ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿ, ಬೆಂಗಳೂರು ನಗರ ನಿರ್ಗಮಿತ ಪೊಲೀಸ್ ಆಯುಕ್ತ ದಯಾನಂದ್ ಅಮಾನತು ಆದೇಶ ರದ್ದಿಗೆ ಹೆಚ್ಚಿದ ಒತ್ತಡ
ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರಾದಿಯಾಗಿ ಹಿರಿಯ ಅಧಿಕಾರಿಗಳ ಅಮಾನತಿಗೆ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಬಗ್ಗೆ ಕರ್ನಾಟಕದ ಮೂವರು ಹಿರಿಯ ಪತ್ರಕರ್ತರ ಅಭಿಪ್ರಾಯಗಳು ಇಲ್ಲಿವೆ.

ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ, ಆನಂತದ ಕಾಲ್ತುಳಿತದ ಪ್ರಕರಣದಲ್ಲಿ ಹನ್ನೊಂದು ಯುವಕರ ಬಲಿ, ಇದಕ್ಕೆ ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯವಿದೆ ಎಂದು ಅಮಾನತು ಮಾಡಿದಂತಹ ಕ್ರಮಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ದಯಾನಂದ್ ಅವರನ್ನು ಅಮಾನತು ಮಾಡಿದ ಕ್ರಮದ ಬಗ್ಗೆ ಆಕ್ಷೇಪಗಳು ಕೇಳಿ ಬರುತ್ತಿವೆ. ಬಹುತೇಕರು ಅವರ ಅಮಾನತು ಆದೇಶ ವಾಪಸ್ ಪಡೆಯಬೇಕು ಎನ್ನುವ ಒತ್ತಾಯ ಮಾಡುತ್ತಿದ್ದಾರೆ. ಈ ಕುರಿತು ಕರ್ನಾಟಕದ ಹಿರಿಯ ಪತ್ರಕರ್ತರಾದ ಜಗದೀಶ್ ಕೊಪ್ಪ, ದಯಾಶಂಕರ ಮೈಲಿ ಹಾಗೂ ಮುತ್ತು ನಾಯ್ಕರ್ ಅವರು ಸರ್ಕಾರದ ಕ್ರಮವನ್ನು ಟೀಕಿಸಿದ್ದೂ ಅಲ್ಲದೇ ಅಮಾನತು ರದ್ದುಪಡಿಸಬೇಕು ಎನ್ನುವ ಆಗ್ರಹವನ್ನೂ ಮಾಡಿದ್ದಾರೆ.
ಕರ್ನಾಟಕ ಸರ್ಕಾರದ ಪೋಲಿಸರ ಮೇಲಿನ ಕ್ರಮವು ಅಮಾನುಷ ಕ್ರಿಯೆ ಅಲ್ಲದೆ, ಬೇರೇನೂ ಅಲ್ಲ:ಎನ್.ಜಗದೀಶ್ ಕೊಪ್ಪ.
ಮೊನ್ನೆ ಬುಧವಾರ ಬೆಂಗಳೂರಿನಲ್ಲಿ ನಡೆದ ಆರ್.ಸಿ.ಬಿ. ಅಭಿಮಾನಿಗಳು ಎಂಬ ಹುಚ್ಚರ ಸಂತೆಯಲ್ಲಿ ನಡೆದ ಕಾಲ್ತುಳಿತದ ಪ್ರಕರಣದಲ್ಲಿ ನೇರ ನೈತಿಕ ಹೊಣೆ ಹೊರಬೇಕಾದದ್ದು ಕರ್ನಾಟಕ ಸರ್ಕಾರವೇ ಹೊರತು ಕರ್ನಾಟಕ ಪೊಲೀಸ್ ಅಧಿಕಾರಿಗಳಲ್ಲ. ಕರ್ನಾಟಕ ಸರ್ಕಾರದ ಅವಿವೇಕದ ನಡುವಳಿಕೆಯಿಂದಾಗಿ ಹನ್ನೊಂದು ಮಂದಿ ಯುವಕ ಯುವತಿಯರು ಮೃತಪಟ್ಟು,ಐವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡರು. ನಿನ್ನೆ ರಾಜ್ಯ ಸರ್ಕಾರವು ಕರ್ನಾಟಕ ಕಂಡ ಅತ್ಯಂತ ನಿಷ್ಟಾವಂತ ಹಾಗೂ ಪ್ರಾಮಾಣೀಕ ಅಧಿಕಾರಿ ಮತ್ತುಬೆಂಗಳೂರು ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ್ ಸೇರಿದಂತೆ ಇತರೆ ಅಧಿಕಾರಿಗಳನ್ನು ಅಮಾನತು ಮಾಡಿ ತನ್ನ ಸಣ್ಣತನವನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಿದೆ.
ಈ ಕ್ರಿಯೆ ಹೇಗಿದೆ ಎಂದರೆ, ಮಂಗ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿತು ಎಂಬ ಗಾದೆಯಂತಿದೆ. ವೈಯಕ್ತಿಕವಾಗಿ ನನಗೆ 2008 ರಲ್ಲಿ ಬೆಳಗಾವಿಯಲ್ಲಿ ಪ್ರಥಮ ಬಾರಿಗೆ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಬಿ.ದಯಾನಂದ್ ಪರಿಚಯವಾದರು. ಆ ಸಂದರ್ಭದಲ್ಲಿ ಈಗ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಮತ್ತು ಬಿ.ದಯಾನಂದ್ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲಿನ ಕೆ.ಎಲ್.ಇ. ಕಾಲೇಜಿನ ಆವರಣದಲ್ಲಿ ನಡೆದ ಅಧೀವೇಶನಕ್ಕೆ ಮುನ್ನ ಬೆಳಗಾವಿ ನೆಲದ ಐತಿಹಾಸಿಕ ಹಿನ್ನಲೆ ಕುರಿತು ಉದಯ ಟಿ.ವಿ.ಗೆ ಹದಿನೈದು ನಿಮಿಷಗಳ ವಿಶೇಷ ವರದಿಯನ್ನು ನಮ್ಮ ಬೆಳಗಾವಿ ಮತ್ತು ದಾರವಾಡದ ವರದಿಗಾರರ ಮೂಲಕ ನಾನು ಸಿದ್ಧಪಡಿಸುತ್ತಿದ್ದೆ. ಬೆಳಗಾವಿಯ ಜಿಲ್ಲಾಧಿಕಾರಿ ನಿವಾಸವು ವಾಸ್ತವವಾಗಿ ಬಾಂಬೆ ಪ್ರೆಸಿಡೆನ್ಸಿಯ ಅವಧಿಯಲ್ಲಿ ಬ್ರಿಟಿಷ್ ಅಧಿಕಾರಿಯ ನಿವಾಸವಾಗಿತ್ತು. ( ಧಾರವಾಡ ಜಿಲ್ಲಾಧಿಕಾರಿ ನಿವಾಸ ಕೂಡಾ ಬ್ರಿಟಿಷ್ ಅಧಿಕಾರಿಯ ನಿವಾಸ)
ಬೆಳಗಾವಿ ಜಿಲ್ಲಾಧಿಕಾರಿ ನಿವಾಸದಲ್ಲಿ ಭಾರತ ಸ್ವಾತಂತ್ರ್ಯ ಹೋರಾಟದ ಅಪರೂಪದ ಚಿತ್ರಗಳಿವೆ. ಅವುಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು. ಅಧಿವೇಶನದ ಸಿದ್ಧತೆ ಕುರಿತು ಶಾಲಿನ ರಜನೀಶ್ ಅವರ ಸಂದರ್ಶನ ಮಾಡುತ್ತಿದ್ದೆ. ಅದೇ ವೇಳೇಗೆ ಉತ್ತರ ಕರ್ನಾಟಕದ ಐ.ಜಿ.ಪಿ. ಆಗಿದ್ದ ಈ ನಾಡು ಕಂಡ ಶ್ರೇಷ್ಠ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾದ ರಾಘವೇಂದ್ರ ಔರಾದ್ಕರ್ ಅಲ್ಲಿಗೆ ಆಗಮಿಸಿದರು. ಅವರ ಜೊತೆಯಲ್ಲಿ ಬಿ.ದಯಾನಂದ್ ಕೂಡಾ ಇದ್ದರು. ರಾಘವೇಂದ್ರ ಔರಾದ್ ಕರ್ 1984 ರಲ್ಲಿ ಮಂಡ್ಯ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ದಿನಗಳಿಂದಲೂ ನನಗೆ ಪರಿಚಿತರಾಗಿದ್ದರು. ನನ್ನೂರಿನ ಕೊಪ್ಪ ಪೊಲೀಸ್ ಠಾಣೆಯ ಸಿಬ್ಬಂದಿಗಳ ವಸತಿ ಗೃಹಕ್ಕೆ ನನ್ನ ಕುಟುಂಬದ ಅಪ್ಪ ಮತ್ತು ಚಿಕ್ಕಪ್ಪಂದಿರ ಜಮೀನು ಸೇರಿ ಒಟ್ಟು ಎರಡೂವರೆ ಎಕರೆ ಜಮೀನು ನೀಡಿದ್ದೆವು. ಈ ಕಾರಣದಿಂದ ನನ್ನ ಮತ್ತು ಅವರ ನಡುವೆ ವಿಶೇಷ ಬಾಂಧ್ಯವ್ಯ ಬೆಳೆದಿತ್ತು.
