Textiles loan: ಜವಳಿ ಸಿದ್ದ ಉಡುಪು ಘಟಕ ಸ್ಥಾಪಿಸುವ ಉದ್ದೇಶವಿದೆಯೇ, ಸಣ್ಣ, ಅತಿ ಸಣ್ಣ ಘಟಕ ಸ್ಥಾಪನೆಗೆ ಸಿಗಲಿದೆ ಸಾಲ ಸೌಲಭ್ಯ
ಕರ್ನಾಟಕದಲ್ಲಿ ಜವಳಿ ಸಿದ್ದ ಉಡುಪು ಘಟಕಗಳನ್ನು ಸ್ಥಾಪಿಸಬೇಕು ಎನ್ನುವ ಯೋಚನೆ ನಿಮ್ಮಲ್ಲಿದ್ದರೆ ಇದಕ್ಕೆ ಕರ್ನಾಟಕ ಜವಳಿ ಇಲಾಖೆಯು ಸಾಲ ಸೌಲಭ್ಯ ನೀಡಲಿದೆ.
ಬೆಂಗಳೂರು: ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ, ಬೆಂಗಳೂರು ಅವರು 2024-25ನೇ ಸಾಲಿಗೆ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಸಣ್ಣ ಮತ್ತು ಅತಿ ಸಣ್ಣ (ಎಸ್.ಎಂ.ಇ) ಘಟಕಗಳನ್ನು ಸ್ಥಾಪಿಸಲು ರಾಜ್ಯ ವಲಯದ ನೇಕಾರರ ವಿಶೇಷ ಪ್ಯಾಕೇಜ್ ಯೋಜನೆ-ವಿಶೇಷ ಘಟಕ ಯೋಜನೆಯಡಿ ಭೌತಿಕ–03 ಹಾಗೂ ಗಿರಿಜನ ಉಪಯೋಜನೆಯಡಿ ಭೌತಿಕ–01 ಗುರಿ ನಿಗಧಿಪಡಿಸಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಅದರಂತೆ ಈ ಯೋಜನೆಯಡಿ ಸ್ಥಾಪಿತವಾಗುವ ಜವಳಿ/ಸಿದ್ಧ ಉಡುಪು ತಯಾರಿಕಾ ಘಟಕಗಳಿಗೆ ಸರ್ಕಾರದ ಸಹಾಯಧನ ಶೇ.75 ಅಥವಾ ಗರಿಷ್ಠ 2 ಕೋಟಿಗಳಿಗೆ ಮಿತಿಗೊಳಿಸಲಾಗುವುದು ಎಂದು ಕರ್ನಾಟಕ ಜವಳಿ ಆಯುಕ್ತಾಲಯದ ಪ್ರಕಟಣೆ ತಿಳಿಸಿದೆ.
ಸಾಲಾಧಾರಿತ ಬಂಡವಾಳ ಸಹಾಯಧನ ಶೇ.75 ಹಾಗೂ ಘಟಕಗಳು ಬ್ಯಾಂಕ್‍ನಿಂದ ಪಡೆದ ಸಾಲಕ್ಕೆ ಬಡ್ಡಿ ಸಹಾಯಧನ ಶೇ.15 ಒಟ್ಟಾರೆ ಸರ್ಕಾರದಿಂದ ಘಟಕಕ್ಕೆ ದೊರಕುವ ಸಹಾಯಧನ ಶೇ.90 ರಷ್ಟು ಇದ್ದು, ಜಿಲ್ಲೆಯಲ್ಲಿ ಜವಳಿ/ ಸಿದ್ಧ ಉಡುಪು ತಯಾರಿಕೆ ವೃತ್ತಿಯಲ್ಲಿ ಅನುಭವ ಇದ್ದು ಹೊಸದಾಗಿ ಜವಳಿ/ ಸಿದ್ಧ ಉಡುಪು ತಯಾರಿಕಾ ಘಟಕವನ್ನು ಸ್ಥಾಪಿಸಲು ಇಚ್ಚಿಸುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ಪಂಗಡದ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಆಯಾ ಜಿಲೆಯ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ ಅಥವಾ ಕಚೇರಿ ಮುಖ್ಯಸ್ಥರನ್ನು ಭೇಟಿ ಮಾಡಿ ಮಾಹಿತಿ ಪಡೆಯಬಹುದು. ಕಚೇರಿಯ ಜತೆಗೆ ವೆಬ್‌ಸೈಟ್ ಮೂಲಕವೂ ಯೋಜನೆಯ ವಿವರ, ಅರ್ಜಿ ಸಲ್ಲಿಸುವ ಕುರಿತು ವಿವರ ಪಡೆದುಕೊಳ್ಳಬಹುದು.
