ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಿ ತಮನ್ನಾ ನೇಮಿಸಿದ್ದಕ್ಕೆ ಟೀಕೆ ಮಾಡುತ್ತಿರುವುದು ನಿಜಕ್ಕೂ ಬಾಲಿಶ – ರಮೇಶ ದೊಡ್ಡಪುರ ಬರಹ
ರಮೇಶ್ ದೊಡ್ಡಪುರ ಬರಹ: ರಾಯಭಾರಿಯೇ ಬೇಡ ಎನ್ನುವ ರಮ್ಯಾ ಮತ್ತು ಇನ್ನಿತರರ ಮಾತು ಬಾಲಿಶವಾದದ್ದು. ಹಾಗಾದರೆ ದಿವಂಗತ ಪುನೀತ್ ರಾಜಕುಮಾರ್ ಅವರು ನಂದಿನಿ ಹಾಲಿಗೆ ಏಕೆ ರಾಯಭಾರಿ ಆಗಿದ್ದರು? ಸ್ವತಃ ರಮ್ಯಾ ಅವರೂ ಪುನೀತ್ ರಾಜಕುಮಾರ್ ಜತೆಗೂಡಿ ಸರ್ಕಾರದ ಎಲ್ಇಡಿ ಬಲ್ಬ್ ಯೋಜನೆಗೆ ಏಕೆ ರಾಯಭಾರಿ ಆಗಿದ್ದರು?

ಬಹುಭಾಷಾ ಚಿತ್ರನಟಿ ತಮನ್ನಾ ಭಾಟಿಯಾ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್‌ಡಿಎಲ್) ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿರುವುದು ಈಗ ವಿವಾದವಾಗಿದೆ. ಕೆಎಸ್‌ಡಿಎಲ್‌ನ ಈ ನಿರ್ಧಾರಕ್ಕೆ ವ್ಯಕ್ತವಾಗಿರುವ ಆಕ್ಷೇಪಗಳು ಈ ಕೆಳಕಂಡಂತಿವೆ. 1. ಕನ್ನಡದ ನಟಿಯರನ್ನು ಬಿಟ್ಟು ಬೇರೆ ರಾಜ್ಯದ ನಟಿಯನ್ನು ಆಯ್ಕೆ ಮಾಡಿಕೊಂಡಿದ್ದು, ಕನ್ನಡದ ಅಸ್ಮಿತೆಗೆ ಧಕ್ಕೆ. 2. ಎರಡು ವರ್ಷಕ್ಕೆ ಆರೂವರೆ ಕೋಟಿ ರೂ. ನೀಡಿರುವುದು ಕರ್ನಾಟಕದ ತೆರಿಗೆದಾರರ ಹಣದ ಅಪವ್ಯಯ.
ಇದಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಉತ್ತರ ನೀಡಿದ್ದಾರೆ. ನಾನು ಕನ್ನಡದವನು, ಅಸ್ಮಿತೆ ಗೊತ್ತಿದೆ ಎನ್ನುವ ಮಾತುಗಳನ್ನು ಬಿಟ್ಟು ನಿಜವಾದ ಔದ್ಯಮಿಕ ಮಾತುಗಳನ್ನು ನೋಡಬಹುದು. ಮೊದಲ ಪ್ರಶ್ನೆಗೆ ಅವರ ಉತ್ತರ ಹೀಗಿದೆ. ʼತಮನ್ನಾ ಅವರನ್ನು ನೇಮಿಸಿಕೊಳ್ಳುವ ಮೊದಲು ನಾವು ಕನ್ನಡದವರೇ ಆದ ದೀಪಿಕಾ ಪಡುಕೋಣೆ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಸಂಪರ್ಕಿಸಿದೆವು. ಜೊತೆಗೆ ಶ್ರೀಲೀಲಾ, ಪೂಜಾ ಹೆಗಡೆ, ಕಿಯಾರ ಅಡ್ವಾಣಿ ಅವರನ್ನೂ ಕೇಳಲಾಗಿದೆ. ದೀಪಿಕಾ ಅವರು ಅವರದೇ ಉತ್ಪನ್ನಗಳ ಪ್ರಚಾರದಲ್ಲಿ ಇದ್ದಾರೆ. ಹೀಗಾಗಿ ಬರಲಿಲ್ಲ. ಉಳಿದವರು ಬೇರೆ ಬೇರೆ ಸೌಂದರ್ಯವರ್ಧಕಗಳು, ಕ್ರೀಮುಗಳು ಮತ್ತು ಸಾಬೂನುಗಳಿಗೆ ರೂಪದರ್ಶಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮುಂದಿನ ಎರಡು ವರ್ಷ ಅವರಾರೂ ತಮಗೆ ಬಿಡುವಿಲ್ಲ ಎಂದು ತಿಳಿಸಿದರುʼ ಎಂದು ಸಚಿವರು ಹೇಳಿದ್ದಾರೆ.
