Karnataka Weather: ಬೆಂಗಳೂರು ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸಂಭವ; ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ
ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇಂದು ಕೂಡ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.
ಬೆಂಗಳೂರು: ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇಂದು (ಜೂನ್ 7, ಬುಧವಾರ) ಕೂಡ ಸಾಧಾರಣ ಮಳೆಯಾಗಲಿದೆ, ಕೆಲವೆಡೆ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ (Karnataka Rain) ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ಮಾಹಿತಿ ಪ್ರಕಾರ ರಾಜ್ಯಕ್ಕೆ ಮುಂಗಾರು ಮಳೆ ವಿಳಂಬವಾಗಲಿದೆ. ಜೂನ್ 4ರಂದು ಮುಂಗಾರು ಮಳೆಯು ಕೇರಳ ಪ್ರವೇಶಿಸಲಿದೆ ಎಂದು ಈ ಹಿಂದೆ ಮುನ್ಸೂಚನೆ ನೀಡಲಾಗಿತ್ತು. ಇದೀಗ ಐಎಂಡಿ ನೀಡಿರುವ ಅಪ್‌ಡೇಟ್ ಪ್ರಕಾರ ಇಂದು (ಜೂನ್ 7) ಕೇರಳಕ್ಕೆ ಮುಂಗಾರು ಮಳೆ ಪ್ರವೇಶವಾಗಲಿದೆ.
ಇದರ ಪರಿಣಾಮವಾಗಿ ಕರಾವಳಿ ಭಾಗದಲ್ಲಿ ಭಾರಿ ಮಳೆಯ ಸಾಧ್ಯತೆ ಇದೆ. ರಾಜ್ಯದ ಕರಾವಳಿಯಲ್ಲಿ ಬಿರುಗಾಳಿ ಗಂಟೆಗೆ 35 ರಿಂದ 45 ಕಿಲೋ ಮೀಟರ್‌ನಿಂದ 55 ಕಿಲೋ ಮೀಟರ್ ವೇಗದಲ್ಲಿ ಬೀಸುವ ವಾತಾವರಣ ಇರುತ್ತದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಜೂನ್ 9 ರಿಂದ ಮೂರು ದಿನಗಳ ಕಾಲ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಇಲಾಖೆ ಮುನ್ಸೂಚನೆ ನೀಡಿದೆ.
ತುಮಕೂರಿನ ಕೊನೇಹಳ್ಳಿಯಲ್ಲಿ ನಿನ್ನೆ ಎರಡು ಸೆಂಟಿ ಮೀಟರ್ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಾಲಿ, ಕಾರವಾರ, ಕುಮಟಾ, ಅಂಕೋಲಾ, ಹಾಸನದ ಸಿಆರ್ ಪಟ್ಟಣ, ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ, ತುಮಕೂರು ಜಿಲ್ಲೆಯ ಮಧುಗರಿ ಹಾಗೂ ತುಮಕೂರಿನಲ್ಲಿ ತಲಾ 1 ಸೆಂಟಿ ಮೀಟರ್ ಮಳೆಯಾಗಿದೆ.
ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಕೊಪ್ಪಳ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ಕೆಲವೊಂದು ಭಾಗಗಳಲ್ಲೂ ವರುಣನ ಸಿಂಚನವಾಗಿದೆ.
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಪ್ರದೇಶಗಳಲ್ಲಿ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇಲ್ಲಿ ಗರಿಷ್ಠ ಉಷ್ಣಾಂಶ 32 ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹೇಳಿದೆ.
ನಿನ್ನೆ (ಜೂನ್ 6, ಮಂಗಳವಾರ) ಸಂಜೆಯ ನಂತರ ನಗರದಲ್ಲಿ ಕೆಲವೆಡೆ ಜೋರು ಮಳೆಯಾಗಿದೆ. ಇದರಿಂದ ವಾಹನ ಸವಾರರು ಹಾಗೂ ಜನಸಾಮಾನ್ಯರು ಪರದಾಡುವಂತಾಗಿತ್ತು. ಮೆಜೆಸ್ಟಿಕ್, ಜಯನಗರ, ಬಸವನಗುಡಿ, ಗಾಂಧಿನಗರ, ಎಂಜಿ ರಸ್ತೆ, ವಿಧಾನಸೌಧ, ಹೆಬ್ಬಾಳ, ಆರ್ ಟಿ ನಗರ, ಮುನಿರೆಡ್ಡಿ ಪಾಳ್ಯ, ಸುಲ್ತಾನ್ ಪಾಳ್ಯ, ಯಶವಂತಪುರದಲ್ಲೂ ಮಳೆಯಾಗಿದೆ. ಕಚೇರಿಗಳಿಗೆ ತೆರಳುವ ಉದ್ಯೋಗಿಗಳಿಗೆ ಅಡ್ಡಿಯುಂಟು ಮಾಡಿತು.
ವಿಭಾಗ