ಕರ್ನಾಟಕ ಹವಾಮಾನ: ವರುಣ ಅಬ್ಬರ ಶುರು; ದಕ್ಷಿಣ ಕನ್ನಡ, ಮೈಸೂರು ಸೇರಿ ಕೆಲವು ಜಿಲ್ಲೆಗಳಲ್ಲಿ ಇಂದು ಮಳೆಯ ಮುನ್ಸೂಚನೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹವಾಮಾನ: ವರುಣ ಅಬ್ಬರ ಶುರು; ದಕ್ಷಿಣ ಕನ್ನಡ, ಮೈಸೂರು ಸೇರಿ ಕೆಲವು ಜಿಲ್ಲೆಗಳಲ್ಲಿ ಇಂದು ಮಳೆಯ ಮುನ್ಸೂಚನೆ

ಕರ್ನಾಟಕ ಹವಾಮಾನ: ವರುಣ ಅಬ್ಬರ ಶುರು; ದಕ್ಷಿಣ ಕನ್ನಡ, ಮೈಸೂರು ಸೇರಿ ಕೆಲವು ಜಿಲ್ಲೆಗಳಲ್ಲಿ ಇಂದು ಮಳೆಯ ಮುನ್ಸೂಚನೆ

ಕರ್ನಾಟಕದಲ್ಲಿ ಮಳೆ ಚುರುಕುಗೊಂಡಿದ್ದು, ಕೆಲವೆಡೆ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಇಂದು (ಏಪ್ರಿಲ್ 30, ಬುಧವಾರ) ಎಲ್ಲೆಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂಬುದರ ವರದಿಯನ್ನು ಇಲ್ಲಿ ನೀಡಲಾಗಿದೆ.

ಏಪ್ರಿಲ್ 30ರ ಬುಧವಾರ ಕರ್ನಾಟಕ ಹವಾಮಾನ ವರದಿ ತಿಳಿಯಿರಿ
ಏಪ್ರಿಲ್ 30ರ ಬುಧವಾರ ಕರ್ನಾಟಕ ಹವಾಮಾನ ವರದಿ ತಿಳಿಯಿರಿ

ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಮತ್ತೆ ಮಳೆ ಚುರುಕುಗೊಂಡಿದ್ದು, ಕೆಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಬೆಂಗಳೂರು ಹವಾಮಾನ ಕೇಂದ್ರದಲ್ಲಿ ನಿನ್ನೆ (ಏಪ್ರಿಲ್ 29, ಮಂಗಳವಾರ) ಸಂಜೆಯವರಿಗೆ ದಾಖಲಾಗಿರುವ ವರದಿಯ ಪ್ರಕಾರ, ಕೊಡಗು ಜಿಲ್ಲೆಯ ನಾಪೋಕ್ಲುನಲ್ಲಿ 3 ಸೆಂಟಿ ಮೀಟರ್ ಮಳೆಯಾಗಿದೆ. ಉಳಿದಂತೆ ಚಾಮರಾಜನಗರದಲ್ಲಿ 2, ಚಿಕ್ಕಮಗಳೂರಿನ ಕಳಸ, ಶೃಂಗೇರಿ, ಕೊಡಗು ಜಿಲ್ಲೆಯ ಕುಶಾಲನಗರ, ದಕ್ಷಿಣ ಕನ್ನಡ ಜಿಲ್ಲೆಯ ಮಣಿ, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ತಲಾ 1 ಸೆಂಟಿ ಮೀಟರ್ ಮಳೆಯಾಗಿದೆ. ಇನ್ನೂ ಮೈಸೂರಿನಲ್ಲಿ ರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಿದೆ.

ಮಳೆಯಾಗುತ್ತಿರುವ ಕಾರಣ ಕೆಲವೊಂದು ಕಡೆಗಳಲ್ಲಿ ಬಿಸಿಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಬೀದರ್, ಚಿತ್ರದುರ್ಗ, ಧಾರವಾಡ, ಗದಗ, ಕೊಪ್ಪಳ, ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ಗರಿಷ್ಠ ತಾಪಮಾನದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಒಳನಾಡಿನ ಪ್ರದೇಶಗಳ ಪೈಕಿ ವಿಜಯಪುರ, ಕಲಬುರ್ಗಿ ಹಾಗೂ ಆಗುಂಬೆಯಲ್ಲಿ ಗರಿಷ್ಠ ತಾಪಮಾನ ಗಮನಾರ್ಹವಾಗಿ ಏರಿಕೆ ಕಂಡು ಬಂದಿದೆ. ಉಳಿದಂತೆ ರಾಜ್ಯ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಪ್ರಮುಖ ಬದಲಾವಣೆಯಾಗಿಲ್ಲ.ರಾಜ್ಯದಲ್ಲಿ ಅತಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಬೀದರ್ ನಲ್ಲಿ ದಾಖಲಾಗಿದೆ.

ಇಂದು (ಏಪ್ರಿಲ್ 30, ಬುಧವಾರ) ಎಲ್ಲೆಲ್ಲಿ ಮಳೆಯಾಗಲಿದೆ

ಬೆಂಗಳೂರು ಹವಾಮಾನ ಕೇಂದ್ರದ ವರದಿಯ ಪ್ರಕಾರ ಇಂದು (ಏಪ್ರಿಲ್ 30, ಬುಧವಾರ) 19 ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಕರಾವಳಿಯ ಪೈಕಿ ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಒಳನಾಡಿನ ಪೈಕಿ ಬೆಳಗಾವಿ, ಧಾರವಾಡ, ಗದಗ, ರಾಯಚೂರು, ಯಾದಗಿರಿ, ಕೊಪ್ಪಳ ಹಾಗೂ ದಕ್ಷಿಣ ಒಳನಾಡಿನ ಪೈಕಿ ಮಂಡ್ಯ, ಹಾಸನ, ಮೈಸೂರು, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ತುಮಕೂರು, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಮೇ 5ರ ಸೋಮವಾರದವರೆಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ.

ರಾಜಧಾನಿ ಬೆಂಗಳೂರು ಮಳೆ ವರದಿ

ಮುಂದಿನ 24 ಗಂಟೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ. ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ವಾಹನ ಸವಾರರು, ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಹೋಗುವ ಸಾಮಾನ್ಯ ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆ ಮೂಲಕ ಮಳೆಯಿಂದ ಮುಂದಾಗಲಿರುವ ಸಮಸ್ಯೆಗಳನ್ನು ತಪ್ಪಿಸಬಹುದು.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.