Karnataka School Guide 2025: ಮಗುವನ್ನು ಶಾಲೆಗೆ ಸೇರಿಸಲು ಅಣಿಯಾಗುತ್ತಿದ್ದೀರಾ, ಸಿಬಿಎಸ್‌ಸಿ ಶಿಕ್ಷಣಕ್ಕೂ ಕಡಿಮೆ ಇಲ್ಲ ಕರ್ನಾಟಕ ಪಠ್ಯ
ಕನ್ನಡ ಸುದ್ದಿ  /  ಕರ್ನಾಟಕ  /  Karnataka School Guide 2025: ಮಗುವನ್ನು ಶಾಲೆಗೆ ಸೇರಿಸಲು ಅಣಿಯಾಗುತ್ತಿದ್ದೀರಾ, ಸಿಬಿಎಸ್‌ಸಿ ಶಿಕ್ಷಣಕ್ಕೂ ಕಡಿಮೆ ಇಲ್ಲ ಕರ್ನಾಟಕ ಪಠ್ಯ

Karnataka School Guide 2025: ಮಗುವನ್ನು ಶಾಲೆಗೆ ಸೇರಿಸಲು ಅಣಿಯಾಗುತ್ತಿದ್ದೀರಾ, ಸಿಬಿಎಸ್‌ಸಿ ಶಿಕ್ಷಣಕ್ಕೂ ಕಡಿಮೆ ಇಲ್ಲ ಕರ್ನಾಟಕ ಪಠ್ಯ

ಕರ್ನಾಟಕದ ಶಾಲಾ ಶಿಕ್ಷಣ ಪಠ್ಯ ಪ್ರಾಥಮಿಕ ಹಂತದಿಂದಲೇ ಹೇಗಿದೆ. ಇತರೆ ಶಿಕ್ಷಣ ಕ್ರಮಗಳಿಗಿಂತ ಹೇಗೆ ಭಿನ್ನವಾಗಿದೆ. ಪೋಷಕರಲ್ಲಿರುವ ಇಂತಹ ಹತ್ತಾರು ಅನುಮಾನಗಳಿಗೆ ಉತ್ತರ ಇಲ್ಲಿದೆ.

