Yugadi 2024 Rains: ಬಿಸಿಲ ಬೇಗೆಗೆ ಖುಷಿಯ ವಿಚಾರ, ಯುಗಾದಿಗೆ ಮೊದಲು ಕರ್ನಾಟಕದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರಲಿದೆ ಮಳೆ !
ಕನ್ನಡ ಸುದ್ದಿ  /  ಕರ್ನಾಟಕ  /  Yugadi 2024 Rains: ಬಿಸಿಲ ಬೇಗೆಗೆ ಖುಷಿಯ ವಿಚಾರ, ಯುಗಾದಿಗೆ ಮೊದಲು ಕರ್ನಾಟಕದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರಲಿದೆ ಮಳೆ !

Yugadi 2024 Rains: ಬಿಸಿಲ ಬೇಗೆಗೆ ಖುಷಿಯ ವಿಚಾರ, ಯುಗಾದಿಗೆ ಮೊದಲು ಕರ್ನಾಟಕದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರಲಿದೆ ಮಳೆ !

Rain News ಕರ್ನಾಟಕಲ್ಲಿ ಬಿಸಿಲ ನಡುವೆ ಮಳೆಯ ಆಶಾಭಾವ. ಮುಂದಿನ ಮೂರ್ನಾಲ್ಕು ದಿನದ ಕರ್ನಾಟಕದ ಹಲವು ಕಡೆ ಮಳೆಯಾಗಲಿದೆ. ಇಲ್ಲಿದೆ ಅದರ ವಿವರ.

ಯುಗಾದಿ ವೇಳೆ ಕರ್ನಾಟಕದ ಹಲವು ಕಡೆಗಳಲ್ಲಿ ಮಳೆಯಾಗುವ ಮುನ್ಸೂಚನೆಯಿದೆ.
ಯುಗಾದಿ ವೇಳೆ ಕರ್ನಾಟಕದ ಹಲವು ಕಡೆಗಳಲ್ಲಿ ಮಳೆಯಾಗುವ ಮುನ್ಸೂಚನೆಯಿದೆ.

ಬೆಂಗಳೂರು: ಯುಗಾದಿ ಹಬ್ಬ( Ugadi) ಬಂದರೆ ಒಂದೆರಡು ಮಳೆಗಳು ಬಂದೇ ಬರುತ್ತವೆ. ಬಿಸಿಲಿನಿಂದ ಬಸವಳಿದ ಜನರಿಗೆ ಮಳೆಗಳು ತಂಪೆರೆಯುತ್ತವೆ. ಈ ಬಾರಿಯೂ ಯುಗಾದಿ ಹಾಗೂ ಮುನ್ನಾ ದಿನಗಳಲ್ಲಿ ಕರ್ನಾಟಕದ ಹಲವು ಕಡೆಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಬುಧವಾರ ಹವಾಮಾನ ಇಲಾಖೆಯು ಬಿಡುಗಡೆ ಮಾಡಿರುವ ವರದಿ ಪ್ರಕಾರ ಯುಗಾದಿ ವೇಳೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಲಬುರಗಿ, ಬೀದರ್‌. ಬೆಳಗಾವಿ. ಬಾಗಲಕೋಟೆ, ಹಾಸನ, ಕೊಡಗು, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಯುಗಾದಿ ವೇಳೆ ಅಶ್ವಿನಿ, ಭರಣಿ ಮಳೆಗಳು ಬರಬಹುದು ಎನ್ನುವ ನಿರೀಕ್ಷೆ ರೈತಾಪಿ ವಲಯದ್ದು. ಇದಕ್ಕೆ ಪೂರಕವಾಗಿ ಹವಾಮಾನ ಇಲಾಖೆಯೂ ಮಳೆಯ ಮಾಹಿತಿಯನ್ನು ನೀಡಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಯಾವಾಗ ಎಲ್ಲಿ ಮಳೆ

