ಕರ್ನಾಟಕದಲ್ಲಿ ಇಂದಿನಿಂದ ಶಾಲಾ ಕಾಲೇಜುಗಳು ಪುನಾರಂಭ, ಬಿಬಿಎಂಪಿಯಲ್ಲಿ ಎಲ್ಲವೂ ಉಚಿತ, ಶೇ 85 ಅಂಕ ಪಡೆದವರಿಗೆ 25-35 ಸಾವಿರ ರೂ ಪ್ರೋತ್ಸಾಹ ಧನ
ಕರ್ನಾಟಕದಲ್ಲಿ ಇಂದು ಶಾಲಾ ಕಾಲೇಜುಗಳು ಪುನಾರಂಭವಾಗುತ್ತಿದೆ. ಮಕ್ಕಳಿಗೆ ಮೊದಲ ದಿನ ಶಾಲಾ ಕಾಲೇಜುಗಳಿಗೆ ಹೋಗುವ ಖುಷಿ. ಇದೇ ಸಮಯದಲ್ಲಿ ಬೆಂಗಳೂರಿನ ಬಿಬಿಎಂಪಿ ಶಾಲೆ ಕಾಲೇಜುಗಳು ಶುರುವಾಗುತ್ತಿವೆ. ಬಿಬಿಎಂಪಿ ಶಾಲೆಗಳಲ್ಲಿ ದೊರಕುವ ಸೌಕರ್ಯಗಳನ್ನು ತಿಳಿದುಕೊಳ್ಳೋಣ.

ಬೆಂಗಳೂರು: ಕರ್ನಾಟಕದಲ್ಲಿ ಇಂದು ಶಾಲಾ ಕಾಲೇಜುಗಳು ಪುನಾರಂಭವಾಗುತ್ತಿದೆ. ಮಕ್ಕಳಿಗೆ ಮೊದಲ ದಿನ ಶಾಲಾ ಕಾಲೇಜುಗಳಿಗೆ ಹೋಗುವ ಖುಷಿ. 2025-26ನೇ ಸಾಲಿನಲ್ಲಿ ಪಿಎಂ ಪೋಷಣ್ (ಮಧ್ಯಾಹ್ನದ ಉಪಹಾರ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆಯನ್ನು ರಾಜ್ಯದ ಎಲ್ಲಾ ಸರಕಾರ ಮತ್ತು ಅನುದಾನಿತ 1-10ನೇ ತರಗತಿಯ ವಿದ್ಯಾರ್ಥಿಗಳಿಗೆ ಪೂರೈಸಲಾಗುತ್ತಿದೆ. ಇದರೊಂದಿಗೆ ಶಾಲಾ ಪ್ರಾರಂಭೋತ್ಸವಕ್ಕೂ ಸೂಚನೆಗಳನ್ನು ನೀಡಲಾಗಿದೆ. ಖಾಲಿಯಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಕರುಗಳ ಹುದ್ದೆಗಳಿಗೆದುರಾಗಿ ಶೈಕ್ಷಣಿಕ ಹಿತದೃಷ್ಟಿಯಿಂದ ಅತಿಥಿ ಶಿಕ್ಷಕರುಗಳ ನೇಮಕಕ್ಕೆ ಈಗಾಗಲೇ ಆದೇಶ ನೀಡಲಾಗಿದೆ. ಕಳೆದ ಹಲವು ದಿನಗಳಿಂದ ರಜೆಯ ಮಜಾದಲ್ಲಿದ್ದ ವಿದ್ಯಾರ್ಥಿಗಳು ಇಂದು ಮತ್ತೆ ಶಾಲೆಗೆ ಹೋಗುತ್ತಿದ್ದಾರೆ. ಕೆಲವು ಮಕ್ಕಳಿಗೆ ಮೊದಲ ದಿನ ಹೊಸ ಸ್ಕೂಲ್‌ಗೆ ಹೋಗುವ ಆತಂಕ, ತವಕ, ಇನ್ನು ಕೆಲವು ವಿದ್ಯಾರ್ಥಿಗಳು ಹಳೆಯ ಗೆಳತಿ ಗೆಳೆಯರ ಜತೆ ಮತ್ತೆ ಶಾಲಾ ಕಾಲೇಜುಗಳಲ್ಲಿ ಕಳೆಯುವ ಖುಷಿಯಲ್ಲಿ ಇಂದು ಇದ್ದಾರೆ.
