SSLC Results 2025: ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಮುಂದೂಡಿಕೆ; ಏಪ್ರಿಲ್‌ 15ರಿಂದ ಆರಂಭ, ಫಲಿತಾಂಶ ಯಾವಾಗ?
ಕನ್ನಡ ಸುದ್ದಿ  /  ಕರ್ನಾಟಕ  /  Sslc Results 2025: ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಮುಂದೂಡಿಕೆ; ಏಪ್ರಿಲ್‌ 15ರಿಂದ ಆರಂಭ, ಫಲಿತಾಂಶ ಯಾವಾಗ?

SSLC Results 2025: ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಮುಂದೂಡಿಕೆ; ಏಪ್ರಿಲ್‌ 15ರಿಂದ ಆರಂಭ, ಫಲಿತಾಂಶ ಯಾವಾಗ?

SSLC Results 2025: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮುಕ್ತಾಯವಾಗಿ ಆರು ದಿನಗಳು ಕಳೆದಿದ್ದು. ಶುಕ್ರವಾರದಿಂದ ಆರಂಭವಾಗಬೇಕಿದ್ದ ಮೌಲ್ಯಮಾಪನವು ಮುಂದಿನ ವಾರದಿಂದ ಆರಂಭವಾಗಲಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನ ಮುಂದಿನ ವಾರ ಆರಂಭವಾಗಲಿದ್ದು. ಏಪ್ರಿಲ್‌ ಮಾಸಾಂತ್ಯಕ್ಕೆ ಫಲಿತಾಂಶ ಪ್ರಕಟಗೊಳ್ಳಬಹುದು
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನ ಮುಂದಿನ ವಾರ ಆರಂಭವಾಗಲಿದ್ದು. ಏಪ್ರಿಲ್‌ ಮಾಸಾಂತ್ಯಕ್ಕೆ ಫಲಿತಾಂಶ ಪ್ರಕಟಗೊಳ್ಳಬಹುದು

SSLC Results 2025:ಕರ್ನಾಟಕದಲ್ಲಿ ಈಗಾಗಲೇ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಎಸ್‌ಎಸ್‌ಎಲ್‌ಸಿ 2025ರ ಪರೀಕ್ಷೆಗಳು ಮುಗಿದು ಆರು ದಿನಗಳೇ ಕಳೆದಿವೆ. ಈ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಯಾವಾಗ ಹೊರ ಬೀಳಬಹುದು ಎನ್ನುವ ನಿರೀಕ್ಷೆಗಳು ಇವೆ. ಈಗಾಗಲೇ ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಮೌಲ್ಯ ನಿರ್ಣಯ ಮಂಡಳಿ ಯೋಜಿಸಿದಂತೆ ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆ ಏಪ್ರಿಲ್‌ 11ರ ಶುಕ್ರವಾರದಿಂದಲೇ ಆರಂಭವಾಗಬೇಕಿತ್ತು. ಆದರೆ ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ಮೌಲ್ಯಮಾಪನವನ್ನು ಮುಂದಕ್ಕೆ ಹಾಕಿದೆ. ಈಗಿನ ಯೋಜನೆಯಂತೆ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನವು ಏಪ್ರಿಲ್‌ 15ರಿಂದ ಆರಂಭವಾಗಲಿದೆ. ಒಂದು ವಾರದಲ್ಲಿಯೇ ಮೌಲ್ಯಮಾಪನ ಮುಕ್ತಾಯಗೊಂಡು ಏಪ್ರಿಲ್‌ ಕೊನೆಯ ವಾರದಲ್ಲಿಯೇ ಫಲಿತಾಂಶ ಪ್ರಕಟಿಸುವ ಸಾಧ್ಯತೆಗಳಿವೆ.

ಬದಲಾಯ್ತು ಮೌಲ್ಯಮಾಪನ ದಿನಾಂಕ

ಈ ಮೊದಲೇ ನಿರ್ಣಯವಾದಂತೆ ಎಸ್ಎಸ್ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಏಪ್ರಿಲ್‌ 11ರಂದೇ ಆರಂಭವಾಗಬೇಕಿತ್ತು. ಈಗಾಗಲೇ ಮೌಲ್ಯಮಾಪನದಲ್ಲಿ ಭಾಗಿಯಾಗಬೇಕಿದ್ದ ಶಿಕ್ಷಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತಿಳಿಸಲಾಗಿತ್ತು. ಅದಕ್ಕೆ ಅವರು ಅಣಿಯಾಗಿದ್ದರು. ಈಗ ಎಲ್ಲರಿಗೂ ಮೌಲ್ಯಮಾಪನ ಮುಂದೆ ಹೋಗಿರುವ ಸಂದೇಶ ಬಂದಿದೆ.

