Karnataka Weather: ಕರ್ನಾಟಕದಲ್ಲಿ ಮುಂದುವರಿದ ಚಳಿ; ಹಲವೆಡೆ ಮಂಜಿನ ವಾತಾವರಣದಿಂದ ಕೆಲಸ ಕಾರ್ಯಗಳಿಗೆ ಅಡ್ಡಿ
ಕರ್ನಾಟಕ ಹವಾಮಾನ: ರಾಜ್ಯದ ಎಲ್ಲಾ ಕಡೆ ಮುಂಜಾನೆ ಸಮಯದಲ್ಲಿ ಚಳಿ ಮತ್ತು ಮಂಜಿನ ಪರಿಸ್ಥಿತಿ ಮುಂದವರಿದಿದೆ. ಎಲ್ಲೂ ಕೂಡ ಮಳೆಯಾಗುವ ಸಾಧ್ಯತೆ ಇಲ್ಲ, ಒಣ ಹವೆ ಮುಂದುವರಿಯಲಿದೆ. ಡಿಸೆಂಬರ್ 31ರ ಮಂಗಳವಾರದಿಂದ ಮುಂದಿನ 5 ದಿನಗಳ ಕಾಲ ಇದೇ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಮಳೆಯ ಸಾಧ್ಯತೆ ಕಡಿಮೆಯಾಗುತ್ತಿದ್ದು ಚಳಿ ಮತ್ತು ಮಂಜಿನ ವಾತಾವರಣ ಮುಂದುವರಿದಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಮಂಜಿನ ವಾತಾವರಣ ಇದ್ದು, ಮುಂಜಾನೆಯ ಚಳಿ ಕೆಲಸ ಕಾರ್ಯಗಳಿಗೆ ಅಲ್ಪ ಅಡ್ಡಿಯುಂಟು ಮಾಡಿದೆ. ಕೆಲವೆಡೆ ಜನರು, ಸ್ವಲ್ಪ ಚಳಿ ಕಡಿಮೆಯಾಗಲಿ, ಬಿಸಿಲು ಬರಲಿ ಎನ್ನುತ್ತ ಮನೆಯಿಂದ ಹೊರ ಬರುತ್ತಿಲ್ಲ. ನಿನ್ನೆ (ಡಿಸೆಂಬರ್ 30, ಸೋಮವಾರ) ರಾಜ್ಯದ ಯಾವುದೇ ಭಾಗದಲ್ಲಿ ಮಳೆಯಾಗಿಲ್ಲ. ಒಣ ಹವೆ ಮುಂದುವರಿದಿದೆ. ಮುಂದಿನ 6 ದಿನಗಳ ಕಾಲ ಅಂದರೆ 2024ರ ಡಿಸೆಂಬರ್ 31ರ ಮಂಗಳವಾರದಿಂದ 2025ರ ಜನವರಿ 5ರ ಭಾನುವಾರದ ವರೆಗೆ ಇದೇ ರೀತಿಯ ವಾತಾವರಣ ಇರಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ತಿಳಿಯಿಸಿದೆ.
ಬೆಂಗಳೂರಿನಲ್ಲಿ ಎಂದಿನಂತೆ ಮಾರುಕಟ್ಟೆಗಳಲ್ಲಿ ಮುಂಜಾನೆಯ ವ್ಯಾಪಾರ ನಡೆಯುತ್ತಿದ್ದು, ರೈತರು ತರಕಾರಿ, ಹೂವು ಹಾಗೂ ಹಣ್ಣುಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ವಾಹನ ಸಂಚಾರವು ಎಂದಿನಂತೆ ಸುಗಮವಾಗಿದ್ದು, ಸಾಧಾರಣ ಮಂಜಿನಿಂದ ಸಂಚಾರಕ್ಕೆ ಅಡ್ಡಿಯಾಗಿಲ್ಲ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಮಂಡ್ಯ ಹಾಗೂ ಮೈಸೂರು, ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿನ ವಾತಾವರಣದಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ.
ಕಳೆದ 24 ಗಂಟೆಗಳಲ್ಲಿನ ಹವಾಮಾನದ ವರದಿಯನ್ನು ನೋಡುವುದಾದರೆ, ರಾಜ್ಯದಲ್ಲಿ ಅತಿ ಕಡಿಮೆ ಉಷ್ಣಾಂಶ ಗದಗ ಮತ್ತು ಬೀದರ್ ನಲ್ಲಿ ತಲಾ 14.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವೊಂದು ಪ್ರದೇಶದಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಹೆಚ್ಚಳವಾಗಿದೆ.
ಬೆಂಗಳೂರು ಹವಾಮಾನ
ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳ ವಾತಾವರಣವನ್ನು ಗಮನಿಸುವುದಾದರೆ, ಮುಂಜಾನೆಯಿಂದಲೇ ಶುಭ್ರ ಆಕಾಶ ಇದ್ದು, ಅಲ್ಲಲ್ಲಿ ಮಂಜಿನ ವಾತಾವರಣ ಇದೆ. ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 18 ಡಿಗ್ರಿ ಸಲ್ಸಿಯಸ್ ತಾಪಮಾನ ಇರುವ ನಿರೀಕ್ಷೆ ಇದೆ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.