ಕರ್ನಾಟಕ ಸರ್ಕಾರದ ವಿರುದ್ಧ ತಿರುಗಿಬಿದ್ದ ಗುತ್ತಿಗೆದಾರರ ಸಂಘ, ಕಾರಣ - ಹೆಚ್ಚಾಗಿದೆ ಸ್ಪೆಷಲ್ ಎಲ್‌ಒಸಿ ಹಾಗೂ ಕಾಣದ ಕೈಗಳ ಕಾಟ
ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚಾಗುವಂತೆ ಮಾಡಿದ್ದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಈಗ ಈ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ತಿರುಗಿ ಬಿದ್ದಿದೆ. ಸ್ಪೆಷಲ್ ಎಲ್‌ಒಸಿ ಹಾಗೂ ಕಾಣದ ಕೈಗಳ ಕಾಟ ಹೆಚ್ಚಾಗಿದೆ ಎಂದು ಆರೋಪಿಸಿದ್ದು, ಬಾಕಿ ಹಣ ಬೇಗ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ.

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಮಾಡಿದ್ದ 40 ಪರ್ಸೆಂಟ್ ಕಮಿಷನ್ ಆರೋಪವನ್ನು ಕಾಂಗ್ರೆಸ್ ಪಕ್ಷ ಪ್ರಚಾರಕ್ಕೆ ಬಳಸಿಕೊಂಡು ಅಭಿಯಾನ ನಡೆಸಿತ್ತು. ಕಳೆದ ಚುನಾವಣೆಯಲ್ಲಿ ಇದೇ ವಿಚಾರ ಮುಂದಿಟ್ಟು ವಿಜಯಿಯಾಗಿ ಆಡಳಿತ ಚುಕ್ಕಾಣಿ ಹಿಡಿದುಕೊಂಡಿದೆ. ಈಗ ಮತ್ತದೇ ಆರೋಪ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದಿಂದ ವ್ಯಕ್ತವಾಗಿದೆ. ಈ ಬಾರಿ ಲೋಕೋಪಯೋಗಿ, ನಾಲ್ಕು ನೀರಾವರಿ ನಿಗಮಗಳು ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲಿ “ಸ್ಪೆಷಲ್ ಎಲ್‌ಒಸಿ” ಹಾಗೂ “ಕಾಣದ ಕೈಗಳು” ಸಿಕ್ಕಾಪಟ್ಟೆ ಕಾಡುತ್ತಿವೆ ಎಂದು ಸಂಘ ಆರೋಪಿಸಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿ ಹೊಳಿಯವರಿಗೆ ಪತ್ರವನ್ನೂ ಬರೆದಿದ್ದು, 2024-25ನೇ ಸಾಲಿನ ಕಾಮಗಾರಿಯ ಬಾಕಿ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ.
