ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸಾರಿಗೆ ಬಸ್ ಪ್ರಯಾಣ ದರ ಶೇ. 15ರಷ್ಟು ಏರಿಕೆ: ಸಚಿವ ಸಂಪುಟ ಒಪ್ಪಿಗೆ; ಜನವರಿ 5ರಿಂದಲೇ ಜಾರಿ
ಕರ್ನಾಟಕದಲ್ಲಿ ಸಾರಿಗೆ ಸಂಸ್ಥೆಗಳ ಪ್ರಯಾಣ ದರವನ್ನು ಹೆಚ್ಚಳ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯು ಅನುಮತಿ ನೀಡಿದೆ. ಶೇ.15ರಷ್ಟು ಪ್ರಯಾಣ ದರ ಏರಿಕೆಯಾಗಲಿದೆ
ಬೆಂಗಳೂರು: ಕರ್ನಾಟಕದಲ್ಲಿ ಸಾರಿಗೆ ಪ್ರಯಾಣ ದರ ಶೇ. 15ರಷ್ಟು ದುಬಾರಿಯಾಗಲಿದೆ. ಹಲವು ತಿಂಗಳಿನಿಂದ ನಡೆದಿದ್ದ ಪ್ರಯತ್ನಗಳ ನಂತರ ಕರ್ನಾಟಕ ರಾಜ್ಯ ಸಚಿವ ಸಂಪುಟವು ಸಾರಿಗೆ ಬಸ್ ಪ್ರಯಾಣ ದರವನ್ನು ಶೇ. 15ರಷ್ಟು ಏರಿಕೆ ಮಾಡಲು ಒಪ್ಪಿಗೆ ನೀಡಿದೆ. ಕೆ.ಎಸ್. ಆರ್.ಟಿ.ಸಿ. ಸೇರಿದಂತೆ ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇಕಡಾ 15ರಷ್ಟು ಏರಿಕೆ ಮಾಡಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಬಸ್ ಟಿಕೆಟ್ ದರವನ್ನು ಹೆಚ್ಚಿಸುವಂತೆ ನಾಲ್ಕು ಸಾರಿಗೆ ನಿಗಮಗಳು ಆಗಸ್ಟ್ನಲ್ಲಿ ಪ್ರಸ್ತಾವನೆ ಸಲ್ಲಿಸಿದ್ದವು. ಅದರ ಬೆನ್ನಲ್ಲೇ ಇಂದು ಸಚಿವ ಸಂಪುಟ ಸಭೆಯಲ್ಲಿ ಟಿಕೆಟ್ ದರ ಹೆಚ್ಚಳಕ್ಕೆ ಅನುಮೋದನೆ ನೀಡಿದ್ದು, ಈ ದರವು ಜನವರಿ 5 ರಿಂದ ಜಾರಿಗೆ ಬರಲಿದೆ.
ಪ್ರತಿ ಲೀಟರ್ ಡೀಸೆಲ್ ಗೆ 10-1-2015ರಲ್ಲಿ ಬಿಎಂಟಿಸಿ ಗೆ ಹತ್ತು ವರ್ಷಗಳ ಹಿಂದೆ ದರ ಪರಿಷ್ಕರಣೆ ಆಗಿತ್ತು. ಅಂದು ರೂ60.98 ಪೈಸೆ ಇತ್ತು. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಅಂದಿನ ಡೀಸೆಲ್ ವೆಚ್ಚ 9 ಕೋಟಿ 16ಲಕ್ಷ ಇದ್ದ್ದು ಈಗ ಪ್ರಸ್ತುತ 13.21ಕೋಟಿ ಹೆಚ್ಚಳ ಆಗಿದೆ.
ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಂದ ಸಿಬ್ಬಂದಿ ವೆಚ್ಚ 12.85ಕೋಟಿ ಇದ್ದದ್ದು ಪ್ರಸ್ತುತ 18.36 ಕೋಟಿ ಆಗಿದೆ ಪ್ರತಿ ದಿನ 9.56ಕೋಟಿ ಹೆಚ್ಚುವರಿ ಹೊರೆ ಉಂಟಾಗಿದೆ. ಆ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಆಗಿದೆ.
ಎಲ್ಲಾ ಕಾರ್ಪೋರೇಷನ್ ಗಳು, ನಗರ ಬಸ್ಸುಗಳು, ಐಷಾರಾಮಿ ಬಸ್ಸುಗಳು ಸೇರಿದಂತೆ ಎಲ್ಲರಿಗೂ ಶೇ 15% ಪರಿಷ್ಕರಿಸಲಾಗಿದೆ. ಇದರಿಂದ ಪ್ರತಿ ತಿಂಗಳು 74.85 ಕೋಟಿಗಳಷ್ಟು ಆದಾಯ ಹೆಚ್ಚಾಗಲಿದೆ. ಶಕ್ತಿ ಯೋಜನೆಗಾಗಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ 5015 ಕೋಟಿಗಳನ್ನು ಮೀಸಲಿರಿಸಿದೆ.
ಪ್ರತಿ ತಿಂಗಳು ನಾಲ್ಕೂ ನಿಗಮಗಳಿಗೆ 417.92 ಕೋಟಿ ಗಳ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುವುದಿಲ್ಲ. ಕರ್ನಾಟಕ ಅತ್ಯುತ್ತಮ ಆರ್ಥಿಕ ಹೊಣೆಗಾರಿಕೆಯನ್ನು ಅನುಷ್ಠಾನ ಮಾಡಿರುವ ರಾಜ್ಯ ಎಂದು ಸಚಿವ ಎಚ್‌ಕೆ ಪಾಟೀಲ್ ಸುದ್ದಿಗಾರರಿಗೆ ತಿಳಿಸಿದರು.
ಸಾರಿಗೆ ಪ್ರಯಾಣ ದರ ಏರಿಸುವ ಕುರಿತಾಗಿ ಕೆಲ ದಿನಗಳ ಹಿಂದೆಯೇ ಸಾರಿಗೆ ನಿಗಮಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ದರ ಏರಿಕೆ ಕುರಿತು ಚರ್ಚೆ ಮಾಡಲಾಗಿತ್ತು. ಸಾರಿಗೆ ಇಲಾಖೆಗೆ 3650 ಕೋಟಿ ಹೊರೆಯಾಗುತ್ತಿದೆ ಎಂದು ಸಾರಿಗೆ ಅಧಿಕಾರಿಗಳು ಅಳಲು ತೋಡಿಕೊಂಡಿದ್ದರು. ನಷ್ಟ ಪರಿಹಾರಕ್ಕೆ ಶೇ. 15ರಷ್ಟು ಪ್ರಯಾಣದರ ಹೆಚ್ಚಳಕ್ಕೆ ಸಭೆಯಲ್ಲಿ ಚರ್ಚೆ ಮಾಡಲಾಗಿತ್ತು ಆದರೆ ಶೇ 15 ರ ಪ್ರಮಾಣದಲ್ಲಿ ದರ ಪರಿಷ್ಕರಣೆಯಾದರೂ ನಿಗಮಗಳು ಇನ್ನೂ 1,800 ಕೋಟಿ ನಷ್ಟ ಅನುಭವಿಸುತ್ತವೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ವರ್ಷದಲ್ಲೇ ಕರ್ನಾಟಕ ಸರ್ಕಾರ ದರ ಏರಿಕೆ ಮಾಡಲು ಅನುಮತಿ ನೀಡಿದೆ.