ಇನ್ನು ಹಣದ ವೆಚ್ಚದ ಕುರಿತು ಟೀಕೆಗಳು. ಅದಕ್ಕೆ ಸಚಿವರ ನೇರ ಉತ್ತರ ಇಲ್ಲದಿದ್ದರೂ ಅವರ ಒಟ್ಟಾರೆ ಉತ್ತರದಲ್ಲಿ ಕಂಡುಕೊಳ್ಳಬಹುದು
1. ‘ಪರಿಣತರ ತಂಡದ ತೀರ್ಮಾನದಂತೆ ತಮನ್ನಾ ಭಾಟಿಯಾ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲು ತೀರ್ಮಾನಿಸಲಾಗಿದೆ‘.
2. ‘ಈಗ ಕೆಎಸ್‌ಡಿಎಲ್‌ನಲ್ಲಿ ಉತ್ಪಾದನೆ ಶೇ 40 ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ನಾವೇನೂ ಹೊಸ ಯಂತ್ರೋಪಕರಣಗಳನ್ನು ಖರೀದಿಸಿಲ್ಲ. ಜತೆಗೆ ಎಫ್‌ಎಂಸಿಜಿ ವಲಯದಲ್ಲಿ ಸಂಸ್ಥೆಯ ಬೆಳವಣಿಗೆ ಶೇ 15ರಷ್ಟಿದೆ. ಈ ವಿಚಾರದಲ್ಲಿ ಗೋದ್ರೇಜ್ (ಶೇ.11), ಹಿಂದೂಸ್ತಾನ್ ಲಿವರ್ಸ್ (ಶೇ 9), ಐಟಿಸಿ (ಶೇಕಡ 8), ವಿಪ್ರೋ (ಶೇಕಡ 7) ಮುಂತಾದ ಉದ್ದಿಮೆಗಳನ್ನೂ ಕೆಎಸ್‌ಡಿಎಲ್ ಹಿಂದಿಕ್ಕಿದೆ. ನಾವು ಕೆಎಸ್‌ಡಿಎಲ್ ವಹಿವಾಟನ್ನು ಮುಂದಿನ ಮೂರು ವರ್ಷಗಳಲ್ಲಿ 5,000 ಕೋಟಿ ರೂ.ಗೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ. ಆಗ ಹಾಲಿವುಡ್ ನಟಿಯೊಬ್ಬರನ್ನೇ ಪ್ರಚಾರ ರಾಯಭಾರಿಯನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಅಂತಹ ಪರಿಸ್ಥಿತಿ ಬರಲೆಂದು ನಾನು ಆಶಿಸುತ್ತೇನೆʼ
ಅಂದರೆ ಕೆಎಸ್‌ಡಿಎಲ್‌ಗೆ ಒಂದು ಉದ್ಯಮದ ಯೋಜನೆ ಇದೆ. ಅದು ಈಗಿನ ವಾರ್ಷಿಕ 1,700 ಕೋಟಿ ರೂ. ವಹಿವಾಟನ್ನು 2028ರ ವೇಳೆಗೆ 5,000 ಕೋಟಿ ರೂ.ಗೆ ಒಯ್ಯಲು ಯೋಜನೆ ಹೊಂದಿದ್ದಾರೆ. ಕರ್ನಾಟಕದ ಬ್ರ್ಯಾಂಡ್ ಒಂದು ಜಾಗತಿಕವಾಗಿ ಬೆಳೆಯುತ್ತದೆ ಎಂದರೆ ತಪ್ಪೇನೂ ಇಲ್ಲವಲ್ಲ? ಇನ್ನು, ರಾಯಭಾರಿ ಬೇಕಾಗಿಲ್ಲ, ಕನ್ನಡಿಗರೇ ಸೇರಿ ರಾಯಭಾರಿಗಳಾಗುತ್ತಾರೆ ಎಂಬ ಚಿತ್ರನಟಿ ರಮ್ಯಾ ಅವರ ಹೇಳಿಕೆಯೊಂದು ಬಂದಿದೆ. ಎಂ.ಬಿ. ಪಾಟೀಲರು ಹೇಳುವ ಪ್ರಕಾರ ‘ಕೆಎಸ್‌ಡಿಎಲ್ ವಹಿವಾಟು 1,700 ಕೋಟಿ ರೂ.ಗೂ ಹೆಚ್ಚಾಗಿದೆ. ಇದರ ಪೈಕಿ ರಾಜ್ಯದಲ್ಲಿ ನಡೆದಿರುವ ವಹಿವಾಟಿನ ಮೊತ್ತ 320 ಕೋಟಿ ರೂ.‘. ಅಂದರೆ ಕೆಎಸ್‌ಡಿಎಲ್ ಈಗಾಗಲೇ ಅತಿ ಹೆಚ್ಚು ಲಾಭ ಮಾಡುತ್ತಿರುವುದು ಕರ್ನಾಟಕದಿಂದ ಆಚೆಗೇ. ಕರ್ನಾಟಕದಿಂದ ಆಚೆಗೆ ಎನ್ನುವುದಕ್ಕಿಂತಲೂ ಮುಖ್ಯವಾಗಿ ಕೆಎಸ್‌ಡಿಎಲ್‌ನ ಪ್ರಮುಖ ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಸಾಮಾನ್ಯ ಕೆಳ ಮಧ್ಯಮ ವರ್ಗ ಕೊಳ್ಳಲು ಸಾಧ್ಯವೇ ಇಲ್ಲ. ಅದು ಸಂಸ್ಥೆಯ ತಪ್ಪಲ್ಲ, ಅದು ಬಳಸುವ ಶುದ್ಧ ಕಚ್ಚಾ ವಸ್ತುಗಳಿಗೆ ಅಷ್ಟು ಬೆಲೆ ಆಗುತ್ತದೆ. ಸಾಮಾನ್ಯ ಜನರಿಗೆ ದೊರಕುವ ತಥಾಕಥಿತ ಸ್ಯಾಂಡಲ್ ಸೋಪ್‌ಗಳಲ್ಲಿ ನಿಜವಾದ ಗಂಧ ಎಷ್ಟಿರುತ್ತದೆ, ಗಂಧದ ಸುವಾಸನೆ ಬೀರುವ ವಸ್ತುಗಳು ಎಷ್ಟಿರುತ್ತವೆ ಎನ್ನುವುದನ್ನು ಪ್ಯಾಕ್‌ನ ಹಿಂಭಾಗದಲ್ಲಿ ನೋಡಿದರೆ ತಿಳಿಯುತ್ತದೆ. ಹಾಗಾಗಿ ಮೈಸೂರು ಸ್ಯಾಂಡಲ್ ಸೋಪ್ ಎನ್ನುವುದು ಮಧ್ಯಮ ಹಾಗೂ ಶ್ರೀಮಂತ ವರ್ಗದ ಸೋಪ್ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಅದಕ್ಕೆ ಅದೇ ರೀತಿಯಲ್ಲಿ ಮಾರ್ಕೆಟಿಂಗ್, ಪ್ಯಾಕಿಂಗ್, ಮುಖ್ಯವಾಗಿ ʼಪ್ಲೇಸ್ಮೆಂಟ್ʼ ಮಾಡಬೇಕು.