ಹೆಚ್ಚಾಗಿದೆ ಸ್ಪೆಷಲ್ ಎಲ್‌ಒಸಿ ಹಾಗೂ ಕಾಣದ ಕೈಗಳ ಕಾಟ; ಗುತ್ತಿಗೆದಾರರ ಆರೋಪ
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಎಂ. ರವೀಂದ್ರ ಅವರು ಏಪ್ರಿಲ್ 3 ರಂದು ಪತ್ರ ಬರೆದಿದ್ದು, ‘ಕಾಣದ ಕೈಗಳು ಕೆಲಸ ಮಾಡುತ್ತಿವೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ತಾವು ಪೂರ್ಣಗೊಳಿಸಿದ ಕಾಮಗಾರಿಗೆ ಹಣ ಬಿಡುಗಡೆಗೆ ಮಾಡುವಲ್ಲಿ ಕಾಣದ ಕೈಗಳು, ಮಧ್ಯವರ್ತಿಗಳ ಕಾಟ ಹೆಚ್ಚಾಗಿದೆ. ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗಂದತೆ ಮಧ್ಯವರ್ತಿಗಳು ಕಾಟ ಕೊಡುತ್ತಿದ್ದಾರೆ. ಜೇಷ್ಠತೆ ಪಾಲಿಸದೆ ಸ್ಪೆಷಲ್ ಎಲ್‌ಓಸಿ ಸೃಷ್ಟಿ ಮಾಡಿ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ಲೋಕೋಪಯೋಗಿ ಇಲಾಖೆ, ನಾಲ್ಕು ನೀರಾವರಿ ನಿಗಮ ಮತ್ತು ಸಣ್ಣ ನೀರಾವರಿ ಇಲಾಖೆಯಲ್ಲಿ ಕಾಣದ ಕೈಗಳ ಬಗ್ಗೆ ಚರ್ಚೆ ಮಾಡಿ ಸಣ್ಣ ಗುತ್ತಿಗೆದಾರರಿಗೆ ನ್ಯಾಯ ಒದಗಿಸಬೇಕು ಎಂದು ಸಿಎಂ, ಡಿಸಿಎಂ ಹಾಗೂ ಸಚಿವರಿಗೆ ಕಳುಹಿಸಿದ ಪತ್ರದಲ್ಲಿ ಸಂಘ ಆಗ್ರಹಿಸಿದೆ.
ಸಚಿವರ ಪುತ್ರನ ಹಸ್ತಕ್ಷೇಪದ ಆರೋಪ
ಲೋಕೋಪಯೋಗಿ ಇಲಾಖೆ, ಹಾಗೂ ಸಣ್ಣ ನೀರಾವರಿ ಸಚಿವರ ಪುತ್ರ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಸಕಾಲಕ್ಕೆ ಬಿಲ್ ಪಾವತಿ ಮಾಡುತ್ತಿಲ್ಲ. ಜೇಷ್ಠತೆ ಆಧಾರದಡಿ ಪಾವತಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಇದನ್ನು ಪಾಲನೆ ಮಾಡುತ್ತಿಲ್ಲ. ತಮಗೆ ಬೇಕಾದವರಿಗೆ ಹಾಗೂ ದೊಡ್ಡ ದೊಡ್ಡವರಿಗೆ ಬಾಕಿ ಬಿಲ್ ಪಾವತಿ ಮಾಡಲಾಗುತ್ತಿದೆ. 5ರಿಂದ 50 ಕೋಟಿವರೆಗೆ ಬಿಲ್ ಇರುವವರಿಗೆ ಬಿಲ್ ಪಾವತಿ ಮಾಡುತ್ತಿಲ್ಲ ಎಂದು ಸಂಘದ ಅಧ್ಯಕ್ಷ ಮಂಜುನಾಥ್ ಮಾಧ್ಯಮ ಪತ್ರಿನಿಧಿಗಳ ಜತೆಗೆ ಮಾತನಾಡುತ್ತ ಅಹವಾಲು ತೋಡಿಕೊಂಡಿದ್ದಾರೆ.
ಲೋಕೋಪಯೋಗಿ ಇಲಾಖೆಯಲ್ಲಿ ಈ ರೀತಿ ಆಗುತ್ತಿದೆ ಎಂದು ಉನ್ನತಾಧಿಕಾರಿಗಳಿಗೆ ತಿಳಿಸಿದರೆ, ನಮಗೆ ಅದರ ಬಗ್ಗೆ ಗೊತ್ತಿಲ್ಲ ಎಂದು ಜಾರಿಕೊಳ್ಳುತ್ತಾರೆ. ನಮಗೆ ಸಚಿವರ ಬಗ್ಗೆ ದೂರು ಇಲ್ಲ. ಅವರಿಗೆ ಈ ವಿಚಾರ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ.