ಕರ್ನಾಟಕ ಶಾಲಾ ಶಿಕ್ಷಣ ಪಠ್ಯ ಹೇಗಿದೆ
ಕರ್ನಾಟಕ ಶಾಲಾ ಶಿಕ್ಷಣ ಪಠ್ಯ ಹೇಗಿದೆ

ಹೊಸ ವರ್ಷ 2025 ಅನ್ನು ಬರ ಮಾಡಿಕೊಂಡಾಯ್ತು ನಿಮ್ಮ ಮಗುವಿಗೆ ಮೂರು ವರ್ಷ ಆಗುತ್ತಿದ್ದರೆ ಈ ವರ್ಷ ಪ್ರೀಕೆಜಿಗೆ ಸೇರಿಸುವ ದಿನಗಳೂ ದೂರವಿಲ್ಲ. ಈಗಾಗಲೇ ಪ್ರೀಕೆಜಿ ಮುಗಿಸಿದ್ದರೆ ಎಲ್‌ಕೆಜಿ ಅಥವಾ ಯುಕೆಜಿಗೆ ಸೇರಿಸಬೇಕು. ಬಾಲವಾಡಿ ಶಾಲೆಗೆ ಹಾಕಬೇಕು ಎನ್ನುವ ತಯಾರಿ ಶುರುವಾಗಿರಬೇಕು. ಇನ್ನು ಕೆಲವರು ಒಂದನೇ ತರಗತಿಗೆ ಒಳ್ಳೆಯ ಶಾಲೆ ನೋಡೋಣ ಎನ್ನುವ ಯೋಚನೆಯೊಂದಿಗೆ ಹುಡುಕಾಟವನ್ನೂ ಆರಂಭಿಸಬೇಕು. ಇದರೊಟ್ಟಿಗೆ 5 ಇಲ್ಲವೇ 8 ನೇ ತರಗತಿಗೂ ಶಾಲೆ ಬದಲಾಯಿಸಬೇಕು ಎಂಬ ಲೆಕ್ಕಾಚಾರವೂ ಇರಬಹುದು. ಮಕ್ಕಳಿಗೆ ಸೂಕ್ತ ಶಿಕ್ಷಣ ಸಿಗಲಿ ಎಂಬ ಆಶಯದೊಂದಿಗೆ ಪ್ರಯತ್ನವನ್ನು ಶುರು ಮಾಡಿರಬಹುದು. ಕರ್ನಾಟಕ ರಾಜ್ಯ ಪಠ್ಯ ಹೇಗಿದೆ. ನಮ್ಮ ಮಕ್ಕಳು ಸಿಬಿಎಸ್‌ಸಿ ಅಥವಾ ಇತರೆ ಶಿಕ್ಷಣ ಕ್ರಮದಲ್ಲಿ ಓದಿದರೆ ಉತ್ತಮ ಎನ್ನುವ ಭಾವನೆ ಇದ್ದೇ ಇರುತ್ತದೆ. ರಾಜ್ಯ ಪಠ್ಯ ಶಿಕ್ಷಣ ಹೇಗಿರಬಹುದು ಎನ್ನುವ ಅನುಮಾನಗಳೂ ಕೆಲ ಪೋಷಕರಿಗೂ ಇರಬಹುದು.ಇತರೆ ಶಿಕ್ಷಣ ಕ್ರಮದಂತೆಯೇ ರಾಜ್ಯ ಪಠ್ಯ ಶಿಕ್ಷಣವೂ ಈಗ ಗಟ್ಟಿತನದಿಂದಲೇ ಕೂಡಿದೆ. ಯಾವುದೇ ಉನ್ನತ ಶಿಕ್ಷಣ, ಇಲ್ಲವೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಷ್ಟು ಚೈತನ್ಯ, ಜ್ಞಾನವನ್ನು ಮಕ್ಕಳಲ್ಲಿ ತುಂಬಲಿದೆ. ಏಕೆಂದರೆ ಫೆಬ್ರವರಿ ಶುರುವಾದರೆ ಹಲವು ಶಾಲೆಗಳಲ್ಲಿ ಈಗಿನಿಂದಲೇ ಅರ್ಜಿ ವಿತರಣೆಯಂತಹ, ಹೆಸರು ನೊಂದಾಯಿಸುವ ಪ್ರಕ್ರಿಯೆ ಶುರುವಾಗುತ್ತವೆ. ಇದಕ್ಕಾಗಿ ನೀವು ಈಗಲೇ ಮಾಹಿತಿ ಪಡೆದುಕೊಂಡು ತಯಾರಿ ಮಾಡಿಕೊಳ್ಳುವುದು ಒಳ್ಳೆಯದೇ.

ಶಿಕ್ಷಣದ ರೂಪು ರೇಷೆ

ಕರ್ನಾಟಕ ರಾಜ್ಯ ಮಂಡಳಿಯ ಪಠ್ಯಕ್ರಮವು 1 ರಿಂದ 12 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಕಲಿಕೆಗೆ ಪೂರಕವಾಗಿ ವೇದಿಕೆ ಒದಗಿಸುತ್ತಿದೆ. ಕರ್ನಾಟಕದಲ್ಲಿ ಈ ಶಿಕ್ಷಣಕ್ಕೆ ಮೊದಲ ಆದ್ಯತೆಯಾಗಿರುವುದರಿಂದ 1 ರಿಂದ 12 ನೇ ತರಗತಿಗಳಿಗೆ ಕರ್ನಾಟಕ ಬೋರ್ಡ್ ಪಠ್ಯಕ್ರಮವು ಈಗಾಗಲೇ ಜಾರಿಯಲ್ಲೂ ಇದೆ.

ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ನಿಗದಿಪಡಿಸಿದ ಪಠ್ಯಕ್ರಮದ ಮೂಲಕವೇ ಕರ್ನಾಟಕದ ಶಾಲೆಗಳಲ್ಲಿ ಶಿಕ್ಷಣ ಸಿಗಲಿದೆ. ವಿಷಯಕ್ಕೆ ನಿಗದಿಪಡಿಸಿದ ಅಂಕಗಳ ವಿತರಣೆ ಮತ್ತು ಅವಧಿಗಳ ಜೊತೆಗೆ. ಕರ್ನಾಟಕ ಶಿಕ್ಷಣ ಮಂಡಳಿಯು ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು 1 ರಿಂದ 12 ನೇ ತರಗತಿಗಳಿಗೆ ಪಠ್ಯಕ್ರಮವನ್ನು ಸೂಚಿಸುವ ಉಸ್ತುವಾರಿ ವಹಿಸುತ್ತದೆ. ಪಠ್ಯಕ್ರಮವನ್ನು ಮುಂಚಿತವಾಗಿ ತಿಳಿದುಕೊಳ್ಳುವುದು ಅಂತಿಮ ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಬೇಕೆಂದು ನಿರ್ಧರಿಸಲು ವಿದ್ಯಾರ್ಥಿಗಳ ಗುಣಮಟ್ಟದ ಓದಿಗೆ ಸಹಾಯ ಮಾಡುತ್ತದೆ.

ವಿವಿಧ ತರಗತಿಗಳು ಮತ್ತು ವಿಷಯಗಳಿಗೆ ಕರ್ನಾಟಕ ಶಾಲಾ ಶಿಕ್ಷಣ ಮಂಡಳಿಯು ಸಿದ್ದಪಡಿಸಿರುವ ತರಗತಿ 1 ರಿಂದ 12 ರವರೆಗಿನ ವಿವರವಾದ ಮತ್ತು ನವೀಕರಿಸಿದ ಪಠ್ಯಕ್ರಮಗಳು ಮಂಡಳಿ ವೆಬ್‌ಸೈಟ್‌ನಲ್ಲಿ ಲಭ್ಯವಿವೆ.

ಅದರಲ್ಲೂ ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ-2020 ಹಾಗೂ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2022ರ ಶಿಕ್ಷಣ ನೀತಿ ಜಾರಿಗೊಂಡ ನಂತರ ಪೂರ್ವ, ಪ್ರಾಥಮಿಕ, ಪ್ರೌಢಶಾಲೆಗಳು, ಪಿಯು ಶಿಕ್ಷಣ ಒಳಗೊಂಡು ನಾಲ್ಕು ಹಂತದಲ್ಲಿ ಶಿಕ್ಷಣ ಕ್ರಮ ರೂಪಿಸಿದೆ. ಆಯಾ ತರಗತಿಗಳಿಗೆ ಅನುಗುಣವಾಗಿ ಪಠ್ಯಕ್ರಮ, ಪರೀಕ್ಷೆಗಳ ವ್ಯವಸ್ಥೆಯನ್ನು ಮಂಡಳಿ ಮಾಡಿದ್ದು, ಅದರ ಕುರಿತು ಸಂಪೂರ್ಣ ವಿವರಗಳನ್ನು ಪೋಷಕರು ಶಾಲೆಗಳಲ್ಲಿ ಇಲ್ಲವೇ ಶಿಕ್ಷಣ ಇಲಾಖೆಯ ಕಚೇರಿಗಳಲ್ಲೂ ಪಡೆದುಕೊಳ್ಳಬಹುದು. ಇದರಿಂದ ಮಕ್ಕಳಿಗೆ ಸಿಗುವ ಶಿಕ್ಷಣ ಯಾವ ಮಟ್ಟದಲ್ಲಿರಲಿದೆ ಎನ್ನುವುದು ಪೋಷಕರಿಗೂ ತಿಳಿದಂತೆ ಆಗಲಿದೆ.

