Karnataka Weather: ಇಂದು ಕರಾವಳಿಯ 3, ದಕ್ಷಿಣ ಒಳನಾಡಿನ 13 ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆ
ಕರ್ನಾಟಕದ ಬಹುತೇಕ ಕಡೆಗಳಲ್ಲಿ ಚಳಿ ವಾತಾವರಣ ಮತ್ತು ಹಗಲಲ್ಲಿ ಒಣಹವೆ ಇದೆ. ಕರಾವಳಿಯ 3 ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ 13 ಜಿಲ್ಲೆಗಳ ಕೆಲವು ಕಡೆಗಳಲ್ಲಿ ಇಂದು (ಜ.8) ಸಾಧಾರಣದಿಂದ ಭಾರಿ ಮಳೆ ಆಗಬಹುದು. ಉತ್ತರ ಒಳನಾಡಿನ 3 ಜಿಲ್ಲೆಗಳಲ್ಲಿ ಕೂಡ ಒಂದೆರಡು ಕಡೆ ಚದುರಿದ ಮಳೆ ಬೀಳಬಹುದು ಎಂದು ಭಾರತದ ಹವಾಮಾನ ಇಲಾಖೆಯ ಮಳೆ ಮುನ್ಸೂಚನೆ ವರದಿ ಹೇಳಿದೆ.
ಕರ್ನಾಟಕದ 19 ಜಿಲ್ಲೆಗಳಲ್ಲಿ ಇಂದು (ಜ.8) ಕೂಡ ಮಳೆ ಬೀಳುವ ಸಾಧ್ಯತೆ ಇದೆ. ಈ ಪೈಕಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ 13 ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯನ್ನು ನಿರೀಕ್ಷಿಸಬಹುದು. ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ ನಿರೀಕ್ಷಿತ. ಉಳಿದ ಜಿಲ್ಲೆಗಳಲ್ಲಿ ಚಳಿ ಮತ್ತು ಒಣ ಹವೆ ಮುಂದುವರಿಯಲಿದೆ ಎಂದು ಭಾರತದ ಹವಾಮಾನ ಇಲಾಖೆಯ ಮಳೆ ಮುನ್ಸೂಚನೆ ವರದಿ ವಿವರಿಸಿದೆ.
ಚಳಿಗಾಲವಾದ ಕಾರಣ ಹಲವೆಡೆ ಮುಂಜಾನೆ, ಬೆಳಗ್ಗೆ ಹೊತ್ತು ಮಂಜು ಮುಸುಕಿದ ವಾತಾವರಣ ಇರಲಿದೆ. ಮಳೆ ಬಿದ್ದ ಕೆಲವೆಡೆ ಒಟ್ಟಾರೆ ವಾತಾವರಣದ ಉಷ್ಣಾಂಶವು 2 ರಿಂದ 3 ಡಿಗ್ರಿ ಸೆಲ್ಶಿಯಸ್‌ನಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಹವಾಮಾನ ಇಲಾಖೆ ಜನವರಿ 7 ರಂದು ಮಧ್ಯಾಹ್ನ ಪ್ರಕಟಿಸಿರುವ ವರದಿ ಪ್ರಕಾರ, ಸೋಮವಾರ (ಜ.8) ಬೆಳಗ್ಗೆ 8.30ರಿಂದ ಜನವರಿ 3ರ ಬೆಳಗ್ಗೆ 8.30ರ ತನಕದ ಅವಧಿಯಲ್ಲಿ 19 ಜಿಲ್ಲೆಗಳ ಪೈಕಿ 3 ಜಿಲ್ಲೆಗಳ ಒಂದೆರಡು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. 16 ಜಿಲ್ಲೆಗಳಲ್ಲಿ ಕೆಲವು ಕಡೆ ವ್ಯಾಪಕವಾಗಿ ಮಳೆಯ ವಾತಾವರಣ ಇರಲಿದೆ. ಉಳಿದಂತೆ ಒಣಹವೆಯನ್ನು ನಿರೀಕ್ಷಿಸಬಹುದು.
ಕರಾವಳಿ ಕರ್ನಾಟಕದ ಭಾಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು (ಜ.8) ಸಾಧಾರಣದಿಂದ ಭಾರಿ ಮಳೆಯಾಗಲಿದೆ. ಬಹುತೇಕ ವ್ಯಾಪಕವಾಗಿ ಮಳೆಯಾಗಲಿದ್ದು, ಉಷ್ಣಾಂಶವು ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಶಿಯಸ್‌ನಷ್ಟು ಹೆಚ್ಚಾಗಬಹುದು ಎಂದು ಮಳೆ ಮುನ್ಸೂಚನೆ ವರದಿಯು ತಿಳಿಸಿದೆ.
ಇನ್ನು ಉತ್ತರ ಒಳನಾಡಿನ ಜಿಲ್ಲೆಗಳನ್ನು ಗಮನಿಸಿದರೆ, ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಬಹುದು. ಉಳಿದಂತೆ ಹಾವೇರಿ, ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಗಳಲ್ಲಿ ಒಣಹವೆ ಇರಲಿದೆ.
ಇದೇ ರೀತಿ, ದಕ್ಷಿಣ ಒಳನಾಡಿನ ಜಿಲ್ಲೆಗಳ ಪೈಕಿ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ವಿಜಯನಗರಗಳಲ್ಲಿ ಸೋಮವಾರ (ಜ.8) ಚಳಿ ಮತ್ತು ಒಣ ಹವೆ ಮುಂದುವರಿಯಲಿದೆ. ಉಳಿದಂತೆ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜ ನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರಗಳಲ್ಲಿ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಬಹುದು.
ಹವಾಮಾನ ಇಲಾಖೆಯ ಮುನ್ಸೂಚನೆ ವರದಿ ಪ್ರಕಾರ, ಹಗುರ/ ಸಾಧಾರಣ ಮಳೆ ಎಂದರೆ 2.5 ಮಿ.ಮೀ.ನಿಂದ 64.5 ಮಿ.ಮೀ. ತನಕದ ಮಳೆ ಒಂದೆರಡು ಕಡೆ ಬೀಳುವುದು, ಅದೇ ರೀತಿ, ಸಾಧಾರಣದಿಂದ ಭಾರಿ ಮಳೆ ಎಂದರೆ 15.6 ಮಿ.ಮೀ.ನಿಂದ 115.5 ಮಿ.ಮೀ. ತನಕದ ಮಳೆ ಕೆಲವು ಕಡೆ ಬೀಳುವುದು.