ಕರ್ನಾಟಕ ಹವಾಮಾನ: ರಾಜ್ಯದಲ್ಲಿಂದು ಮಳೆ ಬರುವ ಮುನ್ಸೂಚನೆ ಇಲ್ಲ; ಮುಂದಿನ 5 ದಿನ ಸಾಮಾನ್ಯ ಚಳಿ, ಪ್ರತ್ಯೇಕ ಸ್ಥಳಗಳಲ್ಲಿ ಮಂಜಿನ ವಾತಾವರಣ
ಡಿಸೆಂಬರ್ 29 ರ ಭಾನುವಾರ ಸೇರಿದಂತೆ ಮುಂದಿನ 5 ದಿನಗಳ ವರಿಗೆ ಕರ್ನಾಟಕದಲ್ಲಿ ಯಾವುದೇ ರೀತಿಯ ಮಳೆಯಾಗುವ ಮುನ್ಸೂಚನೆ ಇಲ್ಲ. ಒಣ ಹವೆ ಮುಂದುವರಿಯಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ಮಳೆಯಾಗುತ್ತಿತ್ತು. ಆದರೆ ಇಂದು (ಡಿಸೆಂಬರ್ 29, ಭಾನುವಾರ) ಶುಭ್ರವಾದ ಆಕಾಶ ಇದ್ದು, ಯಾವುದೇ ರೀತಿಯ ಮಳೆಯಾಗುವ ಮುನ್ಸೂಚನೆ ಇಲ್ಲ. ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಆದರೆ ನಿನ್ನೆ (ಡಿಸೆಂಬರ್ 28, ಶನಿವಾರ) ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮಳೆಯಾಗಿದೆ. ಅದೇ ರೀತಿಯಾಗಿ ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಮಳೆ ಸುರಿದಿದೆ.
ಡಿಸೆಂಬರ್ 28ರ ಶನಿವಾರ ಸಂಜೆಯ ವೇಳೆಗೆ ಲಭ್ಯವಾಗಿರುವ ಹವಾಮಾನ ವರದಿಯ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ 2 ಸೆಂಟಿ ಮೀಟರ್ ಮಳೆಯಾಗಿದೆ. ತುಮಕೂರು ಜಿಲ್ಲೆಯ ವೈಎನ್ ಹೊಸಕೋಟೆಯಲ್ಲಿ 1 ಸೆಂಟಿ ಮೀಟರ್ ಮಳೆ ಸುರಿದಿದೆ. ಉಳಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಒಣ ಹವೆ ಮುಂದುವರಿದಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿ ಚಳಿ ಕಡಿಮೆಯಾಗಿರುವ ಕಾರಣ ಜನರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿವೆ. ತರಕಾರಿ, ಹೂವು, ಹಣ್ಣಿನ ಮಾರುಕಟ್ಟೆಗಳಲ್ಲಿ ಎಂದಿನಂತೆ ವ್ಯಾಪಾರ ನಡೆಯುತ್ತಿವೆ. ವಾರಾಂತ್ಯದ ರಜೆ ಇರುವ ಕಾರಣ ಉದ್ಯೋಗಿಗಳು ರಸ್ತೆಗಿಳಿದಿಲ್ಲ. ಮಂಜು ಇರದ ಕಾರಣ ಮುಂಜಾನೆಯಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿಲ್ಲ.
ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿವೆ. ನಾಲ್ಕೈದು ದಿನಗಳಿಂದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ಆಗಾಗ ಜಿಟಿ ಜಿಟಿ ಮಳೆ ರೈತರ ಕೆಲಸಗಳಿಗೆ ಅಡ್ಡಿಪಡಿಸಿತ್ತು. ಅಲ್ಲದೆ, ರಾಗಿ ಕಟಾವು ಮಾಡಿಕೊಂಡಿದ್ದ ರೈತರನ್ನು ಕಂಗಾಲಾಗುವಂತೆ ಮಾಡಿತ್ತು. ಬಹುತೇಕರು ಯಂತ್ರಗಳನ್ನು ಬಳಸಿ ರಾಗಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ತೆನೆ ಕೊಯ್ದು ಒಣಗಿಸಲು ಒಂದು ಕಡೆ ಸಂಗ್ರಹಿಸಿಕೊಂಡಿದ್ದಾರೆ. ಮಳೆ ಇಲ್ಲದ ಕಾರಣ ಯಂತ್ರಗಳ ಮೂಲಕ ರಾಗಿ ಮಾಡುವ ಹಾಗೂ ಮತ್ತೊಂದೆಡೆ ಮೇವು ಸಂಗ್ರಹಿಸುವ ಕೆಲಸಗಳನ್ನು ಮುಂದುವರಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಅತಿ ಕಡಿಮೆ ಉಷ್ಣಾಂಶ ವಿಜಯಪುರದಲ್ಲಿ 15.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ 5 ದಿನ ಅಂದರೆ 2024ರ ಡಿಸೆಂಬರ್ 30 ರಿಂದ 2025ರ ಜನವರಿ 3ವರಿಗೆ ಕರ್ನಾಟಕದ ಯಾವುದೇ ಭಾಗದಲ್ಲಿ ಮಳೆ ಬೀಳುವ ಮುನ್ಸೂಚನೆ ಇಲ್ಲ. ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.
ಬೆಂಗಳೂರು ಹವಾಮಾನ
ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳ ವಾತಾವರಣವನ್ನು ನೋಡುವುದಾದರೆ, ಮುಂಜಾನೆಯಿಂದಲೇ ಶುಭ್ರ ಆಕಾಶ ಇದ್ದು, ಅಲ್ಲಲ್ಲಿ ಮಂಜಿನ ವಾತಾವರಣ ಇದೆ. ನಗರದಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವ ನಿರೀಕ್ಷೆ ಇದೆ.