ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮ: ಪೊಲೀಸ್ ಸಿಬ್ಬಂದಿಗೆ ಡಿಜಿಪಿ ಡಾ. ಎಂ. ಎ. ಸಲೀಂ ಪತ್ರ
ಕರ್ನಾಟಕ ರಾಜ್ಯ ಪೊಲೀಸ್ ಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡಾ ಎಂ. ಎ. ಸಲೀಂ ಅವರು ಇಲಾಖೆಯ ಎಲ್ಲ ಸಹೋದ್ಯೋಗಿಗಳನ್ನು ಉದ್ದೇಶಿಸಿ ಪತ್ರ ಬರೆದಿದ್ದಾರೆ.

ಬೆಂಗಳೂರು: ರಾಜ್ಯದ ಪೊಲೀಸ್ ಮಹಾನಿರೀಕ್ಷಕರು ಮತ್ತು ಪೊಲೀಸ್ ಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಡಾ. ಎಂ. ಎ. ಸಲೀಂ ಅವರು ಇಲಾಖೆ ಮತ್ತು ಸಿಬ್ಬಂದಿಗಳನ್ನು ಉದ್ದೇಶಿಸಿ ಪತ್ರ ಬರೆದಿದ್ದು, ನಾಡಿನಲ್ಲಿ ಶಾಂತಿ-ಸೌಹಾರ್ದಯುತ, ಸುರಕ್ಷತೆಯ ವಾತಾವರಣ ನಿರ್ಮಿಸುವ ಹಾಗೂ ಇಲಾಖೆಯನ್ನು ಸಮಾಜಸ್ನೇಹಿಯಾಗಿ ಬದಲಿಸಿ, ಇಲಾಖೆಯನ್ನು ಆಧುನೀಕರಣದೆಡೆಗೆ ಕೊಂಡೊಯ್ಯಲು ನಮ್ಮೆಲ್ಲ ಸಾಮರ್ಥ್ಯ ಮೀರಿ ದುಡಿಯುವ ಧೈಯದೆಡೆಗೆ ನಾವೆಲ್ಲರೂ ಒಮ್ಮತವಾಗಿ ಕಾರ್ಯಪ್ರವೃತ್ತರಾಗೋಣ ಎಂದು ತಿಳಿಸಿದ್ದಾರೆ.
ಎರಡು ಪುಟಗಳ ಪತ್ರದಲ್ಲಿ ಅವರು, ರಾಜ್ಯದ ಕಾನೂನು ಸುವ್ಯವಸ್ಥೆ, ಸೌಹಾರ್ದತೆಗಳನ್ನು ಕಾಪಾಡುವ ಸಲುವಾಗಿ ಕಿರಿಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಹಿಡಿದು ಹಿರಿಯ ಪೊಲೀಸ್ ಅಧಿಕಾರಿಗಳವರೆಗಿನ ಎಲ್ಲಾ ಸಹೋದ್ಯೋಗಿಗಳಿಂದ ಸಹಕಾರ ಮತ್ತು ಬೆಂಬಲ ಕೋರಿದ್ದಾರೆ. ಜತೆಗೆ ರಾಜ್ಯದಲ್ಲಿ ಅಪರಾಧಗಳನ್ನು ವ್ಯವಸ್ಥಿತವಾಗಿ ತಡೆಯುವ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಅಪರಾಧ ಪ್ರಕರಣಗಳ ಸಮರ್ಥ ಹಾಗೂ ನಿಖರ ತನಿಖೆಯನ್ನು ನಡೆಸುವ ಮೂಲಕ ಜನರಿಗೆ ಸುರಕ್ಷಿತ ಭಾವನೆ ಮೂಡಿಸಲು ಆದ್ಯತೆ ನೀಡಬೇಕು ಎಂದು ಸೂಚಿಸಿದ್ದಾರೆ.
ಅಲ್ಲದೆ, ಪ್ರಸ್ತುತದವರೆಗೆ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಅನುಸರಿಸುತ್ತಿದ್ದ ಅಪರಾಧಿ ಕೇಂದ್ರಿತ ವ್ಯವಸ್ಥೆಯನ್ನು ಸಂತ್ರಸ್ತ ಕೇಂದ್ರಿತ ವ್ಯವಸ್ಥೆಯ ಪಥವನ್ನಾಗಿ ಬದಲಿಸಿಕೊಂಡು, ಇಂತಹ ಕ್ರಮದಿಂದ ಅಪರಾಧಿಗಳಿಗೆ ಶಿಕ್ಷೆಗೆ ಗುರಿಪಡಿಸುವುದರ ಜೊತೆಗೆ, ಸಂತ್ರಸ್ತರಿಗೆ ನ್ಯಾಯ ದೊರಕುವುದರೊಂದಿಗೆ, ಅರ್ಹ ಸವಲತ್ತುಗಳನ್ನು ದೊರಕಿಸಿಕೊಡಲು ಮತ್ತು ಅವರನ್ನು ಪುನಃಶ್ಚತನಗೊಳಿಸಲು ಪೊಲೀಸ್ ಇಲಾಖೆ ಪ್ರಯತ್ನ ನಡೆಸಬೇಕು ಎಂದು ರಾಜ್ಯದ ಪೊಲೀಸ್ ಮಹಾನಿರೀಕ್ಷಕರು ಪತ್ರದಲ್ಲಿ ವಿವರಿಸಿದ್ದಾರೆ.
ಪಾರದರ್ಶಕತೆಗೆ ಅತಿ ಹೆಚ್ಚು ಒತ್ತು ನೀಡುವ ಮೂಲಕ ಸಾರ್ವಜನಿಕರಲ್ಲಿ ವಿಶ್ವಾಸಾರ್ಹತೆಯನ್ನು ಮೂಡಿಸುವುದು ಮತ್ತು ದುರ್ಬಲ ವರ್ಗ, ಆರ್ಥಿಕವಾಗಿ ಹಿಂದುಳಿದವರಿಗೆ ನ್ಯಾಯ ದೊರಕಿಸಿಕೊಡಲು ಇಲಾಖೆಯ ಎಲ್ಲ ಸಿಬ್ಬಂದಿ ಶ್ರಮಿಸಬೇಕು ಎಂದು ಅವರು ಹೇಳಿದ್ದು, ಸಹೋದ್ಯೋಗಿಗಳು ಸದೃಢರಾಗಿರಲು ಹಾಗೂ ಆರೋಗ್ಯ ಸ್ಥಿತಿಯನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳುವುದು, ನಿಯಮಿತ ವ್ಯಾಯಾಮ, ಕೆಲಸದ ಒತ್ತಡ ನಿವಾರಣೆ, ದೀರ್ಘಕಾಲದ ಕರ್ತವ್ಯಗಳ ವಿಭಜನೆ, ಉತ್ತಮ ಕರ್ತವ್ಯದ ವಾತಾವರಣ ನಿರ್ಮಾಣ, ನೈತಿಕ ಉತ್ಸಾಹ ಹೆಚ್ಚಿಸುವ ಕ್ರಮಗಳು, ವಿನಾಕಾರಣ ರಜೆ ನಿರಾಕರಿಸದಿರುವುದು, ಉತ್ತಮ ಸೇವೆಯನ್ನು ಗುರುತಿಸಿ ಪುರಸ್ಕರಿಸುವ ಕ್ರಮಗಳನ್ನು ಜಾರಿ ಮಾಡುವುದಾಗಿ ಹೇಳಿದ್ದಾರೆ.
ಜತೆಗೆ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಪೊಲೀಸರಾದ ನಮ್ಮೆಲ್ಲರ ಹೊಣೆ ಮತ್ತು ನಮ್ಮ ಪ್ರಥಮ ಆದ್ಯತೆಯಾಗಿರಲಿ ಎಂದಿರುವ ಅವರು, ಸಮಾಜದಲ್ಲಿ ನೆಮ್ಮದಿ ಹೆಚ್ಚಿಸುವ, ಶಾಂತಿ ಸ್ಥಾಪಿಸುವ, ಸುರಕ್ಷಿತ ವಾತಾವರಣ ನಿರ್ಮಿಸುವ, ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ, ದುರ್ಬಲ ವರ್ಗದವರಿಗೆ ಮತ್ತು ನೊಂದವರಿಗೆ ನ್ಯಾಯ ದೊರಕಿಸಿಕೊಡುವ ವಿಶೇಷ ಅವಕಾಶ ಮತ್ತು ಜವಾಬ್ದಾರಿ ಪೊಲೀಸರಾದ ನಮಗಿದೆ ಎಂಬುದನ್ನು ನಾವು ಎಂದೂ ಮರೆಯಕೂಡದು. ಈ ನಮ್ಮ ನಾಡು ಮತ್ತು ನಾಡಿನ ಜನತೆಯ ಒಳಿತಿಗಾಗಿ ನಾವೆಲ್ಲರೂ ಶಕ್ತಿ ಮೀರಿ, ಪಾರದರ್ಶಕತೆ, ವೃತ್ತಿಪರತೆಯಿಂದ ಸೇವೆ ಸಲ್ಲಿಸಿ, ಕರ್ನಾಟಕ ರಾಜ್ಯವನ್ನು ದೇಶದಲ್ಲೇ ಅತಿ ಹೆಚ್ಚು ಸುರಕ್ಷಿತ ವಾತಾವರಣವಿರುವ ಹಾಗೂ ಅತ್ಯುತ್ತಮ ವಾಸಯೋಗ್ಯ ತಾಣವನ್ನಾಗಿ ಪರಿವರ್ತಿಸಲು ಪಣತೊಡೋಣ ಎಂದು ಹೇಳಿದ್ದಾರೆ.