ಔರಾದ್ ಕರ್ ಅವರು ಬಿ.ದಯಾನಂದ್ ಅವರನ್ನು ನನಗೆ ಪರಿಚಯಿಸುತ್ತಾ, ‘’ ಜಗದೀಶ್, ಇವರು ದಯಾನಂದ್, ಒಳ್ಳೆಯ ಅಧಿಕಾರಿ ಹಾಗೂ ಈವರೆಗೆ ನೀವು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಇವರ ಮೇಲೆಯೂ ಇಡಬಹುದು’’ ಎಂದು ಹೇಳುತ್ತಾ ನನಗೆ ಪರಿಚಯ ಮಾಡಿಕೊಟ್ಟರು. ಜೊತೆಗೆ ಶಾಲಿನಿ ಮೇಡಂ ಮನೆಯಲ್ಲಿ ಚಹಾ ಕುಡಿಯುತ್ತಾ, ದಯಾನಂದ್ ಕಡೆಗೆ ತಿರುಗಿ’’ ದಯಾನಂದ್. ಇವರು ಜಗದೀಶ್, ಉದಯ ಟಿ.ವಿ. ಉತ್ತರ ಕರ್ನಾಟಕ ಪ್ರಾದೇಶಿಕ ಕಚೇರಿ ಮುಖ್ಯಸ್ಥರು ಮತ್ತು ಅಪ್ಪಟ ಮಂಡ್ಯ ಗೌಡರ ಪ್ರೀತಿ, ಒರಟು ಭಾಷೆ, ಸಿಟ್ಟು ಎಲ್ಲವೂ ಇದೆ. ಆದರೆ, ಆತಂಕ ಪಡುವ ಅಗತ್ಯವಿಲ್ಲ ಇವರೊಳಗೆ ಒಳ್ಳೆಯ ಅಧಿಕಾರಿಗಳ ಬಗ್ಗೆ ಸಿಟ್ಟಿಗಿಂತ ಪ್ರೀತಿ ಹೆಚ್ಚಾಗಿ ಇರುತ್ತದೆ ಎಂದು ಹೇಳಿದ್ದರು. ಅಂದಿನಿಂದ ಇಲ್ಲಿವರೆಗೆ ಬಿ.ದಯಾನಂದ್ ಅವರನ್ನು ಹತ್ತಿರದಿಂದ ಗಮನಿಸಿಕೊಂಡು ಬಂದಿದ್ದೀನಿ. ಈವರೆಗೆ ಒಂದೇ ಒಂದು ಸಣ್ಣ ದೋಷವೂ ನನಗೆ ಕಂಡು ಬಂದಿಲ್ಲ.
ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ರಾಣಿ ಬೆನ್ನೂರು ಮೂಲದವರಾದ ದಯಾನಂಧ್ ಬೆನ್ನಿಕಲ್ ಹೆಸರಿನ ಬಿ.ದಯಾನಂದ್ ಅವರು 1994 ರಲ್ಲಿ ಐ.ಪಿ.ಎಸ್ ತರಬೇತಿ ಪಡೆದು ಕರ್ನಾಟಕ ಪೊಲೀಸ್ ಅಧಿಕಾರಿಯಾಗಿ ಸೇರ್ಪಡೆಯಾದರು. ಎಂದಿಗೂ, ಸದ್ದು ಮಾಡದೆ, ಸುದ್ದಿಯಾಗದೆ ನಿಷ್ಠ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವುದು ಅವರ ಗುಣ. ಈವರೆಗೆ ಅವರ ಬಗ್ಗೆ ಸಾರ್ವಜನಿಕವಾಗಿ ಒಂದು ಅಪನುಡಿಯ ಶಬ್ದವಿಲ್ಲ. ಎಂದಿಗೂ ಅವರು ಯಾವುದೇ ಸ್ಥಾನಕ್ಕೆ ರಾಜಕಾರಣಿಗಳ ಪಂಚೆ ಅಥವಾ ಕಚ್ಚೆಯ ಚುಕ್ಕಾಣಿ ಹಿಡಿದು ಲಾಭ ಮಾಡಿದವರಲ್ಲ. ಸರ್ಕಾರವು ಅವರಿಗೆ ವಹಿಸಿದ ಹುದ್ದೆಯನ್ನು ಶ್ರದ್ಧೆಯಿಂದ ನಿರ್ವಹಿಸಿದವರು.
ಕಾಲ್ತುಳಿದ ದುರಂತಕ್ಕೆ ಯಾವ ಕಾರಣಕ್ಕೂ ದಯಾನಂದ್ ಆಗಲಿ ಅಥವಾ ಪೊಲೀಸರು ಕಾರಣಲ್ಲ. ಈ ವಾಸ್ತವ ಸತ್ಯವನ್ನು ಮರೆಮಾಚಿದ ಕರ್ನಾಟಕ ಸರ್ಕಾರವು ತಪ್ಪಿನಿಂದ ಬಚಾವ್ ಆಗಲು ಕಳಂಕವನ್ನು ಪೊಲೀಸರ ಮೇಲೆ ವಹಿಸಿದೆ.
ಮಂಗಳವಾರ ರಾತ್ರಿ ಬೆಂಗಳೂರು ನಗರದ ಮಲ್ಟಿಪ್ಲೆಕ್ಸ್, ಮಾಲ್ ಗಳು, ಪಬ್ ಇವುಗಳಲ್ಲಿ ಐ.ಪಿ.ಎಲ್. ಫೈನಲ್ ಪಂದ್ಯದ ಪ್ರದರ್ಶನವಿತ್ತು. ವಿಜಯ ನಂತರ ಅಭಿಮಾನಿಗಳೇಂಬ ಅವಿವೇಕಿಗಳ ಕುಡಿತ, ಹಾರಾಟ, ತೂರಾಟ, ಮತ್ತು ಇವರೆಲ್ಲರೂ ಮನೆ ಸೇರುವ ತನಕ ಬೆಳಗಿನ ಜಾವ ಮೂರು ಗಂಟೆಯವರೆಗೆ ನಗರ ಪೊಲೀಸರು ಶ್ರಮಿಸಿದ್ದಾರೆ. ಪೊಲೀಸರಿಗೂ ನಮ್ಮ ಹಾಗೆ ಕುಟುಂಬಗಳಿವೆ, ಪತ್ನಿಯರು ಮತ್ತು ಮಕ್ಕಳಿದ್ದಾರೆ. ಅವರನ್ನು ಮನುಷ್ಯರಾಗಿ ಪರಿಗಣಿಸುವ ಪ್ರಜ್ಞೆಯನ್ನು ಇಂದಿನ ರಾಜಕಾರಣಿಗಳು ಬೆಳೆಸಿಕೊಳ್ಳಬೇಕಾಗಿದೆ. ಅತ್ತ ಅಹಮದಾಬಾದ್ ನಲ್ಲಿ ಕಪ್ ಗೆದ್ದ ತಂಡವು ಇಡೀ ರಾತ್ರಿ ಸಂಭ್ರಮದಲ್ಲಿ ಮುಳಳುಗಿತ್ತು. ಆರ್.ಸಿ.ಬಿ. ತಂಡ ಕನ್ನಡಿಗರ ಅಥವಾ ಕರ್ನಾಟಕದ ಅಪ್ಪಟ ಕನ್ನಡ ತಂಡವಾಗಿರಲಿಲ್ಲ. ಈ ತಂಡವನ್ನು ಪೊಲೀಸರ ಸಲಹೆಯನ್ನು ಮೀರಿ ಮರುದಿನವೇ ಕರೆಸಿಕೊಂಡು ಸನ್ಮಾನ ಮಾಡುವ ಅಗತ್ಯ ಏನಿತ್ತು? ಇದಕ್ಕೆ ಮುಖ್ಯಮಂತ್ರಿ ಮತ್ತು ಉಪಮುಖ್ಯ ಮಂತ್ರಿ ಇಬ್ಬರೂ ಕನ್ನಡಿಗರಿಗೆ ಉತ್ತರಿಸಬೇಕಿದೆ.