ರಮ್ಯಾ ಅವರು ಹೇಳಿದಂತೆ ಕನ್ನಡಿಗರೆಲ್ಲ ರಾಯಭಾರಿಗಳಾಗಲು ಸಾಧ್ಯವಿದ್ದಿದ್ದರೆ, ಈಗಾಗಲೆ ಕೆಎಸ್‌ಡಿಎಲ್‌ನದ್ದೇ ಉತ್ಪನ್ನಗಳನ್ನು ಮಾರಾಟ ಮಾಡುವ ಫ್ರಾಂಚೈಸಿ ಪಡೆದ ಅಂಗಡಿಗಳು ಎಷ್ಟು ನಡೆಯುತ್ತಿವೆ, ಎಷ್ಟು ಮುಚ್ಚಿವೆ ನೋಡಲಿ. ಅನೇಕ ಕಡೆಗಳಲ್ಲಿ ಈ ಫ್ರಾಂಚೈಸಿಗಳು ಮುಚ್ಚಿವೆ, ಏಕೆಂದರೆ ಆ ಉತ್ಪನ್ನಗಳ ರೀಚ್ ಹಾಗೂ ಪ್ಲೇಸ್ಮೆಂಟ್ ಸರಿಯಾಗಿ ಆಗಿಲ್ಲದ ಕಾರಣಕ್ಕೆ.
ರಾಯಭಾರಿಯೇ ಬೇಡ ಎನ್ನುವ ರಮ್ಯಾ ಮತ್ತು ಇನ್ನಿತರರ ಮಾತು ಬಾಲಿಶವಾದದ್ದು. ಹಾಗಾದರೆ ದಿವಂಗತ ಪುನೀತ್ ರಾಜಕುಮಾರ್ ಅವರು ನಂದಿನಿ ಹಾಲಿಗೆ ಏಕೆ ರಾಯಭಾರಿ ಆಗಿದ್ದರು? ಸ್ವತಃ ರಮ್ಯಾ ಅವರೂ ಪುನೀತ್ ರಾಜಕುಮಾರ್ ಜತೆಗೂಡಿ ಸರ್ಕಾರದ ಎಲ್ಇಡಿ ಬಲ್ಬ್ ಯೋಜನೆಗೆ ಏಕೆ ರಾಯಭಾರಿ ಆಗಿದ್ದರು? ಪುನೀತ್ ರಾಜಕುಮಾರ್ ಅವರು ಸರ್ಕಾರದ ಒಂದು ಜಿಲ್ಲೆ ʼಚಾಮರಾಜನಗರʼಕ್ಕೆ ಏಕೆ ರಾಯಭಾರಿ ಆಗಿದ್ದರು? ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲಿಗೆ ಹೋಗುವವರೆಗೂ ಚಿತ್ರನಟ ದರ್ಶನ್, ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆಗೆ ರಾಯಭಾರಿಯಾಗಿದ್ದರು ಏಕೆ? ಅನೇಕ ಚಿತ್ರನಟರು, ಕ್ರಿಕೆಟಿಗರು ಚುನಾವಣೆ ಬಂದಾಗ ಏಕೆ ಸಾಮಾಜಿಕ ಸಂದೇಶಗಳನ್ನು ನೀಡುತ್ತಾರೆ? ಹೌದು. ಈ ಮೇಲೆ ಹೆಸರಿಸಿದವರೆಲ್ಲರೂ (ರಮ್ಯಾ ಅವರನ್ನೂ ಒಳಗೊಂಡು) ಉಚಿತವಾಗಿ ರಾಯಭಾರಿಗಳಾಗಲು ಒಪ್ಪಿದ್ದರು, ಅದು ಅವರ ದೊಡ್ಡಗುಣ. ಇಲ್ಲಿ ಪ್ರಶ್ನೆ ಇರುವುದು ರಾಯಭಾರಿಯೇ ವೇಸ್ಟು ಎಂಬ ರಮ್ಯಾ ಅವರ ಮಾತು ನಿಜವೇ ಆಗಿದ್ದರೆ ಹೀಗೆ ನಂದಿನಿಯಿಂದ ಚುನಾವಣೆವರೆಗೆ ರಾಯಭಾರಿಯನ್ನು ಏಕೆ ನೇಮಿಸಿಕೊಳ್ಳಬೇಕಿತ್ತು?
