ಬೆಂಗಳೂರು ನಗರ, ಗ್ರಾಮಾಂತರ ಸೇರಿ 14 ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ, ಉಳಿದೆಡೆ ಇಂದಿನ ಹವಾಮಾನ ಹೇಗಿದೆ- ಕರ್ನಾಟಕ ಹವಾಮಾನ ವಿವರ
Karnataka Weather Today: ಬೆಂಗಳೂರು ನಗರ, ಗ್ರಾಮಾಂತರ ಸೇರಿ 14 ಜಿಲ್ಲೆಗಳಲ್ಲಿ ಇಂದು (ನವೆಂಬರ್ 5) ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ. ಕೆಲವು ಕಡೆ ಮುಂಜಾನೆ ಮಂಜು, ಸ್ವಲ್ಪ ಚಳಿ ಇರಲಿದೆ. ಇನ್ನುಳಿದಂತೆ, ರಾಜ್ಯದ ಉಳಿದೆಡೆ ಇಂದಿನ ಹವಾಮಾನ ಹೇಗಿದೆ- ಕರ್ನಾಟಕ ಹವಾಮಾನ ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದೆ. ಆದಾಗ್ಯೂ ಈ ದಿನ (ನವೆಂಬರ್ 5) ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಈ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮಾತ್ರವೇ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ. ಇನ್ನು ಈಗಾಗಲೇ ರಾಜ್ಯದಲ್ಲಿ ಚಳಿ ಶುರುವಾಗಿದ್ದು, ರಾತ್ರಿ ಮತ್ತು ಮುಂಜಾನೆ ಮಂಜು ಕಾಣುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ. ಸದ್ಯದ ಹವಾಮಾನ ಲಕ್ಷಣಗಳ ಪ್ರಕಾರ, ದಕ್ಷಿಣ ಕೇರಳ ಕರಾವಳಿಯ ಆಗ್ನೆಯ ಅರೇಬಿಯನ್ ಸಮುದ್ರದ ಮೇಲೆ ಚಂಡಮಾರುತದ ಪರಿಚಲನೆಯು ಈಗ ಆಗ್ನೇಯ ಅರೇಬಿಯನ್ ಸಮುದ್ರದ ಮೇಲಿದೆ. ಇದು ಸಮುದ್ರ ಮಟ್ಟದಿಂದ ಸರಾಸರಿ 3.1 ಕಿಮೀ ವರೆಗೆ ವಿಸ್ತರಿಸಿದೆ. ಇನ್ನು, ಮೇಲಿನ ಚಂಡಮಾರುತದ ಪರಿಚಲನೆಯಿಂದ ಅಗ್ನಿಯ ಬಂಗಾಳ ಕೊಲ್ಲಿಯ ಮೇಲೆ ದಕ್ಷಿಣ ತಮಿಳುನಾಡಿಗೆ ಒಂದು ಟ್ರಫ್ ಸಾಗುತ್ತದೆ ಮತ್ತು ಸರಾಸರಿ ಸಮುದ್ರ ಮಟ್ಟದಿಂದ 3.1 ಕಿ.ಮೀ ವರೆಗೆ ಎತ್ತರದೊಂದಿಗೆ ದಕ್ಷಿಣಕ್ಕೆ ವಾಲುತ್ತಿರುವುದಾಗಿ ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ. ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನಿನ್ನೆ (ನವೆಂಬರ್ 4) ಅಪರಾಹ್ನ ಪ್ರಕಟಿಸಿರುವ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ನಾಳೆ (ನವೆಂಬರ್ 6) ಬೆಳಗ್ಗೆ ತನಕ 14 ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಉಳಿದೆಡೆ ಒಣ ಹವೆ ಇರಲಿದೆ. ಹವಾಮಾನ ಮುನ್ಸೂಚನೆ ವರದಿಯ ಪೂರ್ಣ ವಿವರ ಇಲ್ಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹವಾಮಾನ; ಮಳೆ ಬರುತ್ತಾ
ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನಿನ್ನೆ (ನವೆಂಬರ್ 4) ಅಪರಾಹ್ನ ಪ್ರಕಟಿಸಿರುವ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ಮುಂದಿನ 2 ದಿನಗಳ ಮುನ್ನೋಟದಲ್ಲಿಲ ರಾಜ್ಯದಲ್ಲಿ ಯಾವುದೇ ಮಹತ್ವದ ಹವಾಮಾನ ಬದಲಾವಣೆ ನಿರೀಕ್ಷಿಸಲಾಗಿಲ್ಲ.
ನವೆಂಬರ್ 6ರ ಬೆಳಗ್ಗೆ ತನಕ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ವಿವಿಧೆಡೆ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಕೆಲವು ಕಡೆ ಹಗುರ ಮಳೆಯಾಗಬಹುದು. ಇನ್ನು ಕೆಲವು ಕಡೆ ಮುಂಜಾನೆ ವೇಳೆ ದಟ್ಟ ಮಂಜು ಆವರಿಸುವ ಸಾಧ್ಯತೆ ಇದೆ. ತಾಪಮಾನದ ವಿಚಾರಕ್ಕೆ ಬಂದರೆ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಶಿಯಸ್ ದಾಖಲಾಗಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ.
