Karnataka Weather: ಕರ್ನಾಟಕದ ಹವಾಮಾನ; ಬೆಂಗಳೂರು, ಚಿತ್ರದುರ್ಗ ಸೇರಿ ಹಲವು ಜಿಲ್ಲೆಗಳಲ್ಲಿ ಮೈ ನಡುಗಿಸುವ ಚಳಿ, ಒಣ ಹವೆ
Karnataka Weather Report Jan 20: ಕರ್ನಾಟಕದಲ್ಲಿ ಚಳಿಗಾಲದ ಚಳಿಯ ಅನುಭವ ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಬಹುತೇಕರದ್ದು. ಕರಾವಳಿಯಲ್ಲಿ ಸಹಜ ವಾತಾವರಣ ಇದೆ. ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರಾತ್ರಿ ಚಳಿ ಮತ್ತು ಮುಂಜಾನೆ ಮಂಜು ಮುಸುಕಿದ ವಾತಾವರಣ ಇದೆ. ಇಂದು (ಜ.20) ಇದೇ ಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ವರದಿ ತಿಳಿಸಿದೆ.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳು, ಮೈಸೂರು, ಚಾಮರಾಜನಗರ, ಮಂಡ್ಯ ಮುಂತಾದ ಒಳನಾಡಿನ ಜಿಲ್ಲೆಗಳಲ್ಲಿ ಮುಂಜಾನೆ ಮಂಜು ಮುಸುಕಿದ ವಾತಾವರಣ ಇರಲಿದೆ. ಅದೇ ರೀತಿ ಮೈ ನಡುಗಿಸುವ ಚಳಿಯ ಅನುಭವ ಹಲವೆಡೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನಾ ವರದಿ ಹೇಳಿದೆ.
ಚಳಿಗಾಲದ ಕಾರಣ ಕರ್ನಾಟಕದ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಸಹಜವಾಗಿಯೇ ಬೆಳಗ್ಗೆ ತನಕ ಮಂಜುಮುಸುಕಿದ ವಾತಾವರಣ, ಮೈ ನಡುಗಿಸುವ ಚಳಿಯ ಅನುಭವವಾದೀತು. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಇಂದು (ಜ.20) ಬೆಂಗಳೂರು, ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ವಿವಿಧ ಜಿಲ್ಲೆಗಳಲ್ಲಿ ಬಹುತೇಕ ಕಡೆ ಚಳಿ ತೀವ್ರವಾಗಿರಲಿದೆ. ಹಲವು ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಇರಲಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ಸಹಜ ವಾತಾವರಣ, ನಿರ್ಮಲ ಆಕಾಶ ಗೋಚರಿಸಲಿದೆ. ಆದಾಗ್ಯೂ, ಕೆಲ ಹೊತ್ತು ಭಾಗಶಃ ಮೋಡ ಕವಿದ ವಾತಾವರಣವೂ ಕಂಡುಬಂದೀತು.
ಇನ್ನು ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿ ಗದಗ, ಬಾಗಲಕೋಟೆ, ಬೀದರ್, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಗಳಲ್ಲಿ ಚಳಿಯ ವಾತಾವರಣ ಇರಲಿದ್ದು, ಹಗಲು ಹೊತ್ತಿನಲ್ಲಿ ಒಣಹವೆ ಮುಂದುವರಿಯಲಿದೆ.
ಇದೇ ರೀತಿ, ದಕ್ಷಿಣ ಒಳನಾಡಿನ ಜಿಲ್ಲೆಗಳ ಪೈಕಿ ಚಾಮರಾಜನಗರ, ಕೋಲಾರ, ರಾಮನಗರ, ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರುಗಳಲ್ಲಿ ಚಳಿಯ ವಾತಾವರಣ ಇರಲಿದೆ. ಹಗಲಲ್ಲಿ ಒಣಹವೆ ಮುಂದುವರಿಯಲಿದೆ. ಅಲ್ಲಲ್ಲಿ ಭಾಗಶಃ ಮೋಡಕವಿದ ವಾತಾವರಣದ ಅನುಭವವೂ ಇದ್ದೀತು ಎಂದು ವರದಿ ತಿಳಿಸಿದೆ.
ಪ್ರಮುಖ ನಗರಗಳಲ್ಲಿ ಈಗಿನ (ಜನವರಿ 20ರ ಬೆಳಗ್ಗೆ 9 ಗಂಟೆಗೆ) ತಾಪಮಾನ
ಭಾರತೀಯ ಹವಾಮಾನ ಇಲಾಖೆಯ ದತ್ತಾಂಶ ಪ್ರಕಾರ, ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು (ಜ.20) ಈಗ 9 ಗಂಟೆಗೆ ದಾಖಲಾಗಿರುವ ತಾಪಮಾನಗಳ ವಿವರ.
ಬೆಂಗಳೂರು - 18.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 92)
ಮಂಗಳೂರು - 24.2 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 85)
ಚಿತ್ರದುರ್ಗ - 19.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 90)
ಗದಗ - 18.6 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 80)
ಹೊನ್ನಾವರ - 20.2 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 96)
ಕಲಬುರಗಿ - 21.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 64)
ಬೆಳಗಾವಿ - 29.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 38)
ಕಾರವಾರ - 30 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 56)
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರಗಳಲ್ಲಿ ಹವಾಮಾನ ಇಂದು
ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಶನಿವಾರ (ಜ.20) ಸಹಜ ವಾತಾವರಣ ಇರಲಿದೆ. ಆಕಾಶ ನಿರ್ಮಲವಾಗಿದ್ದು, ಕೆಲವು ಕಡೆ ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಕಾಣಬಹುದು. ಸಂಜೆಯಾಗುತ್ತಿದ್ದಂತೆ ಚಳಿಯೂ ಹೆಚ್ಚಾಗಬಹುದು. ಉಳಿದಂತೆ, ಹಗಲು ಹೊತ್ತಿನಲ್ಲಿ ಒಣಹವೆ ಇರಲಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇಂದು ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಶಿಯಸ್ ಅನುಭವಕ್ಕೆ ಬರಲಿದೆ. ಅದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಶಿಯಸ್ ಇರಲಿದೆ.
----------------------
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇತರರೂ ಬರೆಯುವಂತೆ ಪ್ರೇರೇಪಿಸಿ.. ನಮ್ಮ ಇಮೇಲ್: ht.kannada@htdigital.in