Karnataka School Guide 2025: ಸಿಬಿಎಸ್‌ಇ ಶಿಕ್ಷಣ ಶಾಲೆಗೆ ಮಗುವನ್ನು ಸೇರಿಸಬೇಕೇ, ಹೀಗಿರಲಿದೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಪಠ್ಯ
ಕನ್ನಡ ಸುದ್ದಿ  /  ಕರ್ನಾಟಕ  /  Karnataka School Guide 2025: ಸಿಬಿಎಸ್‌ಇ ಶಿಕ್ಷಣ ಶಾಲೆಗೆ ಮಗುವನ್ನು ಸೇರಿಸಬೇಕೇ, ಹೀಗಿರಲಿದೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಪಠ್ಯ

Karnataka School Guide 2025: ಸಿಬಿಎಸ್‌ಇ ಶಿಕ್ಷಣ ಶಾಲೆಗೆ ಮಗುವನ್ನು ಸೇರಿಸಬೇಕೇ, ಹೀಗಿರಲಿದೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಪಠ್ಯ

Karnataka School Guide 2025: ಸಿಬಿಎಸ್‌ಇ ಶಿಕ್ಷಣ ಪಠ್ಯ ಹಾಗೂ ಕ್ರಮದಡಿ ಮಕ್ಕಳನ್ನು ಶಾಲೆಗೆ ಸೇರಿಸಬೇಕು ಎನ್ನುವ ಯೋಚನೆಯಲ್ಲಿದ್ದವರಿಗೆ ಇಲ್ಲಿದೆ ಮಾಹಿತಿ.

ಸಿಬಿಎಸ್‌ಇ ಶಿಕ್ಷಣದ ಪಠ್ಯ,ಮಹತ್ವ ಏನು
ಸಿಬಿಎಸ್‌ಇ ಶಿಕ್ಷಣದ ಪಠ್ಯ,ಮಹತ್ವ ಏನು

Karnataka School Guide 2025: ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ರಾಜ್ಯಗಳ ನಿರ್ಧಾರದ ಜತೆಗೆ ಕೇಂದ್ರ ಸರ್ಕಾರದ ನೇರ ಸಂಬಂಧವನ್ನೂ ಹೊಂದಿದೆ. ಏಕೆಂದರೆ ಭಾರತದಲ್ಲಿ ಆಯಾ ರಾಜ್ಯಗಳು ತಮ್ಮ ರಾಜ್ಯಗಳ ಪಠ್ಯಕ್ರಮಕ್ಕೆ ಅನುಗುಣವಾಗಿ ಶಿಕ್ಷಣ ನೀಡಬಹುದು. ಇಲ್ಲವೇ ಕೇಂದ್ರ ಸರ್ಕಾರವೇ ರೂಪಿಸಿರುವ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ( ಸಿಬಿಎಸ್‌ಇ) ನೀಡುವ ಶಿಕ್ಷಣ ಪದ್ದತಿ ಹಾಗೂ ಪಠ್ಯದ ಮೂಲಕವೂ ಶಿಕ್ಷಣ ಕೊಡಿಸಲು ಅವಕಾಶವಿದೆ. ಆಯ್ಕೆ ಏನಿದ್ದರೂ ಪೋಷಕರು ಹಾಗೂ ಮಕ್ಕಳದ್ದೇ. ಏಕೆಂದರೆ ಮಗುವಿನ ಸಮಗ್ರ ಶೈಕ್ಷಣಿಕ ಬೆಳವಣಿಗೆ, ಆಸಕ್ತಿ,ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಪೋಷಕರು ಮಾಡಿಕೊಳ್ಳುವ ಆಯ್ಕೆ. ಮೊದಲು ರಾಜ್ಯ ಶಿಕ್ಷಣ ಪಠ್ಯದಡಿ ಸೇರಿಸಿ ನಂತರ ಕೇಂದ್ರ ಶಿಕ್ಷಣ ಮಂಡಳಿ ವ್ಯವಸ್ಥೆಗೂ ಬದಲಿಸಬಹುದು. ಇಲ್ಲವೇ ಕೇಂದ್ರ ಶಿಕ್ಷಣ ಪದ್ದತಿಯಿಂದ ರಾಜ್ಯ ಪಠ್ಯಕ್ರಮಕ್ಕೂ ಮಗುವನ್ನು ಬದಲಿಸಲು ಅವಕಾಶವಿದೆ. ಆಯ್ಕೆ ಏನಿದ್ದರೂ ಪೋಷಕರು ಹಾಗೂ ಮಗುವಿನದ್ದೇ.