10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ; ಹೀಗಿರಲಿದೆ ಕರ್ನಾಟಕ ಹವಾಮಾನ
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೊಡಗು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಉಳಿದ ಜಿಲ್ಲೆಗಳ ಮೇಲೆ ಒಣ ಹವಾಮಾನದ ಸಾಧ್ಯತೆ ಇದೆ ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಡಾ ಎನ್ ಪುವಿಯರಸ್ ತಿಳಿಸಿದ್ಧಾರೆ.
ಕರ್ನಾಟಕದಲ್ಲಿ ನಿನ್ನೆ ಗರಿಷ್ಠ ಉಷ್ಣಾಂಶ 36.6 ಡಿಗ್ರಿ ಸೆಲ್ಶಿಯಸ್ ಕಾರವಾರದಲ್ಲಿ ದಾಖಲಾಗಿದೆ. ಸಮತಟ್ಟು ಪ್ರದೇಶಗಳ ಪೈಕಿ ಕನಿಷ್ಠ ಉಷ್ಣಾಂಶ 16.5 ಡಿಗ್ರಿ ಸೆಲ್ಶಿಯಸ್ ವಿಜಯಪುರದಲ್ಲಿ ದಾಖಲಾಗಿದೆ.
ನಿನ್ನೆ ಬೆಳಗ್ಗೆ ತನಕ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಈಶಾನ್ಯ ಮಾನ್ಸೂನ್ ಸಾಮಾನ್ಯವಾಗಿದ್ದು ಉತ್ತರ ಒಳನಾಡಿನಲ್ಲಿ ದುರ್ಬಲವಾಗಿತ್ತು. ರಾಜ್ಯದ ಒಂದು ಅಥವಾ ಎರಡು ಸ್ಥಳಗಳಲ್ಲಿ ಮಳೆಯಾಗಿದೆ. ಮಳೆಯ ಪ್ರಮಾಣ ಗಮನಿಸುವುದಾದರೆ, ಧರ್ಮಸ್ಥಳ (ದಕ್ಷಿಣ ಕನ್ನಡ ಜಿಲ್ಲೆ) 5 ಸೆಂಟಿ ಮೀಟರ್, ಮಣಿ (ದಕ್ಷಿಣ ಕನ್ನಡ ಜಿಲ್ಲೆ) 5 ಸೆಂಮೀ, ಉಪ್ಪಿನಂಗಡಿ (ದಕ್ಷಿಣ ಕನ್ನಡ ಜಿಲ್ಲೆ) 4 ಸೆಂಮೀ, ಪುತ್ತೂರು ಎಚ್‌ಎಂಎಸ್ (ದಕ್ಷಿಣ ಕನ್ನಡ ಜಿಲ್ಲೆ) 3 ಸೆಂಮೀ, ಬೆಳ್ತಂಗಡಿ (ದಕ್ಷಿಣ ಕನ್ನಡ ಜಿಲ್ಲೆ) 3 ಸೆಂಮೀ, ಭಾಗಮಂಡಲ (ಕೊಡಗು ಜಿಲ್ಲೆ) 3 ಸೆಂಮೀ, ಹೆಸರಘಟ್ಟ (ಬೆಂಗಳೂರು ನಗರ ಜಿಲ್ಲೆ) ಸೆಂಮೀ3, ಕೊಲ್ಲೂರು (ಉಡುಪಿ ಜಿಲ್ಲೆ) 2 ಸೆಂಮೀ, ಸಿ ಆರ್ ಪಟ್ಟಾ (ಜಿಲ್ಲೆ ಹಾಸನ) 2 ಸೆಂಮೀ, ಮೂಡಿಗೆರೆ (ಜಿಲ್ಲೆ ಚಿಕ್ಕಮಗಳೂರು) 2, ಕೊಣನೂರು (ಜಿಲ್ಲೆ ಹಾಸನ) 2, ಸೋಮವಾರಪೇಟೆ (ಕೊಡಗು ಜಿಲ್ಲೆ) 2, ಕೊಟ್ಟಿಗೆಹಾರ (ಚಿಕ್ಕಮಗಳೂರು ಜಿಲ್ಲೆ) 1, ಚಿಂತಾಮಣಿ ಪಿಟಿಒ (ಚಿಕ್ಕಬಳ್ಳಾಪುರ ಜಿಲ್ಲೆ) 1, ಬೇಲೂರು (ಹಾಸನ ಜಿಲ್ಲೆ) 1, ದೊಡ್ಡಬಳ್ಳಾಪುರ (ಜಿಲ್ಲೆ ಬೆಂಗಳೂರು ಗ್ರಾಮಾಂತರ) 1, ಎಂಎಂ ಹಿಲ್ಸ್ (ಜಿಲ್ಲೆ ಚಾಮರಾಜನಗರ) 1 ಸೆಂಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.