Karnataka Weather: ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರಿ ಚಳಿ ಸಾಧ್ಯತೆ, ಕೆಲವೆಡೆ ಒಣಹವೆ ಮುಂದುವರಿಕೆ
ಕರ್ನಾಟಕದಲ್ಲಿ ಚಳಿಯ ಪ್ರಮಾಣ ತಗ್ಗುತ್ತಿಲ್ಲ. ಕರಾವಳಿ ಪ್ರದೇಶ ಹೊರತು ಪಡಿಸಿ ಉಳಿದೆಲ್ಲಾ ಕಡೆ ಚಳಿಯ ಪ್ರಭಾವ ಜೋರಿದೆ. ಬೆಂಗಳೂರು, ಬೀದರ್, ಚಿಕ್ಕಮಗಳೂರು ಸೇರಿ ಈ ಕೆಲವು ಜಿಲ್ಲೆಗಳಲ್ಲಿ ಜನವರಿ 28ರವರೆಗೆ ಚಳಿ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕೆಲವೆಡೆ ದಟ್ಟ ಮಂಜು ಬೀಳುವ ಸಾಧ್ಯತೆಯೂ ಇದೆ. ಜ. 23ರ ಕರ್ನಾಟಕ ಹವಾಮಾನ ವರದಿ ಇಲ್ಲಿದೆ.

ಬೆಂಗಳೂರು: ಕರ್ನಾಟಕದಲ್ಲಿ ಬಹುತೇಕ ಕಡೆ ಚಳಿಯ ವಾತಾವರಣವಿದೆ. ಕಳೆದ ಎರಡು ದಿನಗಳಿಂದ ಚಳಿ ಹೆಚ್ಚಾಗಿದ್ದು ಇನ್ನೂ ನಾಲ್ಕೈದು ದಿನ ಇದೇ ರೀತಿಯ ವಾತಾವರಣ ಇರಲಿದೆ. ಜನವರಿ 27ರವರೆಗೆ ರಾಜ್ಯದಲ್ಲಿ ಚಳಿಯ ಪ್ರಭಾವ ಜೋರಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಪರೀತ ಚಳಿಯ ಕಾರಣದಿಂದ ಜನರು ತತ್ತರಿಸಿ ಹೋಗಿದ್ದಾರೆ.
ಕಳೆದ ಎರಡು ಮೂರು ದಿನಗಳ ಹಿಂದೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಇದ್ದಕ್ಕಿದ್ದಂತೆ ಮಳೆ ಶುರುವಾಗಿತ್ತು. ಆದರೆ ಈಗ ಮಳೆಯ ಕಡಿಮೆಯಾಗಿ ಪುನಃ ಚಳಿಯ ವಾತಾವರಣ ಮುಂದುವರಿದೆ. ಮೈ ಕೊರೆಯುವ ಚಳಿಯು ಜನರನ್ನು ತತ್ತರಿಸುವಂತೆ ಮಾಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಕವಿದ ವಾತಾವರಣ ಇರಲಿದ್ದು, ಹೊರಗಡೆ ಹೋಗುವುದು ಅಸಾಧ್ಯ ಎನ್ನುವಂತಾಗಿದೆ. ಶೀತಗಾಳಿಯು ಬೀಸುವ ಕಾರಣ ಆರೋಗ್ಯವು ಹದಗೆಡುತ್ತಿದೆ.
ಹವಾಮಾನ ಇಲಾಖೆಯ ವರದಿಯ ಪ್ರಕಾರ ಉತ್ತರ ಒಳನಾಡಿನ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆಗಳಿಲ್ಲ. ಈಗಿನಷ್ಟೇ ತಾಪಮಾನ ಇನ್ನೂ ಕೆಲವು ದಿನಗಳು ಮುಂದುವರಿಯಲಿದೆ. ಆದರೆ ಜನವರಿ 28ರವರೆಗೆ ಒಂದೆರಡು ಕಡೆ ದಟ್ಟ ಮಂಜು ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೀದರ್, ಯಾದಗಿರಿ, ಧಾರಾವಾಡ, ವಿಜಯಪುರ, ಹಾವೇರಿ ಸೇರಿದಂತೆ ಇನ್ನೂ ಕೆಲ ಜಿಲ್ಲೆಗಳಲ್ಲಿ ಚಳಿಯ ಜೋರಿರಲಿದ್ದು, ಜನರು ಮುನ್ನೆಚ್ಚರಿಕೆ ವಹಿಸಬೇಕಿದೆ. ಬೀದರ್‌ನಲ್ಲಿ ಕನಿಷ್ಠ ತಾಪಮಾನ ಕುಸಿದಿದ್ದು, ಉಳಿದ ಜಿಲ್ಲೆಗಳಿಗಿಂತ ಚಳಿ ಹೆಚ್ಚಿರಲಿದೆ.
ದಕ್ಷಿಣ ಒಳನಾಡಿನಲ್ಲೂ ಚಳಿಯ ಪ್ರಮಾಣ ಹೆಚ್ಚಾಗಿದೆ. ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಕುಸಿದಿದ್ದು, ಮೈ ಕೊರೆಯುವ ಚಳಿಯು ಜನರನ್ನು ಕಂಗಾಲಾಗುವಂತೆ ಮಾಡಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಶಿಮಮೊಗ್ಗ, ಮಡಿಕೇರಿ, ಚಾಮರಾಜನಗರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಚಳಿ ಜೋರಾಗಿದ್ದು ಇನ್ನೂ ಕೆಲವು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯಲಿದೆ. ಜನವರಿ ಅಂತ್ಯದವರೆಗೂ ಈ ಭಾಗಗಳಲ್ಲಿ ಚಳಿಯ ಹೆಚ್ಚರಲಿದೆ. ಉಳಿದ ಪ್ರದೇಶಗಳಲ್ಲಿ ಒಣಹವೆ ಮುಂದುವರಿಯಲಿದೆ. ಚಿಕ್ಕಮಗಳೂರಿನಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲೂ ಚಳಿ
ರಾಜಧಾನಿ ಬೆಂಗಳೂರಿನಲ್ಲಿ ಹಗಲಿನ ಹೊತ್ತು ಚಳಿಯ ಪ್ರಮಾಣ ಕೊಂಚ ತಗ್ಗಿದ್ದರೂ ಬೆಳಗಿನ ಜಾವ ಚಳಿ ವಿಪರೀತ ಇರಲಿದೆ. ಶೀತಗಾಳಿ, ಮಂಜು ಮುಸುಕಿದ ವಾತಾವರಣದ ಕಾರಣ ಮನೆಯಿಂದ ಹೊರಗೆ ಹೋಗುವುದು ಅಸಾಧ್ಯ ಎನ್ನುವಂತಾಗಿದೆ. ಬೆಂಗಳೂರಿನಲ್ಲೂ ಕೂಡ ಜನವರಿ 28ರವರೆಗೆ ಚಳಿಯ ವಾತಾವರಣ ಹೀಗೆ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರು ಸುತ್ತಮುತ್ತ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ರಾಜ್ಯದಲ್ಲಿ ವಾತಾವರಣ ಏರುಪೇರಾಗುತ್ತಿದ್ದು, ಜನರ ಆರೋಗ್ಯವೂ ಹದಗೆಡುತ್ತಿದೆ. ಜ್ವರ, ಕೆಮ್ಮು, ನೆಗಡಿಯಂತಹ ಕಾಲೋಜಿತ ಸಮಸ್ಯೆಗಳು ಜನರನ್ನು ಬಾಧಿಸುತ್ತಿದ್ದು, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಜನವರಿ ಕಳೆದ ನಂತರ ಚಳಿಯ ಪ್ರಮಾಣ ಕೊಂಚ ತಗ್ಗುವ ನಿರೀಕ್ಷೆ ಇದ್ದು, ಅಲ್ಲಿಯವರೆಗೆ ಹೆಚ್ಚಿನ ಆರೋಗ್ಯ ಕಾಳಜಿ ಮಾಡಬೇಕಾಗಿದೆ.
