Karnataka Summer: ಕರ್ನಾಟಕದ 15 ಜಿಲ್ಲೆಗಳಲ್ಲಿ ಮುಂದಿನ 5 ದಿನ ಬಿಸಿ ಶಾಖದ ಅಲೆ, ಇರಲಿ ಮುನ್ನೆಚ್ಚರಿಕೆ
ಒಂದು ಕಡೆ ಮಳೆಯಾಗುತ್ತಿದ್ದರೂ ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣವೂ ಅಧಿಕವಾಗಿದೆ. ಮುಂದಿನ ಐದು ದಿನ ಕರ್ನಾಟಕದ ಕೆಲವು ಕಡೆ ಬಿಸಿಲ ಗಾಳಿ( Karnataka Heat Wave) ಇರಲಿದೆ.

ಬೆಂಗಳೂರು: ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಸೇರಿದಂತೆ ಕರ್ನಾಟಕದ 15 ಜಿಲ್ಲೆಗಳಲ್ಲಿ ಬಿಸಿ ಶಾಖದ ಅಲೆ ಎದುರಾಗಬಹುದು. ಯುಗಾದಿ ನಂತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಮಳೆಯಾಗಿದೆ. ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಉತ್ತಮ ಮಳೆಯೇ ಸುರಿದಿದೆ. ಬೇಸಿಗೆ ವೇಳೆಯೇ ಮಳೆಗಾಗಿ ಜನ ಪರಿತಪಿಸುತ್ತಿದ್ದ ನಡುವೆ ಬಹುತೇಕ 20 ದಿನ ಕಾಲ ಮಳೆಯಾಗಿದೆ. ಬುಧವಾರದ ನಂತರ ಮಳೆ ಬಹುತೇಕ ಕ್ಷೀಣಿಸಲಿದ್ದು. ಮತ್ತೆ ಬಿಸಿಗಾಳಿಯ ವಾತಾವರಣ ಕಂಡು ಬರಲಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮಾರ್ಚ್ ತಿಂಗಳಲ್ಲಿ ಇದ್ದ ರೀತಿಯೇ ಬಿಸಿಲ ಪ್ರಮಾಣ ಮತ್ತೆ ಏರಿಕೆಯಾಗಲಿದೆ. ಇದರಿಂದ ಮುನ್ನೆಚ್ಚರಿಕೆ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ( IMD) ಬೆಂಗಳೂರು ಕೇಂದ್ರವು ಸೂಚನೆಯನ್ನು ನೀಡಿದೆ.
ಯಾವ ಜಿಲ್ಲೆಗಳಲ್ಲಿ ಶಾಖದ ಅಲೆ
ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ. ಬಳ್ಳಾರಿ. ಗದಗ, ಧಾರವಾಡದಲ್ಲಿ ಬಿಸಿಗಾಳಿ ಹೆಚ್ಚಲಿದೆ. ಅದೇ ರೀತಿ ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗದ ಜತೆಯಲ್ಲಿ ತುಮಕೂರು ಹಾಗೂ ಕೋಲಾರ ಜಿಲ್ಲೆಗಳಲ್ಲೂ ಮುಂದಿನ ಐದು ದಿನಗಳ ಕಾಲ ಇಂತಹದೇ ವಾತಾವರಣ ಇರಲಿದೆ.
ಮುಂದಿನ ಐದು ದಿನಗಳಲ್ಲಿ ಕರ್ನಾಟಕದ ಹೆಚ್ಚಿನ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು 2 ರಿಂದ 3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆಯಿದೆ. ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದ ಜಿಲ್ಲೆಗಳಲ್ಲಿ ಬಿಸಿ ಹಾಗೂ ಆರ್ದ್ರತೆ ಪ್ರಮಾಣವು ಮೇಲುಗೈ ಸಾಧಿಸಬಹುದು ಎಂದು ಬೆಂಗಳೂರು ಹವಾಮಾನ ಕೇಂದ್ರದ ವಿಜ್ಞಾನಿ ಡಾ.ಎನ್.ಪುವಿಯರಸನ್ ಮಾಹಿತಿ ನೀಡಿದ್ದಾರೆ.
ಸೋಮವಾರದಂದು ಕರ್ನಾಟಕದ ರಾಯಚೂರಿನಲ್ಲಿ ಅತಿ ಹೆಚ್ಚು ಅಂದರೆ 41 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶ ದಾಖಲಾಗಿದೆ. ಕೊಪ್ಪಳದಲ್ಲಿ ಅತ್ಯಧಿಕ 40 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಕಂಡು ಬಂದಿತು. ಕಲಬುರಗಿ ಹಾಗೂ ವಿಜಯಪುರದಲ್ಲಿ 38.2 ಡಿಗ್ರಿ ಸೆಲ್ಸಿಯಸ್, ಚಾಮರಾಜನಗರದಲ್ಲಿ 38.7 ಡಿಗ್ರಿ ಹಾಗೂ ಚಿತ್ರದುರ್ಗದಲ್ಲಿ 38.4 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಮಂಡ್ಯದಲ್ಲಿ 38.6 ಡಿಗ್ರಿ ಹಾಗೂ ಚಿಂತಾಮಣಿಯಲ್ಲಿ 38.1 ಡಿಗ್ರಿ ಸೆಲ್ಸಿಯಸ್, ಕರಾವಳಿಯ ಶಿರಾಲಿಯಲ್ಲಿ 37.6 ಡಿಗ್ರಿ ಸೆಲ್ಸಿಯಸ್ ಅತ್ಯಧಿಕ ಉಷ್ಣಾಂಶ ದಾಖಲಾಗಿತ್ತು. ಬೆಂಗಳೂರು ನಗರದಲ್ಲಿ 37.4 ಡಿಗ್ರಿ, ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 37.5 ಡಿಗ್ರಿ ಹಾಗೂ ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ ಭಾಗದಲ್ಲಿ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಸೋಮವಾರ ದಾಖಲಾಗಿದೆ.
ಮುನ್ನೆಚ್ಚರಿಕೆ ವಹಿಸಿ
ಬಿಸಿಲಿನ ಪ್ರಮಾಣ ಕೆಲವು ಜಿಲ್ಲೆಗಳಲ್ಲಿ ಅಧಿಕವಾಗುವುದರಿಂದ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ವಿಶೇಷವಾಗಿ ಮಕ್ಕಳು ಹಾಗೂ ಹಿರಿಯರು ಬಿಸಿಲಿಗೆ ಹೆಚ್ಚು ತೆರೆದುಕೊಳ್ಳದಂತೆ ಸೂಚಿಸಲಾಗಿದೆ. ಮಧ್ಯಾಹ್ನದ ವೇಳೆ ಅಗತ್ಯವಿದ್ದರೆ ಮಾತ್ರ ಹೊರಗಡೆ ಬರುವಂತೆ ತಿಳಿಸಲಾಗಿದೆ. ಹೆಚ್ಚ ಹೆಚ್ಚು ಜಲಾಹಾರವನ್ನು ಬಿರು ಬಿಸಿಲಿನ ವೇಳೆ ಸೇವಿಸಿದರೆ ದೇಹದಲ್ಲಿನ ನಿರ್ಜಲೀಕರಣ ತಪ್ಪಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