ಏಪ್ರಿಲ್‌ 6ರ ಶನಿವಾರದಂದು ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆ, ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್‌, ಹಳೆ ಮೈಸೂರು ಭಾಗದ ಮೈಸೂರು, ಮಂಡ್ಯ ಹಾಗೂ ಕೊಡಗು ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಹಗುರವಾಗಿ ಮಳೆಯಾಗುವ ಸಾಧ್ಯತೆಗಳಿವೆ

ಏಪ್ರಿಲ್‌ 7ರ ಭಾನುವಾರದಂದು ದಕ್ಷಿಣ ಕನ್ನಡ, ಬೀದರ್‌, ಕಲಬುರಗಿ, ಚಿಕ್ಕಮಗಳೂರು, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರವಾಗಿ ಮಳೆ ಬೀಳುವ ಮುನ್ಸೂಚನೆಯನ್ನು ನೀಡಲಾಗಿದೆ.

ಏಪ್ರಿಲ್‌ 8ರ ಸೋಮವಾರದಂದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್‌,ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರ, ಚಾಮರಾಜನಗರ, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ, ಮೈಸೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಒಂದರೆಡು ಕಡೆಗಳಲ್ಲಿ ಹಗುರವಾಗಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ಮುನ್ಸೂಚನೆಯುನ್ನು ನೀಡಿದೆ.

ದಕ್ಷಿಣ ಕನ್ನಡದಲ್ಲಿ ಮಳೆ

ಮಾರ್ಚ್‌ನಿಂದ ಈಚೆಗೆ ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ಬೀದರ್‌ ಸಹಿತ ಕೆಲವು ಕಡೆ ಮಳೆಯಾಗಿರುವ ವರದಿಯಾಗಿದೆ. ಅದೂ ಅಲ್ಪಪ್ರಮಾಣದಲ್ಲಿ ಮಳೆಯಾಗಿದೆ. ಏಪ್ರಿಲ್‌ನಲ್ಲಿ ಕೊಡಗಿನ ಕೆಲವು ಕಡೆಗಳಲ್ಲಿ ಸಾಧಾರಣಾ ಮಳೆ ಸುರಿದಿದೆ. ಅದನ್ನು ಬಿಟ್ಟರೆ ಕರ್ನಾಟಕದಲ್ಲಿ ಅಷ್ಟಾಗಿ ಮಳೆಯಾಗಿಲ್ಲ. ಕೆಲವು ಜಿಲ್ಲೆಗಳಲ್ಲಂತೂ ಮಳೆಯ ದರ್ಶನವಿಲ್ಲದೇ ಮೂರು ತಿಂಗಳೆ ಆಗಿದೆ.

ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಕಳೆದ ವಾರ ದಕ್ಷಿಣ ಕನ್ನಡ ಜಿಲ್ಲೆಯ ಮಾತ್ರ ಸಾಧಾರಣ ಮಳೆಯಾಗಿದೆ. ಅದೂ ಶೇ. 19ಕ್ಕಿಂತ ಕಡಿಮೆ ಮಳೆಯಾಗಿದೆ. ಉಳಿದಂತೆ ಬಾಗಲಕೋಟೆ, ಚಿಕ್ಕಮಗಳೂರಿನಲ್ಲಿ ಕೊರತೆ ಕಂಡು ಬಂದಿದೆ. ಬೀದರ್‌, ಕಲಬುರಗಿ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಅತಿ ಕೊರತೆಯಾಗಿರುವುದು ದಾಖಲಾಗಿದೆ. ಆದರೆ ಯಾದಗಿರಿ, ರಾಯಚೂರು, ಕೊಪ್ಪಳ, ದಾವಣಗೆರೆ, ಹಾವೇರಿ, ಉತ್ತರ ಕನ್ನಡ, ಹಾಸನ, ಚಿತ್ರದುರ್ಗ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ. ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆಯೇ ಆಗಿಲ್ಲ ಎಂದು ವಾರದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಳೆ ನಕ್ಷತ್ರ ನಂಬಿಕೆ

ನಮ್ಮಲ್ಲಿ ಮಳೆ ಪ್ರಕೃತಿಯೊಂದಿಗೆ ಮಾತ್ರ ನಂಟು ಹೊಂದಿಲ್ಲ. ಧಾರ್ಮಿಕವಾಗಿಯೂ ಮಳೆಗಳಿಗೆ ಮಹತ್ವವಿದೆ. ಒಟ್ಟು ಹದಿನಾರು ಮಳೆ ನಕ್ಷತ್ರಗಳ ನಂಬಿಕೆ ನಮ್ಮಲ್ಲಿದೆ. ಆಯಾ ಕಾಲಕ್ಕೆ ಇಂತಹುದೇ ಮಳೆಯಾಗಲಿದೆ ಎನ್ನುವುದನ್ನು ನಕ್ಷತ್ರ ಆಧರಿಸಿ ಹೇಳಲಾಗುತ್ತದೆ. ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ, ಮೃಗಶಿರಾ, ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷ, ಮಘ, ಹುಬ್ಬ, ಉತ್ತರ, ಹಸ್ತ, ಚಿತ್ತ, ಸ್ವಾತಿ, ವಿಶಾಖ ಸಹಿತ ಒಟ್ಟು 16 ಮಳೆ ನಕ್ಷತ್ರಗಳ ಆಧಾರದಲ್ಲಿ ಮಳೆಯನ್ನು ಹಂಚಿಕೆ ಮಾಡಲಾಗುತ್ತದೆ. ಅಶ್ವಿನಿ, ಭರಣಿ ನಕ್ಷತ್ರಗಳ ಮಳೆಯು ಏಪ್ರಿಲ್ - ಮೇ ತಿಂಗಳಲ್ಲಿ, ಕೃತಿಕಾ ಹಾಗೂ ರೋಹಿಣಿ ನಕ್ಷತ್ರಗಳು ಮೇ ತಿಂಗಳ ಮಳೆ ನಕ್ಷತ್ರಗಳು. ಮೃಗಶಿರಾ - ಆರಿದ್ರಾ ನಕ್ಷತ್ರಗಳು ಜೂನ್ ತಿಂಗಳಲ್ಲಿ, ಪುನರ್ವಸು - ಪುಷ್ಯ ನಕ್ಷತ್ರ ಜುಲೈ ನಲ್ಲಿ, ಆಶ್ಲೇಷ - ಮಘ- ಹುಬ್ಬ ನಕ್ಷತ್ರಗಳು ಆಗಸ್ಟ್ ತಿಂಗಳಲ್ಲಿ ಮಳೆ ತರುವ ವಾಡಿಕೆಯಿದೆ. ಉತ್ತರ - ಹಸ್ತ ನಕ್ಷತ್ರಗಳು ಸೆಪ್ಟಂಬರ್ ತಿಂಗಳಲ್ಲಿ, ಚಿತ್ತ ಹಾಗೂ ಸ್ವಾತಿ ನಕ್ಷತ್ರಗಳು ಅಕ್ಟೋಬರ್ ತಿಂಗಳಲ್ಲಿ ಹಾಗೂ ವಿಶಾಖ ನಕ್ಷತ್ರವು ನವೆಂಬರ್ ತಿಂಗಳಲ್ಲಿ ಅಲ್ಪಸ್ವಲ್ಪ ಮಳೆ ತರಬಹುದು ಎಂದು ಹೇಳಲಾಗುತ್ತದೆ. ಅದರಂತೆ ಯುಗಾದಿ ಹೊಂದಿಕೊಂಡು ಮೊದಲ ಮಳೆ ಇಳೆಗೆ ತಂಪು ನಿರೀಕ್ಷೆಯಂತೂ ಇದೆ.

Whats_app_banner