Karnataka Weather: ಕರ್ನಾಟಕದಲ್ಲಿ ಫೆಂಗಲ್ ಚಂಡಮಾರುತ ದುರ್ಬಲ; ಬೆಂಗಳೂರು ನಗರ ಸೇರಿ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ
ಕರ್ನಾಟಕದಲ್ಲಿ ಫೆಂಗಲ್ ಚಂಡಮಾರುತ ದುರ್ಬಲಗೊಂಡಿದ್ದರೂ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಡಿಸೆಂಬರ್ 6ರ ಶುಕ್ರವಾರ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಇಂದಿನ ಹವಾಮಾನದ ವರದಿ ಇಲ್ಲಿದೆ.
ಫೆಂಗಲ್ ಚಂಡಮಾರುತದಿಂದ ತತ್ತರಿಸಿಹೋಗಿದ್ದ ಕರ್ನಾಟಕದ ಜನತೆ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಫೆಂಗಲ್ ಸೈಕ್ಲೋನ್ ನಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿತ್ತು, ಇದರಿಂದ ರೈತರು ಸೇರಿದಂತೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇದೀಗ ಫೆಂಗಲ್ ಚಂಡಮಾರುತ ದುರ್ಬಲಗೊಂಡಿದೆ. ಇದರ ಪರಿಣಾಮವಾಗಿ ನಿನ್ನೆಯಿಂದ (ಡಿಸೆಂಬರ್ 5, ಗುರುವಾರ) ಮೋಡ ಸರಿದು ಸೂರ್ಯ ಕಾಣಿಸುವಂತಾಗಿದೆ. ಇಂದು (ಡಿಸೆಂಬರ್ 6, ಶುಕ್ರವಾರ) ಬೆಳಗಿನ ಜಾವ ಮಂಜು ಇತ್ತು, ಆದರೆ ಮೋಡ ಮುಸುಕಿದ ವಾತಾವರಣ ಇಲ್ಲ. ಮಧ್ಯಾಹ್ನ ಮತ್ತು ಸಂಜೆಯ ವೇಳೆಗೆ ಕರಾವಳಿ ಪ್ರದೇಶ, ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ಹಮಾವಾನ ಕೇಂದ್ರದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ, ಅಂಕೋಲಾದಲ್ಲಿ ತಲಾ 1 ಸೆಂಟಿ ಮೀಟರ್ ಮಳೆಯಾಗಿದೆ. ಪೂರ್ವ-ಮಧ್ಯ ಮತ್ತು ಪಕ್ಕದ ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ಚಂಡಮಾರುತದ ಪರಿಚಲನೆಯು ಈಗ ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ನೆರೆಹೊರೆಯಲ್ಲಿದೆ. ಸರಾಸರಿ ಸಮುದ್ರ ಮಟ್ಟದಿಂದ 4.5 ಕಿಲೋ ಮೀಟರ್ ಎತ್ತರದೊಂದಿಗೆ ನೈರುತ್ಯಕ್ಕೆ ವಾಲುತ್ತದೆ.
ಡಿಸೆಂಬರ್ 6ರ ಶುಕ್ರವಾರ ಎಲ್ಲೆಲ್ಲಿ ಮಳೆಯಾಗುತ್ತೆ
ಡಿಸೆಂಬರ್ 6ರ ಶುಕ್ರವಾರ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರರು ನಗರ, ಹಾಸನ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ, ಬಾಗಲಕೋಟೆ, ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಮುನ್ಸೂಚನೆ ಇದೆ.
ಮುಂದಿನ ಎರಡು ದಿನಗಳಲ್ಲಿ ಹವಾಮಾನ ಸಂಬಂಧ ಯಾವುದೇ ಹೆಚ್ಚಿನ ಬದಲಾವಣೆಗಳು ಇರುವುದಿಲ್ಲ. ಜೊತೆಗೆ ಮೀನುಗಾರರಿಗೂ ಯಾವುದೇ ರೀತಿಯ ಎಚ್ಚರಿಕೆ ಇಲ್ಲ. ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರುತ್ತದೆ. ಹಗಲಿನಲ್ಲಿ ಸ್ಪಷ್ಟವಾಗಿರುತ್ತದೆ ಮತ್ತು ಸಂಜೆ ವೇಳೆ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಫೆಂಗಲ್ ಚಂಡಮಾರುತದಿಂದಾಗಿ ಕಳೆದೊಂದು ವಾರ ಬೆಂಗಳೂರು ನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿತ್ತು. ಇದರಿಂದ ರೈತರು ಸೇರಿದಂತೆ ಜನ ಸಾಮಾನ್ಯರು ಪರದಾಡುವಂತಾಗಿತ್ತು.