Karnataka Weather: ರಾಜ್ಯದಲ್ಲಿ ಹೆಚ್ಚಿದ ಚಳಿ, ಇನ್ನೂ 5 ದಿನ ಶೀತ ವಾತಾವರಣ ಮುಂದುವರಿಕೆ; ಈ ಜಿಲ್ಲೆಗಳಲ್ಲಿ ಬೀಸಲಿದೆ ಶೀತಗಾಳಿ
ಕರ್ನಾಟಕದಾದ್ಯಂತ ಮೈ ಕೊರೆವ ಚಳಿಯಿಂದಾಗಿ ಜನರು ತತ್ತರಿಸುತ್ತಿದ್ದಾರೆ. ಬಹುತೇಕ ಜಿಲ್ಲೆಗಳಲ್ಲಿ ಶೀತ ವಾತಾವರಣವಿದೆ. ಮುಂದಿನ 5 ದಿನಗಳ ಕಾಲ ಅಂದರೆ ಜನವರಿ 15ವರೆಗೆ ಥಂಡಿ ವಾತಾವರಣ ಮುಂದುವರಿಯಲಿದೆ. ಇದರೊಂದಿಗೆ ಕೆಲವು ಜಿಲ್ಲೆಗಳಲ್ಲಿ ಶೀತಗಾಳಿ ಬೀಸುವ ಮುನ್ಸೂಚನೆಯನ್ನೂ ನೀಡಿದೆ ಹವಾಮಾನ ಇಲಾಖೆ. ಇಂದು (ಜನವರಿ 10) ಯಾವ ಜಿಲ್ಲೆಗಳಲ್ಲಿ ಚಳಿ ಹೆಚ್ಚಿರಲಿದೆ ನೋಡೋಣ.
ಬೆಂಗಳೂರು: ಕರ್ನಾಟಕದಲ್ಲಿ ತಾಪಮಾನ ಕುಸಿತದ ಕಾರಣದಿಂದ ಹಲವು ಜಿಲ್ಲೆಗಳಲ್ಲಿ ಮೈ ಕೊರೆವ ಚಳಿ ಇದೆ. ಮೈ ನಡುಗಿಸುವ ಥಂಡಿಗೆ ಜನರು ತತ್ತರಿಸುತ್ತಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ಕಲಬುರಗಿ, ಬೀದರ್, ಚಿಕ್ಕಮಗಳೂರು, ಮಂಡ್ಯ, ವಿಜಯಪುರ ಜಿಲ್ಲೆಗಳಲ್ಲಿ ತಾಪಮಾನ ವಿಪರೀತ ಕುಸಿದಿದೆ. ಮಧ್ಯಾಹ್ನದ ಹೊತ್ತಿನಲ್ಲೂ ಚಳಿಗೆ ಮೈ ನಡುಗುವ ಪರಿಸ್ಥಿತಿ ಎದುರಾಗಿದೆ. ಬೆಳಗಿನ ಜಾವ, ಸಂಜೆ ಹೊತ್ತು ಶೀತಗಾಳಿ ಬೀಸುತ್ತಿದ್ದು ಹೊರಗಡೆ ಹೋಗುವುದು ಅಸಾಧ್ಯ ಎನ್ನುವಂತಾಗಿದೆ.
ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ವಾತಾವರಣ ಇನ್ನಷ್ಟು ಬಿಗಡಾಯಿಸಲಿದ್ದು, ಚಳಿ ಹೆಚ್ಚಾಗಲಿದೆ. ಡಿಸೆಂಬರ್ 15ರವರೆಗೆ ರಾಜ್ಯದಲ್ಲಿ ಶೀತಗಾಳಿಯ ಜೊತೆ ತಾಪಮಾನ ಕುಸಿಯಲಿರುವ ಕಾರಣ ವಿಪರೀತ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇದ್ದು, ಇನ್ನೂ 5 ದಿನ ಇನ್ನೂ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಕುಸಿಯಲಿದೆ ಎಂದು ವರದಿಗಳು ತಿಳಿಸಿವೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಭಾರಿ ಚಳಿ ಇರಲಿದ್ದು, ಜನರು ಆರೋಗ್ಯ ಮುನ್ನೆಚ್ಚರಿಕೆ ವಹಿಸಬೇಕು. ಉತ್ತರ ಒಳನಾಡಿನ ಬೀದರ್, ಕಲಬುರಗಿ, ಗದಗ್‌ನಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಚಿಕ್ಕಮಗಳೂರು, ಮಂಡ್ಯ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು 2 ರಿಂದ 4 ಡಿಗ್ರಿ ಕುಸಿಯಲಿದೆ. ಕರಾವಳಿ ಜಿಲ್ಲೆಯ ಭಾಗವಾದ ಉತ್ತರ ಕನ್ನಡದಲ್ಲಿ ತಾಪಮಾನ ಏರಿಕೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಚಳಿಯ ಎಂದಿನಂತೆ ಇರಲಿದ್ದು, ತಾಪಮಾನ ಸ್ಥಿರವಾಗಿ ಇರಲಿದೆ.
ಏಲ್ಲೆಲ್ಲೆ ಚಳಿ ಜೋರು
ಡಿಸೆಂಬರ್ 15ರವರೆಗೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಬೀದರ್, ಕಲಬುರಗಿ, ವಿಜಯಪುರ, ಗದಗ, ಮಂಡ್ಯ, ಮೈಸೂರು, ಯಾದಗಿರಿ ಜಿಲ್ಲೆಗಳಲ್ಲಿ ಚಳಿಯ ಪ್ರಭಾವ ಜೋರಿರಲಿದೆ. ಈ ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು 1 ರಿಂದ 2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಮುನ್ಸೂಚನೆ ಇದೆ. ಮಕರ ಸಂಕ್ರಾಂತಿ ಹಬ್ಬದವರೆಗೂ ರಾಜ್ಯದಲ್ಲಿ ಚಳಿ ಮುಂದುವರಿಯಲಿದ್ದು, ನಂತರದ ದಿನಗಳಲ್ಲಿ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ. ನಿನ್ನೆ (ಜನವರಿ 9) ಇಂದಲೇ ಚಳಿಯ ಪ್ರಭಾವ ಜೋರಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದಂತೆ ಇಬ್ಬನಿಯಿಂದ ಮುಚ್ಚಿದ ವಾತಾವರಣ ಇರಲಿದೆ.
ಬೆಂಗಳೂರಿನಲ್ಲೂ ಮೈ ಕೊರೆವ ಚಳಿ
ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಚಳಿಯ ಪ್ರಭಾವ ಜೋರಾಗಿದ್ದು, ಮಕರ ಸಂಕ್ರಾಂತಿವರೆಗೂ ಚಳಿ ಹೆಚ್ಚಿರಲಿದೆ. ಸಿಲಿಕಾನ್ ಸಿಟಿಯಲ್ಲಿ ಬೆಳಗಿನಿಂದ ಸಂಜೆವರೆಗೂ ಮೋಡ ಕವಿದ ವಾತಾವರಣ ಇರಲಿದೆ. ಬೆಳಗಿನ ಜಾವದಲ್ಲಿ ಮೈ ಕೊರೆವ ಚಳಿ ಇದ್ದು ಸಾಮಾನ್ಯವಾಗಿ 10 ಗಂಟೆವರೆಗೆ ಮಂಜು ಮುಸುಕಿದಂತಿರುತ್ತದೆ. ಸಂಜೆಗೆ ವೇಳೆಯೂ ಶೀತ ವಾತಾವರಣ ಇರಲಿದ್ದು, ಹೊರ ಹೋಗುವ ಮೊದಲು ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ವಿಭಾಗ