Milk price Hike: ಯುಗಾದಿ ಮುನ್ನಾ ದರ ಏರಿಕೆ ಶಾಕ್‌; ನಂದಿನಿ ಲೀಟರ್‌ ಹಾಲಿನ ದರ 4 ರೂ. ಏರಿಕೆಗೆ ಸಚಿವ ಸಂಪುಟ ಅನುಮೋದನೆ, ಯಾವಾಗಿನಿಂದ ಜಾರಿ
ಕನ್ನಡ ಸುದ್ದಿ  /  ಕರ್ನಾಟಕ  /  Milk Price Hike: ಯುಗಾದಿ ಮುನ್ನಾ ದರ ಏರಿಕೆ ಶಾಕ್‌; ನಂದಿನಿ ಲೀಟರ್‌ ಹಾಲಿನ ದರ 4 ರೂ. ಏರಿಕೆಗೆ ಸಚಿವ ಸಂಪುಟ ಅನುಮೋದನೆ, ಯಾವಾಗಿನಿಂದ ಜಾರಿ

Milk price Hike: ಯುಗಾದಿ ಮುನ್ನಾ ದರ ಏರಿಕೆ ಶಾಕ್‌; ನಂದಿನಿ ಲೀಟರ್‌ ಹಾಲಿನ ದರ 4 ರೂ. ಏರಿಕೆಗೆ ಸಚಿವ ಸಂಪುಟ ಅನುಮೋದನೆ, ಯಾವಾಗಿನಿಂದ ಜಾರಿ

Milk price Hike: ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆಯು ಪ್ರತಿ ಲೀಟರ್‌ ಹಾಲಿನ ದರವನ್ನು ನಾಲ್ಕು ರೂ.ವರೆಗೂ ಏರಿಸಲು ಅನುಮತಿ ನೀಡಿದೆ.

ನಂದಿನಿ ಹಾಲಿನ ದರ ಏರಿಕೆಗೆ ಅನುಮತಿ ನೀಡಲಾಗಿದೆ.
ನಂದಿನಿ ಹಾಲಿನ ದರ ಏರಿಕೆಗೆ ಅನುಮತಿ ನೀಡಲಾಗಿದೆ.

Milk price Hike: ಕಳೆದ ಎರಡು ತಿಂಗಳಿನಿಂದಲೂ ಇದ್ದ ಕರ್ನಾಟಕ ಹಾಲು ಮಹಾಮಂಡಳ ಹಾಲು ಹಾಗೂ ಹಾಲಿನ ಉತ್ಪನ್ನಗಳ ದರ ಏರಿಕೆ ಪ್ರಸ್ತಾವಕ್ಕೆ ಸಚಿವ ಸಂಪುಟ ಅನುಮತಿ ನೀಡಿದೆ. ನಂದಿನಿ ಹಾಲಿನ ದರವನ್ನು ಪ್ರತೀ ಲೀಟರ್‌ಗೆ 4 ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಏರಿಕೆ ಜಾರಿಗೆ ಅನುಮೋದನೆ ನೀಡಲಾಗಿದೆ. ಬಹುತೇಕ ಬರುವ ಏಪ್ರಿಲ್‌ 1ರಿಂದಲೇ ಅನ್ವಯವಾಗುವಂತೆ ಹಾಲಿನ ದರ ಹೆಚ್ಚಳವಾಗುವ ಸಾಧ್ಯತೆಯಿದೆ. ಸದ್ಯ ಅರ್ಧ ಲೀಟರ್‌ ಸಾಮಾನ್ಯ ನಂದಿನಿ ಹಾಲಿನ ಬೆಲೆ 23 ರೂ. ಇದ್ದು ಇನ್ನು ಮುಂದೆ 25 ರೂ. ಆಗಲಿದೆ. ಅದೇ ರೀತಿ ಒಂದು ಲೀಟರ್‌ ಹಾಲಿನ ಬೆಲೆ 46 ರೂ. ಇತ್ತು. ಅದು 50 ರೂ. ಆಗಬಹುದು. ಉಳಿದಂತೆ ವಿಶೇಷವಾಗಿರುವ ನಾಲ್ಕೈದು ರೀತಿಯ ಹಾಲಿನ ಬೆಲೆಗಳೂ ಈಗಿರುವ ದರಕ್ಕಿಂತ ನಾಲ್ಕು ರೂ. ಹೆಚ್ಚಾಗಲಿದೆ. ಅಧಿಕೃತವಾಗಿ ದರ ಏರಿಕೆ ಪ್ರಮಾಣ ಹಾಗೂ ದಿನಾಂಕ ಪ್ರಕಟಣೆ ಆಗಬೇಕಾಗಿದೆ.