ತಂಡವನ್ನು ಹೆಚ್.ಎ.ಎಲ್. ವಿಮಾನ ನಿಲ್ದಾಣಕ್ಕೆ ಕರೆಸಿಕೊಂಡಿದ್ದು, ಅವರನ್ನು ತಾಜ್ ವೆಸ್ಟ್ ಎಂಡ್. ನಲ್ಲಿ ಉಳಿಸಿದ್ದು, ನಂತರ ವಿಧಾನ ಸೌಧದ ಬಳ ಸನ್ಮಾನದ ನೆಪದಲ್ಲಿ ಸಚಿವರು ಮತ್ತು ಅಧಿಕಾರಿಗಳ ಮಕ್ಕಳ ಜೊತೆ ಫೋಟೊ ತೆಗೆಸಿಕೊಂಡಿದ್ದು ನಂತರ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಸನ್ಮಾನ, ಹೀಗೆ ಯಾವುದೇ ಕಾರ್ಯಕ್ರಮಕ್ಕೆ ನಿರ್ಧಿಷ್ಠ ವಾದ ಸಿದ್ಧತೆಗಳಿರಲಿಲ್ಲ. ಪೊಲೀಸರ ಮಾಹಿತಿ ಮತ್ತು ಅನುಮತಿಯನ್ನು ಮೀರಿ ಈ ಕಾರ್ಯಕ್ರಮ ಆಯೋಜಿಸಿದ್ದು ನೈತಿಕವಾಗಿ ಕರ್ನಾಟಕ ಸರ್ಕಾರದ ತಪ್ಪು. ಹಾಗಾಗಿ ಈ ಪ್ರಕರಣದಲ್ಲಿ ಮೊದಲನೇ ಆರೋಪಿ ಕರ್ನಾಟಕ ಸರ್ಕಾರವೇ ಹೊರತು ಬೇರೆ ಯಾರು ಅಲ್ಲ. ನಾಲ್ಕು ಐದು ಕಡೆ ಪೊಲೀಸರನ್ನು ಮಿಯೋಜಿಸಲು ಅವರು ರೊಬಟ್ ಯಂತ್ರಗಳಲ್ಲ. ಈ ಕನಿಷ್ಠ ಪ್ರಜ್ಞೆ ಸರ್ಕಾರಕ್ಕೆ ಇರಬೇಕು. ನಗರದ ಪೊಲೀಸರಲ್ಲಿ ಅರ್ಧ ಮಂದಿ ಸಂಚಾರ ನಿಯಂತ್ರಣದಲ್ಲಿ ಹೈರಾಣಾಗಿದ್ದಾರೆ. ಜೀರೋ ಟ್ರಾಫಿಕ್ನಲ್ಲಿ ಮತ್ತು ಹೆಲಿಕಾಪ್ಟರ್ ನಲ್ಲಿ ಓಡಾಡುವ ಮೂರ್ಖರಿಗೆ ಈ ಸಂಗತಿ ಅರ್ಥವಾಗಬೇಕು.
ಕೂಡಲೇ ಈ ರ್ಕಾರವು ಪೊಲೀಸರ ಮೇಲಿನ ಅಮಾನತ್ತು ಆದೇಶವನ್ನು ವಾಪಸ್ ಪಡೆದು ಅವರಿಗೆ ನೈತಿಕತೆಯನ್ನು ತುಂಬಬೇಕೆಂದು ಸಾರ್ವಜನಿಕರ ಪರವಾಗಿ ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ.
