ಮೊರಾರ್ಜಿ ಶಾಲೆಯಲ್ಲಿ ಶಿಕ್ಷಣ ಬಹಳ ಚೆನ್ನಾಗಿದೆ, ವ್ಯವಸ್ಥಿತ ಓದಿಗೆ ಒತ್ತು ಕೊಡುತ್ತಾರೆ; ಎಸ್ಎಸ್ಎಲ್‌ಸಿ ಟಾಪರ್‌ ಹಾವೇರಿಯ ಪೃತ್ವೀಶ್‌ ಸಂತಸ
ಕನ್ನಡ ಸುದ್ದಿ  /  ಕರ್ನಾಟಕ  /  ಮೊರಾರ್ಜಿ ಶಾಲೆಯಲ್ಲಿ ಶಿಕ್ಷಣ ಬಹಳ ಚೆನ್ನಾಗಿದೆ, ವ್ಯವಸ್ಥಿತ ಓದಿಗೆ ಒತ್ತು ಕೊಡುತ್ತಾರೆ; ಎಸ್ಎಸ್ಎಲ್‌ಸಿ ಟಾಪರ್‌ ಹಾವೇರಿಯ ಪೃತ್ವೀಶ್‌ ಸಂತಸ

ಮೊರಾರ್ಜಿ ಶಾಲೆಯಲ್ಲಿ ಶಿಕ್ಷಣ ಬಹಳ ಚೆನ್ನಾಗಿದೆ, ವ್ಯವಸ್ಥಿತ ಓದಿಗೆ ಒತ್ತು ಕೊಡುತ್ತಾರೆ; ಎಸ್ಎಸ್ಎಲ್‌ಸಿ ಟಾಪರ್‌ ಹಾವೇರಿಯ ಪೃತ್ವೀಶ್‌ ಸಂತಸ

ಎಸ್‌ಎಸ್‌ಎಲ್‌ಸಿಯನ್ನು ಮೊರಾರ್ಜಿ ಶಾಲೆಯಲ್ಲಿ ಮುಗಿಸಿ ಕರ್ನಾಟಕಕ್ಕೆ ಟಾಪರ್‌ ಎನ್ನಿಸಿರುವ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಪೃತ್ವೀಶ್‌ ಗೊಲ್ಲರಹಳ್ಳಿ ಯಶಸ್ಸಿನ ಕ್ರಮವನ್ನು ಬಿಚ್ಚಿಟ್ಟಿದ್ದಾರೆ.

ಮರು ಮೌಲ್ಯಮಾಪನ ಬಳಿಕ ಟಾಪರ್‌ ಆದ ಹಾವೇರಿಯ ಪೃತ್ವೀಶ್‌ಗೆ ತಂದೆ ಗೋವಿಂದ, ತಾಯಿ ಮಮತಾ ಸಿಹಿ ತಿನ್ನಿಸಿದರು.
ಮರು ಮೌಲ್ಯಮಾಪನ ಬಳಿಕ ಟಾಪರ್‌ ಆದ ಹಾವೇರಿಯ ಪೃತ್ವೀಶ್‌ಗೆ ತಂದೆ ಗೋವಿಂದ, ತಾಯಿ ಮಮತಾ ಸಿಹಿ ತಿನ್ನಿಸಿದರು.

ಹಾವೇರಿ: ನಾನು ರಾಣೆಬೆನ್ನೂರಿನ ಖಾಸಗಿ ಶಾಲೆಯಲ್ಲಿ ಐದನೇ ತರಗತಿವರೆಗೆ ಓದಿದ್ದೆ. ಮೊರಾರ್ಜಿ ಶಾಲೆ ಪ್ರವೇಶ ಪರೀಕ್ಷೆ ಬರೆದು ಆಯ್ಕೆಯಾಗಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಮಾಕನೂರ ಗ್ರಾಮದ ಮೊರಾರ್ಜಿ ವಸತಿ ಶಾಲೆಗೆ ಸೇರಿಕೊಂಡು ಐದು ವರ್ಷದಿಂದ ಓದುತ್ತಿದ್ದೇನೆ.ಈಗ ಎಸ್ಎಸ್ಎಲ್‌ಸಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಟಾಪರ್‌ ಆಗಿದ್ದೇನೆ. ನಿಜಕ್ಕೂ ಮೊರಾರ್ಜಿ ವಸತಿ ಶಾಲೆ ನಿಜಕ್ಕೂ ಚೆನ್ನಾಗಿವೆ. ಅಲ್ಲಿನ ವ್ಯವಸ್ಥೆ, ಶಿಕ್ಷಣದ ಕ್ರಮ, ವಿದ್ಯಾರ್ಥಿಗಳ ಸಮಗ್ರ ಪ್ರಗತಿಗೆ ನೀಡುವ ಒತ್ತು ಓದುವವರಿಗೆ ಪ್ರೇರೇಪಿಸುತ್ತದೆ. ನಾನು ಮೊರಾರ್ಜಿ ಶಾಲೆ ಸೇರಿಕೊಂಡಿದ್ದು ನನ್ನ ಓದಿನ ಕ್ರಮವನ್ನೇ ಬದಲಿಸಿತು. ಮೌಲ್ಯಮಾಪನ ಗೊಂದಲದಿಂದ ಮೂರು ಅಂಕ ಕಡಿಮೆ ಬಂದರೂ ನಂತರ ಅದು ಸರಿಯಾಗಿ ಈಗ 625 ಕ್ಕೆ 625 ಅಂಕಗಳು ಲಭಿಸಿವೆ. ಐಎಎಸ್‌ ಅಧಿಕಾರಿಯಾಗಬೇಕು ಎನ್ನುವ ಆಸೆಯಿದೆ. ಈಗಿನಿಂದಲೇ ತಯಾರಿ ನಡೆಸುವೆ.

