ಕನ್ನಡ ಸುದ್ದಿ  /  Karnataka  /  Karnataka State Goddess: Is This The Official Picture Of Goddess Bhuvaneshwari; What Is Special About Uniform Picture Of Goddess Bhuvaneshwari Submitted To Government

Karnataka State Goddess: ನಾಡದೇವತೆ ಭುವನೇಶ್ವರಿಯ ಅಧಿಕೃತ ಚಿತ್ರ ಇದುವೇನಾ?!; ಸರ್ಕಾರಕ್ಕೆ ಸಲ್ಲಿಕೆಯಾದ ಏಕರೂಪ ಚಿತ್ರದ ವಿಶೇಷತೆ ಏನು?

Karnataka State Goddess: ಕೆ. ಸೋಮಶೇಖರ್‌ ಸಿದ್ಧಪಡಿಸಿರುವ ನಾಡದೇವತೆಯ ಚಿತ್ರದಲ್ಲಿ ರಾಜ್ಯದ ಸಾಂಪ್ರದಾಯಿಕ ಕಲೆ ಹಾಗೂ ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಿಂಬಿಸಲಾಗಿದೆ. ನಾಡದೇವತೆ‌ಯ ಈ ಚಿತ್ರದ ಹಿನ್ನೆಲೆಯಲ್ಲಿ ಕರ್ನಾಟಕದ ನಕ್ಷೆ ಇದೆ. ಕಾಲಿಗೆ ಆಸರೆಯಾಗಿ ಕೆಳಗೆ ಒಂದು ಹಾಗೂ ಕಾಲಿನ ಇಕ್ಕೆಲಗಳಲ್ಲಿ ಎರಡು ತಾವರೆ(ಕಮಲ) ಹೂವುಗಳಿವೆ.

ಸಮಿತಿಯ ಅಧ್ಯಕ್ಷರಾಗಿದ್ದ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ. ಮಹೇಂದ್ರ (ಬಲ), ಚಿತ್ರಕಲಾವಿದ ಕೆ.ಸೋಮಶೇಖರ ರಚಿಸಿ ಸಲ್ಲಿಸಿದ ತಾಯಿ ಭುವನೇಶ್ವರಿಯ ಚಿತ್ರ (ಬಲ)
ಸಮಿತಿಯ ಅಧ್ಯಕ್ಷರಾಗಿದ್ದ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ. ಮಹೇಂದ್ರ (ಬಲ), ಚಿತ್ರಕಲಾವಿದ ಕೆ.ಸೋಮಶೇಖರ ರಚಿಸಿ ಸಲ್ಲಿಸಿದ ತಾಯಿ ಭುವನೇಶ್ವರಿಯ ಚಿತ್ರ (ಬಲ)

ಬೆಂ‍ಗಳೂರು: ಕರ್ನಾಟಕದ ನಾಡದೇವತೆಯ ಒಂದು ನಿರ್ದಿಷ್ಟ ಚಿತ್ರವನ್ನು ಆಯ್ಕೆ ಮಾಡಲು ರಚಿಸಿದ್ದ ಚಿತ್ರಕಲಾವಿದರನ್ನು ಒಳಗೊಂಡ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ. ಮಹೇಂದ್ರ ಅಧ್ಯಕ್ಷತೆಯ ಐವರು ಸದಸ್ಯರ ಸಮಿತಿಯು ನಿಯೋಜಿತ ಚಿತ್ರ ಕಲಾವಿದ ಕೆ.ಸೋಮಶೇಖರ್‌ ಅವರಿಂದ ನಾಡದೇವತೆಯ ಚಿತ್ರವನ್ನು ಸ್ವೀಕರಿಸಿದೆ.

ಕೆ. ಸೋಮಶೇಖರ್‌ ಸಿದ್ಧಪಡಿಸಿರುವ ನಾಡದೇವತೆಯ ಚಿತ್ರದಲ್ಲಿ ರಾಜ್ಯದ ಸಾಂಪ್ರದಾಯಿಕ ಕಲೆ ಹಾಗೂ ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಿಂಬಿಸಲಾಗಿದೆ. ನಾಡದೇವತೆ‌ಯ ಈ ಚಿತ್ರದ ಹಿನ್ನೆಲೆಯಲ್ಲಿ ಕರ್ನಾಟಕದ ನಕ್ಷೆ ಇದೆ. ಕಾಲಿಗೆ ಆಸರೆಯಾಗಿ ಕೆಳಗೆ ಒಂದು ಹಾಗೂ ಕಾಲಿನ ಇಕ್ಕೆಲಗಳಲ್ಲಿ ಎರಡು ತಾವರೆ(ಕಮಲ) ಹೂವುಗಳಿವೆ. ಇದೇ ಚಿತ್ರವನ್ನು ಅಧಿಕೃತಗೊಳಿಸುವಂತೆ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ. ಮಹೇಂದ್ರ ಅಧ್ಯಕ್ಷತೆಯ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಬೆಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸ್ಥಾಪಿಸಲಾಗುವ ನಾಡದೇವತೆಯ ಪ್ರತಿಮೆ ಕೂಡ ಇದೇ ಚಿತ್ರದಂತೆ ಇರಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ನಾಡದೇವಿ ಭುವನೇಶ್ವರಿ ಚಿತ್ರದ ವಿಶೇಷತೆಗಳೇನು?

  • ನಾಡದೇವತೆ ಭುವನೇಶ್ವರಿ ತಾಯಿಯ ಹಿನ್ನೆಲೆಯಲ್ಲಿ ಕರ್ನಾಟಕದ ನಕ್ಷೆ
  • ಮುಖದಲ್ಲಿ ಸಹಜ ಸೌಂದರ್ಯ ಮತ್ತು ದೈವೀ ಭಾವ
  • ವಾಸ್ತವಿಕತೆಗೆ ಹತ್ತಿರದ ದ್ವಿಭುಜ
  • ಬಲಗೈಯಲ್ಲಿ ಅಭಯ ಮುದ್ರೆ (ಸಾಂಸ್ಕೃತಿಕ ರಕ್ಷಣೆ), ಎಡಗೈಯಲ್ಲಿರುವ ತಾಳೆಗರಿ (ಕನ್ನಡ ಭಾಷಾ ಸಂಪತ್ತು, ಜ್ಞಾನ ಸಮೃದ್ಧಿ)
  • ನಾಡದೇವತೆ ಕುಳಿತ ಭಂಗಿಯು ಭವ್ಯತೆ ಹಾಗೂ ಸಾಕ್ಷ್ಯತೆ
  • ಕರ್ನಾಟಕದ ಧ್ವಜ ಕನ್ನಡಾಭಿಮಾನದ ಸಂಕೇತ
  • ಹಸಿರು ಸೀರೆಯು ಸಿರಿ ಸಂಪದ್‌ ಸಮೃದ್ಧಿಯ ಸಂಕೇತ
  • ಕರ್ನಾಟಕದ ಭವ್ಯ ವೈಶಿಷ್ಟ್ಯ ಸಾರುವ ಆಭರಣಗಳು ನಮ್ಮ ನಾಡನ್ನು ಆಳಿದ ಸಾಮ್ರಾಜ್ಯಗಳ ವೈಭವದ ಸಂಕೇತ (ಚಾಲುಕ್ಯರ ಕಾಲದ ಕರಂಡ ಮುಕುಟೋಪಾದಿಯಲ್ಲಿ ಕಿರೀಟ, ಕಿವಿಯಲ್ಲಿ ಸುಂದರ-ಕೌಶಲ್ಯ ಕರ್ಣಪರ್ಯಗಳು, ಭುಜದ ಮೇಲೆ ಕರ್ನಾಟಕ ವೈಶಿಷ್ಟ್ಯದ ಸಿಂಹ ಲಾಂಛನ ಭುಜಕೀರ್ತಿಗಳು, ಕುತ್ತಿಗೆಯಲ್ಲಿ ಕಂಠಿ, ಕಟ್ಟಾಣಿ, ಹಾರಗಳು,ಕರ್ನಾಟಕ ಲಾಂಛನ - ಗಂಡ ಭೇರುಂಡ ಪದಕ, ಕಟಿಯ ಆಭರಣವಾದ ಬೆಳ್ಳಿಯ ಡಾಬು, ಕಟಿಯಲ್ಲಿ ಕೀರ್ತಿಮುಖ ಲಾಂಛನದ ವಡ್ಯಾಣ, ಉದ್ದನೆಯ ವೈಜಯಂತಿ ಹಾರ, ನಡುವೆ ಹೊಯ್ಸಳ ಲಾಂಛನದ ಪದಕ, ಕಾಲಿನಲ್ಲಿ ಕಡಗ, ಋಳಿ ಮತ್ತು ಕಾಲುಂಗುರ)
  • ಹಣೆಯ ಲಲಾಟ ತಿಲಕ, ಶಿರದಲ್ಲಿ ಮುಡಿದಿರುವ ಹೂವು ಸೌಭಾಗ್ಯದ್ಯೋತಕ
  • ತೆಳುವಾದ-ಮೃದುವಾದ ಹೂವಿನ ತೋಮಾಲೆಯು ನಾಡದೇವತೆಯ ಸಂಪೂರ್ಣ ಅಲಂಕಾರಕ್ಕೆ ಮೆರುಗು
  • ಸುಂದರ ಸದೃಢ ತಾವರೆ ಹೂವು(ಕಮಲ) ದೇವಿಯ ಮೃದುವಾದ ಕಾಲುಗಳಿಗೆ ಆಸರೆ
  • ತಾಯಿ ಭುವನೇಶ್ವರಿಯ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟ, ಸಸ್ಯಕಾಶಿಯು ಸೊಬಗು