ಏನೇನು ನಿಯಮ
2019 ನವೆಂಬರ್ 04 ಹಾಗೂ ನಂತರ ಬಂಡವಾಳ ಹೂಡಿಕೆ ಮಾಡಿ ಸ್ಥಾಪಿಸ್ಪಡುವ ಹೊಸ/ವಿಸ್ತರಣೆ/ ಆಧುನಿಕರಣ ಜವಳಿ/ ಸಿದ್ದ ಉಡುಪು ಘಟಕಗಳು ಈ ಯೋಜನೆಯಡಿ ರಿಯಾಯಿತಿ ಪ್ರೋತ್ಸಾಹನಗಳನ್ನು ಪಡೆಯಲು ಅರ್ಹತೆ ಹೊಂದಿರುತ್ತಾರೆ.
ಉದ್ದಿಮೆದಾರರು ಯೋಜನಾ ಮೊತ್ತದ ಕನಿಷ್ಠ ಶೇ.50 ರಷ್ಟು ಸಾಲವನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಪಡೆದಿರಬೇಕು ಎನ್ನುವ ನಿಯಮವಿದೆ.
ಎಮ್.ಎಸ್.ಎಂ.ಇ ಘಟಕಗಳಿಗೆ ಸಾಲ ಆಧಾರಿತ ಬಂಡವಾಳ ಸಹಾಯಧನ ಪಡೆಯಬಹುದು.
ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ವಿಕಲಚೇತನರು/ಅಲ್ಪಸಂಖ್ಯಾತರು/ಮಾಜಿ ಸೈನಿಕರು/ಮಹಿಳೆಯರಿಗೆ ಶೇ.5 ರಷ್ಟು ಹೆಚ್ಚುವರಿ ಸಹಾಯಧನ ಪಡೆಯಲು ಅವಕಾಶವಿದೆ. ಅರ್ಜಿ ಸಲ್ಲಿಸುವ ವಿಧಾನ (ಅನ್‍ಲೈನ್/ ಆಫ್‍ಲೈನ್) ಸಲ್ಲಿಸಬೇಕಾದ ದಾಖಲೆಗಳನ್ನು ಇಲಾಖೆ ವೆಬ್‌ಸೈಟ್ www.karnatakadht.org ನಲ್ಲಿ ತಿಳಿಸಲಾಗಿದೆ.
ಇಲ್ಲಿ ಭೇಟಿ ನೀಡಿ
ಆಫ್‍ಲೈನ್ ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು. ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲೆಯ ಉಪ/ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ ಕಚೇರಿ ಭೇಟಿ ಮಾಡಿ ವಿವರ ಪಡೆದುಕೊಳ್ಳಬಹುದು.
ಮಾಹಿತಿಗೆ ಜವಳಿ ಅಭಿವೃದ್ಧಿ ಆಯಕ್ತರು ಹಾಗೂ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ನಂ.86, ಶುಭೋದಯ ಕಾಂಪ್ಲೆಕ್ಸ್, ರೈಲ್ವೇ ಸಮಾಂನಾಂತರ ರಸ್ತೆ, ಕುಮಾರ ಪಾರ್ಕ್ ಪಶ್ಚಿಮ, ಬೆಂಗಳೂರು-560020 ಇಲ್ಲಿಯೂ ಭೇಟಿ ಮಾಡಿಬಹುದು. ಸಹಾಯವಾಣಿ: 080-23563903/ 080-23568228/ 080 235 61628