ಇಂದೂ ರಾಜ್ಯದ ಹಲವೆಡೆ ಆರ್ಭಟಿಸಲಿರುವ ವರುಣ; ದ.ಕನ್ನಡ, ಬೀದರ್, ಚಿಕ್ಕಮಗಳೂರು ಸೇರಿದಂತೆ ಬಹುತೇಕ ಕಡೆ ಭಾರೀ ಮಳೆ ಸಾಧ್ಯತೆ
ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಎಲ್ಲಾ ಜಿಲ್ಲೆಗಳಲ್ಲೂ ಉತ್ತಮ ಮಳೆ ಆಗುತ್ತಿದೆ. ಮಂಗಳವಾರ ಉತ್ತರ ಕನ್ನಡ, ಉಡುಪಿಯಲ್ಲಿ ಉತ್ತಮ ಮಳೆ ಆಗಿದ್ದು ಇಂದು (ಬುಧವಾರ) ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ.
ಬೆಂಗಳೂರು: ಕಳೆದ ವರ್ಷ ಮುಂಗಾರು ಕೈ ಕೊಟ್ಟಿದ್ದರಿಂದ ರಾಜ್ಯದಲ್ಲಿ ಉತ್ತಮ ಮಳೆ ಆಗಿರಲಿಲ್ಲ. ಆದರೆ ಈ ಬಾರಿ ಅವಧಿಗೂ ಮುನ್ನವೂ ಮಾನ್ಸೂನ್ ರಾಜ್ಯವನ್ನು ಪ್ರವೇಶಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಉತ್ತಮ ಮಳೆ ಆಗುತ್ತಿದೆ. ಕೆಲವೆಡೆ ಸಾಧಾರಣ ಮಳೆ ಆದರೆ, ಇನ್ನೂ ಕೆಲವೆಡೆ ಗುಡುಗು ಸಹಿತ ಭಾರೀ ಮಳೆ ಆಗುತ್ತಿದೆ. ಮಂಗಳವಾರ ಎಲ್ಲೆಲ್ಲಿ ಮಳೆ ಆಯ್ತು? ಮುಂದಿನ 48 ಗಂಟೆಗಳಲ್ಲಿ ಎಲ್ಲಿ ಮಳೆ ಆಗಲಿದೆ, ವಾತಾವಣ ಹೇಗಿರಲಿದೆ ಎಂಬ ಮಾಹಿತಿ ಇಲ್ಲಿದೆ.
ಮಂಗಳವಾರ ಎಲ್ಲೆಲ್ಲಿ ಮಳೆ ಆಯ್ತು?
ಕರ್ನಾಟಕ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಮಂಗಳವಾರ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆ ಆಗಿದೆ. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಗೋಕರ್ಣ, ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಅತಿ ಹೆಚ್ಚು ಮಳೆ ಆಗಿದೆ. ಉಳಿದಂತೆ ಮಂಗಳೂರು, ಕುಮಟಾ, ಸುಳ್ಯ, ಮಂಠಾಳ, ಖಜೂರಿ, ಮಂಕಿಯಲ್ಲಿ ತಲಾ 5 ಸೆಮೀ, ಕಾರ್ಕಳ, ಪಣಂಬೂರು, ಅಣಿ, ಲಿಂಗನಮಕ್ಕಿ, ಪುತ್ತೂರು, ಧರ್ಮಸ್ಥಳ, ಬೀದರ್, ಔರಾದ್, ಮುದಗಲ್, ತಾಳಗುಪ್ಪದಲ್ಲಿ ತಲಾ 3 ಸೆಮೀ, ಹುಮನಾಬಾದ್, ಸೋಮವಾರಪೇಟೆ, ವಿರಾಜಪೇಟೆ, ಕಳಸ, ಕಮರಡಿ, ಕೊಟ್ಟಿಗೆಹಾರದಲ್ಲಿ ತಲಾ 2 ಸೆಮೀ ಹಾಗೂ ಲೋಂಡಾ, ರಬಕವಿ, ಕಮಲಾಪುರ, ಜಯಪುರ, ಬಾಳೆ ಹೊನ್ನೂರು, ಬೆಳ್ಳೂರು, ಹೊಸಕೋಟೆ ಸೇರಿದಂತೆ ಇತರಡೆ ತಲಾ 1 ಸೆಮೀ ಮಳೆ ಆಗಿದೆ.
ಇಂದು ಎಲ್ಲೆಲ್ಲಿ ಮಳೆ ಆಗಲಿದೆ?
ಇಂದು ( ಜೂನ್ 12, ಬುಧವಾರ) ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಬೀದರ್, ವಿಜಯಪುರ, ಯಾದಗಿರಿ, ಕಲಬುರಗಿ, ಚಿಕ್ಕಮಗಳೂರು ಜಿಲ್ಲೆಗಳ ಕೆಲವೆಡೆ ಬಿರುಗಾಳಿಯೊಂದಿಗೆ ಗುಡುಗುಸಹಿತ ಮಳೆ ಆಗುವ ಸಾಧ್ಯತೆ. ಚಂಡಮಾರುತದ ಹವಾಮಾನವು ಗಂಟೆಗೆ 35-45 ಕಿ.ಮೀ ವೆೇಗದಲ್ಲಿ ಕರ್ನಾಟಕದ ಕರಾಳಿಯಲ್ಲಿ ಬೀಸುವ ಸಾಧ್ಯತೆ ಇದೆ. ಆದ್ದರಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರು ಹಾಗೂ ಸುತ್ತಮುತ್ತಲಿನ ವಾತಾವರಣ
ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ಇಂದು ಸಾಮಾನ್ಯವಾಗಿ ಮೋಡ ಕವಿದ ಆಕಾಶವಿದ್ದು ಹಗುರ ಮಳೆ ಆಗುವ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29° ಸೆಲ್ಸಿಯಸ್ ಹಾಗೂ 21° ಡಿಗ್ರಿ ಸೆಲ್ಸಿಯಸ್ ಆಗಿರಬಹುದು. ಶುಕ್ರವಾರ ಕೂಡಾ ಇದೇ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ.
ರಾಜ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.