ಇದು ಹಾವೇರಿ ಜಿಲ್ಲೆಯ ವಾಣಿಜ್ಯ ನಗರಿ ರಾಣೆಬೆನ್ನೂರು ನಿವಾಸಿ, ಸದ್ಯ ಅದೇ ತಾಲ್ಲೂಕಿನ ಮಾಕನೂರಿನ ಮೊರಾರ್ಜಿ ವಸತಿ ಶಾಲೆಯಲ್ಲಿ ಓದಿ ಇಡೀ ಕರ್ನಾಟಕಕ್ಕೆ ಟಾಪರ್‌ ಆಗಿರುವ ಪೃತ್ವೀಶ್‌ ಗೋವಿಂದ ಗೊಲ್ಲರಹಳ್ಳಿ ವಿಶ್ವಾಸದ ನುಡಿ. ಅಪ್ಪ ಶೋ ರೂಂ ಒಂದರಲ್ಲಿ ಸೆಕ್ಯುರಿಟಿ. ಅಮ್ಮ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಕೆಲಸ ಮಾಡುತ್ತಾರೆ. ಮನೆಯಲ್ಲಿ ಕಷ್ಟವಿದ್ದರೂ ಮಕ್ಕಳಿಗೆ ಶಿಕ್ಷಣ ಕೊಡಿಸುವ ಅಪ್ಪ ಅಮ್ಮನ ಶ್ರಮ, ಪ್ರಯತ್ನಕ್ಕೆ ಫಲ ಎನ್ನುವಂತೆ ಮಗ ಪೃತ್ವೀಶ್‌ ಉತ್ತಮ ಸಾಧನೆ ಮಾಡಿ ಬದುಕು ರೂಪಿಸಿಕೊಳ್ಳುವತ್ತ ಹೆಜ್ಜೆ ಇಡಲು ಆರಂಭಿಸಿದ್ಧಾನೆ.

ರಾಣೆಬೆನ್ನೂರಿನಲ್ಲಿಯೇ ಹುಟ್ಟಿ ಬೆಳೆದ ನನ್ನನ್ನು ಅಲ್ಲಿನ ಲಯನ್ಸ್‌ ಶಾಲೆಗೆ ಸೇರಿಸಿದ್ದರು. ಆರನೇ ತರಗತಿಯಿಂದ ಮೊರಾರ್ಜಿ ಶಾಲೆಯಲ್ಲಿ ಓದುವ ಆಸೆಯಿತ್ತು. ಅವಕಾಶವೂ ಸಿಕ್ಕು ಅಲ್ಲಿ ಸೇರಿಕೊಂಡೆ. ಎರಡು ವರ್ಷ ಅಲ್ಲಿ ಹೊಂದಿಕೊಳ್ಳುವುದೇ ಆಯಿತು. ಎಂಟನೇ ತರಗತಿಯಿಂದ ನಿರ್ದಿಷ್ಟ ಗುರಿಯೊಂದಿಗೆ ಓದತೊಡಗಿದೆ. ಎಂಟು ಹಾಗೂ ಒಂಬತ್ತನೇ ತರಗತಿಯಲ್ಲಿ ಟಾಪರ್‌ ಆಗಿದ್ದೆ. ಎಸ್ಎಸ್ಎಲ್‌ಸಿಗೂ ಕೂಡ ನಮ್ಮ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಆರಂಭದಿಂದಲೇ ಯೋಜಿತ ಕ್ರಮವನ್ನು ಅನುಸರಿಸಿದರು. ಅಡ್ಡದಾರಿಗಳನ್ನು ಹಿಡಿಯಲಿಲ್ಲ. ಪ್ರಾಮಾಣಿಕವಾಗಿ ಓದಿದೆ. ಇದರಿಂದ ಎಸ್ಎಸ್ಎಲ್‌ಸಿಯಲ್ಲಿ ಟಾಪರ್‌ ಆಗಲು ಸಾಧ್ಯವಾಯಿತು. ಅಷ್ಟೇ ಅಲ್ಲ ಈಗ ರಾಜ್ಯಕ್ಕೂ ಟಾಪರ್‌ ಎನ್ನಿಸಿದಾಗ ಖುಷಿಯಾಗುತ್ತದೆ ಎನ್ನುವುದು ಪೃತ್ವೀಶ್‌ ನುಡಿ.

