ಇಂದು ದ.ಕನ್ನಡ, ಧಾರವಾಡದಲ್ಲಿ ಭಾರೀ ಮಳೆ ಸಾಧ್ಯತೆ; 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಇಂದೂ ಕೂಡಾ ರಾಜ್ಯದ ಹಲವೆಡೆ ಮಳೆ ಆಗಲಿದೆ. ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ರಾಯಚೂರು, ಕೊಪ್ಪಳ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಆಗಲಿದ್ದು ಹವಾಮಾನ ಇಲಾಖೆಯು ಈ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಬೆಂಗಳೂರು: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ನಿನ್ನೆ(ಗುರುವಾರ) ಯಾದಗಿರಿ ಹಾಗೂ ಕೊಪ್ಪಳದಲ್ಲಿ ಭಾರೀ ಮಳೆ ಆಗಿದೆ. ಭಾರತೀಯ ಹವಾಮಾನ ಇಲಾಖೆಯು ಯಾದಗಿರಿ, ಕೊಪ್ಪಳ, ರಾಯಚೂರು, ಗದಗ, ಬಳ್ಳಾರಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿತ್ತು. ಇಂದು( ಶುಕ್ರವಾರ) ಎಲ್ಲೆಲ್ಲಿ ಮಳೆಯಾಗಲಿದೆ? ಯಾವ ಜಿಲ್ಲೆಗಳಲ್ಲಿ ಯೆಲ್ಲೋ, ಆರೆಂಜ್ ಅಲರ್ಟ್ ಇದೆ? ಮುಂದಿನ 24 ಗಂಟೆಗಳಲ್ಲಿ ಹವಾಮಾನ ಹೇಗಿರಲಿದೆ ನೋಡೋಣ.
ಗುರುವಾರ ಎಲ್ಲೆಲ್ಲಿ ಎಷ್ಟು ಮಳೆ ಆಯ್ತು?
ಗುರುವಾರ ಯಾದಗಿರಿ ಜಿಲ್ಲೆಯ ನಾರಾಯಣಪುರ ಹಾಗೂ ಕೊಪ್ಪಳದ ಮುನಿರಾಬಾದ್‌ಲ್ಲಿ ತಲಾ 7 ಸೆಮೀ ಮಳೆ ಆಗಿದೆ. ಜೊತೆಗೆ ಕೊಪ್ಪಳದ ಕುಷ್ಟಗಿಯಲ್ಲಿ 6ಸ ಸೆಮೀ, ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ವಿಜಯಪುರದ ನಲ್ವತಪಾಡ, ರಾಯಚೂರಿನ ಲಿಂಗಸುಗೂರು ಹಾಗೂ ಸಿಂಧನೂರು, ಬಾಗಲಕೋಟೆಯ ಬಿಳಗಿಯಲ್ಲಿ ತಲಾ 5 ಸೆಮೀ, ಉ. ಕನ್ನಡದ ಕುಮಟಾ, ರಾಯಚೂರಿನ ಮಸ್ಕಿ, ಯಾದಗಿರಿಯ ಕಕ್ಕೇರಿ, ಹುಣಸಗಿಯಲ್ಲಿ ತಲಾ 4 ಸೆಮೀ, ಉ ಕನ್ನಡದ ಅಂಕೋಲಾ, ಕಾರವಾರ, ದ. ಕನ್ನಡ ಜಿಲ್ಲೆಯ ಪುತ್ತೂರು, ಉ ಕನ್ನಡದ ಮಂಕಿ, ದ. ಕನ್ನಡದ ಧರ್ಮಸ್ಥಳ, ಕೊಪ್ಪಳದ ತಾವರಗೇರಾ, ಬಳ್ಳಾರಿಯ ಕುಡತಿನಿಯಲ್ಲಿ ತಲಾ 3 ಸೆಮೀ ಮಳೆ ಆಗಿದೆ.
ಇಂದು ಎಲ್ಲೆಲ್ಲಿ ಮಳೆ ಆಗಲಿದೆ?
ಒಳನಾಡಿನ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಮತ್ತು ಕರಾವಳಿ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ, ಕೆಲವೆಡೆ ಗುಡುಗು ಸಹಿತ ಮಳೆ ಬೀಳುವ ಸಾಧ್ಯತೆ ಇದೆ. ಚಂಡಮಾರುತದ ಹವಾಮಾನವು ಗಂಟೆಗೆ 35-45 ಕಿ.ಮೇ ವೆೇಗದ ಗಾಳಿಯೊಂದಿಗೆ ಕರ್ನಾಟಕದ ಕರಾವಳಿ ಉದ್ದಕ್ಕೂ ಬೀಸುವ ಸಾಧ್ಯತೆ ಇದೆ. ಆದ್ದರಿಂದ ಹವಾಮಾನ ಇಲಾಖೆಯು ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಿದೆ.
ಇಂದು ಬೆಂಗಳೂರು ಹಾಗೂ ಸುತ್ತಮುತ್ತಲಿನ ವಾತಾವರಣ ಹೇಗಿದೆ?
ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಸುತ್ತಮುತ್ತ ಸಾಮಾನ್ಯವಾಗಿ ಮೋಡ ಕವಿದ ಆಕಾಶವಿರಲಿದೆ. ಕೆಲವೆಡೆ ಸಾಧಾರಣ ಮಳೆ, ಕೆಲವೆಡೆ ಗುಡುಗು ಸಹಿತ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳ ಕಾಲ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30°ಸೆ ಮತ್ತು 21° ಸೆಲ್ಸಿಯಸ್ ಆಗಿರಬಹುದು. ಮುಂದಿನ 48 ಗಂಟೆಗಳ ಕಾಲ ಇದೇ ವಾತಾವರಣ ಮುಂದುವರೆಯಲಿದೆ.
ಇಂದು ಎಲ್ಲೆಲ್ಲಿ ಯೆಲ್ಲೋ ಅಲರ್ಟ್
ಭಾರತೀಯ ಹವಾಮಾನ ಇಲಾಖೆ ಇಂದು (ಜೂನ್ 14)ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ರಾಯಚೂರು, ಕೊಪ್ಪಳ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಆಗುವ ಮುನ್ಸೂಚನೆ ಇದೆ.
ಕರ್ನಾಟಕ ಕುರಿತ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