ಸಿಬಿಎಸ್‌ಇ ಶತಮಾನದ ಹಾದಿ

1929 ರಲ್ಲಿ ಸ್ಥಾಪನೆಯಾಗಿ ಭಾರತ ಸರ್ಕಾರದಿಂದ ನಿರ್ವಹಿಸಲ್ಪಡುವ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಎನ್ನುವುದು ಸಿಬಿಎಸ್‌ಇ ಹಿನ್ನೆಲೆ ಹಾಗೂ ವಿಸ್ತೃತ ರೂಪ. ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು ಭಾರತದ ಎಲ್ಲಾ ರಾಜ್ಯಗಳಲ್ಲೂ ತನ್ನದೇ ಪಠ್ಯವನ್ನು ಆಧರಿಸಿ ಶಿಕ್ಷಣ ಕ್ರಮವನ್ನು ರೂಪಿಸಿದೆ. ಇದಕ್ಕಾಗಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಮಂಡಳಿ( ಎನ್‌ಸಿಇಆರ್‌ಟಿ) ಪಠ್ಯಕ್ರಮವನ್ನು ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ರೂಪಿಸುತ್ತದೆ.

ಒಂದನೇ ತರಗತಿ ಪಠ್ಯ

ಹೊಸ ಶಿಕ್ಷಣ ನೀತಿಗಳಿಗೆ ಅನುಗುಣವಾಗಿ ಸಿಬಿಎಸ್‌ಇ ತರಗತಿ 1 ಪಠ್ಯಕ್ರಮವನ್ನು ನವೀಕರಿಸಿದೆ. ತರಗತಿ 1 ಇಂಗ್ಲಿಷ್ ಪಠ್ಯಕ್ರಮದಲ್ಲಿ ನಾಲ್ಕು ಘಟಕಗಳಿವೆ. ಅದರಲ್ಲಿ ಕುಟುಂಬ, ನನ್ನ ಸುತ್ತಮುತ್ತಲಿನ ಪರಿಸರ, ಆಹಾರ, ಋತುಮಾನಗಳನ್ನು ಆಧರಿಸಿ ಇದೆ. ಮಕ್ಕಳು ಸಮಾಜದ ಪರಿಕಲ್ಪನೆಯಲ್ಲಿ ತಿಳಿಯಲು ಈ ಪಠ್ಯ ಸಹಕಾರಿ. ಇದರಡಿಯೇ ಮಕ್ಕಳಿಗೆ ಚಟುವಟಿಕೆಗಳನ್ನು ರೂಪಿಸಲಾಗುತ್ತದೆ.

ಗಣಿತ ವಿಷಯದಲ್ಲಿ 13 ಅಧ್ಯಾಯಗಳಿವೆ. ಇದರಲ್ಲಿ ಆಕಾರಗಳು, ಸಂಖ್ಯೆಗಳು, ಏಕ ಸಂಖ್ಯೆಗಳ ಸಂಕಲನ ಮತ್ತು ವ್ಯವಕಲನ, ಸೇರ್ಪಡೆ ಹಾಗೂ ವ್ಯವಕಲನ, ಸಂಖ್ಯೆಗಳ ಜತೆ ವಿನೋದ, ಗುಣಾಕಾರ, ಹಣದ ಲೆಕ್ಕ, ಆಟಿಕೆಗಳ ಮೂಲಕ ಗಣಿತ ಕಲಿಕೆ ಸೇರಿವೆ. ಹಿಂದಿ ವಿಷಯದಲ್ಲಿ ಪರಿವಾರ, ಜೀವನ ಜಗತ್‌, ಹಮಾರಾ ಖಾನ್‌ ಪಾನ್‌, ಹರಿಬರೀ ದುನಿಯಾ ಎನ್ನುವುದೂ ಸೇರಿ ಐದು ವಿಭಾಗಗಳಿವೆ.