ಕಳೆದ ವರ್ಷ, ನಂದಿನಿ ಬ್ರ್ಯಾಂಡ್ ಹೊಂದಿರುವ ಕೆಎಂಎಫ್, ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್ ಹಾಗೂ ಸ್ಕಾಟ್ಲೆಂಡ್ ತಂಡಗಳನ್ನು ಪ್ರಾಯೋಜಿಸಿತ್ತು. ನಂದಿನಿ ಹಾಲಿಗೆ ಕನ್ನಡಿಗ ರೈತರಿಂದಲೇ ಅಲ್ಲವೇ ಹಾಲು ಕೊಳ್ಳುವುದು? ಹಾಗಿದ್ದರೆ, ಪುನೀತ್ ರಾಜಕುಮಾರ್ ರಾಯಭಾರಿ ಆಗಿದ್ದರೂ ಎಲ್ಲ ಕನ್ನಡಿಗರೂ ಏಕೆ ನಂದಿನಿಯನ್ನೇ ಕೊಳ್ಳುವುದಿಲ್ಲ? ಅಕ್ಕಪಕ್ಕದ ರಾಜ್ಯಗಳ ಹಾಲನ್ನು ಏಕೆ ಮುಗಿಬಿದ್ದು ಕೊಳ್ಳುತ್ತಿದ್ದಾರೆ? ಕರ್ನಾಟಕದ ಗಡಿ ರಾಜ್ಯದ ಅನೇಕ ಜಿಲ್ಲೆಗಳ ರೈತರು ʼನಮ್ಮ ಅಸ್ಮಿತೆʼಯ ಕೆಎಂಎಫ್‌ಗೇ ಹಾಲು ಮಾರುವುದನ್ನು ಬಿಟ್ಟು ಪಕ್ಕದ ರಾಜ್ಯದ ಹಾಲು ಒಕ್ಕೂಟ, ಖಾಸಗಿ ಹಾಲು ಉತ್ಪಾದನ ಕಂಪನಿಗಳಿಗೆ ಏಕೆ ಮಾರಾಟ ಮಾಡುತ್ತಾರೆ? ಏಕೆಂದರೆ ಇದರಲ್ಲಿ ಅಸ್ಮಿತೆಯ ಜತೆಗೆ ʼಲಾಭʼದ ಲೆಕ್ಕವನ್ನು ಹಾಲು ಮಾರುವ ರೈತರಿಂದ ಹಾಲು ಕೊಳ್ಳುವ ಗ್ರಾಹಕರವರೆಗೆ ಎಲ್ಲರೂ ನೋಡುತ್ತಾರೆ. ಇದನ್ನು ತಪ್ಪು-ಸರಿ ಎಂಬ ಕಪ್ಪು ಬಿಳುಪಿನಲ್ಲಿ ನೋಡಬಾರದು. ಕ್ರಿಕೆಟ್ ತಂಡಗಳನ್ನು ಪ್ರಾಯೋಜನೆ ಮಾಡಿದ್ದರಿಂದ ಏನು ಲಾಭವಾಯಿತು ಅಥವಾ ನಷ್ಟವಾಯಿತು ಎನ್ನುವುದನ್ನು ಕೆಎಂಎಫ್ ಹೇಳಬೇಕು. ನಷ್ಟವಾಗಿದ್ದರೆ ತಮ್ಮ ಮಾರ್ಕೆಟಿಂಗ್ ತಂತ್ರವನ್ನು ಬದಲಾಯಿಸಿಕೊಳ್ಳಬೇಕು. ಕರ್ನಾಟಕದಲ್ಲೇ ಸಂಪೂರ್ಣ ಹಾಲನ್ನು ಮಾರುತ್ತೇನೆ ಎಂದು ಹಠ ಹಿಡಿದು ಕುಳಿತರೆ ನಷ್ಟವಾಗುವುದು ಕೊನೆಗೆ ಕರ್ನಾಟಕದ ರೈತರಿಗೆ ಹಾಗೂ ಗ್ರಾಹಕರಿಗೇ. ಹಾಗಾಗಿ, ರಾಯಭಾರಿ ಎನ್ನುವ ಕಾನ್ಸೆಪ್ಟೆ ಅಪ್ರಸ್ತುತ ಎಂದು ತಮನ್ನಾ ವಿಚಾರದಲ್ಲಿ ರಮ್ಯಾ ಅವರು ಆಡಿರುವ ಮಾತು ಶುದ್ಧ ಪ್ರೊಫೆಷನಲ್ ಜಲಸಿಯಂತೆ ಕಾಣುತ್ತದೆ. ಅದರಲ್ಲಿ ಯಾವುದೇ ಹುರುಳಿಲ್ಲ.
