ಬೆಂಗಳೂರಿನ ಕೆಲವೆಡೆ ಮಳೆ ಸಾಧ್ಯತೆ: ಕರಾವಳಿಯಲ್ಲಿ ಇಂದೂ ಇರಲಿದೆ ಮಳೆ; ಇಂದಿನ ಹವಾಮಾನ ವರದಿ
ಕರ್ನಾಟಕದ ಬೆಂಗಳೂರಿನಲ್ಲಿ ಇಂದು (ಮೇ 24) ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಶನಿವಾರವೂ ಮಳೆ ಮುಂದುವರಿಯಲಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಕರ್ನಾಟಕ ಹವಾಮಾನ ಮುನ್ಸೂಚನೆ ಪ್ರಕಾರ ಇಂದಿನ ಹವಾಮಾನ ಹೀಗಿರಲಿದೆ.

ಇಂದಿನ ಹವಾಮಾನ: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಮೇ 24) ಕೆಲವು ಪ್ರದೇಶಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಹೇಳಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ, ಕರಾವಳಿ ಜಿಲ್ಲೆಗಳಲ್ಲಿ ಮತ್ತು ಮಲೆನಾಡಿನಲ್ಲಿ ಇಂದು ಕೂಡ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ. ಕಲಬುರಗಿಯಲ್ಲಿ ಕೂಡಾ ಇಂದು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಉಳಿದಂತೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕಾರವಾರ, ಹೊನ್ನಾವರದಲ್ಲೂ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ಹವಾಮಾನ; ಮೋಡ ಕವಿದ ವಾತಾವರಣ, ಅಲ್ಲಲ್ಲಿ ಹಗುರ ಮಳೆ ಸಾಧ್ಯತೆ
ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವರದಿ ಪ್ರಕಾರ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಇಂದು (ಮೇ 24) ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಪ್ರದೇಶಗಳಲ್ಲಿ ಸಂಜೆಯ ವೇಳೆ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಇಂದು (ಮೇ 24) ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಶಿಯಸ್ ಹಾಗೂ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಶಿಯಸ್ ದಾಖಲಾಗಬಹುದು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಿನ್ನೆ (ಮೇ 23) ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಶಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಇದೇ ರೀತಿ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಶಿಯಸ್ ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ.
ಪ್ರಮುಖ ನಗರಗಳ ತಾಪಮಾನ ಮತ್ತು ತೇವಾಂಶ ವಿವರ
ಕರ್ನಾಟಕದ ಪ್ರಮುಖ ನಗರಗಳ ಇಂದು (ಮೇ 24) ಬೆಳಿಗ್ಗೆ 6.00ಕ್ಕೆ ದಾಖಲಾಗಿರುವ ತಾಪಮಾನ ಮತ್ತು ತೇವಾಂಶ ವಿವರ ಹೀಗಿದೆ.
ಬೆಂಗಳೂರು ನಗರ - ತಾಪಮಾನ 22.2 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 95
ಮಂಗಳೂರು - ತಾಪಮಾನ 25 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 94
ಚಿತ್ರದುರ್ಗ - ತಾಪಮಾನ 23.4 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 85
ಗದಗ - ತಾಪಮಾನ 23.2 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 95
ಹೊನ್ನಾವರ - ತಾಪಮಾನ 25.2 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 98
ಕಲಬುರಗಿ - ತಾಪಮಾನ 24.4 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 94
ಬೆಳಗಾವಿ - ತಾಪಮಾನ 23 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 94
ಕಾರವಾರ - ತಾಪಮಾನ 26.8 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 92
ಕರ್ನಾಟಕ ಹವಾಮಾನ; 13 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಉಳಿದೆಡೆ ಸಾಧಾರಣ ಬಿಸಿಲು
ಕರಾವಳಿ ಕರ್ನಾಟಕ ಹವಾಮಾನ: ಕರಾವಳಿ ಕರ್ನಾಟಕದ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆಯಾಗಬಹುದು. ಕೆಲವು ಪ್ರದೇಶಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಬಹುದು. ಉಳಿದಂತೆ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ.
ಕರ್ನಾಟಕದ ಉತ್ತರ ಒಳನಾಡು ಹವಾಮಾನ: ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇರಲಿದೆ. ಕೆಲವು ಕಡೆ ವೇಗದ ಗಾಳಿ ಬೀಸುವ ಸಾಧ್ಯತೆ ಇದ್ದು, ಅಲ್ಲಿ ಗುಡುಗು ಸಹಿತ ಮಳೆಯಾಗಬಹುದು. ಇನ್ನುಳಿದ ಪ್ರದೇಶಗಳಲ್ಲಿ, ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ.
ಕರ್ನಾಟಕದ ದಕ್ಷಿಣ ಒಳನಾಡು ಹವಾಮಾನ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗಬಹುದು. ಗುಡುಗು ಸಹಿತ ಮಳೆ ಅಥವಾ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಂದಿನ ಹವಾಮಾನ ಮುನ್ಸೂಚನೆ ವರದಿ ಹೇಳಿದೆ.