ಸಮಿತಿ ಯಾವಾಗ ರಚನೆ ಆಗಿತ್ತು?

ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಬಳಸುವಂತೆ ಮಾಡಲು ಮತ್ತು ಶಾಲಾ– ಕಾಲೇಜುಗಳ ಗೋಡೆಗಳಲ್ಲಿ ಅಳವಡಿಸುವುದಕ್ಕಾಗಿ ನಾಡದೇವತೆಯ ಪ್ರಮಾಣಿತ ಹಾಗೂ ಅಧಿಕೃತ ಚಿತ್ರವನ್ನು ಆಯ್ಕೆ ಮಾಡಿ ಶಿಫಾರಸು ಮಾಡಲು 2021ರ ಸೆ. 23ರಂದು ಮಹೇಂದ್ರ ನೇತೃತ್ವದಲ್ಲಿ ಚಿತ್ರ ಕಲಾವಿದರ ಸಮಿತಿಯನ್ನು ರಚಿಸಲಾಗಿತ್ತು. ಬೆಂಗಳೂರಿನ ಚೂಡಾಮಣಿ ನಂದಗೋಪಾಲ್‌, ರಾಯಚೂರಿನ ಎಚ್‌.ಎಚ್‌. ಮ್ಯಾದರ್‌, ಬೆಳಗಾವಿಯ ಬಾಬು ನಡೋಣಿ, ವಿಜಯಪುರದ ವಿ.ಎಸ್‌. ಕಡೇಮನಿ ಸಮಿತಿಯ ಸದಸ್ಯರು.

‘ಸದ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಜ್ಯದ ನಾಡದೇವತೆಯ ಬೇರೆ ಬೇರೆ ಚಿತ್ರಗಳನ್ನು ಬಳಸಲಾಗುತ್ತಿದೆ. ಸರ್ಕಾರದ ಸೂಚನೆ ಪ್ರಕಾರ, ಅಧಿಕೃತ ಚಿತ್ರವನ್ನು ಶಿಫಾರಸು ಮಾಡಿದ್ದೇವೆ. ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಈ ಚಿತ್ರ ಬಳಕೆಗೆ ಬರಲಿದೆ ’ ಎಂದು ಡಿ. ಮಹೇಂದ್ರ ತಿಳಿಸಿದರುವುದಾಗಿ ಪ್ರಜಾವಾಣಿ ವರದಿ ಹೇಳಿದೆ.

ಸಮಿತಿ ಸೂಚನೆಯಂತೆ ಕೆ.ಸೋಮಶೇಖರ್‌ ಅವರು ನಾಡದೇವಿಯ ಚಿತ್ರವನ್ನು ಸಿದ್ಧಪಡಿಸಿ ಸಮಿತಿಗೆ ಸಲ್ಲಿಸಿದ್ದಾರೆ. ಆ ಚಿತ್ರ ಎಲ್ಲೆಡೆ ಹರಿದಾಡುತ್ತಿದೆ.

IPL_Entry_Point