ಸರ್ಕಾರದ ಬ್ರ್ಯಾಂಡ್‌ಗಳು ಏನು ಮಾಡಿದ್ದವು?
ಸರ್ಕಾರಿ ಸ್ವಾಮ್ಯದ ಬ್ರ್ಯಾಂಡ್‌ಗಳು ದೇಶದಲ್ಲಿ ಅನೇಕ ಇವೆ. ಮುಖ್ಯವಾಗಿ ಅಮುಲ್ ಇದೆ. ಅಮುಲ್ ಯಾವುದೇ ರಾಯಭಾರಿಯನ್ನು ನೇಮಿಸಿಕೊಂಡಿಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ಆದರೆ ಅಮೂಲ್ ದಶಕಗಳಿಂದಲೂ ʼAmul Girl’ ಅನ್ನೇ ರಾಯಭಾರಿಯನ್ನಾಗಿಸಿಕೊಂಡಿದೆ. ಆ ಕಾರ್ಟೂನ್ ರೂಪಿಸಲು ಸ್ವತಂತ್ರ ತಂಡವಿದೆ, ಕಲಾವಿದರಿದ್ದಾರೆ, ದೇಶದ ಬಹುತೇಕ ಪ್ರಮುಖ ಪತ್ರಿಕೆಗಳಲ್ಲಿ ದಶಕಗಳಿಂದಲೂ ಈ ಜಾಹೀರಾತನ್ನು ನೀಡಲಾಗುತ್ತಿದೆ. ಇದೇ ಬ್ರ್ಯಾಂಡ್ ಬಿಲ್ಡಿಂಗ್.
ಕೇಂದ್ರ ಸರ್ಕಾರಿ ಸ್ವಾಮ್ಯದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು (ಕೆವಿಐಸಿ) ಈ ಹಿಂದೆ ಅನೇಕ ಇತರೆ ಬ್ರ್ಯಾಂಡ್‌ಗಳ ಜತೆಗೆ ಸಂಯೋಜನೆ ಮಾಡಿಕೊಂಡಿತ್ತು. ಇದೀಗ ದೆಹಲಿ ಲೆಫ್ಟಿನೆಂಟ್ ಗವರ್ನರ್ ಆಗಿರುವ ವಿನಯ್ ಕುಮಾರ್ ಸಕ್ಸೇನಾ ಅವರು ಕೆವಿಐಸಿ ಅಧ್ಯಕ್ಷರಾಗಿದ್ದಾಗ ದೇಶೀಯ ಬ್ರ್ಯಾಂಡ್ ರೇಮಂಡ್, ಅಂತರರಾಷ್ಟ್ರೀಯ ಬ್ರ್ಯಾಂಡ್ ಪೆಟಗೋನಿಯಾ ಜತೆಗೆ ಒಪ್ಪಂದ ಮಾಡಿಕೊಂಡಿದ್ದರು. 2017-18ರಲ್ಲಿ ಕೆವಿಐಸಿ ಆದಾಯವು ವಿದೇಶಿ ಬ್ರ್ಯಾಂಡ್ ಹಿಂದೂಸ್ತಾನ್ ಯುನಿಲಿವರ್ಗಿಂತಲೂ ದುಪ್ಪಟ್ಟು ಬೆಳವಣಿಗೆ ಕಂಡಿತ್ತು. 2018-19ರಲ್ಲಿ ಮಾರಾಟದಲ್ಲಿ ಶೇ 25 ಹೆಚ್ಚಳವಾಗಿ 75,000 ಕೋಟಿ ರೂ. ಆಗಿತ್ತು. 2021-22ರಲ್ಲಿ ಒಟ್ಟು ವಹಿವಾಟು 1.15 ಲಕ್ಷ ಕೋಟಿ ರೂ. ಆಗಿದೆ. ಕೆವಿಐಸಿಯ ಉದ್ಯಮ ಬೆಳವಣಿಗೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ʼಪ್ರಚಾರ ರಾಯಭಾರಿʼಯಾಗಿ ಉತ್ತೇಜನ ನೀಡಿದರು.
ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಪ್ರವಾಸೋದ್ಯಮಕ್ಕೆ ಅಮಿತಾಭ್ ಬಚ್ಚನ್ ಅವರನ್ನು ರಾಯಭಾರಿಯನ್ನಾಗಿ ನೇಮಿಸಿಕೊಂಡಿದ್ದರು. ಕೇಂದ್ರ ಸರ್ಕಾರದ ಇನ್ಕ್ರೆಡಿಬಲ್ ಇಂಡಿಯಾ ಅಭಿಯಾನಕ್ಕೆ ಅಮಿತಾಭ್ ಬಚ್ಚನ್, ಪ್ರಿಯಾಂಕಾ ಛೋಪ್ರಾ, ಆಮೀರ್ ಖಾನ್ ಮುಂತಾದವರು ರಾಯಭಾರಿಗಳಾಗಿದ್ದರು. ಸ್ವಚ್ಛ ಭಾರತ ಯೋಜನೆಗೆ ಅಮಿತಾಭ್ ಬಚ್ಚನ್ ರಾಯಭಾರಿಯಾಗಿದ್ದರು, ಮಹಿಳೆಯರು ಋತುಸ್ರಾವದ ಸಮಯದಲ್ಲಿ ಸಾಂಪ್ರದಾಯಿಕವಾಗಿ ಬಳಸುವ ಬಟ್ಟೆಯ ಬದಲಿಗೆ ಪ್ಯಾಡ್ ಬಳಸುವಂತೆ ಜಾಗೃತಿ ಅಭಿಯಾನಕ್ಕೆ ಅಕ್ಷಯ್ ಕುಮಾರ್ ರಾಯಭಾರಿಯಾಗಿದ್ದರು.
ಮುಂದೇನು?
ಹೌದು. ರಮ್ಯಾ ಅವರು ಹೇಳಿದ ಒಂದು ಮಾತು ಸರಿಯಿದೆ. ಕೇವಲ ರಾಯಭಾರಿಯ ನೇಮಕದಿಂದ ಉತ್ಪನ್ನ ಸೇಲ್ ಆಗುವುದಿಲ್ಲ. ರಾಯಭಾರಿಯನ್ನು ನೇಮಿಸಿಕೊಂಡಿದ್ದಕ್ಕೆ ಅನುಗುಣವಾಗಿ ಟಿವಿ, ಸುದ್ದಿ ಮಾಧ್ಯಮ, ಎಂಟರ್ಟೈನ್ಮೆಂಟ್ ಮಾಧ್ಯಮ, OOH, ಡಿಜಿಟಲ್ ಮಾಧ್ಯಮಗಳಲ್ಲಿ ಜಾಹೀರಾತು ನೀಡಬೇಕು. ಅದಕ್ಕೆ ಸರಿಯಾಗಿ, ಟಾರ್ಗೆಟೆಡ್ ಗ್ರಾಕರು ಎಲ್ಲಿ ಉತ್ಪನ್ನ ಖರೀದಿಸುತ್ತಾರೆಯೋ ಅಲ್ಲಿ ಉತ್ಪನ್ನಗಳು ಎದ್ದು ಕಾಣುವಂತೆ ಲಭ್ಯವಿರಬೇಕು. ಸಪ್ಲೈ ಚೈನ್ ಸದೃಢವಾಗಿರಬೇಕು, ಮಾರ್ಕೆಟಿಂಗ್ ಟೀಮ್-ಪ್ರೊಡಕ್ಷನ್ ಟೀಂ ಜತೆಗೆ ಅಮನ್ವಯ ಇರಬೇಕು. ಇಷ್ಟೆಲ್ಲ ಆದ ನಂತರವಷ್ಟೆ ಮೈಸೂರು ಸ್ಯಾಂಡಲ್ ಸಕ್ಸೆಸ್ ಆಗುತ್ತದೆ. ಈಗಂತೂ ಸಚಿವರು ಹೇಳಿರುವುದನ್ನು ನೋಡಿದರೆ, ಅವರ ಟಾರ್ಗೆಟ್ ನೋಡಿದರೆ ಅಂತಹ ಯೋಜನೆ ಇರಬಹುದು ಎನ್ನಿಸುತ್ತದೆ. ‘ಕೆಎಸ್‌ಡಿಎಲ್ ಮೂಲಕ ಇತ್ತೀಚೆಗೆ 21 ಹೊಸ ಉತ್ಪನ್ನ ಬಿಡುಗಡೆ ಮಾಡಲಾಗಿದೆ. ಸದ್ಯದಲ್ಲೇ ನಾವು ಪರಿಮಳಗಳ ಕ್ಷೇತ್ರಕ್ಕೂ ಕಾಲಿಡುತ್ತಿದ್ದೇವೆ. ಇದಕ್ಕೆಂದೇ ನಮ್ಮ ಅಧಿಕಾರಿಗಳನ್ನು ಅತ್ತರಿಗೆ ಹೆಸರಾಗಿರುವ ಉತ್ತರಪ್ರದೇಶದ ಕನೌಜ್‌ಗೂ ಕಳಿಸಿಕೊಡಲಾಗಿತ್ತು‘ ಎನ್ನುವುದರಲ್ಲಿ ಅಂತಹ ಯೋಜನೆಯ ಕುರುಹು ಸಿಗುತ್ತದೆ. ಹಾಗೆಯೇ ಆಗಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಮೈಸೂರು ಸ್ಯಾಂಡಲ್ ಬೆಳೆದರೆ ಕನ್ನಡಿಗರಿಗೂ, ದೇಶಕ್ಕೂ ಅಭಿಮಾನವೆ.
ರಾಯಭಾರಿ ನೇಮಿಸಿಕೊಂಡಿದ್ದನ್ನೇ ದೊಡ್ಡ ವಿಷಯವಾಗಿಸುವ ಬದಲಿಗೆ ಮಾಧ್ಯಮಗಳು, ಟೀಕಿಸುತ್ತಿರುವವರು ನಿರಂತರವಾಗಿ ಕೆಎಸ್‌ಡಿಎಲ್ ಅನ್ನು ಟ್ರ್ಯಾಕ್ ಮಾಡಬೇಕು. ಕೆಲವು ಸಮಯದ ನಂತರ ಬ್ರ್ಯಾಂ ವ್ಯಾಲ್ಯು, ಸೇಲ್ಸ್‌ನಲ್ಲಿ ಏರಿಕೆಯಾಗಿದೆಯೇ ಎಂದು ನೋಡಬೇಕು. ಆಗ ಇವರ ನಿಜವಾದ ಬಂಡವಾಳ ಗೊತ್ತಾಗುತ್ತದೆ.
ಲೇಖಕರು-ರಮೇಶ ದೊಡ್ಡಪುರ, ಹಿರಿಯ ಪತ್ರಕರ್ತರು (ಈ ಲೇಖನದಲ್ಲಿನ ಅಭಿಪ್ರಾಯಗಳು ಲೇಖಕರ ವೈಯಕ್ತಿಕ. ಇದಕ್ಕೂ ಎಚ್‌ಟಿ ಕನ್ನಡ ಸಂಸ್ಥೆಗೂ ಯಾವುದೇ ಸಂಬಂಧವಿರುವುದಿಲ್ಲ)