ಗ್ರೇಟರ್ ಬೆಂಗಳೂರಿನ ಬಿಬಿಎಂಪಿ ಸ್ಕೂಲ್‌ಗಳೂ ಇಂದಿನಿಂದ ಪುನಾರಂಭವಾಗುತ್ತಿವೆ. ಬಿಬಿಎಂಪಿ ಒಡೆತನದ ಶಿಶುವಿಹಾರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳು ಇಂದಿನಿಂದ (ಮೇ 29) ಆರಂಭವಾಗುತ್ತಿದೆ. "2025-26 ನೇ ಶೈಕ್ಷಣಿಕ ಸಾಲಿನ ವಿವಿಧ ತರಗತಿಗಳ ವಿದ್ಯಾಭ್ಯಾಸಕ್ಕಾಗಿ ಈಗಾಗಲೇ ಪ್ರವೇಶಾತಿಗಳು ಪ್ರಾರಂಭವಾಗಿದ್ದು, 20 ನೇ ಜೂನ್ 2025 ರವರೆಗೆ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಹತ್ತಿರದ ಪಾಲಿಕೆಯ ಶಾಲಾ/ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಬಹುದಾಗಿರುತ್ತದೆ" ಎಂದು ಶಿಕ್ಷಣ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ.
ಬಿಬಿಎಂಪಿ ಶಾಲಾ ಕಾಲೇಜುಗಳಲ್ಲಿ ದೊರಕುವ ಸೌಕರ್ಯಗಳು
- ನೋಟ್ ಪುಸ್ತಕಗಳು, ಪಠ್ಯ ಪುಸ್ತಕಗಳು, ಸಮವಸ್ತ್ರಗಳು, ಶೂ ಮತ್ತು ಕಾಲುಚೀಲ, ಬ್ಯಾಗ್ ಗಳು, ಸ್ವೇಟರ್‌ಗಳು
- ಮದ್ಯಾಹ್ನದ ಬಿಸಿಯೂಟ (ಶಿಶುವಿಹಾರ, ಪದವಿ ಪೂರ್ವ ಕಾಲೇಜು, ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ) ಬಿಸಿ ಹಾಲು, ಮೊಟ್ಟೆ, ಬಾಳೆಹಣ್ಣು ಹಾಗೂ ಚಿಕ್ಕಿ (ಶಿಶುವಿಹಾರ ಶಾಲಾ ಮಕ್ಕಳಿಗೆ)
- ಮಕ್ಕಳ ಆಟಿಕೆಗಳು (ಶಿಶುವಿಹಾರ ಶಾಲಾ ಮಕ್ಕಳಿಗೆ), ಆಸೀನರಾಗಲು ಮ್ಯಾಟ್‌ಗಳು (ಶಿಶುವಿಹಾರ ಶಾಲಾ ಮಕ್ಕಳಿಗೆ)
- ಉನ್ನತ ಶಿಕ್ಷಣ ಒದಗಿಸಲು ಸ್ಮಾರ್ಟ್ ತರಗತಿ ಮೂಲಕ ಶಿಕ್ಷಣದ ವ್ಯವಸ್ಥೆ, ಗಣಕಯಂತ್ರ ತರಬೇತಿ (ಕಂಪ್ಯೂಟರ್ ಲ್ಯಾಬ್)
- ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಸೌಲಭ್ಯ.
- ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುನ್ನತ ಶ್ರೇಣಿ (ಶೇ. 85%) ಪಡೆದ ವಿದ್ಯಾರ್ಥಿಗಳಿಗೆ ತಲಾ 25,000 ರೂ. ಪ್ರೋತ್ಸಾಹ ಧನ ನೀಡುವುದು.
- ದ್ವಿತೀಯ ಪಿ.ಯು.ಸಿ. ಯಲ್ಲಿ ಅತ್ಯುನ್ನತ ಶ್ರೇಣಿ (ಶೇ. 85%) ಪಡೆದ ವಿದ್ಯಾರ್ಥಿಗಳಿಗೆ ತಲಾ 35,000 ರೂ.ಗಳ ಪ್ರೋತ್ಸಾಹ ಧನ ನೀಡುವುದು.
ಸಾರ್ವಜನಿಕರು ತಮ್ಮ ಮಕ್ಕಳಿಗೆ ಬಿಬಿಎಂಪಿ ಶಾಲೆ/ಕಾಲೇಜುಗಳಿಗೆ ಪ್ರವೇಶ ಪಡೆದುಕೊಂಡು ಬಿಬಿಎಂಪಿಯು ಶಿಕ್ಷಣಕ್ಕೆ ನೀಡುತ್ತಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಶಿಕ್ಷಣ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ಮನವಿ ಮಾಡಿದ್ದಾರೆ.