ವಸತಿ ಶಾಲೆಯಲ್ಲಿ ಬೆಳಿಗ್ಗೆ 5ರಿಂದ ನಮ್ಮ ಓದು ಶುರುವಾಗುತ್ತಿತ್ತು. ಶಾಲೆಗೆ ಬಂದ ನಂತರ ಅಲ್ಲಿಯೂ ವಿಷಯಾಧಾರಿತವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹೇಳಿಕೊಡೋರು. ಸಂಜೆ ನಂತರ ವಿಶೇಷ ತರಗತಿಗಳು ಶುರುವಾಗೋವು. ಊಟದ ಬಿಡುವಿನ ಬಳಿಕ ಮತ್ತೆ ಎರಡು ತಾಸು ತಯಾರಿ. ರಾತ್ರಿ 11ಕ್ಕೆ ನಮ್ಮ ನಿತ್ಯದ ಓದು ಮುಗಿಯೋದು. ಅಂದರೆ ಸುಮಾರು 14 ಓದು ಇದ್ದೇ ಇರೋದು. ಸಮಯ ನಿರ್ವಹಣೆ, ವಿಷಯಗಳ ಮನವರಿಕೆ, ಗೊಂದಲ ನಿವಾರಣೆ, ವಿದ್ಯಾರ್ಥಿಗಳ ಕೇಂದ್ರಿತ ತಯಾರಿ ಮಾಗನೂರ ಮೊರಾರ್ಜಿ ಶಾಲೆಯಲ್ಲಿ ನಡೆಸಲಾಗುತ್ತಿತ್ತು. ಯಾವುದೇ ಒತ್ತಡ ಆಗದ ರೀತಿ ಮಧ್ಯೆ ಬಿಡುವು ಕೊಟ್ಟುಕೊಂಡು ವಾರದಲ್ಲಿ ಆಟಕ್ಕೂ ಒತ್ತು ಕೊಟ್ಟು ಹೇಳಿಕೊಡೋರು. ಇದು ವಿಷಯವನ್ನು ಅರಿತುಕೊಳ್ಳಲು ಹಾಗೂ ಪರೀಕ್ಷೆ ಸುಲಭವಾಗಿ ಎದುರಿಸಲು ಸಾಧ್ಯವಾಯಿತು ಎನ್ನುವುದು ಆತನ ಎಸ್ಎಸ್ಎಲ್‌ಸಿ ಶಿಕ್ಷಣದ ಗುಟ್ಟು.

ಫಲಿತಾಂಶ ಬಂದು ವಿಜ್ಞಾನ ವಿಷಯದ ಅಂಕ ನೋಡಿದಾಗ ಏನೋ ಗೊಂದಲ ಆಗಿರುವುದು ಗೊತ್ತಾಯಿತು. ನನ್ನ ಮೇಲೆ ನನಗೆ ಅಪಾರ ಆತ್ಮವಿಶ್ವಾಸ ಇದ್ದುದರಿಂದ ಮರು ಮೌಲ್ಯಮಾಪನಕ್ಕೆ ಮುಂದಾದೆ. ನಿರ್ಧಾರ ಸರಿಯಿದೆ ಎನ್ನುವುದು ಅಂಕ ಸರಿಪಡಿಸಿದ ನಂತರ ಅರಿವಾಯಿತು. ಮೂಡಬಿದರೆ ಆಳ್ವಾಸ್‌ನಲ್ಲಿ ಪಿಯುಸಿ ಶಿಕ್ಷಣ ಪಡೆಯುವ ಇರಾದೆಯಿದೆ. ಮುಂದೆ ಎಂಜಿನಿಯರಿಂಗ್ ಮುಗಿಸಿ ಐಎಎಸ್‌ ಅಧಿಕಾರಿಯಾಗುವ ಕನಸಂತೂ ಇದೆ. ಅದಕ್ಕೂ ಕಷ್ಟಪಡುವೆ ಎಂದರು ಪೃತ್ವೀಶ್‌.

ನಮ್ಮ ಮನೆಯವರು ಶೋರೂಂ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್‌. ನಾನು ಬಿಸಿಯೂಟ ತಯಾರಕಿಯಾಗಿ ಕೆಲಸ ಮಾಡುತ್ತಿರುವೆ. ಇಬ್ಬರೂ ಎಸ್ಎಸ್ಎಲ್‌ಸಿವರೆಗೆ ಮಾತ್ರ ಓದಿದ್ದೇವೆ. ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಿದ್ದೇವೆ.ಮಗ ಶ್ರಮ ಜೀವಿ. ಕಷ್ಟ ತಿಳಿದಿದ್ದರೂ ಓದಿನಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ಆತ ಐಎಎಸ್‌ ಅಧಿಕಾರಿಯಾಗಬೇಕು ಎನ್ನುವ ಗುರಿ ಹೊಂದಿದ್ದಾನೆ ಎಂದು ತಾಯಿ ಮಮತಾ ಖುಷಿಯಿಂದಲೇ ಹೇಳಿದರು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.