ಕರ್ನಾಟಕ ಹವಾಮಾನ: ಕೆಲವೇ ಗಂಟೆಗಳಲ್ಲಿ ಬೆಳಗಾವಿ ಜಿಲ್ಲೆಯ ಕೆಲವೆಡೆ ಗುಡುಗು, ಸಿಡಿಲು ಮಳೆ ಸಾಧ್ಯತೆ, ಇನ್ಯಾವ ಜಿಲ್ಲೆಗಳಲ್ಲಿ ಮಳೆ ಸುರಿಯಬಹುದು
ಕರ್ನಾಟಕ ಹವಾಮಾನ: ಮುಂದಿನ ಕೆಲವೇ ಗಂಟೆಗಳಲ್ಲಿ ಬೆಳಗಾವಿ ಜಿಲ್ಲೆಯ ಕೆಲವು ಕಡೆಗೆ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ಆಧರಿಸಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. ಇನ್ಯಾವ ಜಿಲ್ಲೆಗಳಲ್ಲಿ ಮಳೆ ಸುರಿಯಬಹುದು- ಇಲ್ಲಿದೆ ಆ ವಿವರ.

ಕರ್ನಾಟಕ ಹವಾಮಾನ: ಬೆಳಗಾವಿ ಜಿಲ್ಲೆಯ ಕೆಲವು ಕಡೆ ಇಂದು (ಎಪ್ರಿಲ್ 25) ಕೆಲವೇ ಗಂಟೆಗಳ ಒಳಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಆಧರಿಸಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. ಈಗಾಗಲೇ ಮೈಸೂರು, ಹಾಸನ ಸೇರಿ 10 ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು. ಕೆಲವು ಕಡೆ ಗುಡುಗು, ಬಿರುಗಾಳಿ ಸಹಿತ ಮಳೆಯಾಗಬಹುದು ಎಂದೂ ಮುನ್ನೆಚ್ಚರಿಕೆಯನ್ನೂ ಇಲಾಖೆ ನೀಡಿದೆ. ಇಂದು ಯಾವೆಲ್ಲ ಜಿಲ್ಲೆಗಳಲ್ಲಿ ಮಳೆಯಾಗಬಹುದು ನೋಡೋಣ.
ಬೆಳಗಾವಿ ಜಿಲ್ಲೆಯ ಕೆಲವೆಡೆ ಇನ್ನು ಕೆಲವೇ ಗಂಟೆಗಳಲ್ಲಿ ಗುಡುಗು ಸಿಡಿಲು ಸಹಿತ ಮಳೆ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಇಂದು (ಏಪ್ರಿಲ್ 25) ಬೆಳಿಗ್ಗೆ 8 ಗಂಟೆಗೆ ನೀಡಿದ ಮಾಹಿತಿ ಪ್ರಕಾರ, ಇನ್ನು ಮೂರು ಗಂಟೆಗಳ ಒಳಗೆ ಬೆಳಗಾವಿಯ ಕೆಲವು ಕಡೆಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಬಹುದು. ಅಂದರೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನೀಡಿರುವ ಮಾಹಿತಿ ಆಧರಿಸಿ, “ಮುಂದಿನ 3 ಗಂಟೆಗಳಲ್ಲಿ ಬೆಳಗಾವಿ ಜಿಲ್ಲೆಯ ಒಂದು ಅಥವಾ ಎರಡು ಕಡೆ ಗುಡುಗು ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ” ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಟ್ವೀಟ್ ಮಾಡಿದೆ.
ಮುಂದಿನ 5 ದಿನಗಳ ಹವಾಮಾನ ಮುನ್ಸೂಚನೆ ಮತ್ತು ಎಚ್ಚರಿಕೆಗಳು
ಈ ದಿನ (ಏಪ್ರಿಲ್ 25) ಕರ್ನಾಟಕದಾದ್ಯಂತ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದಾದ್ಯಂತ ಮುಂದಿನ 5 ದಿನಗಳವರೆಗೆ ಅಲ್ಲಲ್ಲಿ ಗುಡುಗು, ಮಿಂಚು ಸಹಿತ, ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
ಕರಾವಳಿ ಕರ್ನಾಟಕದಲ್ಲಿ ಕೆಲವು ಕಡೆ ಇಂದಿನಿಂದ ಮೂರು ದಿನ ಅಂದರೆ ಏಪ್ರಿಲ್ 27ರ ತನಕ ಗುಡುಗು ಮಿಂಚು ಸಹಿತ ಮಳೆಯಾಗಬಹುದು. ಇದೇ ರೀತಿ, ಕರ್ನಾಟಕದ ಉತ್ತರ ಒಳನಾಡು ಪ್ರದೇಶಗಳಲ್ಲಿ ಏಪ್ರಿಲ್ 25 ರಿಂದ ಏಪ್ರಿಲ್ 28ರ ತನಕ ಗುಡುಗು ಸಿಡಿಲು ಸಹಿತ ಮಳೆಯಾಗಬಹುದು. ಇನ್ನು ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶದಲ್ಲಿ ಕೂಡ ಏಪ್ರಿಲ್ 25 ರಿಂದ ಏಪ್ರಿಲ್ 28ರ ತನಕ ಗುಡುಗು ಸಿಡಿಲು, ಬಿರುಗಾಳಿ (ಏಪ್ರಿಲ್ 27) ಸಹಿತ ಮಳೆಯಾಗಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ.
ಯಾವೆಲ್ಲ ಜಿಲ್ಲೆಗಳಲ್ಲಿ ಇಂದು ಮಳೆಯಾಗಬಹುದು
ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನೀಡಿದ ಮಾಹಿತಿ ಪ್ರಕಾರ, ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೆರಡು ಕಡೆ ಹಗುರವಾಗಿ ಅಥವಾ ಮಧ್ಯಮ ಪ್ರಮಾಣದ ಮಳೆ ಅತವಾ ಗುಡುಗು ಮಿಂಚು ಸಹಿತ ಮಳೆಯಾಗಬಹುದು. ಅದೇ ರೀತಿ, ಉತ್ತರ ಒಳನಾಡು ಪ್ರದೇಶದ ಧಾರವಾಡ, ಹಾವೇರಿ, ಗದಗ, ಕೊಪ್ಪಳ ಜಿಲ್ಲೆಗಳ ಒಂದೆರಡು ಕಡೆ ಹಗುರದಿಂದ ಮಧ್ಯಮ ಪ್ರಮಾಣದ ಮಳೆ ಅಥವಾ 40-50 ಕಿಮೀ ವೇಗದ ಬಿರುಗಾಳಿ, ಗುಡುಗು ಸಿಡಿಲು ಸಹಿತ ಮಳೆಯಾಗಬಹುದು. ಅಂತೆಯೇ, ದಕ್ಷಿಣ ಒಳನಾಡು ಪ್ರದೇಶಗಳ ಪೈಕಿ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ ಒಂದೆರಡು ಕಡೆ ಗುಡುಗು ಸಹಿತ ಹಗುರವಾಗಿ ಅಥವಾ ಮಧ್ಯಮ ಪ್ರಮಾಣದ ಮಳೆ ಅಥವಾ ಗಂಟೆಗೆ 30- 40 ಕಿಮೀ ವೇಗದ ಬಿರುಗಾಳಿ ಸಹಿತ ಮಳೆಯಾಗಬಹುದು ಎಂದು ಬೆಂಗಳೂರು ಹವಾಮಾನ ಕೇಂದ್ರದ ವಿಜ್ಞಾನಿ ಡಾ ಎನ್ ಪುವಿಯರಸನ್ ತಿಳಿಸಿದ್ದಾರೆ.