Karnataka Weather: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕುಸಿದ ತಾಪಮಾನ, ಮೈ ನಡುಗುವ ಚಳಿಗೆ ಜನಜೀವನ ತತ್ತರ
ತಾಪಮಾನ ಕುಸಿತದ ಕಾರಣ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಚಳಿಯ ಪ್ರಭಾವ ಜೋರಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು 15 ಡಿಗ್ರಿ ಸೆಲ್ಸಿಯಸ್ ಒಳಗಿದೆ. ಇನ್ನೂ ಒಂದೆರಡು ದಿನ ಇದೇ ವಾತಾವರಣ ಇರಲಿದೆ ಎನ್ನಲಾಗುತ್ತಿದ್ದು, ಅತಿಯಾದ ಚಳಿಯಿಂದ ಜನರು ತತ್ತರಿಸುತ್ತಿದ್ದಾರೆ. ಇಂದು (ಜ 9) ಕರ್ನಾಟಕ ಹವಾಮಾನ ಹೇಗಿದೆ ನೋಡೋಣ.
ಬೆಂಗಳೂರು: ರಾಜ್ಯದಲ್ಲಿ ಚಳಿಯ ಪ್ರಭಾವ ಜೋರಾಗಿದೆ, ಸಂಜೆ ಹಾಗೂ ಬೆಳಗಿನ ಜಾವ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಹಿಮಾಲಯದಂತೆ ಮೈ ಕೊರೆವ ಚಳಿಯೊಂದಿಗೆ ಹಿಮ ಹಾಸಿದಂತಹ ವಾತಾವರಣವಿರುತ್ತದೆ. ತಾಪಮಾನ ಕುಸಿದಿರುವುದು ಚಳಿ ಹೆಚ್ಚಲು ಪ್ರಮುಖ ಕಾರಣವಾಗಿದೆ. ಇನ್ನೂ ಕೆಲವು ದಿನಗಳ ಕಾಲ ಇದೇ ರೀತಿ ಚಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಸಿದೆ.
ಸಾಮಾನ್ಯವಾಗಿ ಮಕರ ಸಂಕ್ರಾಂತಿ ಸಮಯದಲ್ಲಿ ಚಳಿಯ ಪ್ರಭಾವ ಜೋರಿರುತ್ತದೆ. ಇದೀಗ ಮಕರ ಸಂಕ್ರಾಂತಿ ಹಬ್ಬದ ಸಮೀಪದಲ್ಲಿದ್ದು, ಈ ವರ್ಷ ಚಳಿ ಕೊಂಚ ಹೆಚ್ಚೇ ಇದೆ ಎಂದು ಹೇಳಬಹುದು. ಇನ್ನೂ ಎರಡು ಮೂರು ದಿನ ರಾಜ್ಯದಲ್ಲಿ ಅತಿಯಾದ ಚಳಿಯು ಜನರ ಮೈ ನಡುಗುವಂತೆ ಮಾಡಲಿದೆ.
ಬೆಂಗಳೂರು ಹಾಗೂ ಸುತ್ತಲಿನ ಜಿಲ್ಲೆಗಳು, ಬೀದರ್, ರಾಯಚೂರು, ವಿಜಯಪುರ, ಹಾವೇರಿ, ಧಾರಾವಾಡ ಜಿಲ್ಲೆಗಳಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದ ಕಾರಣ ಅತಿಯಾದ ಚಳಿಯಿಂದ ಜನರು ತತ್ತರಿಸುತ್ತಿದ್ದಾರೆ. ಬೆಳಿಗ್ಗೆ 9, 10 ಗಂಟೆಯಾದ್ರೂ ಮಂಜು ಕವಿದ ವಾತಾವರಣ ಇರುವ ಕಾರಣ, ಹೊರಗಡೆ ಹೋಗುವುದೇ ಅಸಾಧ್ಯ ಎನ್ನುವ ಪರಿಸ್ಥಿತಿ ಎದುರಾಗಿದೆ.
ಮೈಸೂರು, ಮಂಡ್ಯ, ಚಿಕ್ಕಮಗಳೂರಿನಲ್ಲೂ ಕನಿಷ್ಠ ತಾಪಮಾನವು 2 ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿತವಾಗಿದ್ದು ಮೈ ನಡುಗುವ ಚಳಿಗೆ ಜನರು ಹೆದರುವಂತಾಗಿದೆ. ಸ್ವೆಟರ್, ಜಾಕೆಟ್ ಇಲ್ಲದೇ ಮಧ್ಯಾಹ್ನದ ಹೊತ್ತು ಕೂಡ ಮನೆಯಿಂದ ಹೊರ ಬರುವುದು ಕಷ್ಟ ಸಾಧ್ಯವಾಗಿದೆ. ಈ ನಡುವೆ ಜ್ವರ, ಕೆಮ್ಮು, ನೆಗಡಿಯಂತಹ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು ಜನರು ಕೊಂಚ ಹೆಚ್ಚು ಎಚ್ಚರಿಕೆ ವಹಿಸಬೇಕಾಗಿದೆ.
ಇನ್ನೂ 3–4 ದಿನ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಶೀತಗಾಳಿ ಬೀಸುವ ಎಚ್ಚರಿಕೆಯನ್ನೂ ನೀಡಿದೆ ಹವಾಮಾನ ಇಲಾಖೆ. ಬೆಂಗಳೂರು, ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಿಗೆ ಶೀತಗಾಳಿ ಬೀಸಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಮಂಡ್ಯ, ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೂ ಶೀತಗಾಳಿಯ ಎಚ್ಚರಿಕೆ ನೀಡಲಾಗಿದ್ದು ಜನರು ಅಗತ್ಯ ಎಚ್ಚರ ವಹಿಸುವಂತೆ ಹಮಾಮಾನ ಇಲಾಖೆ ಸೂಚಿಸಿದೆ.
ಬೆಂಗಳೂರು ಹವಾಮಾನ
ಬೆಂಗಳೂರಿನಲ್ಲಿ ಚಳಿಯ ಪ್ರಭಾವ ಭಾರಿ ಜೋರಿದ್ದು, ಇಂದು (ಜನವರಿ 9) ಬೆಳಗಿನಿಂದಲೇ ಸಂಪೂರ್ಣ ಮಂಜು ಮುಸುಕಿದ ವಾತಾವರಣವಿದೆ. ಮೈ ಕೊರೆಯುವ ಚಳಿಯ ವಾತಾವರಣಕ್ಕೆ ನಗರದ ಜನತೆ ತತ್ತರಿಸುತ್ತಿದ್ದಾರೆ. ಇದರೊಂದಿಗೆ ಚಳಿಗಾಳಿಯ ಪ್ರಭಾವವೂ ಹೆಚ್ಚಿದೆ. ಬೆಂಗಳೂರಿನಲ್ಲಿ ಒಂದು ಕೆಲವು ದಿನಗಳ ಕಾಲ ಇದೇ ವಾತಾವರಣ ಮುಂದುವರಿಸುವ ಸಾಧ್ಯತೆ, ಇದು ಜನರು ಮನೆಯಿಂದ ಹೊರ ಹೋಗುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಉತ್ತಮ. ಬೆಂಗಳೂರಿನಲ್ಲಿಂದು ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲಿಯಸ್ಸ್ ಇರಲಿದೆ.