Karnataka Weather: ರಾಜಧಾನಿ ಬೆಂಗಳೂರು, ಕರಾವಳಿ ಸೇರಿ ಕರ್ನಾಟಕದಲ್ಲಿಂದು ಭಾರಿ ಮಳೆಯ ಮುನ್ಸೂಚನೆ; ರಾತ್ರಿಯಿಂದಲೇ ಜಡಿ ಮಳೆ ಆರಂಭ
ಕೋಲಾರ ಸೇರಿದಂತೆ ಕೆಲವೆಡೆ ರಾತ್ರಿಯಿಂದಲೇ ಜಡಿ ಮಳೆ ಆರಂಭವಾಗಿದ್ದು, ಇಂದು ಬೆಂಗಳೂರು ಸೇರಿದಂತೆ ಹಲವಡೆ ಭಾರಿ ಮಳೆಯಾಗುವ ಮುನ್ಸೂಚನ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು: ರಾಜ್ಯದಲ್ಲಿ ದುರ್ಬಲಗೊಂಡಿದ್ದ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಕರಾವಳಿ, ಒಳನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದು (ಜೂನ್ 20, ಮಂಗಳವಾರ) ಭಾರಿ ಮಳೆಯಾಗುವ (Karnataka Rain) ಮುನ್ಸೂಚನೆ ಇದ್ದು, ರಾತ್ರಿಯಿಂದಲೇ ಕೆಲವೆಡೆ ಜಡಿ ಮಳೆ ಶುರುವಾಗಿದೆ.
ಬೆಂಗಳೂರಿನ ಕೆಲವು ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಇದ್ದು ಸಂಜೆ ಅಥವಾ ರಾತ್ರಿಯ ವೇಳೆ ಭಾರಿ ಮಳೆಯಾಗುವ (Bengaluru Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಗರದ ಸುತ್ತಮುತ್ತಲಿನ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ತುಮಕೂರು, ಹಾಸನ, ಚಾಮರಾಜನಗರ ಹಾಗೂ ಮೈಸೂರಿನಲ್ಲಿ ವರುಣ ಅಬ್ಬರಿಸುವ ಸಂಭವ ಇದೆ. ಕೋಲಾರ ಜಿಲ್ಲೆಯಲ್ಲಿ ರಾತ್ರಿಯಿಂದಲೇ ಜಡಿ ಮಳೆಯಾಗುತ್ತಿದೆ.
ಸೋಮವಾರ ಬೆಳಗ್ಗೆ 8.30ರ ವರೆಗೆ ದಾಖಲಾಗಿರುವ ಮಾಹಿತಿ ಪ್ರಕಾರ ಕರಾವಳಿಯ ಕಡೆಗಳಲ್ಲಿ ಹಾಗೂ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ 6 ಸೆಂಟಿ ಮೀಟರ್ ಮಳೆಯಾಗಿದೆ. ಹಾಸನ ಜಿಲ್ಲೆಯ ಸಿಆರ್ ಪಟ್ಣಣದಲ್ಲಿ 5, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ 4, ಉ.ಕ ಜಿಲ್ಲೆಯ ಮಂಕಿ, ಗೋಕರ್ಣ, ಉಡುಪಿ ಜಿಲ್ಲೆಯ ಕೋಟ, ರಾಮನಗರದ ಮಾಗಡಿಯಲ್ಲಿ ತಲಾ 3, ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ, ಕೊಪ್ಪಳ ಜಿಲ್ಲೆಯ ಮುನಿರಾಬಾದ್, ತುಮಕೂರು ಜಿಲ್ಲೆಯ ಸಿರಾ, ಶಿವಮೊಗ್ಗ ಜಿಲ್ಲೆಯ ಅಗ್ರಹಾರ ಕೋಣಂದೂರು, ಮಂಡ್ಯದ ಬೆಳ್ಳೂರು, ವಿಜಯನಗರದ ಕೂಡ್ಲಿಗಿ, ತುಮಕೂರು ಜಿಲ್ಲೆಯ ಹೆಬ್ಬೂರಿನಲ್ಲಿ ತಲಾ 2 ಸೆಂಟಿ ಮೀಟರ್ ಮಳೆಯಾಗಿದೆ.
ಮಳೆಯ ಪರಿಣಾಮವಾಗಿ ರಾಜ್ಯದಲ್ಲಿ ಉಷ್ಣಾಂಶ ಕೂಡ ಸಾಮಾನ್ಯಕ್ಕಿಂತ ಕಡಿಮೆಯಾಗುತ್ತಿದೆ. ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯಕ್ಕಿಂತ -1.6 ಡಿಗ್ರಿ ಸೆಲ್ಸಿಯಸ್ ನಿಂದ 3 ಡಿಗ್ರಿ ಸೆಲ್ಸಿಯಸ್ ವರೆಗೆ ಕಡಿಮೆಯಾಗಿದೆ. ಅತಿ ಗರಿಷ್ಠ ಉಷ್ಣಾಂಶ 34.9 ಡಿಗ್ರಿ ಸೆಲ್ಸಿಯಸ್ ಕಲಬುರ್ಗಿಯಲ್ಲಿ ದಾಖಲಾಗಿದೆ.
ಇಂದು ಉತ್ತರ ಒಳನಾಡನ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಸಾಧ್ಯತೆ ಇದ್ದು, ಗಾಳಿಯ ವೇಗವು ಗಂಟೆಗೆ 30 ರಿಂದ 40 ಕಿಲೋ ಮೀಟರ್ ಇರಲಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ. ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿಮೀದಿಂದ 55 ಕಿಲೋ ಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ನೆರೆಯ ತಮಿಳುನಾಡಿನಲ್ಲಿ ವರುಣ ಅಬ್ಬರಿಸುತ್ತಿದ್ದು, ಚೆನ್ನೈನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾಂಚೀಪುರಂ, ಚೆಂಗಲ್ಪಟ್ಟು, ತಿರುವಳ್ಳೂರು ಹಾಗೂ ರಾಣಿಪೇಟ್ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿರುವ ಪರಿಣಾಮ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಚೆನ್ನೈ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣದಲ್ಲಿ ವ್ಯತ್ಯಯವಾಗಿದ್ದು, ಚೆನ್ನೈಗೆ ತೆರಳುತ್ತಿದ್ದ ಕೆಲವು ಅಂತಾರಾಷ್ಟ್ರೀಯ ವಿಮಾನಗಳನ್ನು ಬೆಂಗಳೂರಿಗೆ ತಿರುಗಿಸಲಾಗಿದೆ. ಇಂದು ಮತ್ತು ನಾಳೆಯೂ ತಮಿಳುನಾಡನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.