧೀನಪಡಿಸುವ ಸಂದರ್ಭದಲ್ಲಿ ಎಕ್ಸ್ ಗ್ರೇಷಿಯಾ ನೀಡುವ ಬಗ್ಗೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಬೇಕು.
- ಜಮೀನು ಖಾತೆಗೆ ಆಧಾರ್ ಸೀಡಿಂಗ್ ಮಾಡಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೆ 2.22 ಕೋಟಿ ಖಾತೆಗಳಿಗೆ ಆಧಾರ ಸೀಡಿಂಗ್ ಮಾಡಲಾಗಿದ್ದು, ಇದರಿಂದ ನಕಲಿ ದಾಖಲೆ ಸೃಷ್ಟಿಸುವುದನ್ನು ತಡೆಯಲು ಸಾಧ್ಯವಾಗಿದೆ. ಭೂ ಪರಿವರ್ತನೆಯಾಗದೆ ವಾಣಿಜ್ಯ ಉದ್ದೇಶಗಳಿಗೆ ಜಮೀನು ಬಳಕೆ ಪ್ರಕರಣಗಳನ್ನು ಪತ್ತೆ ಹಚ್ಚಲು ಇದರಿಂದ ಸಾಧ್ಯವಾಗಿದೆ.
- ಅನಧಿಕೃತ ಬಡಾವಣೆಗಳಿಗೆ ಖಾತಾ ನೀಡುವುದನ್ನು ಸ್ಥಗಿತಗೊಳಿಸಲು ಈಗಾಗಲೇ ಸೂಚನೆ ನೀಡಿದ್ದೇವೆ. ಒಂದು ಅವಧಿಗೆ ಬಿ ಖಾತಾ ನೀಡುವ ಪ್ರಕ್ರಿಯೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ಇನ್ನು ಮುಂದೆ ಅನಧಿಕೃತ ಬಡಾವಣೆಗಳು ತಲೆ ಎತ್ತದಂತೆ ನೋಡಿಕೊಳ್ಳಬೇಕು.
- ರಾಜ್ಯದಲ್ಲಿ ಹಲವು ಪ್ರಕರಣಗಳಲ್ಲಿ ಜಮೀನುಗಳ ಖಾತೆ ಇನ್ನೂ ನಿಧನ ಹೊಂದಿದವರ ಹೆಸರಿನಲ್ಲಿಯೇ ಇದೆ. ಪೌತಿ ಖಾತೆ ಅಭಿಯಾನದ ಮೂಲಕ ಮಾಲಿಕರ ಹೆಸರಿಗೆ ಜಮೀನು ಮಾಡುವ ನೋಂದಣಿ ಮಾಡುವ ಕಾರ್ಯವನ್ನು ತ್ವರಿತಗೊಳಿಸಬೇಕು.
- ಭೂ ಪರಿವರ್ತನೆ ಸಂಪೂರ್ಣ ಪ್ರಕ್ರಿಯೆಯನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು. ಮಾಸ್ಟರ್ ಪ್ಲಾನ್ ಆದ ಕಡೆ ಮತ್ತೆ ಭೂ ಪರಿವರ್ತನೆ ಅಗತ್ಯವಿಲ್ಲ ಎಂದು ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಈ ಕುರಿತು ಆದೇಶವನ್ನು ಆದಷ್ಟು ಬೇಗನೆ ಹೊರಡಿಸಬೇಕು
- ನಗರ ಪ್ರದೇಶಗಳಲ್ಲಿ ಮಾಸ್ಟರ್ ಪ್ಲಾನ್ ಕಾಲದಿಂದ ಕಾಲಕ್ಕೆ ನವೀಕರಿಸಬೇಕು. ಮ್ಯುಟೇಶನ್, ಭೂ ಪರಿವರ್ತನೆ ಪ್ರಕರಣಗಳಲ್ಲಿ ಜನಸಾಮಾನ್ಯರಿಗೆ ಯಾವುದೇ ಕಿರುಕುಳ, ಅನಗತ್ಯ ವಿಳಂಬವಾಗದಂತೆ ಎಚ್ಚರಿಕೆ ವಹಿಸಬೇಕು.
- ಈಗ ಕೇವಲ 369 ಪ್ರಕರಣಗಳು ಮಾತ್ರ ತಹಶೀಲ್ದಾರ್ ನ್ಯಾಯಾಲಯಗಳಲ್ಲಿವೆ. ಪ್ರಕರಣಗಳ ವಿಲೇವಾರಿ ತ್ವರಿತಗೊಳಿಸುವ ಜತೆಗೆ ನ್ಯಾಯದಾನದ ಗುಣಮಟ್ಟ ಸಹ ಸುಧಾರಿಸಬೇಕು.
- ಬೆಂಗಳೂರು ವ್ಯಾಪ್ತಿಯಲ್ಲಿ ಪ್ರಕರಣಗಳ ತ್ವರಿತ ವಿಲೇವಾರಿಗೆ 18 ವಿಶೇಷ ಉಪವಿಭಾಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.ಡಿಸಿ ನ್ಯಾಯಾಲಯಗಳಲ್ಲಿ ಹತ್ತಾರು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳಲ್ಲಿ ಕೇವಲ ಒಂದು ವರ್ಷದಲ್ಲಿ ಶೇ36 ರಷ್ಟು ಪ್ರಕರಣಗಳ ವಿಲೇವಾರಿ ಮಾಡಬೇಕು.
