ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಕಳೆದ 3 ವರ್ಷಗಳ ಪ್ರಶ್ನೆ ಪತ್ರಿಕೆ ರೆಫರ್ ಮಾಡಿದ್ದರೆ ಪ್ರಥಮ ಭಾಷೆ ಇಂಗ್ಲಿಷ್ ಪರೀಕ್ಷೆ ಸುಲಭ ಇತ್ತು
Karnataka SSLC Exam: ಕರ್ನಾಟಕದ ಉದ್ದಗಲಕ್ಕೂ ಇಂದಿನಿಂದ (ಮಾರ್ಚ್ 21) ಎಸ್‌ಎಸ್‌ಎಲ್‌ಸಿ ಪರೀಕ್ಷೆ (10ನೇ ತರಗತಿ ಬೋರ್ಡ್ ಪರೀಕ್ಷೆ) ಶುರುವಾಗಿದೆ. ಮೊದಲ ದಿನವಾದ ಇಂದು ಪ್ರಥಮ ಭಾಷೆ ಪರೀಕ್ಷೆ ಇತ್ತು. ಈ ಪೈಕಿ ಇಂಗ್ಲಿಷ್ ಭಾಷಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಗ್ಗೆ ಕೆಲವು ಪಾಲಕರು ಹಾಗೂ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

Karnataka SSLC Exam: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದು (ಮಾರ್ಚ್ 21) ಶುರುವಾಗಿದ್ದು, ಮೊದಲ ದಿನ ಪ್ರಥಮ ಭಾಷೆಯ ಪರೀಕ್ಷೆ ಬೆಳಿಗ್ಗೆ 10 ಗಂಟೆಯಿಂದ ಅಪರಾಹ್ನ 1.15ರ ತನಕ ನಡೆಯಿತು. ಈ ಪೈಕಿ ಇಂಗ್ಲಿಷ್ ಭಾಷಾ ಪರೀಕ್ಷೆ ಬಗ್ಗೆ ಕೆಲವು ವಿದ್ಯಾರ್ಥಿಗಳು ಮತ್ತು ಪಾಲಕರು ಪ್ರತಿಕ್ರಿಯಿಸಿದ್ದು, ಪರೀಕ್ಷೆ ಹೇಗಿತ್ತು ಎಂಬ ವಿವರ ಹಂಚಿಕೊಂಡಿದ್ದಾರೆ. ಪ್ರಶ್ನೆ ಪತ್ರಿಕೆ ತುಂಬ ಸರಳವಾಗಿದ್ದ ಕಾರಣ, ಸರಿಯಾಗಿ ಓದಿಕೊಂಡು ಹೋಗಿದ್ದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿಲ್ಲ. ಸಾಧಾರಣ ಕಲಿಕಾ ಸಾಮರ್ಥ್ಯದ ವಿದ್ಯಾರ್ಥಿಗಳೂ ಸುಲಭವಾಗಿ ಅರ್ಥಮಾಡಿಕೊಳ್ಳುವಂತೆಯೇ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಇತ್ತು ಎಂದು ಕೆಲವು ಶಿಕ್ಷಕರು ಹೇಳಿಕೊಂಡಿದ್ದಾರೆ.
ಕಳೆದ 3 ವರ್ಷಗಳ ಪ್ರಶ್ನೆ ಪತ್ರಿಕೆ ರೆಫರ್ ಮಾಡಿದ್ದರೆ ಪ್ರಥಮ ಭಾಷೆ ಇಂಗ್ಲಿಷ್ ಪರೀಕ್ಷೆ ಸುಲಭ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಮೊದಲು ಯಾರೆಲ್ಲ ಕಳೆದ ಮೂರು ವರ್ಷಗಳ ಪ್ರಶ್ನೆ ಪತ್ರಿಕೆ ಅಭ್ಯಾಸ ಮಾಡಿದ್ದರೋ ಅವರಿಗೆ ಪ್ರಥಮ ಭಾಷೆ ಇಂಗ್ಲಿಷ್ ಪರೀಕ್ಷೆ ಸುಲಭವಾಗಿದ್ದೀತು. ಬಹುತೇಕ ಪ್ರಶ್ನೆಗಳು ಕಳೆದ 3 ವರ್ಷಗಳ ಪ್ರಶ್ನೆಪತ್ರಿಕೆಗಳಲ್ಲಿ ಬಂದಿರುವಂಥವೇ ಇತ್ತು. ಇದಲ್ಲದೆ, ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿದ್ದರೆ, ಅದರಲ್ಲಿದ್ದ ಕೆಲವು ಪ್ರಶ್ನೆಗಳು ಇಂದಿನ ಇಂಗ್ಲಿಷ್ ಭಾಷಾ ಪ್ರಶ್ನೆ ಪತ್ರಿಕೆಯಲ್ಲಿ ಕಾಣಬಹುದು ಎಂದು ನೆಲ್ಯಾಡಿ ಬೆಥನಿ ಹೈಸ್ಕೂಲ್ ಶಿಕ್ಷಕಿ ನಯನಾ ಅವರು ಹಿಂದೂಸ್ತಾನ್ ಟೈಮ್ಸ್ ಕನ್ನಡಕ್ಕೆ ತಿಳಿಸಿದ್ದಾರೆ. ಶಿಕ್ಷಕಿ ನಯನಾ ಅವರ ಪುತ್ರಿಯೂ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ಕಾರಣ ಅವರು ಪ್ರಶ್ನೆ ಪತ್ರಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಇಂದಿನ ಇಂಗ್ಲಿಷ್ ಭಾಷಾ ಪರೀಕ್ಷೆ ಮಗಳಿಗೆ ಸುಲಭವಾಗಿತ್ತು. ಆಕೆ ಕಳೆದ ಮೂರು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ರೆಫರ್ ಮಾಡಿದ್ದಳು. ಅಷ್ಟೇ ಅಲ್ಲ, ಮಾದರಿ ಪ್ರಶ್ನೆ ಪತ್ರಿಕೆಗಳನ್ನೂ ಗಮನಿಸಿದ್ದಳು. ಬಹುತೇಕ ಪ್ರಶ್ನೆಗಳು ಈ ಪ್ರಶ್ನೆ ಪತ್ರಿಕೆಗಳಿಂದಲೇ ಬಂದಿವೆ. ಇತರೆ ವಿದ್ಯಾರ್ಥಿಗಳನ್ನು ಕೇಳಿದಾಗ ಗ್ರಾಮರ್ ಸ್ವಲ್ಪ ಟಫ್ ಇತ್ತು ಎಂಬ ಉತ್ತರ ಬಂದಿದೆ. ಕೆಲವರಿಗೆ ಗ್ರಾಮರ್ ಸ್ವಲ್ಪ ಗೊಂದಲ ಉಂಟುಮಾಡಿತ್ತು ಎಂದು ಶಿಕ್ಷಕಿ ನಯನಾ ಹೇಳಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ 2025ರ ಪ್ರಥಮ ಭಾಷೆ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಪಿಡಿಎಫ್
ಪ್ರಥಮ ಭಾಷೆ ಇಂಗ್ಲಿಷ್ ಭಾಷಾ ಪರೀಕ್ಷೆಯ ಪ್ರಶ್ನೆಪತ್ರಿಕೆ 100 ಅಂಕಗಳದ್ದಾಗಿದ್ದು, ವಾಡಿಕೆಯಂತೆ 1 ಮಾರ್ಕ್, 2 ಮಾರ್ಕ್ ಪ್ರಶ್ನೆಗಳು ಹೆಚ್ಚಿವೆ. ವಿವರಣಾತ್ಮಕ ಉತ್ತರ ಬಯಸುವ ಪ್ರಶ್ನೆಗಳಿಗೆ ಆಯ್ಕೆಗಳನ್ನು ಪ್ರಶ್ನೆ ಪತ್ರಿಕೆಗಳಲ್ಲಿ ನೀಡಲಾಗಿದೆ.
ಪ್ರಶ್ನೆ ಪತ್ರಿಕೆ ತುಂಬ ಸರಳವಾಗಿದ್ದು, ನೇರ ಪ್ರಶ್ನೆಗಳೇ ಹೆಚ್ಚಿವೆ. ಬಹುತೇಕ ಗೊಂದಲ ಮೂಡಿಸದ ರೀತಿಯಲ್ಲಿ ಪ್ರಶ್ನೆ ಪತ್ರಿಕೆಯನ್ನು ವಿನ್ಯಾಸಗೊಳಿಸಿದ್ದಾರೆ. ಬಹುತೇಕ ಪ್ರಶ್ನೆಗಳು ಕಾನ್ಸೆಪ್ಚುವಲ್ ಆಧಾರಿತವಾಗಿದ್ದು, ಆಡು ಭಾಷೆಯಲ್ಲಿ ಹೇಳಬೇಕಾದರೆ ತಲೆ ಖರ್ಚು ಮಾಡಿಬರೆಯಬೇಕಾದ ರೀತಿ ಇದ್ದವು ಎಂದು ಕೆಲವು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಹೇಳಿದ್ದಾರೆ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ 2025
ಮಾರ್ಚ್ 21 (ಶುಕ್ರವಾರ): ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ (NCERT), ಸಂಸ್ಕೃತ (ಪ್ರಥಮ ಭಾಷೆ)
ಮಾರ್ಚ್ 24 (ಸೋಮವಾರ): ಗಣಿತ, ಸಮಾಜಶಾಸ್ತ್ರ
ಮಾರ್ಚ್ 26 (ಬುಧವಾರ): ಇಂಗ್ಲೀಷ್, ಕನ್ನಡ (ದ್ವಿತೀಯ ಭಾಷೆ).
ಮಾರ್ಚ್ 29 (ಶನಿವಾರ): ಸಮಾಜ ವಿಜ್ಞಾನ
ಏಪ್ರಿಲ್ 01 (ಮಂಗಳವಾರ): ಎಲಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರ್-IV, ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್-IV, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್-IV, ಪ್ರೋಗ್ರಾಮಿಂಗ್ ಇನ್ ANSI ‘C’, ಅರ್ಥಶಾಸ್ತ್ರ
ಏಪ್ರಿಲ್ 02 (ಬುಧವಾರ): ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ.
ಏಪ್ರಿಲ್ 04 (ಶುಕ್ರವಾರ): ಹಿಂದಿ (NCERT), ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು (ತೃತೀಯ ಭಾಷೆ)
ಏಪ್ರಿಲ್ 04(ಶುಕ್ರವಾರ): ಮಾಹಿತಿ ತಂತ್ರಜ್ಞಾನ, ರೀಟೆಲ್, ಆಟೋಮೊಬೈಲ್, ಬ್ಯೂಟಿ ಆ್ಯಂಡ್ ವೆಲ್ನೆಸ್, ಅಪರೆಲ್ ಮೇಡ್ ಅಪ್ಸ್ & ಹೋಮ್ ಫರ್ನಿಷಿಂಗ್, ಎಲೆಕ್ಟ್ರಾನಿಕ್ಸ್ & ಹಾರ್ಡ್ವೇರ್ (NSQF ವಿಷಯಗಳು)
