ಸರ್ಕಾರಿ ಉರ್ದು ಹೈಸ್ಕೂಲ್‌ನಲ್ಲಿ ಓದಿ ಎಸ್‌ಎಸ್‌ಎಲ್‌ಸಿ ಟಾಪರ್ ಆದ ಶಗುಫ್ತಾ ಅಂಜುಮ್‌ಗೆ ಡಾಕ್ಟರ್ ಆಗುವ ಆಸೆ
ಉತ್ತರ ಕನ್ನಡ ಜಿಲ್ಲೆ ಶಿರಸಿ ನಗರದ ಸರ್ಕಾರಿ ಉರ್ದು ಇಂಗ್ಲಿಷ್ ಮೀಡಿಯಂ ಶಾಲೆ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್ ತನ್ನ ಯಶಸ್ಸಿಗೆ ಕಾರಣ ಮತ್ತು ತನ್ನ ಭವಿಷ್ಯದ ಕನಸಿನ ಕುರಿತು ಮಾತನಾಡಿದ್ದಾರೆ. ಇವರು 625ಕ್ಕೆ 625 ಅಂಕ ಪಡೆದಿದ್ದಾರೆ. ಇವರಿಗೆ ಡಾಕ್ಟರ್ ಆಗುವ ಕನಸಿದೆ.

ಕರ್ನಾಟಕದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಹಲವು ವಿದ್ಯಾರ್ಥಿಗಳು ಟಾಪರ್‌ಗಳಾಗಿ ಹೊರಹೊಮಿದ್ದಾರೆ. ಪ್ರತಿವರ್ಷ ಒಂದು ಎರಡು ಅಥವಾ ಕೆಲವು ವಿದ್ಯಾರ್ಥಿಗಳು ಔಟ್ ಆಫ್ ಔಟ್ ಅಂಕ ಪಡೆಯುತ್ತಿದ್ದರು. ಈ ಬಾರಿ ಇಂತಹ ಸಾಧನೆಯನ್ನು ಒಟ್ಟು 22 ವಿದ್ಯಾಥಿ ವಿದ್ಯಾರ್ಥಿನಿಯರು ಮಾಡಿದ್ದಾರೆ ಎನ್ನುವುದು ವಿಶೇಷ. ಅಂದರೆ, ಇಷ್ಟು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದಿದ್ದಾರೆ. ಇವರಲ್ಲಿ ಬಹುತೇಕ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಓದಿದ್ದಾರೆ. ಆದರೆ, 2 ವಿದ್ಯಾರ್ಥಿಗಳು ಮಾತ್ರ ಸರಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದಿ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ನಗರದ ಸರ್ಕಾರಿ ಉರ್ದು ಇಂಗ್ಲಿಷ್ ಮೀಡಿಯಂ ಶಾಲೆ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್ ಮತ್ತು ಬೆಳಗಾವಿಯ ಬೈಲಹೊಂಗಲದ ದೇವಲಾಪುರದ ಸರಕಾರಿ ಹೈಸ್ಕೂಲ್‌ನ ವಿದ್ಯಾರ್ಥಿನಿ ರೂಪಾ ಚನ್ನಗೌಡ ಪಾಟೀಲ್ ಈ ಸಾಧನೆ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಶಿರಸಿ ನಗರದ ಸರ್ಕಾರಿ ಉರ್ದು ಇಂಗ್ಲಿಷ್ ಮೀಡಿಯಂ ಶಾಲೆ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್ ತನ್ನ ಯಶಸ್ಸಿಗೆ ಕಾರಣ ಮತ್ತು ತನ್ನ ಭವಿಷ್ಯದ ಕನಸಿನ ಕುರಿತು ಮಾತನಾಡಿದ್ದಾರೆ. ಇವರು 625ಕ್ಕೆ 625 ಅಂಕ ಪಡೆದಿದ್ದಾರೆ. ಅಂದಹಾಗೆ, ಇವರು ಬಿಹಾರ ಮೂಲದವರು. ಕರ್ನಾಟಕದಲ್ಲಿ ಓದುತ್ತಿರುವ ಇವರು ಸರಕಾರದ ಉರ್ದು ಹೈಸ್ಕೂಲ್‌ನಲ್ಲಿ ಓದಿದ್ದಾರೆ. ಇವರ ತಂದೆ ಬಿಹಾರದಲ್ಲಿ ಮೌಲ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
"ಶಿಕ್ಷಕರ ಬೆಂಬಲ, ಮಾರ್ಗದರ್ಶನವೇ ನನ್ನ ಸಾಧನೆಗೆ ಮುಖ್ಯ ಕಾರಣ. ರಂಜಾನ್ ಸಮಯದಲ್ಲಿಯೂ ಶಿಕ್ಷಕರು ನನಗೆ ಪಾಠ ಮಾಡಿದ್ದರು. ಮುಂದೆ ನನಗೆ ಡಾಕ್ಟರ್ ಆಗಬೇಕೆನ್ನುವ ಆಸೆಯಿದೆ' ಎಂದು ಶಗುಫ್ತಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಶಿವಮೊಗ್ಗದ ನಿತ್ಯಾ ಕುಲಕರ್ಣಿಗೂ ಡಾಕ್ಟರ್ ಆಗುವ ಕನಸು
ಶಿವಮೊಗ್ಗದ ಶ್ರೀ ರಾಮಕೃಷ್ಣ ಇಂಗ್ಲಿಷ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿನಿ ನಿತ್ಯಾ ಕುಲಕರ್ಣಿ ಕೂಡ 625ಕ್ಕೆ 625 ಅಂಕ ಪಡೆದಿದ್ದಾರೆ. ಇವರು ಕೂಡ ತನ್ನ ಯಶಸ್ಸಿನ ರಹಸ್ಯವನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.
“ಟೀಚರ್ಸ್ ಮಾತನ್ನು ಗಂಭೀರವಾಗಿ ತೆಗೆದುಕೊಂಡರೆ ಖಂಡಿತ ಯಶಸ್ಸು ಸಿಗುತ್ತೆ ಎನ್ನುವುದಕ್ಕೆ ನಾನೇ ಉದಾಹರಣೆ. ಮನಸ್ಸಿಟ್ಟು, ಅರ್ಥ ಮಾಡಿಕೊಂಡು ಓದಬೇಕು. ಅದು ಬಹಳ ಮುಖ್ಯ. ನಾನು ನೀಟ್ ಕ್ರ್ಯಾಕ್ ಮಾಡಿ, ಡಾಕ್ಟರ್ ಆಗಬೇಕು ಎನ್ನುವ ಆಸೆಯಿದೆ. ಶಾಲೆಯವರು ಹಳೆಯ ಪ್ರಶ್ನಪತ್ರಿಕೆಗಳನ್ನು ಹುಡುಕಿ ತಂದು ನಮ್ಮಿಂದ ಸಾಲ್ವ್ ಮಾಡಿಸಿದರು.” ಎಂದು ಅವರು ಹೇಳಿದ್ದಾರೆ.