ಮಕ್ಕಳ ಭವಿಷ್ಯಕ್ಕೆ ಬುನಾದಿ

ಒಂದನೇ ತರಗತಿಯಿಂದ ಹನ್ನೆರಡನೇ ತರಗತಿವರೆಗೂ ಮಕ್ಕಳಿಗೆ ಸಿಬಿಎಸ್‌ಇ ಅಡಿಯಲ್ಲಿ ಶಿಕ್ಷಣ ನೀಡಲು ಅವಕಾಶವಿದ್ದು, ಆಯಾ ತರಗತಿಗಳಿಗೆ ಪಠ್ಯಗಳಿವೆ. ಉನ್ನತ ತರಗತಿಗೂ ಹೋದ ಹಾಗೆಯೇ ಗಣಿತ, ವಿಜ್ಞಾನದ ವಿಷಯಕ್ಕೆ ಹೆಚ್ಚಿನ ಒತ್ತು ಕೊಡಲಿದೆ. ಸಂಪೂರ್ಣ ಇಂಗ್ಲೀಷ್‌ ಮಾಧ್ಯಮದ ಶಿಕ್ಷಣವೇ ಆಗಿರುವುದರಿಂದ ಮಕ್ಕಳಿಗೆ ಆರಂಭದಲ್ಲಿ ಕಠಿಣ ಎನ್ನಿಸಿದರೂ ಅವರ ಕಲಿಕಾ ಸಾಮರ್ಥ್ಯ ಹಾಗೂ ಕಲಿಯಲು ಬೇಕಾದ ವಾತಾವರಣದ ಮೇಲೆ ಪ್ರಗತಿ ಕಾಣಬಲ್ಲರು.

ವಿದ್ಯಾರ್ಥಿಗಳು ವಿವಿಧ ಪರಿಕಲ್ಪನೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಅನುಗಣವಾಗಿ ಸಿಬಿಎಸ್‌ಇ ಪಠ್ಯಕ್ರಮ ರೂಪಿಸಿದೆ. ಮಕ್ಕಳು ಜ್ಞಾನದ ಹರವನ್ನು ವಿಸ್ತರಿಸಿಕೊಳ್ಳಲು ಅನುವು ಮಾಡಿಕೊಡುವ ಪರೀಕ್ಷೆಗಳನ್ನಾಧರಿಸಿ ಶಿಕ್ಷಣ ಕ್ರಮ ರೂಪಿಸಿದೆ. ಸಿಬಿಎಸ್‌ಇ ಬೋರ್ಡ್‌ನಲ್ಲಿ ನರ್ಸರಿಯಿಂದಲೂ ಇಂಗ್ಲಿಷ್ ವಿಷಯವನ್ನು ಬೋಧಿಸುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಪ್ರಯೋಜನ ಪಡೆಯಬಲ್ಲರು.

ಒಂದನೇ ತರಗತಿಯಿಂದಲೇ ಅಲ್ಲಿ ದ್ವಿಭಾಷಾ ಬೋಧನೆಗೆ ಅವಕಾಶವಿದೆ. ಇಂಗ್ಲಿಷ್ ಮತ್ತು ಹಿಂದಿ ಎರಡನ್ನೂ ಬೋಧನೆಯ ಸಾಧನವಾಗಿ ಬಳಸಿಕೊಳ್ಳುತ್ತದೆ. ರಾಜ್ಯ ಭಾಷೆಗೆ ಅಲ್ಲಿ ಅವಕಾಶವಿದ್ದರೂ ಇಂಗ್ಲೀಷ್‌ಗೆ ಹೆಚ್ಚಿನ ಒತ್ತು. ಸಿಬಿಎಸ್‌ಸಿ ವಿಜ್ಞಾನ ಹಾಗೂ ಗಣಿತದಂತಹ ವಿಷಯಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿರುತ್ತವೆ.