ಪಠ್ಯ ಕ್ರಮ ಹೇಗಿದೆ

ಹಿಂದೆಲ್ಲಾ ಹೆಚ್ಚು ಲಭ್ಯ ಇದ್ದುದು ಕರ್ನಾಟಕ ಶಿಕ್ಷಣದ ಪಠ್ಯವೇ. ಕೆಲ ವರ್ಷಗಳಿಂದ ಹಲವು ಮಾದರಿಗಳು ಬಂದಿವೆ. ಅದರಲ್ಲಿ ಕರ್ನಾಟಕ ರಾಜ್ಯ ಪಠ್ಯ ಕ್ರಮಕ್ಕೆ ಮೊದಲ ಆದ್ಯತೆ. ಉಳಿದಂತೆ ಸಿಬಿಎಸ್‌ಇ, ಐಸಿಎಸ್‌ಇ, ಐಜಿಸಿಎಸ್‌ಇ ಕ್ರಮವೂ ಇದೆ. ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಶಿಕ್ಷಣ ಪಡೆಯುವ ವ್ಯಾಪ್ತಿ ಕೊಂಚ ಹೆಚ್ಚೇ ಇರಲಿ ಎನ್ನುವ ಕಾರಣದಿಂದಲೂ ರಾಜ್ಯ ಪಠ್ಯ ಕ್ರಮದಲ್ಲೂ ಬದಲಾವಣೆಯಾಗಿದೆ. ಮಕ್ಕಳಿಗೆ ಒಂದನೇ ತರಗತಿಯಿಂದಲೇ ಆರಂಭಗೊಂಡು ಪಠ್ಯಕ್ರಮದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಮಕ್ಕಳಿಗೆ ಭಾಷೆಯ ಜತೆಗೆ ಇತರೆ ವಿಷಯಗಳಿಗೂ ಒತ್ತು ನೀಡಲಾಗಿದೆ. ದ್ವಿಭಾಷಾ ಪಠ್ಯಕ್ಕೂ ಒತ್ತು ನೀಡಿದ್ದು,ಮಕ್ಕಳು ಕನ್ನಡದ ಜತೆಗೆ ಇತರೆ ಭಾಷೆಯಲ್ಲೂ ಕಲಿಯಲು ಸಹಕಾರಿಯಾಗಲಿದೆ. ಗಣಿತ ಶಾಸ್ತ್ರ, ವಿಜ್ಞಾನ, ಕನ್ನಡ ಪರಿಸರ ವಿಜ್ಞಾನದಂತಹ ವಿಷಯಗಳನ್ನೂ ಒಂದನೇ ತರಗತಿಯಿಂದಲೇ ಸೇರಿಸಲಾಗಿದೆ. ಗಣಿತದ ಮೂಲಕ ಮಕ್ಕಳ ಜ್ಞಾನವನ್ನು ಚುರುಕುಗೊಳಿಸುವ ಪಠ್ಯವೂ ದೆ. ಪರಿಸರ ವಿಷಯದ ಮೂಲಕ ಅವರಿಗೆ ತಮ್ಮ ಸುತ್ತಮುತ್ತಲಿನ ಜಗತ್ತಿನ ಜ್ಞಾನವನ್ನು ತಿಳಿಸಿಕೊಡಲಾಗುತ್ತದೆ. ಆನಂತರದ ತರಗತಿಗಳಲ್ಲಿ ಮಕ್ಕಳದ ಜ್ಞಾನದ ಮಿತಿಗೆ ಅನುಗುಣವಾಗಿಯೇ ಪಠ್ಯವನ್ನು ಸಿದ್ದಪಡಿಸಲಾಗಿದೆ.

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು (ಡಿಎಸ್ಇಆರ್ ಟಿ) ಪ್ರತಿ ವರ್ಷವೂ ಪಠ್ಯವನ್ನು ಉನ್ನತೀಕರಿಸುವ ಕೆಲಸ ಮಾಡುತ್ತಲೇ ಇದೆ. ಇದಕ್ಕಾಗಿ ತಜ್ಞರು, ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಪಠ್ಯ ಪರಿಷ್ಕರಣೆ ಸಮಿತಿಯೂ ಕೆಲಸ ಮಾಡುತ್ತಲೇ ಇದೆ. ಕಾಲಕಾಲಕ್ಕೆ ಬದಲಾವಣೆಯನ್ನೂ ಸಮಿತಿಗಳು ಮಾಡಲಿವೆ.

ಇಲ್ಲಿ ಮಾಹಿತಿ ಪಡೆಯಿರಿ

ಮಕ್ಕಳಿಗೆ ನೀಡುವ ಕರ್ನಾಟಕದ ಪಠ್ಯ ಕ್ರಮದ ಎಲ್ಲಾ ಮಾಹಿತಿಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ತನ್ನ ವೆಬ್‌ಸೈಟ್‌ನಲ್ಲಿ https://textbooks.karnataka.gov.in ಒದಗಿಸಿದೆ.

Whats_app_banner