ಮೆರವಣಿಗೆ ರದ್ದು ಮಾಡಿದರೂ ಕಾರ್ಯಕ್ರಮ ಬೇಕಿತ್ತೆ: ದಯಾಶಂಕರ ಮೈಲಿ
ಇಡೀ ಘಟನೆಯನ್ನು ಅವಲೋಕಿಸಿ ನೋಡಿದರೇ ಸಿಎಂ . ಡಿಸಿಎಂ ನೈತಿಕ ಹೊಣೆಗಾರಿಕೆ ಹೊತ್ತು ರಾಜಿನಾಮೆ ನೀಡುವುದು ಸೂಕ್ತ . ಗುಪ್ತದಳದ ವರದಿ ಪ್ರಕಾರ ಮೆರವಣಿಗೆ ರದ್ದು ಮಾಡಿದ ಮೇಲೆ ಕಾರ್ಯಕ್ರಮ ಮಾಡುವ ತುರ್ತು ಏನಿತ್ತು ? ಎಂಬ ಪ್ರಶ್ನೆ ಮೂಡುತ್ತದೆ. ವಿಶೇಷವಾಗಿ ದೃಶ್ಯ ಮಾಧ್ಯಮಗಳಿಗೆ ಸಾಮಾಜಿಕ ಜವಾಬ್ದಾರಿ ಅಂದ್ರೆ ಏನು ಎಂಬುದೇ ಗೊತ್ತಿಲ್ಲ. ಐಪಿಎಲ್ ಜೂಜುಗಾರಿಕೆ ಅಲ್ಲದೆ ಮತ್ತೇನು ಅಲ್ಲ . ಸಂತೆಯಲ್ಲಿ ದನಕರುಗಳಂತೆ ಹಣಕ್ಕೆ ಹರಾಜಾಗುವ ಆಟಗಾರರು ಆಡುವುದನ್ನು ನೋಡುವ ಜನರಿಗೂ ವಿವೇಕ ಇರಬೇಕಾಗುತ್ತದೆ
ಗುಬ್ಬಿ ಮೇಲೆ ಮಾತ್ರ ಬ್ರಹ್ಮಾಸ್ತ್ರ ಪ್ರಯೋಗ ಯಾಕೆ: ಮುತ್ತು ನಾಯ್ಕರ್
ಸರ್ಕಾರ ನಡೆಸುವವರು ತಮ್ಮ ದಡ್ಡತನ ಅಸಡ್ಡೆಯಿಂದ ಆಗಿರುವ ಅನಾಹುತಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಬೇಕಿತ್ತು. ಸಿಎಂ ಡಿಸಿಎಂ. ತಮ್ಮ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ದಕ್ಸ ಅಧಿಕಾರಿಗಳನ್ನು ಅಮಾನತು ಮಾಡುವುದು ಯಾವ ಪುರುಷಾರ್ಥ. ದುರ್ಬಲ ಜನಾಂಗದ ದಕ್ಷ ಹಿರಿಯ ಪೊಲೀಸ್ ಅಧಿಕಾರಿಗೆ ಅಮಾನತು ಶಿಕ್ಷೆ ಕೊಡುವುದು ಯಾವ ನ್ಯಾಯ? ಆಗ ಎಂಪಿ ಚುನಾವಣೆಯಲ್ಲಿ ವಾಲ್ಮೀಕಿ ನಿಗಮದ ಹಣ ಲೂಟಿ ಮಾಡುವುದು ಈಗ ವಾಲ್ಮೀಕಿ ಜನಾಂಗದ ದಕ್ಷ ಹಿರಿಯ ಪೊಲೀಸ್ ಅಧಿಕಾರಿಯನ್ನು ಸಸ್ಪೆಂಡ್ ಮಾಡುವುದು . ಈ ಸರಕಾರ ವಾಲ್ಮೀಕಿ ಜನಾಂಗವನ್ನು ಗುರಿಯಾಗಿಸಿಕೊಂಡಿದೆಯಾ? ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆ ಕೊಡುವುದಾದರೆ ಬೆಂಗಳೂರು ಘಟನೆಗೆ ಗ್ರಹ ಸಚಿವ ಕೂಡ ಅಷ್ಟೇ ಜವಾಬ್ದಾರಿ. ಗ್ರಹ ಸಚಿವರನ್ನು 24 ಗಂಟೆಯಲ್ಲಿ ಸಚಿವ ಸ್ಥಾನದಿಂದ ಕಿತ್ತೊಗೆದು ಸರ್ಕಾರ ತನ್ನ ಗಟ್ಟಿತನ ತೋರಿಸಲಿ. ಗುಬ್ಬಿ ಮೇಲೆ ಮಾತ್ರ ಬ್ರಹ್ಮಾಸ್ತ್ರ ಪ್ರಯೋಗ ಯಾಕೆ?