ಜಾತಿ ನಿಂದನೆ ಪ್ರಕರಣ; ಬೆಂಗಳೂರು ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಎಸ್ ಐಟಿ; ಜಾತಿ ನಿಂದನೆಯ ಧ್ವನಿ ದೃಢ
ಜಾತಿ ನಿಂದನೆ ಪ್ರಕರಣದಲ್ಲಿ ಬೆಂಗಳೂರು ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಸಿದೆ. ಇದಕ್ಕೂ ಮೊದಲು ಎಫ್‌ಎಸ್‌ಎಲ್ ಪರೀಕ್ಷೆಯಲ್ಲಿ ಆಡಿಯೋದಲ್ಲಿರುವ ಧ್ವನಿಯಲ್ಲಿ ಜಾತಿ ನಿಂದನೆಯ ಧ್ವನಿ ಮುನಿರತ್ನ ಅವರ ಧ್ವನಿ ಎಂದು ದೃಢಪಟ್ಟಿತ್ತು. ಇದಲ್ಲದೆ ಹೊಸ ಕೇಸ್ ಕೂಡ ಮುನಿರತ್ನ ವಿರುದ್ಧ ದಾಖಲಾಗಿದೆ. (ವರದಿ-ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಬಿಬಿಎಂಪಿ ಮಾಜಿ ಪಾಲಿಕೆ ಸದಸ್ಯರೊಬ್ಬರು ದಾಖಲಿಸಿದ್ದ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ(ಎಸ್ ಐಟಿ) ಶನಿವಾರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. 61 ವರ್ಷದ ಮುನಿರತ್ನ ವಿರುದ್ಧ ಸೆಪ್ಟಂಬರ್ 13ರಂದು ದಾಖಲಾಗಿದ್ದ ಮೂರು ಎಫ್ ಐಆರ್ ಗಳ ಪೈಕಿ ಎರಡನೇ ಎಫ್ ಐಆರ್ ಗೆ ಸಂಬಂಧಿಸಿದ ಚಾರ್ಜ್ ಶೀಟ್ ಇದಾಗಿದೆ. ಇವರ ವಿರುದ್ಧ ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಸಧ್ಯ ಮುನಿರತ್ನ ಜಾಮೀನು ಪಡೆದು ಹೊರಗಿದ್ದಾರೆ.
ಬಿಜೆಪಿ ಶಾಸಕ ಮುನಿರತ್ನ ಜಾತಿನಿಂದನೆ ಕೇಸ್; 159 ಪುಟಗಳ ಡಾಕ್ಯುಮೆಂಟರಿ ಸಾಕ್ಷ್ಯ, 590 ಪುಟಗಳ ಸಾಕ್ಷ್ಯಾಧಾರ
ಶಾಸಕರು ಮತ್ತು ಸಂಸದರ ವಿಶೇಷ ನ್ಯಾಯಾಲಯ(ಸಿಸಿಎಚ್-82) ಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್ ನಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್ಎಲ್) ಕಳುಹಿಸಿದ್ದ ಆಡಿಯೊ ಮಾದರಿ ವರದಿ ಬಂದಿದ್ದು, ಜಾತಿ ನಿಂದನೆ ಮಾಡಿರುವ ಆಡಿಯೊದಲ್ಲಿ ಇರುವುದು ಮುನಿರತ್ನ ಅವರದ್ದೇ ಧ್ವನಿ ಎನ್ನುವುದು ದೃಢಪಟ್ಟಿದೆ ಎಂದು ಹೇಳಲಾಗಿದೆ. ಚಾರ್ಜ್ ಶೀಟ್ ನಲ್ಲಿ ೫೩ ಪುಟಗಳ ಸಾಕ್ಷಿಗಳ ಹೇಳಿಕೆ, 159 ಪುಟಗಳ ಡಾಕ್ಯುಮೆಂಟರಿ ಸಾಕ್ಷ್ಯಗಳು ಸೇರಿ 590 ಪುಟಗಳ ಸಾಕ್ಷ್ಯಾಧಾರಗಳ ಚಾರ್ಜ್ ಶೀಟ್ ಇದಾಗಿದೆ. ನ್ಯಾಯಾಧೀಶರ ಮುಂದೆ ಸಾಕ್ಷ್ಯ ನುಡಿದಿದ್ದ ಮೂವರು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳೂ ಸೇರಿವೆ.
