ರಾಜಧಾನಿ ಬೆಂಗಳೂರಿನಲ್ಲಿ ಚಳಿಯೊಂದಿಗೆ ಮಂಜು ಮುಸುಕಿದ ವಾತಾವರಣ; ಬೆಳಗಾವಿ ಸೇರಿ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
ಕನ್ನಡ ಸುದ್ದಿ  /  ಕರ್ನಾಟಕ  /  ರಾಜಧಾನಿ ಬೆಂಗಳೂರಿನಲ್ಲಿ ಚಳಿಯೊಂದಿಗೆ ಮಂಜು ಮುಸುಕಿದ ವಾತಾವರಣ; ಬೆಳಗಾವಿ ಸೇರಿ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ರಾಜಧಾನಿ ಬೆಂಗಳೂರಿನಲ್ಲಿ ಚಳಿಯೊಂದಿಗೆ ಮಂಜು ಮುಸುಕಿದ ವಾತಾವರಣ; ಬೆಳಗಾವಿ ಸೇರಿ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಸೈಕ್ಲೋನ್ ಫೆಂಗಲ್ ಸಂಪೂರ್ಣವಾಗಿ ದುರ್ಬಲಗೊಂಡಿದ್ದು, ದೊಡ್ಡ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆಗಳು ಇಲ್ಲ. ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲೆಡೆ ಚಳಿಯೊಂದಿಗೆ ಮಂಜಿನ ವಾತಾವರಣ ಮುಂದುವರಿದಿದೆ. ಡಿಸೆಂಬರ್ 7ರ ಶನಿವಾರ ಕರ್ನಾಟಕದ ಹವಾಮಾನದ ವರದಿ ಇಲ್ಲಿದೆ.

ಡಿಸೆಂಬರ್ 7ರ ಶನಿವಾರ ಕರ್ನಾಟಕದ ಹವಾಮಾನ
ಡಿಸೆಂಬರ್ 7ರ ಶನಿವಾರ ಕರ್ನಾಟಕದ ಹವಾಮಾನ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು (ಡಿಸೆಂಬರ್ 7, ಶನಿವಾರ) ಭಾರಿ ಚಳಿಯೊಂದಿಗೆ ಮಂಜು ಮುಸುಕಿದ ವಾತಾವರಣ ಇದ್ದು, ಜನ ಸಾಮಾನ್ಯರು ಪರದಾಡುವಂತಾಗಿದೆ. ಮಂದ ಬೆಳಕಿನ ಹಿನ್ನೆಲೆಯಲ್ಲಿ ವಾಹನ ಸವಾರರು ವಾಹನವನ್ನು ಚಲಾಯಿಸುವುದು ಒಂದು ರೀತಿಯ ಸವಾಲಿನ ಕೆಲಸವಾಗಿದೆ. ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಾದ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರಿನಲ್ಲೂ ಇದೇ ರೀತಿಯ ವಾತಾವರಣ ನಿರ್ಮಾಣವಾಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಫೆಂಗಲ್ ಚಂಡಮಾರುತ ಸಂಪೂರ್ಣವಾಗಿ ದುರ್ಬಲವಾಗಿದ್ದು, ಸದ್ಯಕ್ಕೆ ಸೈಕ್ಲೋನ್ ಭೀತಿ ಇಲ್ಲ. ಶುಕ್ರವಾರ (ಡಿಸೆಂಬರ್ 6) ಕರಾವಳಿ, ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಮಳೆಯಾಗಿದೆ. ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಕಾಲ ವಾತಾವರಣದಲ್ಲಿ ಯಾವುದೇ ಮಹತ್ವದ ಬದಲಾವಣೆಯ ನಿರೀಕ್ಷೆಯಿಲ್ಲ.

ನಿನ್ನೆ (ಡಿಸೆಂಬರ್ 6, ಶುಕ್ರವಾರ) ಪ್ರಮುಖ ಮಳೆಯ ಪ್ರದೇಶಗಳನ್ನು ನೋಡುವುದಾದರೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿ ಗರಿಷ್ಠ 5 ಸೆಂಟಿ ಮೀಟರ್ ಮಳೆಯಾಗಿದೆ. ಉಳಿದಂತೆ ಉಡುಪಿ ಜಿಲ್ಲೆಯ ಸಿದ್ದಾಪುರ, ಉತ್ತರ ಕನ್ನಡ ಜಿಲ್ಲೆಯ ಕಿರವತ್ತಿ ಹಾಗೂ ಕಾರ್ಕಳದಲ್ಲಿ ತಲಾ 3 ಸೆಂಟಿ ಮೀಟರ್ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ 2, ವಿಜಯಪುರ ಜಿಲ್ಲೆಯ ಬಬಲೇಶ್ವರ 2, ಹಾವೇರಿಯ ಗುತ್ತಲ್, ಧಾರವಾಡದ ಕಲಘಟಗಿ, ಕಲಬುರಗಿಯ ಖಜೂರಿ, ರಾಯಚೂರಿನ ದೇವದುರ್ಗ ಸೇರಿದಂತೆ ಹಲವು ಕಡೆಗಳಲ್ಲಿ 1 ಸೆಂಟಿ ಮೀಟರ್ ಮಳೆಯಾಗಿರುವುದಾಗಿ ವರದಿಯಾಗಿದೆ.

ಡಿಸೆಂಬರ್ 7ರ ಶನಿವಾರ ಮಳೆ ಸಾಧ್ಯತೆ ಇರುವ ಜಿಲ್ಲೆಗಳು

ಇಂದು (ಡಿಸೆಂಬರ್ 7, ಶನಿವಾರ) ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಚಿಕ್ಕಮಗಳೂರು, ಹಾಸನ, ದಾವರಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.

ಡಿಸೆಂಬರ್ 8ರ ಭಾನುವಾರ ಮತ್ತು ಡಿಸೆಂಬರ್ 9ರ ಸೋಮವಾರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಆದರೆ ಆ ಬಳಿಕ ಬೆಳಗ್ಗೆ ಮಂಜು ಹಾಗೂ ಆ ಬಳಿಕ ಎಲ್ಲೆಡೆ ಬಿಸಿಲಿನ ವಾತಾವರಣ ಇರಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಹಗಲಿನಲ್ಲಿ ಸ್ಪಷ್ಟವಾದ ಆಕಾಶ ಇರಲಿದ್ದು, ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ಭಾಗಶಃ ಮೋಡ ಕವಿದ ಆಕಾಶ ಇರುತ್ತದೆ. ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

Whats_app_banner