NEET Exam: ಮೆಡಿಕಲ್ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ರದ್ದು ಮಾಡಲು ಮುಂದಾದ ಕರ್ನಾಟಕ; ಹಳೆಯ ಪ್ರವೇಶ ವ್ಯವಸ್ಥೆಗೆ ವಾಪಸ್
Karnataka scrap NEET exam: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯನ್ನು ರದ್ದುಗೊಳಿಸಲು ಕರ್ನಾಟಕ ಸರಕಾರ ಸಜ್ಜಾಗಿದೆ. ಈಗಾಗಲೇ ಸೋಮವಾರ ಕ್ಯಾಬಿನೆಟ್‌ನಲ್ಲಿ ಸರಕಾರದ ಈ ಪ್ರಸ್ತಾಪಕ್ಕೆ ಅಂಗೀಕಾರ ದೊರಕಿದೆ. ಇದೀಗ ಈ ಕುರಿತು ಉಭಯ ಸದನಗಳಲ್ಲಿ ಸಿದ್ದರಾಮಯ್ಯ ಸರಕಾರ ತನ್ನ ನಿರ್ಣಯವನ್ನು ಅಂಗೀಕರಿಸಲು ಸಿದ್ಧತೆ ನಡೆಸಿದೆ.
ಬೆಂಗಳೂರು: ದೇಶದ ಪ್ರಮುಖ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ನೆರವಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯನ್ನು ರದ್ದುಗೊಳಿಸಲು ಕರ್ನಾಟಕ ಸರಕಾರ ಸಜ್ಜಾಗಿದೆ. ಈಗಾಗಲೇ ಸೋಮವಾರ ಕ್ಯಾಬಿನೆಟ್‌ನಲ್ಲಿ ಸರಕಾರದ ಈ ಪ್ರಸ್ತಾಪಕ್ಕೆ ಅಂಗೀಕಾರ ದೊರಕಿದೆ. ಇದೀಗ ಈ ಕುರಿತು ಉಭಯ ಸದನಗಳಲ್ಲಿ ಸಿದ್ದರಾಮಯ್ಯ ಸರಕಾರ ತನ್ನ ನಿರ್ಣಯವನ್ನು ಅಂಗೀಕರಿಸಲು ಸಿದ್ಧತೆ ನಡೆಸಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಬಳಿಕ ಕರ್ನಾಟಕ ಸರಕಾರ ಈ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ನೀಟ್ ಪರೀಕ್ಷೆ ಬದಲು ಹಳೆಯ ಪ್ರವೇಶ ಪರೀಕ್ಷೆ ವ್ಯವಸ್ಥೆಗೆ ಮರಳಲು ರಾಜ್ಯ ಸರಕಾರ ಮುಂದಾಗಿದೆ.
ಎಲ್ಲಾದರೂ ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವ ಮಸೂದೆ ಅಂಗೀಕಾರಗೊಂಡರೆ ಕರ್ನಾಟಕವು ತನ್ನದೇ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಲಿದೆ. ಈಗಾಗಲೇ ತಮಿಳುನಾಡು ಕೂಡ ಇದೇ ಹಾದಿಯಲ್ಲಿದೆ. ನೀಟ್ ರದ್ದುಗೊಳಿಸಿ ದ್ವಿತೀಯ ಪಿಯುಸಿ ಅಂಕಗಳ ಜತೆಗೆ ರಾಜ್ಯದ ವೈದ್ಯಕೀಯ ಪ್ರವೇಶ ಪರೀಕ್ಷೆಯ ಹಳೆಯ ಕ್ರಮಕ್ಕೆ ಹಿಂತುರುಗಲು ತಮಿಳುನಾಡು ಮುಂದಾಗಿದೆ. ಇದೀಗ ಕರ್ನಾಟಕವೂ ಇದೇ ವಿಧಾನವನ್ನುಅನುಸರಿಸುವ ಸೂಚನೆ ನೀಡಿದೆ.
"ನೀಟ್ ಎಂಬ ಪ್ರವೇಶ ಪರೀಕ್ಷೆಯಿಂದ ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ನೀಟ್ ಪರೀಕ್ಷೆಯನ್ನು ತಕ್ಷಣ ರದ್ದುಗೊಳಿಸಬೇಕು. ಕೇಂದ್ರ ಸರಕಾರವು ರಾಜ್ಯಗಳು ತಮ್ಮದೇ ಪರೀಕ್ಷೆ ನಡೆಸಲು ಅನುಮತಿ ನೀಡಬೇಕು. ನೀಟ್ ಪರೀಕ್ಷೆಯಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ" ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದರು.
“ಇದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಾಗಿದ್ದು, ನೀಟ್ ಅಕ್ರಮ ಗಂಭೀರ ಅಪರಾಧವಾಗಿದೆ. ಹೀಗಾಗಿ ಆಯಾ ರಾಜ್ಯಗಳೇ ಪ್ರವೇಶ ಪರೀಕ್ಷೆ ನಡೆಸಲು ಅವಕಾಶ ನೀಡಲಿ ಎಂದು ಕೇಂದ್ರ ಸರಕಾರವನ್ನು ಮನವಿ ಮಾಡುತ್ತೇನೆ. ರಾಜ್ಯಗಳು ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳು ಭಾಗವಹಿಸಲಿ. ಅವರಿಗಾಗಿ ಇಲ್ಲಿ ಮೀಸಲಾತಿಯನ್ನೂ ನೀಡಬಹುದು. ಈ ನೀಟ್ ಎಂಬ ಪ್ರವೇಶ ಪರೀಕ್ಷೆಯಿಂದ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿವೆ. ನಾವು ಇಲ್ಲಿ ಕಾಲೇಜುಗಳನ್ನು ಕಟ್ಟಿದ್ದೇವೆ. ನೀಟ್ ಪರೀಕ್ಷೆಯಿಂದ ಉತ್ತರ ಭಾರತದ ರಾಜ್ಯಗಳ ವಿದ್ಯಾರ್ಥಿಗಳಿಗೆ ಇಲ್ಲಿ ಹೆಚ್ಚು ಅನುಕೂಲವಾಗುತ್ತಿದೆ. ಹೀಗಾಗಿ ನಮ್ಮ ಮಕ್ಕಳಿಗೆ ಪ್ರವೇಶದಲ್ಲಿ ತಾರತಮ್ಯವಾಗುತ್ತಿದೆ. ನಮ್ಮ ಮಕ್ಕಳಿಗೆ ನ್ಯಾಯ ಒದಗಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಇನ್ನು ನೀಟ್ ಅಕ್ರಮದ ಬಗ್ಗೆ ನಾನು ವೈದ್ಯಕೀಯ ಶಿಕ್ಷಣ ಸಚಿವರ ಜತೆ ಚರ್ಚೆಯನ್ನು ಮಾಡಿರುವೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಚಾರವಾಗಿ ಉನ್ನತ ಮಟ್ಟದ ತನಿಖೆಯಾಗಿ ಶಿಸ್ತು ಕ್ರಮ ಕೈಗೊಳ್ಳಬೇಕು” ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ತಮಿಳುನಾಡಿನ ಕ್ರಮ ಅನುಸರಿಸಲು ನಿರ್ಧಾರ
ತಮಿಳುನಾಡು ಸರಕಾರವು ದ್ವಿತೀಯ ಪಿಯುಸಿ ಅಂಕಗಳ ಜತೆಗೆ ರಾಜ್ಯದ ಮೆಡಿಕಲ್ ಅಡ್ಮಿಷನ್ ಪ್ರಕ್ರಿಯೆ ಆರಂಭಿಸಲು ಉದ್ದೇಶಿಸಿದೆ. "ಬಡಮಕ್ಕಳಿಗೆ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಮತ್ತು ತಯಾರಾಗಲು ಸಾಧ್ಯವಾಗುವುದಿಲ್ಲ" ಎಂದು ಜೂನ್ ತಿಂಗಳಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಹೇಳಿದ್ದರು.
"ನೀಟ್ ಪರೀಕ್ಷೆಯು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರ ಪ್ರವೇಶಿಸುವ ಕನಸಿಗೆ ಅಡ್ಡಿಯಾಗುತ್ತಿದೆ. ತಮಿಳುನಾಡಿನ ಮೆಡಿಕಲ್ ಕಾಲೇಜುಗಳಿಗೆ ವಿದ್ಯಾಥಿಗಳನ್ನು ಸೇರಿಸುವ ಸರಕಾರದ ಪ್ರಯತ್ನಕ್ಕೂ ಅಡ್ಡಿಯಾಗುತ್ತದೆ. ತಮಿಳುನಾಡು ಅಸೆಂಬ್ಲಿಯು ಜಾರಿ ಮಾಡಿರುವ ಮಸೂದೆಯನ್ನು ಕೇಂದ್ರ ಸರಕಾರ ಅಂಗೀಕರಿಸಬೇಕು" ಎಂದು ತಮಿಳುನಾಡು ಸರಕಾರ ತಿಳಿಸಿತ್ತು.