ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ, 21 ಜಿಲ್ಲೆಗಳಲ್ಲಿ ಕೆಲವೆಡೆ ಹಗುರ ಮಳೆ ಸಾಧ್ಯತೆ- ಹೀಗಿದೆ ಕರ್ನಾಟಕ ಹವಾಮಾನ ಮುನ್ಸೂಚನೆ
Karnataka Weather: ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಇಂದು ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೆಡೆ ಮಳೆಯಾಗಬಹುದು. ಬೆಂಗಳೂರು ಸೇರಿ 21 ಜಿಲ್ಲೆಗಳ ಕೆಲವೆಡೆ ಮಳೆಯಾಗಬಹುದು ಎಂದು ಕರ್ನಾಟಕ ಹವಾಮಾನ ಮುನ್ಸೂಚನೆ ತಿಳಿಸಿದೆ.

Karnataka Weather: ಕರ್ನಾಟಕದಲ್ಲಿ ಇಂದು (ಏಪ್ರಿಲ್ 12) ಬೆಂಗಳೂರು ಸೇರಿ ಬಹುತೇಕ ಜಿಲ್ಲೆಗಳ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಹಲವೆಡೆ ಮೋಡ ಕವಿದ ವಾತಾವರಣ ಕಂಡುಬರಲಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಭಾಗಶಃ ಮೋಡಕವಿದ ವಾತಾವರಣ ಕಂಡುಬರಲಿದ್ದು, ಕೆಲವು ಕಡೆ ಮಳೆಯಾಗಬಹುದು. ಕರಾವಳಿ ಕರ್ನಾಟಕದ ಜಿಲ್ಲೆಗಳು, ಬೆಂಗಳೂರು ಸೇರಿ 21 ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ಹವಾಮಾನ ಮುನ್ಸೂಚನೆ ವರದಿಯಲ್ಲಿ ತಿಳಿಸಿದೆ.
ಬೆಂಗಳೂರು ಹವಾಮಾನ ಇಂದು- ಭಾಗಶಃ ಮೋಡ ಕವಿದ ವಾತಾವರಣ, ಮಳೆ ಸಾಧ್ಯತೆ
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ನಿನ್ನೆ (ಏಪ್ರಿಲ್ 11) ಮಳೆ ಸುರಿದ ಕಾರಣ ವಾತಾವರಣ ತಂಪಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ನಿನ್ನೆ ಗರಿಷ್ಠ ತಾಪಮಾನ 32-33 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 22-23 ಡಿಗ್ರಿ ಸೆಲ್ಶಿಯಸ್ ನಡುವೆ ಇತ್ತು. ಇಂದು (ಏಪ್ರಿಲ್ 12) ಕೂಡ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಪ್ರದೇಶಗಳಲ್ಲಿ ಮಳೆಯಾಗಬಹುದು. ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಶಿಯಸ್ ಇರಬಹುದು ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಡಾ ರಾಜವೇಲ್ ಮಣಿಕ್ಕಮ್ ತಿಳಿಸಿದ್ದಾರೆ.
ಕರ್ನಾಟಕ ಹವಾಮಾನ ಇಂದು - 21 ಜಿಲ್ಲೆಗಳಲ್ಲಿ ಕೆಲವು ಕಡೆ ಮಳೆ ಸಾಧ್ಯತೆ
ಬಂಗಾಳಕೊಲ್ಲಿಯಲ್ಲಿ ಪಶ್ಚಿಮ ಮಧ್ಯಭಾಗದಲ್ಲಿ ವಾಯಭಾರ ಕುಸಿತವಾಗಿದ್ದು, ಇದಕ್ಕೆ ಸಂಬಂಧಿತ ಚಂಡಮಾರುತ ಪರಿಚಲನೆ ಅದೇ ಪ್ರದೇಶದಲ್ಲಿ ಮುಂದುವರಿದಿದ್ದು, ಸಮುದ್ರ ಮಟ್ಟದಿಂದ 1.5 ಕಿಮೀ ವ್ಯಾಪ್ತಿಗೆ ಪಸರಿಸಿದೆ. ಪಶ್ಚಿಮ ರಾಜಸ್ಥಾನದಿಂದ ಉತ್ತರ ವಿದರ್ಭ ತನಕದ ತಗ್ಗು ಪ್ರದೇಶ ಹಾಗೂ ಪಶ್ಚಿಮ ರಾಜಸ್ಥಾನದಿಂದ ಪೂರ್ವ ರಾಜಸ್ಥಾನದ ಕಡೆಗೆ ಕರಾವಳಿಯ ಆಂಧ್ರ ಕಡೆಗೆ ಚಂಡಮಾರುತ ಸಾಗಿದೆ. ಹೀಗಾಗಿ, ಕರ್ನಾಟಕ ಹಲವು ಪ್ರದೇಶದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು
ಕರಾವಳಿ ಕರ್ನಾಟಕದ ಹವಾಮಾನ - ದಕ್ಷಿಣ ಕನ್ನಡ ಜಿಲ್ಲೆಯ ಒಂದು ಅಥವಾ ಎರಡು ಕಡೆ ಗುಡುಗು ಸಹಿತ ಹಗುರದಿಂದ ಮಧ್ಯಮ ಪ್ರಮಾಣದ ಮಳೆಯಾಗಬಹುದು. ಕೆಲವು ಕಡೆ ಗುಡುಗು ಮಿಂಚು ಬಿರುಗಾಳಿ ಸಹಿತ ಮಳೆಯಾಗಬಹುದು. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಕಡೆ ಗುಡುಗು ಸಹಿತ ಹಗುರದಿಂದ ಮಧ್ಯಮ ಪ್ರಮಾಣದ ಅಥವಾ ಕೆಲವು ಕಡೆ ಗುಡುಗು ಮಿಂಚು ಬಿರುಗಾಳಿ ಸಹಿತ ಮಳೆಯಾಗಬಹುದು.
ಕರ್ನಾಟಕ ಉತ್ತರ ಒಳನಾಡು ಹವಾಮಾನ- ಬೆಳಗಾವಿ, ರಾಯಚೂರು ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಕಡೆ ಹಗುರ ಮಳೆಯಾಗಬಹುದು. ಅಥವಾ ಗುಡುಗು, ಬಿರುಗಾಳಿ ಸಹಿತ ಮಳೆಯಾಗಬಹುದು. ಉಳಿದ ಜಿಲ್ಲೆಗಳಲ್ಲ ಒಣಹವೆ ಮುಂದುವರಿಯಲಿದೆ.
ಕರ್ನಾಟಕ ದಕ್ಷಿಣ ಒಳನಾಡು ಹವಾಮಾನ - ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಕೆಲವು ಕಡೆ ಹಗುರದಿಂದ ಸಾಧಾರಣ ಮಳೆಯಾಗಬಹುದು.ಕೆಲವು ಕಡೆ ಗುಡುಗು, ಬಿರುಗಾಳಿ ಸಹಿತ ಮಳೆಯಾಗಬಹುದು. ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಕಡೆ ಹಗುರ ಮಳೆಯಾಗುವ ಸಾದ್ಯತೆ ಇದೆ. ವಿಜಯಪುರದಲ್ಲಿ ಸುಡುಬಿಸಿಲು ಅನುಭವಕ್ಕೆ ಬರಲಿದೆ ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಡಾ ರಾಜವೇಲ್ ಮಣಿಕ್ಕಮ್ ತಿಳಿಸಿದ್ಧಾರೆ.
