Karnataka Weather: ರಾಜಧಾನಿ ಬೆಂಗಳೂರು, ಕರಾವಳಿಯಲ್ಲಿಂದು ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆ
ಬೆಂಗಳೂರು ಸೇರಿದಂತೆ ರಾಜ್ಯದ ಕರಾವಳಿಯಲ್ಲಿಂದು ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಾಳೆ ಕೇರಳ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಂಭವ ಇದೆ ಅಂತ ಹೇಳಿದೆ.
ಬೆಂಗಳೂರು: ಕರ್ನಾಕದ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ವೇಗವಾಗಿ ಗಾಳಿ ಬೀಸುತ್ತಿದೆ. ಇಂದು (ಜೂನ್ 8, ಗುರುವಾರ) ರಾಜ್ಯ ರಾಜಧಾನಿ ಬೆಂಗಳೂರ, ಸುತ್ತಮುತ್ತಲಿನ ಕೆಲವು ಜಿಲ್ಲೆಗಳು ಹಾಗೂ ಕರಾವಳಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ (Karnataka Rain) ಸಾಧ್ಯತೆ ಇದೆ.
ಕರಾವಳಿ ಹಾಗೂ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗವು ಗಂಟೆಗೆ 30 ರಿಂದ 40 ಕಿಲೋ ಮೀಟರ್ ವೇಗದಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆ (Meteorological Department Bangalore) ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇದ್ದು, ಕೆಲವು ಪ್ರದೇಶಗಳಲ್ಲಿ ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು ಸಹಿತ ಭಾರಿ ಮಳೆಯಾಗುವ (Bangalore Rain) ಬಹಳಷ್ಟು ಸಾಧ್ಯತೆ ಇದೆ. ಕೆಲವೊಮ್ಮೆ ಬಲವಾದ ಮೇಲ್ಮೈ ಸುಳಿಗಾಳಿ ಬೀಸುವ ಸಾಧ್ಯತೆ ಇದೆ.
ನಾಳೆ ದಕ್ಷಿಣ ಒಳನಾಡು, ಕರಾವಳಿಯಲ್ಲಿ ಮಳೆಯ ಮುನ್ಸೂಚನೆ
ನಾಳೆ (ಜೂನ್ 9, ಶುಕ್ರವಾರ) ಕರಾವಳಿ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ಹಾಸನ, ಮೈಸೂರು, ಚಾಮರಾಜನಗರ, ತುಮಕೂರು ಸೇರಿದಂತೆ ಹಲವೆಡೆ ಮಳೆ ಬೀಳುವ ಸಾಧ್ಯತೆ ಇದೆ.
ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 35 ರಿಂದ 45 ಕಿಲೋ ಮೀಟರ್‌ನಿಂದ 55 ಕಿಲೋ ಮೀಟರ್ ವೇಗದಲ್ಲಿ ಬೀಸುವ ವಾತಾವರಣ ಇರುತ್ತದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ನಿನ್ನೆ (ಜೂನ್ 7, ಬುಧವಾರ) ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು, ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ತಲಾ 3 ಸೆಂಟಿ ಮೀಟರ್ ಮಳೆಯಾಗಿದೆ. ಕಲಬುರ್ಗಿ ಜಿಲ್ಲೆಯ ಮಹಾಗಾವ್, ಯಾದಗಿರಿ ಜಿಲ್ಲೆಯ ಶೋರಪುರದಲ್ಲಿ ತಲಾ 1 ಸೆಂಟಿ ಮೀಟರ್ ಮಳೆಯಾಗಿದೆ. ರಾಜ್ಯದಲ್ಲಿ ಅತಿ ಗರಿಷ್ಠ ಉಷ್ಣಾಂಶ 39.9 ಡಿಗ್ರಿ ಸೆಲ್ಸಿಯಸ್ ಕಲಬುರ್ಗಿಯಲ್ಲಿ ದಾಖಲಾಗಿದೆ.
ಪೂರ್ವ-ಮಧ್ಯ ಮತ್ತು ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಬಿಪರ್‌ಜಾಯ್ ಸೈಕ್ಲೋನ್ ಉತ್ತರದ ಕಡೆಗೆ ಚಲಿಸುವ ಸಾಧ್ಯತೆ ಇದೆ. ಮುಂದಿನ ಕೆಲವು ಗಂಟೆಗಳಲ್ಲಿ ತೀವ್ರ ಚಂಡಮಾರುತವಾಗಿ ರೂಪಗೊಳ್ಳುವ ಸಂಭವ ಇದೆ. ಹೀಗಾಗಿ ದೇಶದ ಕೆಲವು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಿಪರ್‌ಜಾಯ್ ಚಂಡಮಾರುತದಿಂದಾಗಿ ನಾಳೆ (ಜೂನ್ 9, ಶುಕ್ರವಾರ) ಮುಂಗಾರು ಮಳೆ ಕೇರಳಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಕೇರಳ ಹಾಗೂ ಕರಾವಳಿ ಭಾಗದಲ್ಲಿ ನಾಳೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಿಭಾಗ