Summer School Holidays 2025: ಕರ್ನಾಟಕದಲ್ಲಿ ಈ ಬಾರಿ ಶಾಲೆಗಳಿಗೆ ಬೇಸಿಗೆ ರಜೆ ಎಷ್ಟು ದಿನ ಇರಲಿದೆ, ಯಾವಾಗಿನಿಂದ ರಜೆ ಶುರು
Summer School Holidays 2025: ಈಗಾಗಲೇ ಕರ್ನಾಟಕದಲ್ಲಿ ಪರೀಕ್ಷೆಗಳು ಪ್ರಗತಿಯಲ್ಲಿದ್ದು, ಬೇಸಿಗೆ ರಜೆಗಳು ಬಹುತೇಕ ಏಪ್ರಿಲ್ 11ರಿಂದಲೇ ಆರಂಭವಾಗಲಿವೆ.

Summer School Holidays 2025: ಕರ್ನಾಟಕದಲ್ಲಿ ಈಗಾಗಲೇ ವಿವಿಧ ಹಂತಗಳಲ್ಲಿ ಪರೀಕ್ಷೆಗಳು ಶುರುವಾಗಿವೆ. ಪಿಯುಸಿ ಪರೀಕ್ಷೆಗಳು ಮುಗಿಯುವ ಹಂತಕ್ಕೆ ಬಂದಿದ್ದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಸದ್ಯದಲ್ಲೇ ಆರಂಭವಾಗಲಿವೆ. ಇದಲ್ಲದೇ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿವಿಧ ತರಗತಿಗಳ ಪರೀಕ್ಷೆಗಳು ಶಾಲಾ ಹಂತದಲ್ಲಿ ಆರಂಭಗೊಂಡಿವೆ. ಎಸ್‌ಎಸ್‌ಎಲ್‌ಸಿ ಹೊರತುಪಡಿಸಿ ಬಹುತೇಕ ಮಾರ್ಚ್ ಒಳಗೆ ಎಲ್ಲಾ ಪರೀಕ್ಷೆಗಳು ಮುಗಿಯಲಿವೆ. ಈ ಬಾರಿಯ ಬೇಸಿಗೆ ರಜೆಯ ದಿನಾಂಕಗಳನ್ನು ಪ್ರಕಟಿಸುವ ಸಮಯವೂ ಹತ್ತಿರ ಬರುತ್ತಿದೆ. ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಪ್ರಕಾರ ಈ ವರ್ಷದ ಬೇಸಿಗೆ ರಜೆಗಳು ಬಹುತೇಕ ಏಪ್ರಿಲ್‌ನಲ್ಲಿಯೇ ಆರಂಭವಾಗಲಿವೆ. ಮೇ ಅಂತ್ಯದವರೆಗೂ ರಜೆ ಇರಲಿದೆ. ಕಳೆದ ವರ್ಷದ ಶೈಕ್ಷಣಿಕ ಅವಧಿ ಅವಧಿಯಲ್ಲಿಯೇ ಹೊರಡಿಸಿದ್ದ ಶಿಕ್ಷಣ ಇಲಾಖೆಯ ಸುತ್ತೋಲೆಯ ಪ್ರಕಾರ 2025ನೇ ಸಾಲಿನ ಬೇಸಿಗೆ ರಜೆಗಳು ಏಪ್ರಿಲ್ 11ರಿಂದಲೇ ಶುರುವಾಗಲಿವೆ. 2025ರ ಮೇ 28 ರವರೆಗೆ ರಜೆಗಳು ಇರಲಿವೆ.
ಪ್ರತಿ ವರ್ಷ ಶೈಕ್ಷಣಿಕ ವರ್ಷ ಮುಗಿಯುವ ಮುನ್ನವೇ ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು ಮುಂದಿನ ಶೈಕ್ಷಣಿಕ ವರ್ಷದ ಕ್ರಿಯಾಯೋಜನೆಯನ್ನು ಸಿದ್ದಪಡಿಸುತ್ತದೆ. ಶಾಲೆ ಆರಂಭ, ರಜೆಗಳು, ಅದರಲ್ಲೂ ದಸರಾ ಹಾಗೂ ಬೇಸಿಗೆ ರಜೆಯ ವಿವರಗಳನ್ನು ಪ್ರಕಟಿಸುತ್ತದೆ.
ಮೊದಲನೇ ಅವಧಿ ಹಾಗು ಎರಡನೇ ಅವಧಿಯಲ್ಲಿ ಶಾಲೆಗಳ ಕರ್ತವ್ಯದ ದಿನಗಳ ವಿವರವನ್ನು ಸುತ್ತೋಲೆಯಲ್ಲಿ ಪ್ರಕಟಿಸಲಾಗುತ್ತದೆ. ಸುತ್ತೋಲೆ ಆಧರಿಸಿಯೇ ಶಿಕ್ಷಣ ಇಲಾಖೆಯ ಜಿಲ್ಲಾ, ತಾಲ್ಲೂಕು ಹಾಗು ವಲಯ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಶಾಲೆಗಳ ಮುಖ್ಯ ಶಿಕ್ಷಕರು ಹಾಗು ಶಿಕ್ಷಕ ವೃಂದ ವರ್ಷ ಶೈಕ್ಷಣಿಕ ಕಾರ್ಯಕ್ರಮ ಯೋಜಿಸಿಕೊಳ್ಳುತ್ತಾರೆ.
ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ಬೇಸಿಗೆ ರಜೆ ಶುರುವಾಗಿ ಜೂನ್‌ಗಿಂತ ಮೊದಲೇ ಶಾಲೆಗಳು ಶುರುವಾಗುತ್ತವೆ. ಅಕ್ಟೋಬರ್‌ನಲ್ಲಿ ಎರಡು ವಾರ ದಸರಾ ರಜೆಯನ್ನು ನೀಡಲಾಗುತ್ತದೆ. ಅಕ್ಟೋಬರ್‌ನಲ್ಲಿ ತರಗತಿಗಳು ಪುನಾರಂಭಗೊಂಡು ಫೆಬ್ರವರಿ ಮಾರ್ಚ್‌ನಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಏಪ್ರಿಲ್‌ನಲ್ಲಿ ಫಲಿತಾಂಶ ಪ್ರಕಟಿಸಿ ರಜೆಯನ್ನು ನೀಡಲಾಗುತ್ತದೆ.
ಮೇ ತಿಂಗಳಿನ ಕೊನೆಯ ವಾರದಲ್ಲಿ ಒಂದು ದಿನ ನಿಗದಿಪಡಿಸಿ ಶಾಲೆಗಳ ಸ್ವಚ್ಛತೆ, ಮಕ್ಕಳ ಪ್ರವೇಶಾತಿ ಸೇರಿದಂತೆ ಚಟುವಟಿಕೆಗಳನ್ನು ನೋಡಿಕೊಂಡು ಶಾಲಾರಂಭದ ದಿನದ ನಿಗದಿ ಮಾಡಲಾಗುತ್ತದೆ. ಇದು ಹಲವಾರು ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ.
ಕಳೆದ ವರ್ಷ 2024 ರ ಮಾರ್ಚ್ ಅಂತ್ಯಕ್ಕೆ ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆಯಲ್ಲಿ 2025ರ ಏಪ್ರಿಲ್ 11ರಿಂದ ಬೇಸಿಗೆ ರಜೆ ಆರಂಭವಾಗಲಿದೆ. ಮೇ 28ರವರಗೆ ರಜೆ ಇರಲಿದೆ. ಮೇ 29ರಿಂದಲೇ ತರಗತಿ ಆರಂಭಿಸುವ ಮಾಹಿತಿ ನೀಡಲಾಗಿತ್ತು. ಸದ್ಯದಲ್ಲೇ ಮುಂದಿನ ಶೈಕ್ಷಣಿಕ ವರ್ಷದ ರಜೆ ವಿವರವನ್ನು ಹೊರಡಿಸಲಿದ್ದು. ಇದೇ ದಿನಾಂಕಗಳು ಅಂತಿಮವಾಗಲಿವೆ. ಈ ಬಾರಿ ಏಪ್ರಿಲ್ 10 ಮಹಾವೀರ ಜಯಂತಿ ಇರುವುದರಿಂದ ಒಂದು ದಿನ ಮೊದಲೇ ಅಂದರೆ ಏಪ್ರಿಲ್ 9 ರಂದೇ ಫಲಿತಾಂಶ ಪ್ರಕಟಿಸಿ ರಜೆ ಘೋಷಿಸಬಹುದು. ಅಧಿಕೃತ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎನ್ನುವುದು ಶಿಕ್ಷಣ ಇಲಾಖೆಯ ಅಧಿಕಾರಿಗಳು ನೀಡುವ ವಿವರಣೆ.
ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾದರೆ ಕಚೇರಿ ಸಮಯ ಬದಲಾಗಲಿದೆ. ಶಾಲೆಗಳ ರಜೆಯ ವಿಚಾರವನ್ನು ಆಯಾ ಜಿಲ್ಲಾ ಹಂತದಲ್ಲಿ ಕೈಗೊಳ್ಳಲಾಗುತ್ತದೆ. ಈ ಬಾರಿ ಈವರೆಗೂ ಅಂತಹ ಪ್ರಸ್ತಾವನೆ ಶಿಕ್ಷಣ ಇಲಾಖೆಯಿಂದ ಹೋಗಿಲ್ಲ. ಎಂದಿನಂತೆಯೇ ತರಗತಿಗಳು ನಡೆದಿದ್ದು, ಬೇಸಿಗೆ ರಜೆಗಳು ಏಪ್ರಿಲ್ ಎರಡನೇ ವಾರದಲ್ಲಿ ಆರಂಭವಾಗಬಹುದು ಎಂದು ಕಲಬುರಗಿ ದಕ್ಷಿಣ ವಲಯದ ಬಿಇಒ ವಿಜಯಕುಮಾರ್ ಜಮಖಂಡಿ ಹೇಳುತ್ತಾರೆ.