ವೈರಲ್ ಆದ ಆಡಿಯೋದಲ್ಲಿ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಜತೆಯಲ್ಲಿ ಮಾತನಾಡುತ್ತಾ ಶಾಸಕ ಮುನಿರತ್ನ ವೇಲುನಾಯ್ಕರ್ ಜಾತಿ ಪ್ರಸ್ತಾಪಿಸಿ ನಿಂದಿಸಿದ್ದರು. ಈ ಮಾತುಕತೆ ಕುರಿತು ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯಾರಿಗೂ ಲಂಚ ಕೊಡುವುದು ಬೇಡ ಎಂದು ನಾನು ಚಲುವರಾಜು ಅವರಿಗೆ ಹೇಳಿದ್ದರಿಂದಲೇ ಶಾಸಕರು ನನ್ನನ್ನು ನಿಂದಿಸಿದ್ದಾರೆ ಎಂದು ದೂರು ನೀಡಿದ್ದರು.
ಸಾರ್ವಜನಿಕವಾಗಿ ಒಬ್ಬರ ಜಾತಿಯನ್ನು ಪ್ರಸ್ತಾಪಿಸುವುದು, ದೂರುದಾರರನ್ನು ಜಾತಿ ಹಿಡಿದು ನಿಂದಿಸುವುದು ಮತ್ತು ಜಾತಿ ಜಾತಿಗಳ ನಡುವೆ ವೈಷಮ್ಯ ಬಿತ್ತಿರುವ ಆರೋಪಗಳಿಗೆ ಪುಷ್ಠಿ ಸಿಕ್ಕಂತಾಗಿದೆ. ಎಫ್ ಎಸ್ ಎಲ್ ವರದಿ, ಲಭ್ಯವಿರುವ ಸಾಕ್ಷ್ಯಾಧಾರಗಳು, ತಾಂತ್ರಿಕ ಸಾಕ್ಷಿಗಳು ಮುನಿರತ್ನ ಮೇಲಿನ ಆರೋಪವನ್ನು ಗಟ್ಟಿಗೊಳಿಸಿವೆ.
ಮುನಿರತ್ನ ವಿರುದ್ಧ ಎಸ್ ಸಿ ಎಸ್ ಟಿ ಕಾಯಿದೆ -1998ರ ಸೆಕ್ಷನ್ 3(1) ಅಡಿಯಲ್ಲಿ ಎಸ್ ಸಿ ಅಥವಾ ಎಸ್ ಟಿ ಸಮುದಾಯದ ವ್ಯಕ್ತಿಯೊಬ್ಬರನ್ನು ಉದ್ಧೇಶಪೂರ್ವಕವಾಗಿ ನಿಂದಿಸುವುದು, ಸಾರ್ವಜನಿಕ ಸ್ಥಳದಲ್ಲಿ ಎಸ್ ಸಿ, ಎಸ್ ಟಿ ಸಮುದಾಯದ ವ್ಯಕ್ತಿಯನ್ನು ನಿಂದಿಸುವುದು ಸೇರಿದಂತೆ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಒಕ್ಕಲಿಗ ಸಮುದಾಯದ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒತ್ತಡ ಹೇರಿದ ನಂತರ ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್ ಐಟಿ ರಚಿಸಲಾಗಿತ್ತು. ಮುನಿರತ್ನ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಆರೋಪದಡಿಯಲ್ಲಿ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿತ್ತು.
ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಹೊಸ ದೂರು ದಾಖಲು
ಈ ಮಧ್ಯೆ, ಬಿಜೆಪಿ ಶಾಸಕ ಮುನಿರತ್ನ ಹಾಗೂ ಇತರ ಆರು ಮಂದಿಯ ವಿರುದ್ಧ ಜೆಡಿಎಸ್‌ನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುತ್ತಿಗೆದಾರ ಮತ್ತು ಆಕೆಯ ಪತಿಯನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ ಆರೋಪದಲ್ಲಿ ಹೊಸ ಪ್ರಕರಣ ದಾಖಲಿಸಲಾಗಿದೆ. ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
(ವರದಿ-ಎಚ್. ಮಾರುತಿ, ಬೆಂಗಳೂರು)