ಕರ್ನಾಟಕ ಹವಾಮಾನ: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ; ಇಂದು ಬೆಂಗಳೂರು ಸೇರಿ 9 ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ
ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ರಾಜಧಾನಿ ಬೆಂಗಳೂರು ಸೇರಿದಂತೆ 9 ಜಿಲ್ಲೆಗಳಲ್ಲಿ ಡಿಸೆಂಬರ್ 27ರ ಶುಕ್ರವಾರ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಇಂದಿನ ಕರ್ನಾಟಕ ಹವಾಮಾನ ವರದಿ ಇಲ್ಲಿದೆ.
ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಕಳೆದ ಎರಡ್ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ನಿನ್ನೆ (ಡಿಸೆಂಬರ್ 26, ಗುರುವಾರ) ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಉಳಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಮುಂಜಾನೆ ಅಲ್ಪ ಚಳಿ ಇದ್ದರೆ ಮಧ್ಯಾಹ್ನದ ಸಮಯದಲ್ಲಿ ಬಿಸಿಲಿನ ವಾತಾವರಣ ಮುಂದುವರಿದಿದೆ. ಗುರುವಾರದ ಜಿಟಿ ಜಿಟಿ ಮಳೆಯಿಂದ ವಾಹನ ಸಂಚಾರ, ಜನ ಸಾಮಾನ್ಯರ ಓಡಾಟ ಹಾಗೂ ಕೃಷಿ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡಿದೆ.
ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ತುಮಕೂರು, ಕೋಲಾರ, ಚಾಮರಾಜನಗರ, ಮೈಸೂರು, ರಾಮನಗರ, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆಲವೊಂದು ಸ್ಥಳಗಳಲ್ಲಿ ನಿನ್ನೆ (ಡಿಸೆಂಬರ್ 26, ಗುರುವಾರ) ಲಘು ಮಳೆಯಾಗಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿದಿದೆ. ಕೆಲವು ಸ್ಥಳಗಳಲ್ಲಿ ಮುಂಜಾನೆ ಮಂಜಿನ ಪರಿಸ್ಥಿತಿ ಇತ್ತು. ರಾಜ್ಯದಲ್ಲಿ ಅತಿ ಕಡಿಮೆ ಉಷ್ಣಾಂಶ ಶಿರಾಲಿಯಲ್ಲಿ 16.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ.
ಡಿಸೆಂಬರ್ 27ರ ಶುಕ್ರವಾರ ಎಲ್ಲಿಲ್ಲಿ ಮಳೆಯಾಗುವ ಸಾಧ್ಯತೆ ಇದೆ
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ರಾಯಚೂರು, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ ಜಿಲ್ಲಗಳ ಪ್ರತ್ಯೇಕ ಸ್ಥಳಗಳಲ್ಲಿ ಇಂದು (ಡಿಸೆಂಬರ್ 27, ಶುಕ್ರವಾರ) ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆ ಇದೆ. ಮುಂದಿನ 5 ದಿನಗಳ ಕಾಲ ರಾಜ್ಯದ ಯಾವುದೇ ಭಾಗದಲ್ಲಿ ಮಳೆಯಾಗುವ ಮುನ್ಸೂಚನೆ ಇಲ್ಲ. ಮುಂದಿನ 2 ದಿನಗಳ ಕಾಲ ವಾತಾವರಣದಲ್ಲಿ ಮಹತ್ವದ ಬದಲಾವಣೆಗಳು ಇರುವುದಿಲ್ಲ ಎಂದು ಹವಾಮಾನ ಕೇಂದ್ರ ಸ್ಪಷ್ಟಪಡಿಸಿದೆ.
ಬೆಂಗಳೂರಿನಲ್ಲಿ ಇಂದು ಮಳೆಯ ಮುನ್ಸೂಚನೆ
ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳ ವಾತಾವರಣವನ್ನು ನೋಡುವುದಾದರೆ, ಮೋಡ ಕವಿದ ವಾತಾವರಣ ಇದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಭಾಗಶಃ ಮೋಡ ಕವಿದ ಆಕಾಶ ಇರುತ್ತದೆ. ಕೆಲವು ಕಡೆಗಳಲ್ಲಿ ಮಂಜು ಅಥವಾ ದಟ್ಟ ಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20 ಡಿಗ್ರಿ ಸಲ್ಸಿಯಸ್ ತಾಪಮಾನ ಇರುವ ನಿರೀಕ್ಷೆ ಇದೆ. ಮುಂಜಾನೆಯಿಂದಲೇ ನಗರದಲ್ಲಿ ಚಳಿ ಜೊತೆಗೆ ಮೋಡ ಕವಿದ ವಾತಾವರಣ ಇದೆ.