ರಚನಾತ್ಮಕ ಪಠ್ಯಕ್ರಮ

ರಚನಾತ್ಮಕ ಪಠ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ. ಮಗು ಈಗಿನಿಂದಲೇ ಉನ್ನತ ಗುರಿಯೊಂದಿಗೆ ಶಿಕ್ಷಣ ಪಡೆಯಲಿ ಎನ್ನುವ ಆಶಯದೊಂದಿಗೆ ಪಠ್ಯ ರೂಪಿಸುತ್ತದೆ. ಇದರ ಗುರಿ ಐಐಟಿ, ಜೆಇಇ, ನೀಟ್‌ ಅಲ್ಲದೇ ಯುಪಿಎಸ್ಸಿ ಪರೀಕ್ಷೆಗಳನ್ನು ಗುರಿಯಾಗಿಟ್ಟುಕೊಂಡು ಪಠ್ಯ ಕ್ರಮವನ್ನು ಕೇಂದ್ರೀಕರಿಸುತ್ತದೆ. ಈ ಪಠ್ಯಕ್ರಮವು ಭಾರತದಾದ್ಯಂತ ಪ್ರಮಾಣಿತ ಶಿಕ್ಷಣ ಚೌಕಟ್ಟನ್ನು ನೀಡುತ್ತದೆ, ಇದು ವಿದ್ಯಾರ್ಥಿಗಳಿಗೆ ದೇಶಾದ್ಯಂತ ಶಾಲೆಗಳ ನಡುವೆ ವರ್ಗಾವಣೆಗೆ ಏಕರೂಪದ ಮಾನದಂಡಗಳನ್ನು ರೂಪಿಸಿದೆ. ಬೇರೆ ಎಲ್ಲೇ ಹೋದರೂ ಶಿಕ್ಷಣ ಪಡೆಯಲು ಸಿಬಿಎಸ್‌ಸಿ ಶಿಕ್ಷಣ ಸಹಕಾರಿಯಾಗಲಿದೆ.

ಹೆಚ್ಚಿನ ಪೋಷಕರು ತಮ್ಮ ಮಕ್ಕಳು ಇಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದ ನಂತರ ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಕಳುಹಿಸಲು ಯೋಜಿಸುತ್ತಾರೆ. ಹೀಗೆ ಲಕ್ಷಾಂತರ ಮಕ್ಕಳು ಸಿಬಿಎಸ್‌ಇ ಅಡಿ ಶಿಕ್ಷಣ ಪಡೆದು ನಂತರ ಉನ್ನತ ವ್ಯಾಸಂಗದೊಂದಿಗೆ ಬದುಕು ಕಟ್ಟಿಕೊಂಡಿರುವುದೂ ಇದೆ.

ಹೆಚ್ಚಿನ ಮಕ್ಕಳು ವಿದೇಶದಲ್ಲಿ ಶಿಕ್ಷಣ ಪಡೆಯಲು ಬಯಸುವಾಗ ಅವರಿಗೆ ಸಿಬಿಎಸ್‌ಇ ಶಿಕ್ಷಣಪಠ್ಯ ಭದ್ರಬುನಾದಿ ಹಾಕಲಿದೆ ಎನ್ನುವ ನಂಬಿಕೆಯಿದೆ.ಈ ಕಾರಣದಿಂದಲೇ ಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ ಸಿಬಿಎಸ್‌ಇ ಶಿಕ್ಷಣಕ್ಕೆ ಪೋಷಕರು ಹಾಕುತ್ತಾರೆ.

Whats_app_banner