ಹಿರಿಯ ಸಾಹಿತಿ, ಗೀತ ರಚನೆಕಾರ ಎಚ್‌ಎಸ್ ವೆಂಕಟೇಶ ಮೂರ್ತಿ ನಿಧನ
ಹಿರಿಯ ಸಾಹಿತಿ ಎಚ್‌ಎಸ್ ವೆಂಕಟೇಶ ಮೂರ್ತಿ ಇಂದು (ಮೇ 30) ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯಗಳಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.

ಬೆಂಗಳೂರು: ಹಿರಿಯ ಸಾಹಿತಿ ಎಚ್‌ಎಸ್ ವೆಂಕಟೇಶ್ ಮೂರ್ತಿ ಇಂದು (ಮೇ 30) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ 80 ವರ್ಷ ವಯಸ್ಸಾಗಿತ್ತು. ಇವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಇಂದು ಬೆಳಿಗ್ಗೆ 8 ಗಂಟೆಗೆ ಕೊನೆಯುಸಿರು ಎಳೆದಿದ್ದಾರೆ.
ದಾವಣಗೆರೆಯ ಚೆನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದವರಾದ ಎಚ್‌ಎಸ್‌ವಿ ಕನ್ನಡ ಸಾರಸ್ವತ ಲೋಕದ ಸಜ್ಜನ ಸಾಹಿತಿ ಎಂದು ಖ್ಯಾತಿ ಪಡೆದಿದ್ದರು. ಹಲವು ಭಾವಗೀತೆಗಳನ್ನು ಕರುನಾಡಿಗೆ ಕೊಟ್ಟ ಖ್ಯಾತಿ ಇವರದ್ದು, ಇವರು ಪೋಣಿಸಿದ ಭಾವಗೀತೆಗಳ ಸಾಲು ಎಂದೆಂದಿಗೂ ಕನ್ನಡಿಗರ ಮನದಲ್ಲಿ ಹಸಿರಾಗಿ ಉಳಿಯುವಂಥದ್ದು.
1973ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಪಕರಾಗಿ ನೇಮಕಗೊಳ್ಳುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸುತ್ತಾರೆ. 3 ದಶಕಗಳ ಕಾಲ ಪ್ರಾಧ್ಯಪಕರಾಗಿದ್ದ ಅವರು 2000ನೇ ಇಸವಿಯಲ್ಲಿ ತಮ್ಮ ವೃತ್ತಿಯಿಂದ ನಿವೃತ್ತಿ ಹೊಂದುತ್ತಾರೆ.
ಕಲಬುರಗಿಯಲ್ಲಿ ನಡೆದ 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದ ಇವರು ಸಾಕಷ್ಟು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ತೊರೆದು ಜೀವಿಸಬಹುದೇ, ಲೋಕದ ಕಣ್ಣಿಗೆ ರಾಧೆಯೂ ಕೂಡ, ಹುಚ್ಚು ಖೋಡಿ ಮನಸು, ತೂಗು ಮಂಚದಲ್ಲಿ ಕೂತು ಮುಂತಾದ ಮನ ಮುಟ್ಟುವ ಭಾವಗೀತೆಗಳನ್ನು ಕನ್ನಡ ಜನತೆಗೆ ಕೊಟ್ಟ ಮೇರು ಕವಿ ಎಚ್‌ಎಸ್‌ವಿ.
ಗೀತೆ ರಚನೆ, ಕಥೆ, ಕಾದಂಬರಿ ರಚನೆ, ಸಂಭಾಷಣೆಕಾರರಾಗಿಯೂ ಎಚ್‌ಎಸ್‌ವಿ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಸಿನಿಮಾಗಳಿಗೂ ಹಾಡುಗಳನ್ನು ಬರೆದಿದ್ದಾರೆ ಎಚ್‌ಎಸ್ ವೆಂಕಟೇಶ ಮೂರ್ತಿ.
ಕ್ರಿಯಾಪರ್ವ, ಎಷ್ಟೊಂದು ಮುಗಿಲು, ನದಿತೀರದಲ್ಲಿ,ಉತ್ತರಾಯಣ ಮೊದಲಾದವರು ಇವರ ಪ್ರಮುಖ ಕೃತಿಗಳಾಗಿವೆ. ಅಗ್ನಿವರ್ಣ, ಚಿತ್ರಪಟ, ಉರಿಯ ಉಯ್ಯಾಲೆ, ಮಂಥರೆ, ಕಂಸಾಯಣ ಇವರು ಬರೆದ ಪ್ರಸಿದ್ಧ ನಾಟಕಗಳು. ರಾಷ್ಟ್ರಪ್ರಶಸ್ತಿ ಪಡೆದ ಚಿನ್ನಾರಿ ಮುತ್ತಾ ಕಥೆ ಕೂಡ ಎಚ್‌ಎಸ್‌ವಿ ಅವರದ್ದೇ.