ಏಪ್ರಿಲ್‌ 12ರಿಂದ ಎರಡು ದಿನ ವಾರಾಂತ್ಯ ರಜೆ ಇರುವ ಜತೆಗೆ ಸೋಮವಾರ ಡಾ. ಅಂಬೇಡ್ಕರ್‌ ಅವರ ಜಯಂತಿಯೂ ಇರುವುದರಿಂದ ಮೂರು ದಿನದ ಬಳಿಕವೇ ಮೌಲ್ಯಮಾಪನ ಆರಂಭಿಸಿ ಎನ್ನುವ ಸೂಚನೆಯನ್ನು ನೀಡಲಾಗಿದೆ. ಇದರಿಂದ ಏಪ್ರಿಲ್‌ 15ರಿಂದಲೇ ಮೌಲ್ಯಮಾಪನ ಶುರುವಾಗಲಿದೆ ಎನ್ನುವ ಸೂಚನೆಯನ್ನು ನೀಡಲಾಗಿದೆ. ಶಿಕ್ಷಕರೂ ಕೂಡ ಮಂಗಳವಾರದಿಂದ ಮೌಲ್ಯಮಾಪನ ಪ್ರಕ್ರಿಯೆಯನ್ನು ನಡೆಸಲು ಸಿದ್ದರಾಗಿದ್ದಾರೆ. ದಿನಾಂಕ ಬದಲಾಗಿರುವ ಸಂದೇಶ ನಮಗೆ ಈಗಾಗಲೇ ಬಂದಿದೆ ಎಂದು ಶಿಕ್ಷಕರೊಬ್ಬರು ಖಚಿತಪಡಿಸಿದ್ದಾರೆ.

ಅಧಿಕಾರಿಗಳು ಹೇಳೋದು ಏನು

ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಮೌಲ್ಯ ನಿರ್ಣಯ ಮಂಡಳಿಯಲ್ಲಿನ ಅಧಿಕಾರಿಗಳ ಮಾಹಿತಿ ಪ್ರಕಾರ, ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಏಪ್ರಿಲ್‌ 15ರಿಂದ ಆರಂಭಗೊಂಡರೂ ಬಹುತೇಕ ಒಂದು ವಾರದಲ್ಲಿ ಮುಕ್ತಾಯವಾಗಲಿದೆ. ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಪ್ರತಿ ಜಿಲ್ಲೆಯಲ್ಲೂ ಮೌಲ್ಯಮಾಪನ ಕೇಂದ್ರಗಳನ್ನು ಆರಂಭಿಸಲಾಗುತ್ತಿದ್ದು, ವಿಷಯವಾರು ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಬೆಂಗಳೂರಿನಲ್ಲಿಯೇ ಹೆಚ್ಚಿನ ಕೇಂದ್ರಗಳು ಇರಲಿವೆ.

25 ಸಾವಿರಕ್ಕೂ ಅಧಿಕ ಶಿಕ್ಷಕರು 8.50 ಲಕ್ಷಕ್ಕೂ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವರು. ಈಗ ತಂತ್ರಜ್ಞಾನ ಆಧಾರದಲ್ಲಿ ಅಂಕಗಳ ಅಂತಿಮಗೊಳಿಸುವ ಪ್ರಕ್ರಿಯೆ ಆಗುವುದರಿಂದ ಬಹುತೇಕ ಮೂರನೇ ವಾರಕ್ಕೆ ಪ್ರಕ್ರಿಯೆ ಮುಗಿಯಲಿದೆ.

ಹಿಂದಿನ ವರ್ಷಗಳಲ್ಲಿ ಹೇಗೆ

ಹಿಂದಿನ ವರ್ಷಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಮೇ ತಿಂಗಳಿನಲ್ಲಿಯೇ ನೀಡಲಾಗಿದೆ. ಅದೂ ಮೇ ಮೊದಲ ವಾರದಲ್ಲಿ ಫಲಿತಾಂಶ ಸಿಗುತ್ತಾ ಬಂದಿದೆ. ಈ ವರ್ಷ ಏಪ್ರಿಲ್‌ ಕೊನೆಯ ವಾರವೇ ಫಲಿತಾಂಶ ಪ್ರಕಟಿಸಿ ವಿದ್ಯಾರ್ಥಿಗಳ ಮುಂದಿನ ಸಿದ್ದತೆ ಜತೆಗೆ ಶೈಕ್ಷಣಿಕ ವರ್ಷ ಜೂನ್‌ನಲ್ಲಿಯೇ ಆರಂಭಿಸುವ ಇರಾದೆಯನ್ನು ಇಲಾಖೆ ಹೊಂದಿದೆ.

ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಮುಗಿದ ನಾಲ್ಕೈದು ದಿನಕ್ಕೆ ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ಫಲಿತಾಂಶವನ್ನು ನೀಡಿತ್ತು. ಇದೇ ರೀತಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬೇಗ ಪ್ರಕಟಿಸುವ ಸಾಧ್ಯತೆಗಳು ಹೆಚ್ಚಿವೆ.

ಈ ಬಾರಿ ಮಾರ್ಚ್‌ 21 ರಿಂದ ಆರಂಭಗೊಂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಏಪ್ರಿಲ್‌ 4ಕ್ಕೆ ಮುಕ್ತಾಯಗೊಂಡಿದ್ದವು. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳ ಗೊಂದಲ ಕಂಡು ಬರಲಿಲ್ಲ. ಪರೀಕ್ಷೆಗಳು ಸುಸೂತ್ರವಾಗಿ ನಡೆದಿದ್ದು, ಮಕ್ಕಳು ಚೆನ್ನಾಗಿಯೇ ಪರೀಕ್ಷೆಗಳನ್ನು ಎದುರಿಸಿದ್ಧಾರೆ. ಉತ್ತಮ ಅಂಕಗಳು ಬರುವ ನಿರೀಕ್ಷೆಯಲ್ಲಿದ್ದಾರೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner