Gruha Jyoti Effect: ಗೃಹಜ್ಯೋತಿ ಜಾರಿ: ಸೋಲಾರ್ ವಾಟರ್ ಹೀಟರ್ ಪ್ರೋತ್ಸಾಹಧನಕ್ಕೆ ಬಿತ್ತು ಕತ್ತರಿ
ಸೋಲಾರ್ ಬಳಕೆ ಪ್ರೋತ್ಸಾಹದ ಉದ್ದೇಶದಿಂದ ವಿದ್ಯುತ್ ಸರಬರಾಜು ಕಂಪೆನಿಗಳು ಸೋಲಾರ್ ವಾಟರ್ ಹೀಟರ್ ಬಳಕೆಗೆ ಪ್ರತಿ ತಿಂಗಳು 50 ರೂ.ವರೆಗೂ ಪ್ರೋತ್ಸಾಹಧನ ನೀಡುತ್ತಿದ್ದವು. ಇದು ಜೂನ್ ತಿಂಗಳು ಬಂದಿರುವ ವಿದ್ಯುತ್ ಬಿಲ್‌ನಲ್ಲಿ ಇಲ್ಲ. ಬಹಳಷ್ಟು ಗ್ರಾಹಕರು ಏಕಾಏಕಿ ಹೀಗೆ ಪ್ರೋತ್ಸಾಹಧನ ರದ್ದುಗೊಳಿಸಿದ್ದನ್ನು ಗಮನಿಸಿ ಆಶ್ಚರ್ಯಗೊಂಡಿದ್ದಾರೆ.
ಬೆಂಗಳೂರು: ಈ ತಿಂಗಳ ವಿದ್ಯುತ್ ಬಿಲ್ ಗಮನಿಸಿದ್ದೀರಾ.. ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆ ಜಾರಿಗೆ ಬರುವ ಮುನ್ನವೇ ನಿಮಗೆ ಸಿಗುತ್ತಿದ್ದ ಪ್ರೋತ್ಸಾಹಧನವೊಂದು ಸ್ಥಗಿತಗೊಂಡಿದೆ.
ಸೋಲಾರ್ ಬಳಕೆ ಪ್ರೋತ್ಸಾಹದ ಉದ್ದೇಶದಿಂದ ವಿದ್ಯುತ್ ಸರಬರಾಜು ಕಂಪೆನಿಗಳು ಸೋಲಾರ್ ವಾಟರ್ ಹೀಟರ್ ಬಳಕೆಗೆ ಪ್ರತಿ ತಿಂಗಳು 50 ರೂ.ವರೆಗೂ ಪ್ರೋತ್ಸಾಹಧನ ನೀಡುತ್ತಿದ್ದವು. ಇದು ಜೂನ್ ತಿಂಗಳು ಬಂದಿರುವ ವಿದ್ಯುತ್ ಬಿಲ್‌ನಲ್ಲಿ ಇಲ್ಲ. ಬಹಳಷ್ಟು ಗ್ರಾಹಕರು ಏಕಾಏಕಿ ಹೀಗೆ ಪ್ರೋತ್ಸಾಹಧನ ರದ್ದುಗೊಳಿಸಿದ್ದನ್ನು ಗಮನಿಸಿ ಆಶ್ಚರ್ಯಗೊಂಡಿದ್ದಾರೆ.
ಏನಿದು ಯೋಜನೆ, ಉಪಯೋಗ ಏನು?
ಮನೆಯ ಮೇಲ್ಛಾವಣಿ ಮೇಲೆ ಎಲ್ಲಿ ನೋಡಿದರೂ ಈಗ ಸೋಲಾರ್ ವಾಟರ್ ಹೀಟರ್ ಕಾಣುತ್ತವೆ. ಮನೆಯಲ್ಲಿ ಸೋಲಾರ್‌ನಿಂದ ಬಿಸಿ ನೀರು ಬಳಸುವುದು ಉದ್ದೇಶವಾದರೆ, ಇದರಿಂದ ವಿದ್ಯುತ್ ಉಳಿತಾಯವಾಗುತ್ತದೆ ಎನ್ನುವುದು ಮಧ್ಯಮ ವರ್ಗದವರ ನಂಬಿಕೆ. ಇದಕ್ಕೆ ಪೂರಕವಾಗಿ ವಿದ್ಯುತ್ ಸರಬರಾಜು ಕಂಪೆನಿಗಳು ಕೆಲ ವರ್ಷದಿಂದ ಸೋಲಾರ್ ಬಳಕೆ ಪ್ರೋತ್ಸಾಹಿಸಲು ಪ್ರೋತ್ಸಾಹಧನವನ್ನೂ ನೀಡುತ್ತಿವೆ.
ಆ ಪ್ರಕಾರ ಗ್ರಾಹಕ ಬಳಸುವ ವಿದ್ಯುತ್‌ನ ಪ್ರತಿ ಯೂನಿಟ್‌ಗೆ 50ಪೈಸೆವರೆಗೂ ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಗೊಳಿಸಲಾಯಿತು. ಅದು ಅತಿ ಹೆಚ್ಚು ಎಂದರೆ 50 ರೂ. ಪ್ರೋತ್ಸಾಹ ಧನ ಪಡೆಯಲು ಅವಕಾಶವಿತ್ತು. ಮನೆಗಳಲ್ಲಿ ಪ್ರತ್ಯೇಕ ಸೋಲಾರ್ ಹೀಟರ್‌ಗೆ ಈ ನಿಯಮ ಅನ್ವಯವಾಗುತ್ತಿತ್ತು. ಅಂದರೆ ಸೋಲಾರ್ ವಾಟರ್ ಹೀಟರ್ ಬಳಸುವ ಪ್ರತಿ ಮನೆಗೆ ವರ್ಷಕ್ಕೆ 600 ರೂ.ವರೆಗೂ ಉಳಿತಾಯವಾಗುತ್ತಿತ್ತು. ಅಪಾರ್ಟ್‌ಮೆಂಟ್‌ಗಳಲ್ಲಿ 100 ಮನೆ ಇದ್ದರೆ ಉಳಿತಾಯದ ಲೆಕ್ಕ 60,000. ಇದಕ್ಕೆ ಇದ್ದ ನಿಯಮ ಪ್ರತಿ ಸೋಲಾರ್ ಹೀಟರ್ ಸಾಮರ್ಥ್ಯ 100 ಲೀಟರ್‌ನದ್ದು ಇರಬೇಕು. ಕೆಲ ವರ್ಷದಿಂದ ಇದು ಜಾರಿಯಾಗಿ ಜನಪ್ರಿಯವೂ ಆಗಿತ್ತು.
ಏಕಾಏಕಿ ಬಂದ್ ಏಕೆ?
ಕರ್ನಾಟಕದಲ್ಲಿ 1 ಕೋಟಿಗೂ ಅಧಿಕ ಗ್ರಾಹಕರಿಗೆ ಸೋಲಾರ್ ವಾಟರ್ ಹೀಟರ್‌ನ ಲಾಭ ಸಿಗುತ್ತಿತ್ತು ಎನ್ನುವುದು ಎಸ್ಕಾಂಗಳು ನೀಡುವ ವಿವರಣೆ.
ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿಯೇ ಇದರ ಬಳಕೆ ಪ್ರಮಾಣ ಹೆಚ್ಚು ಇದೆ. ಇತ್ತೀಚಿನ ವರ್ಷಗಳಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ಮನೆ ನಿರ್ಮಿಸುವಾಗ ಸೋಲಾರ್ ಹೀಟರ್ ಕಡ್ಡಾಯ ಮಾಡಿರುವುದು ಬಳಕೆ ಪ್ರಮಾಣ ಹೆಚ್ಚಳಕ್ಕೆ ಕಾರಣ.
ಆದರೆ ಈ ಪ್ರೋತ್ಸಾಹಧನ ಈ ತಿಂಗಳಿನಿಂದ ಏಕಾಏಕಿ ಬಂದ್ ಆಗಿದೆ. ಬಹಳಷ್ಟು ಗ್ರಾಹಕರು ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಕರೆ ಮಾಡಿ ವಿಚಾರಿಸಿದರೆ ಇದು ಸರ್ಕಾರದ ನಿರ್ಧಾರ ಎನ್ನುವ ಉತ್ತರ ದೊರೆತಿದೆ.
ಸರ್ಕಾರವೇ ಈಗ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಜಾರಿಗೊಳಿಸುತ್ತಿದೆ. ಇದರಡಿ ಉಚಿತವಾಗಿ ವಿದ್ಯುತ್ ನೀಡುತ್ತಿದ್ದು, ಎಲ್ಲಾ ಪ್ರೋತ್ಸಾಹಧನಗಳನ್ನು ರದ್ದುಪಡಿಸಲಾಗುತ್ತಿದೆ. ಇದರಲ್ಲಿ ಮುಖ್ಯವಾಗಿ ಗ್ರಾಹಕರಿಗೆ ನೇರವಾಗಿ ನೀಡುತ್ತಿದ್ದ ಸೋಲಾರ್ ವಾಟರ್ ಹೀಟರ್ ಪ್ರೋತ್ಸಾಹಧನ ನಿಲ್ಲಿಸಲಾಗಿದೆ ಎನ್ನುವ ವಿವರಣೆಯನ್ನು ನೀಡಲಾಗುತ್ತಿದೆ.
ಕರ್ನಾಟಕದಲ್ಲಿ ಜನ ನಾನಾ ರೂಪದಲ್ಲಿ ಸೋಲಾರ್ ಬಳಕೆ ಮಾಡುವುದನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದಕ್ಕೆ ಪ್ರೋತ್ಸಾಹಧನವನ್ನೂ ನೀಡಲಾಗುತ್ತಿದೆ. ಈಗ ಸೋಲಾರ್ ವಿದ್ಯುತ್ ಬಳಕೆ ಮಾಡುವವರ ಪ್ರಮಾಣ ಅಧಿಕವಾಗಿದೆ. ಬಳಕೆ ಜತೆಗೆ ರೂಫ್ ಟಾಪ್ ನಂತ ಯೋಜನೆಯಿಂದ ವಿದ್ಯುತ್ ಉತ್ಪಾದಿಸುವುದಕ್ಕೂ ಒತ್ತು ನೀಡಲಾಗಿದೆ. ಈಗ ಗೃಹ ಜ್ಯೋತಿ ಯೋಜನೆ ಜಾರಿಗೊಂಡ ನಂತರ ಪ್ರೋತ್ಸಾಹಧನ ಕಡಿತ ಮಾಡಲಾಗುತ್ತಿದ್ದು, ಸೋಲಾರ್ ವಾಟರ್ ಹೀಟರ್‌ಗೆ ನೀಡುತ್ತಿದ್ದ 50 ರೂ. ಪ್ರೋತ್ಸಾಹಧನವೂ ಈ ತಿಂಗಳಿನಿಂದ ಸ್ಥಗಿತಗೊಂಡಿದೆ ಎಂದು ವಿದ್ಯುತ್ ಕಂಪೆನಿಯ ಅಧಿಕಾರಿಯೊಬ್ಬರು ಖಚಿತಪಡಿಸಿದರು.
ವಿಭಾಗ