ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ, ಟಾಸ್ಕ್‌ಫೋರ್ಸ್‌ ಸಭೆ ಮಾಡಿ ಅನುದಾನ ಬಳಸಿ: ಡಿಸಿಗಳಿಗೆ ಸಿಎಂ ಸಿದ್ದರಾಮಯ್ಯ ತಾಕೀತು
ಕನ್ನಡ ಸುದ್ದಿ  /  ಕರ್ನಾಟಕ  /  ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ, ಟಾಸ್ಕ್‌ಫೋರ್ಸ್‌ ಸಭೆ ಮಾಡಿ ಅನುದಾನ ಬಳಸಿ: ಡಿಸಿಗಳಿಗೆ ಸಿಎಂ ಸಿದ್ದರಾಮಯ್ಯ ತಾಕೀತು

ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ, ಟಾಸ್ಕ್‌ಫೋರ್ಸ್‌ ಸಭೆ ಮಾಡಿ ಅನುದಾನ ಬಳಸಿ: ಡಿಸಿಗಳಿಗೆ ಸಿಎಂ ಸಿದ್ದರಾಮಯ್ಯ ತಾಕೀತು

ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ಬೇಸಿಗೆ ಬವಣೆ ತಪ್ಪಿಸಿ ಶುದ್ದ ನೀರಿನ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳು ಸನ್ನದ್ದರಾಗಿರಬೇಕು ಎನ್ನುವ ಸೂಚನೆಯನ್ನು ನೀಡಲಾಗಿದೆ.

ಬೆಂಗಳೂರಿನಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನೀರಿಗೆ ಸಂಬಂಧಿಸಿದ ಸಭೆ ನಡೆಯಿತು.
ಬೆಂಗಳೂರಿನಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನೀರಿಗೆ ಸಂಬಂಧಿಸಿದ ಸಭೆ ನಡೆಯಿತು.

ಬೆಂಗಳೂರು: ಶುದ್ದ ಕುಡಿಯುವ ನೀರಿಗೆ ರಾಜ್ಯದ ಒಂದೇ ಒಂದು ಗ್ರಾಮದಲ್ಲೂ ಸಮಸ್ಯೆ ಆಗಬಾರದು. ಜಿಲ್ಲೆಗಳಲ್ಲಿ ತುರ್ತು ಕುಡಿಯುವ ನೀರಿನ ಪೂರೈಕೆಗೆ ಜಿಲ್ಲಾಧಿಕಾರಿಗಳು ಕ್ರಿಯಾ ಯೋಜನೆ ರೂಪಿಸಿ, ಟಾಸ್ಕ್ ಫೋರ್ಸ್‌ನಿಂದ ಅನುಮೋದನೆ ಪಡೆದುಕೊಂಡು ಅನುಷ್ಠಾನಗೊಳಿಸಿ. ಹಣ ಕಾಸಿನ ಕೊರತೆ ಇಲ್ಲ. ಎಷ್ಟು ಬೇಕಾದರೂ ಹಣ ಕೊಡುತ್ತೇವೆ. ಸಮಸ್ಯೆ ಶುರುವಾಗುವ ಮೊದಲೇ ಸಭೆ ನಡೆಸಿ ಸಮರೋಪಾದಿ ರೀತಿಯಲ್ಲಿ ತಯಾರಿ ಮಾಡಿಕೊಳ್ಳಿ.ಈ ವರ್ಷ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಆದ್ದರಿಂದ ಮೇ ತಿಂಗಳಿನಲ್ಲಿ ನೀರಿನ ಸಮಸ್ಯೆಗಳಿಗೆ ಡಿಸಿಗಳು ಹಾಗೂ ಉಸ್ತುವಾರಿ ಕಾರ್ಯದರ್ಶಿಗಳು ಯೋಜನೆ ರೂಪಿಸಿಕೊಳ್ಳಬೇಕು.

ಇದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ ಪರಿ.

ರಾಜ್ಯದಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು. ಕುಡಿಯುವ ನೀರಿನ ನಿರ್ವಹಣೆಗೆ ಯಾವುದೇ ಹಣಕಾಸಿನ ಕೊರತೆ ಇರುವುದಿಲ್ಲ. ಪಂಚಾಯತ್ ರಾಜ್ ಇಲಾಖೆಗೆ 60 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲಾಗಿದೆ. ಪ್ರತಿ ವರ್ಷ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸಲು ಯೋಜನೆ ರೂಪಿಸಬೇಕು. ಅಗತ್ಯಬಿದ್ದರೆ ಮಾತ್ರ ಬೋರ್ವೆಲ್ಗಳನ್ನು ಕೊರೆಯಬೇಕು. ಯಾವುದೇ ಕಾರಣಕ್ಕೂ ಅನಗತ್ಯವಾಗಿ ಬೋರ್ವೆಲ್ ಕೊರೆದು ವೆಚ್ಚ ಮಾಡಬಾರದು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ವಾಡಿಕೆಗಿಂತ ಶೇಕಡಾ 55ರಷ್ಟು ಮಾನ್ಸೂನ್ ಪೂರ್ವ ಹೆಚ್ಚು ಮಳೆಯಾಗಿದೆ. ವಾಡಿಕೆಗಿಂತ ಯಾವುದೇ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗಿಲ್ಲ. 27 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಎಲ್ಲಾ ಜಲಾಶಯಗಳಲ್ಲಿ ಶೇ.50 ರಷ್ಟು ಹೆಚ್ಚಿನ ನೀರಿನ ಸಂಗ್ರಹವಿದೆ. ಮಾನ್ಸೂನ್ ವಿಳಂಬವಾದರೆ 6319 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಸ್ತುತ 551 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, 123ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಅಗತ್ಯ ಸಂದರ್ಭದಲ್ಲಿ ನೀರು ಪಡೆಯಲು ಈಗಾಗಲೇ 3ಸಾವಿರ ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಲಾಗಿದ್ದು, 480 ಬೋರ್‌ವೆಲ್‌ಗಳನ್ನು ಖಾಸಗಿಯವರಿಂದ ಬಾಡಿಗೆ ಪಡೆದು ನೀರು ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಣೆ ಕೊಟ್ಟರು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.