ಹಾಸನ, ಚಿಕ್ಕಮಗಳೂರು, ಕೊಡಗಿನಲ್ಲಿಂದು ಭಾರಿ ಮಳೆ ಸಾಧ್ಯತೆ, ಬೆಂಗಳೂರು–ಕರಾವಳಿಯಲ್ಲೂ ಸುರಿಯಲಿದೆ ವರ್ಷಧಾರೆ; ಅಕ್ಟೋಬರ್ 16ರ ಹವಾಮಾನ ವರದಿ
ಕನ್ನಡ ಸುದ್ದಿ  /  ಕರ್ನಾಟಕ  /  ಹಾಸನ, ಚಿಕ್ಕಮಗಳೂರು, ಕೊಡಗಿನಲ್ಲಿಂದು ಭಾರಿ ಮಳೆ ಸಾಧ್ಯತೆ, ಬೆಂಗಳೂರು–ಕರಾವಳಿಯಲ್ಲೂ ಸುರಿಯಲಿದೆ ವರ್ಷಧಾರೆ; ಅಕ್ಟೋಬರ್ 16ರ ಹವಾಮಾನ ವರದಿ

ಹಾಸನ, ಚಿಕ್ಕಮಗಳೂರು, ಕೊಡಗಿನಲ್ಲಿಂದು ಭಾರಿ ಮಳೆ ಸಾಧ್ಯತೆ, ಬೆಂಗಳೂರು–ಕರಾವಳಿಯಲ್ಲೂ ಸುರಿಯಲಿದೆ ವರ್ಷಧಾರೆ; ಅಕ್ಟೋಬರ್ 16ರ ಹವಾಮಾನ ವರದಿ

ವಾಯುಭಾರ ಕುಸಿತ ಕಾರಣದಿಂದ ನಿನ್ನೆಯಿಂದ (ಅಕ್ಟೋಬರ್ 15) ರಾಜ್ಯದ ಬಹುತೇಕ ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲೂ ನಿರಂತರ ವರ್ಷಧಾರೆ ಸುರಿಯುತ್ತಿದೆ. ಇಂದು (ಅಕ್ಟೋಬರ್ 16) ಕೂಡ ದಕ್ಷಿಣ ಒಳನಾಡಿನ ಬಹುತೇಕ ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಕರಾವಳಿಯಲ್ಲಿ ಮಳೆ ಕೊಂಚ ಬಿಡುವು ನೀಡುವ ಸಾಧ್ಯತೆ ಇದೆ ಎನ್ನುತ್ತಿದೆ ಹವಾಮಾನ ವರದಿ.

ಕರ್ನಾಟಕ ಹವಾಮಾನ ಅಕ್ಟೋಬರ್ 16
ಕರ್ನಾಟಕ ಹವಾಮಾನ ಅಕ್ಟೋಬರ್ 16

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಮಳೆಯ ಪ್ರಮಾಣ ಜೋರಾಗಿದೆ. ಇನ್ನೂ 4 ದಿನಗಳ ಕಾಲದ ಮಳೆಯ ಅಬ್ಬರ ಜೋರಾಗಿ ಇರಲಿದೆ ಎಂದು ಹೇಳಲಾಗುತ್ತಿದ್ದು ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಮಳೆಯ ಅಬ್ಬರ ಜೋರಾಗಿ ಇರಲಿದೆ. ಚಳಿಯ ನಡುವೆ ಮಳೆಯು ಸೇರಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

ಇಂದು (ಅಕ್ಟೋಬರ್ 16) ಕೂಡ ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿ ಇರಲಿದ್ದು, ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಇಂದು ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.

ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೊಡಗು, ಕೋಲಾರ, ಮೈಸೂರು, ಮಂಡ್ಯ, ರಾಮನಗರ, ಶಿವಮೊಗ್ಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಒಳನಾಡಿನಲ್ಲೂ ಮಳೆ ಸಾಧ್ಯತೆ

ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಗುಡುಗು ಮಿಂಚು ಸಹಿತ ಸಾಧಾರಣದಿಂದ ಹಗುರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.

ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ

ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು ವಿಜಯನಗರದಲ್ಲಿ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ಹವಾಮಾನ

ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಹನಿ ಮಳೆಯಾಗುತ್ತಿದೆ. ಇಂದು ಕೂಡ ಬಹುತೇಕ ಕಡೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದ್ದು, ಕೊಡೆ ಇಲ್ಲದೇ ಹೊರಗಡೆ ಹೋಗುವುದು ತಪ್ಪಿಸಬೇಕು. ನಾಳೆ (ಅಕ್ಟೋಬರ್ 17) ಬೆಂಗಳೂರಿನಲ್ಲಿ ಭಾರಿ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದೆ.

ಅಕ್ಟೋಬರ್ 19ರವರೆಗೂ ರಾಜ್ಯದ ಬಹುತೇಕ ಕಡೆ ಮಳೆ ಸುರಿಯುವ ಸಾಧ್ಯತೆ ಇದ್ದು, ನಾಳೆ (ಅಕ್ಟೋಬರ್ 17) ರಾಜ್ಯದ ಬಹುತೇಕ ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ 18ರವರೆಗೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.