ಈಗಾಗಲೇ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಐದು ರೂ. ಏರಿಕೆ ಮಾಡುವಂತೆ ಕರ್ನಾಟಕ ಹಾಲು ಮಹಾಮಂಡಳ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸಚಿವ ಕೆ.ವೆಂಕಟೇಶ್‌ ಅಧ್ಯಕ್ಷತೆಯಲ್ಲಿ ನಡೆದಿದ್ದ ಕರ್ನಾಟಕದ ಎಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳ ಪ್ರಮುಖರ ಸಭೆಯಲ್ಲಿ ಈ ತೀರ್ಮಾನ ಆಗಿತ್ತು. ಉತ್ಪಾದನಾ ವೆಚ್ಚ, ಹಾಲು ಉತ್ಪಾದಕರಿಗೆ ನೀಡಬೇಕಾದ ಬಾಕಿ ಸೇರಿದಂತೆ ಹಲವು ಕಾರಣಗಳನ್ನು ಉಲ್ಲೇಖಿಸಿ ದರ ಏರಿಕೆಗೆ ಕೋರಲಾಗಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಅವರು ಇದಕ್ಕೆ ಒಪ್ಪಿರಲಿಲ್ಲ. ದರ ಏರಿಕೆ ಬೇಡ ಎಂದು ಹೇಳಿ ಪ್ರಸ್ತಾವನೆ ತಡೆ ಹಿಡಿದಿದ್ದರು. ಮತ್ತೆ ಬೇಡಿಕೆ ಬಂದಿದ್ದರಿಂದ ಉತ್ಪಾದಕರಿಗೆ ಮೊತ್ತ ಹೆಚ್ಚಿಸುವುದಾದರೆ ದರ ಏರಿಕೆ ಮಾಡುವುದಾಗಿ ಹೇಳಿದ್ದರು. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿಯೂ ಹೇಳಿದ್ದರು. ಈಗ ಪ್ರತಿ ಲೀಟರ್‌ಗೆ ನಾಲ್ಕು ರೂ. ಏರಿಸಿ ದರ ಹೆಚ್ಚಿಸುವ ತೀರ್ಮಾನ ಮಾಡಲಾಗಿದೆ.

ಕರ್ನಾಟಕದಲ್ಲಿ2024ರ ಆಗಸ್ಟ್‌ 1ರ ಬೆಳಗ್ಗೆಯಿಂದಲೇ ಲೀಟರ್‌ಗೆ 3 ರೂಪಾಯಿ ನಂದಿನಿ ಹಾಲಿನ ದರ ಹೆಚ್ಚಾಗಿತ್ತು ಹೆಚ್ಚಿನ ಜನರು ಅರ್ಧ ಲೀಟರ್‌ ಹಾಲು ಖರೀದಿಸುವುದರಿಂದ ಅರ್ಧ ಲೀಟರ್‌ಗೆ 1.50 ಪೈಸೆ ರೂಪಾಯಿ ಹೆಚ್ಚು ನೀಡಬೇಕಿತ್ತು.ಚಿಲ್ಲರೆ ಸಮಸ್ಯೆಯಾಗುವುದನ್ನು ತಡೆಯಲು ಪ್ಯಾಕೆಟ್‌ಗೆ 10 ಮಿಲಿಲೀಟರ್‌ ಹಾಲು/ಮೊಸರು ಹೆಚ್ಚು ತುಂಬಿಸಿ ಎರಡು ರೂಪಾಯಿ ದರ ಹೆಚ್ಚಿಸಲಾಗಿತ್ತು. ಏಳು ತಿಂಗಳಲ್ಲೇ ಮತ್ತೆ ಹಾಲಿನ ದರ ಏರಿಕೆಯಾಗಲಿದೆ.

ಬಿಜೆಪಿ ಕಟು ಟೀಕೆ

ಹಾಲು ದರ ಏರಿಕೆ ಕ್ರಮವನ್ನು ಬಿಜೆಪಿ ಕಟುವಾಗಿ ಟೀಕಿಸಿದೆ.

ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಮೇಲೆ ಕೇವಲ 20 ತಿಂಗಳಿನಲ್ಲಿ ಹಾಲಿನ ದರವನ್ನ ಮೂರು ಬಾರಿ ಒಟ್ಟು 9 ರೂಪಾಯಿ ಹೆಚ್ಚಿಸಿದ್ದಾರೆ. 2023ರ ಆಗಸ್ಟ್ ನಲ್ಲಿ 3 ರೂಪಾಯಿ ಹೆಚ್ಚಳವಾಗಿದ್ದ ಹಾಲಿನ ಬೆಲೆ 2024 ಜೂನ್ ನಲ್ಲಿ 2 ರೂಪಾಯಿ ಏರಿಕೆ ಆಯ್ತು. ಈಗ ಮತ್ತೊಮ್ಮೆ ಏಕಾಏಕಿ 4 ರೂಪಾಯಿ ಹೆಚ್ಚಾಗಿದೆ ಎಂದು ವಿಧಾನಸಭೆ ಪ್ರತಿ ಪಕ್ಷ ನಾಯಕ ಆರ್.‌ ಅಶೋಕ್‌ ಟೀಕಿಸಿದ್ದಾರೆ.

ರಾಜ್ಯದ ಬಡವರು, ಮಾಧ್ಯಮ ವರ್ಗದ ಜನ ಈಗಾಗಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಗಗನಕ್ಕೇರಿರುವ ದಿನಬಳಕೆ ವಸ್ತುಗಳ ಬೆಲೆಯಿಂದ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಸಿ ಮತ್ತೊಮ್ಮೆ ಬಡವರ ಗಾಯದ ಮೇಲೆ ಬರೆ ಎಳೆದಿದ್ದೀರಿ. ನಿಮಗೆ ಬಡವರು, ಮಧ್ಯಮ ವರ್ಗದ ಜನರ ಮೇಲೆ ಕಿಂಚಿತ್ತಾದರೂ ಕನಿಕರ ಇದ್ದರೆ, ಈ ಕೂಡಲೇ ಹಾಲಿನ ದರ ಏರಿಕೆ ಆದೇಶವನ್ನು ಹಿಂಪಡೆಯಿರಿ. ಒಂದು ವೇಳೆ ಗ್ರಾಹಕರ ಮೇಲೆ ಹೊರೆ ಹೊರಿಸುವುದು ಅನಿವಾರ್ಯವಾದರೆ, ಹೆಚ್ಚಳ ಮಾಡಿರುವ 4 ರೂಪಾಯಿ ನೇರವಾಗಿ ಹಾಲು ಉತ್ಪಾದಕರ ಕೈಸೇರುವಂತೆ ನೋಡಿಕೊಳ್ಳಿ. ಆಡಳಿತ ವೆಚ್ಚ, ಮತ್ತೊಂದು ವೆಚ್ಚ ಎಂದು ಅತ್ತ ರೈತರಿಗೂ ಲಾಭವಿಲ್ಲದೆ ಇತ್ತ ಗ್ರಾಹಕರ ಜೇಬಿಗೂ ಕತ್ತರಿ ಹಾಕಿದರೆ ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner