ಬೀದರ್, ಬೆಂಗಳೂರು, ದಕ್ಷಿಣ ಕನ್ನಡ ಸೇರಿ 21 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ, ಉಳಿದೆಡೆ ಒಣಹವೆ, ಹೀಗಿದೆ ಕರ್ನಾಟಕ ಹವಾಮಾನ ವಿವರ
Karnataka Weather March 23: ಸುಡುಬಿಸಿಲು ಅನುಭವಿಸುತ್ತಿದ್ದ ಕರ್ನಾಟಕದ ಹಲವಡೆ ಶನಿವಾರ ವಸಂತ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಬೀದರ್, ಬೆಂಗಳೂರು, ದಕ್ಷಿಣ ಕನ್ನಡ ಸೇರಿ 21 ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ. ಉಳಿದೆಡೆ ಒಣಹವೆ ಇರಲಿದೆ. ಕರ್ನಾಟಕ ಹವಾಮಾನ ವಿವರ ಹೀಗಿದೆ.

Karnataka Weather March 23: ಬೆಂಗಳೂರು, ಬೀದರ್, ದಕ್ಷಿಣ ಕನ್ನಡ ಜಿಲ್ಲೆ ಸೇರಿ 21 ಜಿಲ್ಲೆಗಳಲ್ಲಿ ಇಂದು (ಮಾರ್ಚ್ 23) ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಭಾಗದಲ್ಲಿ ನಿನ್ನೆ (ಮಾರ್ಚ್ 22) ಸಂಜೆ ಮಳೆಯಾಗಿದ್ದು, ಒಬ್ಬ ಬಾಲಕಿ ಮೃತಪಟ್ಟು ಅನೇಕ ಕಡೆಗಳಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಇಂದು ಕೂಡ ಬೆಂಗಳೂರಿನಲ್ಲಿ ಕೆಲವೆಡೆ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ವರದಿ ತಿಳಿಸಿದೆ.
ಕರ್ನಾಟಕ ಹವಾಮಾನ ಮಾರ್ಚ್ 23: ವಿವಿಧೆಡೆ ಮಳೆ, ಕೆಲವೆಡೆ ಒಣಹವೆ
ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ಶುಕ್ರವಾರ (ಮಾರ್ಚ್ 21) ಅಪರಾಹ್ನ ಪ್ರಕಟಿಸಿದ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ಉಡುಪಿ, ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಹಗುರವಾಗಿ ಅಥವಾ ಸಾಧಾರಣ ಮಳೆ ಅಥವಾ ಗುಡುಗು ಮಿಂಚು ಸಹಿತ ಮಳೆಯಾಗಬಹುದು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ 40- 50 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಉಳಿದೆಡೆ ಒಣಹವೆ ಇರಲಿದೆ ಎಂದು ತಿಳಿಸಿತ್ತು.
ನಿನ್ನೆ (ಮಾರ್ಚ್ 22) ಅಪರಾಹ್ನ ಪ್ರಕಟಿಸಿದ ಇತ್ತೀಚಿನ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ಇಂದು (ಮಾರ್ಚ್ 23) ಬೀದರ್, ಬೆಂಗಳೂರು, ದಕ್ಷಿಣ ಕನ್ನಡ ಸೇರಿ 21 ಜಿಲ್ಲೆಗಳಲ್ಲಿ ಮಳೆಯಾಗಬಹುದು ಎಂದು ಹೇಳಿದೆ. ಕರಾವಳಿ ಜಿಲ್ಲೆಗಳಲ್ಲಿ ಪೈಕಿ ದಕ್ಷಿಣ ಕನ್ನಡದಲ್ಲಿ ಮಾತ್ರ ಮಳೆಯಾಗಬಹುದು. ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆ ಇರಲ್ಲ. ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶಗಳಾದ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಬಹುದು. ಇದೇ ರೀತಿ, ಕರ್ನಾಟಕದ ಉತ್ತರ ಒಳನಾಡು ಪ್ರದೇಶಗಳಾದ ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಕೆಲವೆಡೆ ಹಗುರ ಮಳೆಯಾಗಬಹುದು ಎಂದು ವರದಿ ಹೇಳಿದೆ.
ಬೆಂಗಳೂರು ಹವಾಮಾನ ಇಂದು (ಮಾರ್ಚ್ 23, 2025)
ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನೀಡಿರುವ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ಇಂದು (ಮಾರ್ಚ್ 23) ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಬಹುದು ಅಥವಾ ಗುಡುಗು ಮಿಂಚು ಸಹಿತ ಮಳೆಯಾಗಬಹುದು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಾಗೂ ಬಿಬಿಎಂಪಿ ನೀಡಿರುವ ಮಾಹಿತಿ ಪ್ರಕಾರ, ಇಂದು (ಮಾರ್ಚ್ 23) ಬೆಂಗಳೂರಿನ ದಾಸರಹಳ್ಳಿ, ಆರ್‌ಆರ್‌ನಗರ,ಮಹದೇವಪುರ ವಲಯಗಳ ಕೆಲವು ಪ್ರೇಶಗಳಲ್ಲಿ ಹನಿ ಮಳೆಯಾಗಲಿದೆ. ಇನ್ನುಳಿದಂತೆ ಬೆಂಗಳೂರು ಪೂರ್ವವಲಯದ ಕೇಂದ್ರ ಭಾಗದಲ್ಲಿ, ಬೊಮ್ಮನಹಳ್ಳಿಯ ಬಹುಭಾಗ, ಬೊಮ್ಮನಹಳ್ಳಿಗೆ ಹೊಂದಿಕೊಂಡಿರುವ ಬೆಂಗಳೂರು ದಕ್ಷಿಣ ವಲಯದ ಭಾಗ ಹಾಗೂ ಬೊಮ್ಮನಹಳ್ಳಿಗೆ ಹೊಂದಿಕೊಂಡಿರುವ ಆರ್‌ಆರ್‌ನಗರ ವಲಯದ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಬಹುದು. ಉಳಿದಂತೆ ಬಿಬಿಎಂಪಿ ವ್ಯಾಪ್ತಿಯ ಬಹುತೇಕ ಪ್ರದೇಶಗಳಲ್ಲಿ ಹಗುರ ಮಳೆಯಾಗಬಹುದು.
ಆದಾಗ್ಯೂ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಶಿಯಸ್ ಹಾಗೂ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಶಿಯಸ್ ದಾಖಲಾಗಬಹುದು. ಬೆಂಗಳೂರು ನಗರದಲ್ಲಿ ನಿನ್ನೆ (ಮಾರ್ಚ್ 22) ಗರಿಷ್ಠ ತಾಪಮಾನ 33.2 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 22.9 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ಬೆಂಗಳೂರು ಗ್ರಾಮಾಂತರದಲ್ಲಿ 33.7 ಡಿಗ್ರಿ ಸೆಲ್ಶಿಯಸ್ ಗರಿಷ್ಠ, 21.6 ಡಿಗ್ರಿ ಸೆಲ್ಶಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಡಾ ರಾಜವೇಲ್ ಮಣಿಕ್ಕಮ್ ಹವಾಮಾನ ಮುನ್ಸೂಚನೆ ವರದಿಯಲ್ಲಿ ತಿಳಿಸಿದ್ದಾರೆ.
