ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಇಂದು ಮಂಜಿನೊಂದಿಗೆ ಚಳಿಯ ವಾತಾವರಣ ಮುಂದುವರಿಕೆ; 5 ದಿನ ಮಳೆಯ ಮುನ್ಸೂಚನೆ ಇಲ್ಲ
ಡಿಸೆಂಬರ್ 28ರ ಶನಿವಾರದ ಹವಾಮಾನ ವರದಿಯ ಪ್ರಕಾರ, ಕರ್ನಾಟಕದಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಿದ್ದು, ಚಳಿ ಮತ್ತು ಮಂಜಿನ ಪರಿಸ್ಥಿತಿ ಮುಂದುವರಿದೆ. ಮುಂದಿನ 5 ದಿನಗಳ ವರೆಗೆ ಇದೇ ರೀತಿಯ ವಾತಾವರಣ ಇರಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ ಇಂದು (ಡಿಸೆಂಬರ್ 28, ಶನಿವಾರ) ಚಳಿ ಮತ್ತು ಮಂಜಿನ ಪರಿಸ್ಥಿತಿ ಮುಂದುವರಿದಿದ್ದು, ಮಳೆಯ ವಾತಾವರಣ ಕಡಿಮೆಯಾಗಿದೆ. ಬೆಂಗಳೂರು ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಕಳೆದ ಎರಡ್ಮೂರು ದಿನಗಳಿಂದ ಮೋಡ ಕವಿದ ಪರಿಸ್ಥಿತಿ ಇತ್ತು. ಆದರೆ ಇವತ್ತು ಮೋಡಗಳು ಕಡಿಮೆಯಾಗಿ ಮಂಜಿನೊಂದಿಗೆ ಚಳಿಯೂ ಹೆಚ್ಚಾಗಿದೆ. ನಿನ್ನೆ (ಡಿಸೆಂಬರ್ 27, ಶುಕ್ರವಾರ) ಬೆಂಗಳೂರು ನಗರ ಸೇರಿದಂತೆ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಕೋಲಾರ ಜಿಲ್ಲೆಯ ರಾಯಲ್ಪಾಡುವಿನಲ್ಲಿ 2 ಸೆಂಟಿ ಮೀಟರ್ ಮಳೆಯ ವರದಿಯಾಗಿದೆ. ಬಿಟ್ಟು ಬಿಟ್ಟು ಸುರಿದ ಮಳೆಯು ವಾಹನ ಸವಾರರು ಮತ್ತು ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ಅಡ್ಡಿಯುಂಟು ಮಾಡಿತು. ಉಳಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಒಣ ಹವೆ ಮುಂದುವರಿದಿದೆ.
ಮೂರ್ನಾಲ್ಕು ದಿನಗಳಿಂದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿತ ವಾತಾವರಣ ಜೊತೆಗೆ ಆಗಾಗ ಜಿಟಿ ಜಿಟಿ ಮಳೆಯು ರಾಗಿ ಕಟಾವು ಮಾಡಿದ್ದ ರೈತರನ್ನು ಕಂಗಾಲಾಗುವಂತೆ ಮಾಡಿತ್ತು. ಬಹುತೇಕರು ಯಂತ್ರಗಳನ್ನು ಬಳಸಿ ರಾಗಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ತೆನೆ ಕೊಯ್ದು ಒಣಗಿಸಲು ಒಂದು ಕಡೆ ಸಂಗ್ರಹಿಸಿಕೊಂಡಿದ್ದಾರೆ. ಕೆಲವರು ರಾಗಿ ಪೈರಿನ ಸಮೇತ ಕೊಯ್ದು ಹೊಲಗಳಲ್ಲೇ ಇಟ್ಟಿದ್ದಾರೆ. ಮಳೆಯಿಂದಾಗಿ ಈ ಎಲ್ಲಾ ಕೆಲಸಗಳಿಗೆ ಅಡ್ಡಿಯಾಗಿತ್ತು. ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿರುವ ಮಾಹಿತಿ ಇಂಥ ರೈತರಿಗೆ ಸಮಾಧಾನ ತಂದಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಅತಿ ಕಡಿಮೆ ಉಷ್ಣಾಂಶ ಶಿರಾಲಿಯಲ್ಲಿ 17.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ದೈನಂದಿನ ವರದಿಯಲ್ಲಿ ತಿಳಿಸಿದೆ. ಮುಂದಿನ 5 ದಿನ ಅಂದರೆ 2024ರ ಡಿಸೆಂಬರ್ 29 ರಿಂದ 2025ರ ಜನವರಿ 2 ರವರಿಗೆ ಕರ್ನಾಟಕದ ಯಾವುದೇ ಭಾಗದಲ್ಲಿ ಮಳೆ ಬೀಳುವ ಮುನ್ಸೂಚನೆ ಇಲ್ಲ. ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಮಳೆ ಸಾಧ್ಯತೆ
ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳ ವಾತಾವರಣವನ್ನು ನೋಡುವುದಾದರೆ, ಮೋಡ ಕವಿದ ವಾತಾವರಣ ಇದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಬೆಳಗಿನ ಜಾವ ಕೆಲವು ಕಡೆಗಳಲ್ಲಿ ಮಂಜು ಅಥವಾ ದಟ್ಟ ಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ 25 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20 ಡಿಗ್ರಿ ಸಲ್ಸಿಯಸ್ ತಾಪಮಾನ ಇರುವ ನಿರೀಕ್ಷೆ ಇದೆ.