ಸಣ್ಣ ನೀರಾವರಿ ಇಲಾಖೆಯಲ್ಲಿ ಸಚಿವರ ಪುತ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಇದಲ್ಲದೆ, ಈ ಇಲಾಖೆಗಳ ಮುಖ್ಯಸ್ಥರು ಕೂಡಾ ದೊಡ್ಡ ದೊಡ್ಡ ಗುತ್ತಿಗೆದಾರರಿಗೆ 100, 200 ಕೋಟಿಗಳನ್ನು ಬಿಡುಗಡೆ ಮಾಡುತ್ತಿಲ್ಲ. 5 ಕೋಟಿ ರೂಪಾಯಿಯಿಂದ 50 ಕೋಟಿ ರೂಪಾಯಿ ತನಕ ಬಿಲ್ ಬಾಕಿ ಇರುವ ಶೇ 60 ರಷ್ಟು ಗುತ್ತಿಗೆದಾರರಿದ್ದಾರೆ. ಬಾಕಿ ಹಣ ಪಡೆಯುವುದಕ್ಕಾಗಿ 3 ವರ್ಷದಿಂದ ಕಚೇರಿ ಅಲೆಯುತ್ತಿದ್ದಾರೆ. ಆದರೂ ಬಾಕಿ ನೀಡುತ್ತಿಲ್ಲ ಎಂದು ಮಂಜುನಾಥ್ ಅಳಲು ತೋಡಿಕೊಂಡಿದ್ದಾರೆ.
ಡಿಕೆ ಶಿವಕುಮಾರ್ ಮತ್ತು ಸಚಿವ ಬೋಸರಾಜು ಏನು ಹೇಳಿದರು
‘ಎಲ್‌ಒಸಿಗೆ ಕಮಿಷನ್ ಕೇಳುತ್ತಿರುವವರ ಬಗ್ಗೆ ಗುತ್ತಿಗೆದಾರರ ಸಂಘದವರು ಲೋಕಾಯುಕ್ತಕ್ಕೊ, ಪೊಲೀಸರಿಗೊ ದೂರು ನೀಡಲಿ. ನಮ್ಮ ಸರ್ಕಾರ ನ್ಯಾಯಬದ್ಧವಾಗಿ ಆಡಳಿತ ನೀಡುತ್ತಿದೆ. ನಾವು ಯಾವುದೇ ಲಂಚಕ್ಕೆ ಪ್ರೋತ್ಸಾಹ ನೀಡುವವರಲ್ಲ. ನನ್ನ ಇಲಾಖೆಯ ಮೇಲೆ ಆರೋಪ ಇದ್ದರೂ ಸರಿ, ಅವರು ಲಿಖಿತವಾಗಿ ದೂರು ಕೊಟ್ಟರೆ ತನಿಖೆ ಮಾಡಿಸೋಣ. ಯಾವ ಸ್ಪೆಷಲ್ ಎಲ್‌ಒಸಿಯೂ ಇಲ್ಲ, ಏನೂ ಇಲ್ಲ. ನಾವು ಈಗಾಗಲೇ ಶೇ 10- 20 ಬಿಲ್ ಪಾವತಿ ಮಾಡಿಯಾಗಿದೆ’ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಇನ್ನೊಂದೆಡೆ ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಅವರು ಮಾಧ್ಯಮ ಪತ್ರಿನಿಧಿಗಳ ಜತೆಗೆ ಮಾತನಾಡುತ್ತ, ರಾಜ್ಯ ಗುತ್ತಿಗೆದಾರರ ಸಂಘ ಮಾಡಿರುವ ಕಮಿಷನ್ ಆರೋಪ ಸಾಬೀತು ಮಾಡಿದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲ. ಇಲಾಖೆಯಲ್ಲಿ ಅಧಿಕಾರಿಗಳ ತಪ್ಪು ಕಂಡು ಬಂದಾಗ ನಾನು ಸರಿಪಡಿಸುತ್ತೇನೆ. ಗುತ್ತಿಗೆದಾರರು ಅನಗತ್ಯವಾಗಿ ಆರೋಪ ಮಾಡುವುದು ಸಲ್ಲ ಎಂದು ಹೇಳಿದರು.
