ಇಂದು ಮಂಡ್ಯ, ಶಿವಮೊಗ್ಗ, ಕೊಡಗು ಸೇರಿ ಹಲವೆಡೆ ಭಾರೀ ಮಳೆ; 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
Karnataka Weather: ಮಂಗಳವಾರ ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ಭಾರೀ ಮಳೆಯ ಪ್ರಮಾಣ ವರದಿಯಾಗಿದ್ದು ಇಂದು (ಬುಧವಾರ) ಚಿಕ್ಕಮಗಳೂರು, ಹಾಸನ, ಕೊಡಗು, ಚಿತ್ರದುರ್ಗಾ, ಶಿವಮೊಗ್ಗ, ಮಂಡ್ಯ ಜಿಲ್ಲೆಗಳ ಕೆಲವೆಡೆ ರಾಜ್ಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಜೂನ್ 19ರ ಕರ್ನಾಟಕ ಹವಾಮಾನ ವರದಿ: ಇಂದು ಬೆಳಗ್ಗೆ 05:54ಕ್ಕೆ ಸೂರ್ಯೋದಯವಾಗಿದ್ದು ಸಂಜೆ 06:47ಕ್ಕೆ ಸೂರ್ಯಾಸ್ತವಾಗಲಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸದ್ಯಕ್ಕೆ 22.6 ಡಿಗ್ರಿ ಸೆ. ತಾಪಮಾನವಿದೆ. ಮಂಗಳವಾರ ಕರ್ನಾಟಕದ ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆ ಆಯ್ತು? ಇಂದು ಹಾಗೂ ನಾಳೆ ಎಲ್ಲೆಲ್ಲಿ ಮಳೆ ಆಗಲಿದೆ? ಇಲ್ಲಿದೆ ವರದಿ.
ಮಂಗಳವಾರದ ಮಳೆಯ ವಿವರ
ಮಂಗಳವಾರ ನೈರುತ್ಯ ಮುಂಗಾರು ದಕ್ಷಿಣ ಒಳನಾಡಿನಲ್ಲಿ ಸಾಧಾರಣವಾಗಿತ್ತು. ಮತ್ತು ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿಯ ಹಲವು ಕಡೆಗಳಲ್ಲಿ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಉತ್ತ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ನಿನ್ನೆ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ 8 ಸೆಮೀ ಮಳೆ ಆಗಿದ್ದು, ಅತಿ ಹೆಚ್ಚು ಮಳೆ ಆದ ಪ್ರದೇಶವಾಗಿ ದಾಖಲಾಗಿದೆ. ಧರ್ಮಸ್ಥಳದಲ್ಲಿ 6 ಸೆಮೀ, ಕಾರ್ಕಳ, ಕಕ್ಕೇರಿ, ಯಗಟಿಯಲ್ಲಿ ತಲಾ 5, ರಾಯಲ್ಪಾಡು, ಚನ್ನಗಿರಿ, ಕೋಲಾರ, ಮಲೈ ಮಹದೇಶ್ವರ ಬೆಟ್ಟದಲ್ಲಿ ತಲಾ 4, ಶಿರಾಲಿ, ಬೆಳ್ತಂಗಡಿ, ಕೊಣನೂರು, ಹೊನ್ನಾವರದಲ್ಲಿ ತಲಾ 3, ಪುತ್ತೂರು, ಮಂಗಳೂರು, ತುಮಕೂರು, ಭಾಗಮಂಡಲ, ವಿರಾಜಪೇಟೆ, ಕುಶಾಲನಗರ, ಮಂಕಿಯಲ್ಲಿ ತಲಾ 2 ಸೆಮೀ ಮಳೆ ಆಗಿದೆ. ಉಳಿದಂತೆ ಪಣಂಬೂರು, ಮೂಲ್ಕಿ, ಉಪ್ಪಿನಂಗಡಿ, ಕುಮಟಾ, ಮಧುಗಿರಿ, ಪರಶುರಾಂಪುರ, ತೊಂಡೇಭಾಯಿಯಲ್ಲಿ ತಲಾ 1 ಸೆಮೀನಷ್ಟು ಮಳೆ ಆಗಿದೆ.
ಇಂದು ಯಾವ ಸ್ಥಳಗಳಲ್ಲಿ ಮಳೆ ಆಗಲಿದೆ?
ಕರಾವಳಿ ಜಿಲ್ಲೆಯ ಬಹುತೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ. ಒಳನಾಡಿನ ಜಿಲ್ಲೆಗಳಲ್ಲಿ ಬಿರುಗಾಳಿ (30-40 kmph)ಯೊಂದಿಗೆ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಚಿತ್ರದುರ್ಗಾ, ಶಿವಮೊಗ್ಗ, ಮಂಡ್ಯ ಜಿಲ್ಲೆಗಳಲ್ಲಿ ಭಾರೀ ಗಾಳಿಯೊಂದಿಗೆ(30-40 kmph) ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯು ಮೀನುಗಾರರಿಗೆ ಯಾವುದೇ ಮುನ್ನೆಚರಿಕೆ ನೀಡಿಲ್ಲ. ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದ ಕನ್ನಡ, ಹಾಸನ, ಕೊಡಗು, ಮಂಡ್ಯದಲ್ಲಿ ಯೆಲ್ಲೋ ಅಲರ್ಟ್ ಘೊಷಣೆ ಮಾಡಲಾಗಿದೆ.
ಬೆಂಗಳೂರಿನ ಹವಾಮಾನ ವರದಿ
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ಆಕಾಶವಿದ್ದು, ಗುಡುಗು ಸಹಿತ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಗರಿಷ್ಠ ಹಾಗೂ ಕನಿಷ್ಠ ತಾಪಮಾನ ಕ್ರಮವಾಗಿ 30°ಸೆ ಹಾಗೂ 21°ಸೆ ಆಗಿರಬಹುದು. ಮುಂದಿನ 48 ಗಂಟೆಗಳಲ್ಲಿ ಕೂಡಾ ಇದೇ ವಾತಾವರಣ ಮುಂದುವರೆಯಲಿದೆ.
ಪ್ರಮುಖ ನಗರಗಳ ಹವಾಮಾನ
ಭಾರತೀಯ ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು (ಜೂನ್ 19) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ಹವಾಮಾನ ವಿವರ.
ಬೆಂಗಳೂರು - 22.6° ಸೆ.
ಮಂಗಳೂರು- 26.2° ಸೆ.
ಚಿತ್ರದುರ್ಗ- 23.6° ಸೆ.
ಗದಗ- 23.2° ಸೆ.
ಹೊನ್ನಾವರ- 24.4° ಸೆ.
ಕಲಬುರ್ಗಿ- 26.8° ಸೆ.
ಬೆಳಗಾವಿ- 24° ಸೆ.
ಕಾರವಾರ- 30° ಸೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